Saturday, September 28, 2019

ಮಕ್ಕಳಲ್ಲಿ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಮೂಡಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ

ಲೇಖನ :-

*ಮಕ್ಕಳಲ್ಲಿ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಮೂಡಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ* :-

ಸ್ವಚ್ಛತೆ ಪ್ರತಿ ವ್ಯಕ್ತಿಯ ಅಗತ್ಯ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಸ್ವಸ್ಥ ಮನಸ್ಸು ಇರುತ್ತದೆ. ಸ್ವಸ್ಥ ಮನಸ್ಸಿರುವ ಕಡೆ ಸಮೃದ್ಧಿ ಇರುತ್ತದೆ. ತನ್ನ ಸತ್ಯತೆಯ ಬಗ್ಗೆ ಗಮನ ಕೊಡುವ ಮನುಷ್ಯ ತನ್ನ ಸುತ್ತಮುತ್ತಲ ಪ್ರದೇಶವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಾನೆ. ಆದರಿಂದ ತನ್ನ ಪರಿಸರದ ಜೊತೆಗೆ ದೇಶವು ಕೂಡ ಸ್ವಚ್ಛ ಮತ್ತು ಸ್ವಸ್ಥ ವಾಗಿರುತ್ತದೆ.

ಸ್ವಚ್ಛತೆಯ ಪಾಠ ಶುರುವಾಗುವುದು ಮಗುವಿನ ಮನೆಯಿಂದ ಹಾಗೂ ಓದುವ ಶಾಲೆಯಿಂದ. ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಹೊಣೆಗಾರಿಕೆ ಪೋಷಕರು-ಶಿಕ್ಷಕರು ಇಬ್ಬರದು ಇರುತ್ತದೆ. ಮನೇಲಿ ಮಗು ಎದ್ದಾಗಿನಿಂದ ಮಲಗುವವರೆಗೆ ಸ್ವಚ್ಛತೆಯನ್ನು ಪಾಲಿಸುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ. ವೈಯಕ್ತಿಕ ಸ್ವಚ್ಛತೆಯ ಜೊತೆಗೆ ತನ್ನ ಮನೆಯ ಪರಿಸರ ತನ್ನ ಓಣಿ ತನ್ನ ಊರು ಸ್ವಚ್ಛತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗುತ್ತದೆ.ಮಕ್ಕಳು ಪಾಲಕರು ಹಾಗೂ ಶಿಕ್ಷಕರನ್ನು ಅನುಕರಣೆ ಮಾಡುವುದರಿಂದ ಅವರು ಅನುಕರಣೀಯ ವಾಗಿರಬೇಕು. ಮಕ್ಕಳಿಗೆ ಹೇಳುವ ಮುನ್ನ ತಾವು ಮೊದಲು ಅನುಸರಿಸಬೇಕು. ಆಗ ಮಕ್ಕಳು ಅವರನ್ನು ನೋಡಿ ಕಲಿಯುತ್ತಾರೆ.

*ಪೋಷಕರ ಪಾತ್ರ* :-
* ಮಕ್ಕಳಿಗೆ ನಿತ್ಯ ಸ್ವಚ್ಛತೆಯ ಬಗ್ಗೆ ತಿಳಿಸಿ ಕೊಡುವುದರ ಜೊತೆಗೆ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.
* ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಅದನ್ನು ನಿರ್ವಹಣೆ ಮಾಡುವುದನ್ನು ಕಲಿಸುವುದು.
* ನಮ್ಮ ಮನೆ ಸ್ವಚ್ಛ ವಿದ್ದರೆ ನಮ್ಮ ದೇಶ ಸ್ವಚ್ಛವಾಗಿರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು
* ಪೋಷಕರು ಹೆಚ್ಚಾಗಿ ಪರಿಸರಕ್ಕೆ ಹಾನಿಯಾಗದಂತಹ ವಸ್ತುಗಳನ್ನು ಬಳಸಬೇಕು
* ಹಸಿ ಕಸ ಒಣ ಕಸ ಇತ್ಯಾದಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು
* ತಮ್ಮದೇ ಮನೆಯ ತ್ಯಾಜ್ಯಗಳಿಂದ ಸಾವಯವ ಗೊಬ್ಬರವನ್ನು ತಯಾರಿಸಿ ತಮ್ಮ ಮನೆಯ ಸುತ್ತಮುತ್ತ ಬೆಳೆದ ಗಿಡ-ಮರಗಳಿಗೆ ಬಳಸುವುದು
* ಸ್ವಚ್ಚ ಭಾರತ ಅಭಿಯಾನದಲ್ಲಿ ಎಲ್ಲರೂ ಭಾಗಿದಾರರು ಎಂಬುದನ್ನು ಮನವರಿಕೆ ಮಾಡಿಕೊಡಬೇಕು.

* ಶಿಕ್ಷಕರ ಪಾತ್ರ* :-

* ಶಿಕ್ಷಕರು ತಮ್ಮ ಶಾಲೆಯ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದು
* ಸ್ವಚ್ಛ ಪರಿಸರದಲ್ಲಿ ಸ್ವಸ್ಥ ಮನಸ್ಸಿರುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು
* ತನ್ನ ಶಾಲೆ, ಮನೆ, ನೆರೆಹೊರೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರೇರಣೆ ನೀಡಬೇಕು.
* ಸ್ವಚ್ಛತೆಗೆ ಸಂಬಂಧಿಸಿದಂತೆ ಕಥೆ ಕವನ ಲೇಖನ ಪ್ರಬಂಧ ಆಶುಭಾಷಣ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಮಕ್ಕಳಲ್ಲಿ ಅರಿವು
ಮೂಡಿಸುವುದು.
* ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಆಗಾಗ್ಗೆ ಜಾಥಗಳು, ಕಿರು ನಾಟಕ, ಚರ್ಚೆ ಭಾಷಣಗಳನ್ನು ಆಯೋಜಿಸುವುದು.
* ಸ್ವಚ್ಛತೆ ಕುರಿತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಸೂಕ್ತ ಬಹುಮಾನ ನೀಡಿ ಪ್ರೇರೇಪಿಸುವುದು
* ಶಾಲಾ ಪರಿಸರವನ್ನು ಆಕರ್ಷಣೀಯವಾಗಿಸಲು ಗಿಡಮರ ತರಕಾರಿ ಮುಂತಾದವುಗಳನ್ನು ಬೆಳೆಸುವುದು.
* ಶಾಲೆ ಮನೆ ಸಮಾಜದಲ್ಲಿ ಶ್ರಮದಾನದ ಮೂಲಕ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
* ಆಗಿಂದಾಗ್ಗೆ ಮಕ್ಕಳಿಗೆ ಪ್ರವಾಸ ಹೊರಸಂಚಾರ ಕರೆದುಕೊಂಡು ಹೋಗಿ ಅಲ್ಲಿನ ಪರಿಸರದ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ತಾವು ಅದನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
     
          ಒಟ್ಟಿನಲ್ಲಿ ಭಾರತದ ಮುಂದಿನ ಪ್ರಜೆಗಳಲ್ಲಿ ಇಂದಿನ ಸ್ವಚ್ಛತೆ ಅಗತ್ಯವನ್ನು ಮನಗಾಣಿಸಬೇಕು. ಅಲ್ಲದೆ ತಮ್ಮ ವಯಕ್ತಿಕ ಜೀವನದಲ್ಲಿ ಸ್ವಚ್ಛತೆಯ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಅರ್ಥ ಮಾಡಿಸುವ ಮೂಲಕ ತನ್ನ ಮನೆ ಶಾಲೆ ಊರು ರಾಜ್ಯ ದೇಶಗಳ ಸ್ವಚ್ಛತೆಯ ಬಗ್ಗೆ ಕಾಳಜಿ ಮೂಡಿಸುವುದು ಪೋಷಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಆ ಮೂಲಕ ಸ್ವಚ್ಛ ಭಾರತ ಅಭಿಯಾನದ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ ಎಂಬುದನ್ನು ಮನಗಾಣಿಸಬೇಕು. ಚಿಕ್ಕವಯಸ್ಸಿನಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳಾದ ಪೋಷಕರು ಮತ್ತು ಶಿಕ್ಷಕರು ಸ್ವಚ್ಛತೆಯ ಬಗ್ಗೆ ಕಟ್ಟುನಿಟ್ಟಾಗಿ ಅನುಸರಿಸುತ್ತಾ ಹೋದಲ್ಲಿ ಮಕ್ಕಳು ಕೂಡ ಅವರನ್ನು ಅನುಸರಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ಗಮನಕೊಡುವುದರಿಂದ ಸ್ವಚ್ಛ ಮತ್ತು ಸ್ವಸ್ಥ ಭಾರತ ಕಟ್ಟಲು ಸಹಾಯವಾಗುತ್ತದೆ.

*ಅಮು ಭಾವಜೀವಿ*

No comments:

Post a Comment