ನಿನ್ನೊಳಗೆ ನಾನವಿತು ಕೂತು
ಜೀವನವನು ನೋಡುವೆನಮ್ಮ
ಎಷ್ಟೊಂದು ಕಷ್ಟವಾಗಿದೆ
ನನ್ನ ಹೊತ್ತ ನಿನ್ನ ಬದುಕು
ಹೆಣ್ಣೆಂಬ ಕಾರಣಕೆ ನೀನು
ಎಲ್ಲರಿಗೂ ಮುಂಚೆ ಏಳಬೇಕು
ಮನೆಯ ಎಲ್ಲ ಕೆಲಸಗಳ
ನೀನೊಬ್ಬಳೇ ನಿಭಾಯಿಸಬೇಕು
ಅತ್ತೆಮಾವರ ಸ್ವತ್ತು ನೀನಾಗಿ
ಅವರೇಳಿದಂತೆ ನೀ ನಡೆನುಡಿಯಬೇಕು
ಗಂಡನೆಂಬುವನ ಅಡಿಯಾಳಾಗಿ
ಅವನ ಕಾಮತೃಷೆ ನೀಗಿ ನನ್ನ ಹೊರಬೇಕು
ಎಲ್ಲರ ಬೇಕುಬೇಡಗಳ ಕೇಳುವ ನೀನು
ನಿನ್ನ ಬೇಕುಬೇಡಗಳ ಮರೆತೇಬಿಡುವೆ
ಎಲ್ಲದಕ್ಕೂ ತಲೆಯಾಡಿಸಿ ಈ ಮನೆಗೆ
ಗಾಣದೆತ್ತಿನಂತೆ ನೀನು ದುಡಿವೆ
ಬಿಡುವಿಲ್ಲದ ಈ ಕಾರ್ಯಕೆ
ಪಗಾರ ಕೇಳದ ಕೆಲಸಗಾರಳು ನೀನು
ದೇಹ ದಣಿದರೂ ದುಡಿವೆ ಏಕೆ
ನಿನಗೂ ವಿಶ್ರಾಂತಿ ಬೇಡವೇನೂ ?
ಹುಟ್ಟಿದ ಮೇಲೆ ನಾನೂ ಇದನೆಲ್ಲಾ
ನಿತ್ಯ ಮಾಡಲೇಬೇಕೇನು ?
ನಿಸರ್ಗದ ಮನೆಯಲ್ಲಿ ಎಲ್ಲರೂ
ಸಮಾನರಲ್ಲವೇನು ?
0627ಎಎಂ15012017
ಅಮುಭಾವಜೀವಿ