*ವಾಸ್ತವ ಸತ್ಯ*
ಈ ಜನ ಈಗೇಕೆ ಮಾಡ್ತಾರೆ. ಒಬ್ಬ ಮನುಷ್ಯನನ್ನು ಕೇವಲ ಅವನ ಭಾವನೆಗಳಿಂದ ಅಳೆಯುವುದು ಎಷ್ಟು ಸರಿ? ತಿಳಿಗೊಳ ದಡಿಯ ಕೆಸರಿನಿಂದಲೇ ಸುಂದರವಾದ ತಾವರೆಯು ಅರಳಿದಾಗ ಅದನ್ನು ನೋಡಿ ಸಂತೋಷ ಪಡುವ ಈ ಮನುಷ್ಯ ಈ ರೀತಿಯ ಕೆಟ್ಟ ಆಲೋಚನೆಗಳನ್ನು ಏಕೆ ಮಾಡುತ್ತಾನೆ. ಈ ವಿಚಾರವನ್ನು ಪ್ರಸ್ತಾಪಿಸಲು ಪ್ರಮುಖ ಕಾರಣವೆಂದರೆ ಕೆಲವರು ನಾನು ಬರೆದಿರುವ ಕವನಗಳನ್ನು ಕೇವಲ ಮೇಲ್ನೋಟಕ್ಕೆ ನನ್ನನ್ನು ಇಂತಹ ಮನುಷ್ಯ ಎಂದು ಅಳೆದದ್ದು ನನಗೆ ತುಂಬಾ ಬೇಜಾರು ಎನಿಸಿತು. ವಾಸ್ತವವಾಗಿ ನಾನು ಆ ರೀತಿಯ ಮನುಷ್ಯನಲ್ಲ. ನಾನು ಬರೆದ ಕವನಗಳಲ್ಲಿ ಪ್ರತಿಯೊಬ್ಬ ಯುವ ಪೀಳಿಗೆಯವರ ಮನದ ತುಡಿತ ಮಿಡಿತಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನನ್ನ ಅನುಭವಕ್ಕೆ ನಿಲುಕಿದಷ್ಟು ಅದನ್ನು ಅಕ್ಷರ ರೂಪದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದರೂ, ಒಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣ ತಿಳಿಯದೆ ಮಾತನಾಡುವುದು ಮನಸ್ಸಿಗೆ ತುಂಬಾ ನೋವಾಗುತ್ತದೆ. ಪ್ರೀತಿಸುವ ಪ್ರತಿಯೊಬ್ಬನು ಪ್ರೇಮಿ ನಿಜ ಆದರೆ ಪ್ರತಿಯೊಬ್ಬ ಪ್ರೇಮಿಯೂ ಕವಿಯಾಗಲಾರ ಈ ಸತ್ಯವನ್ನು ನಾವು ಅರಿತಾಗ ಇನ್ನೊಬ್ಬರ ಬಗ್ಗೆ ಕ್ಷುಲ್ಲಕ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ.
ಯಾವುದೇ ವ್ಯಕ್ತಿಯ ಭಾವನೆಗಳಿಗೆ ಬಂಧನವಿಲ್ಲ. ಆದರೆ ಅವನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ಇದೆ. ಭಾವನೆಗಳು ಒಳ್ಳೆಯ ಅಥವಾ ಕೆಟ್ಟವು ಎಂಬುದರ ಬಗ್ಗೆ ಜಿಜ್ಞಾಸೆ ಬೇಕಾಗಿಲ್ಲ. ಅಂದರೆ ಭಾವನೆಗಳೇ ಬದುಕು ಎಂಬುದು ನಂಬಲರ್ಹವಲ್ಲ. ಏಕೆಂದರೆ ಮನುಷ್ಯನ ಭಾವನೆಗಳಿಗೂ ಅವನು ವಾಸ್ತವ ಬದುಕಲ್ಲಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪ್ರತಿಯೊಬ್ಬರ ಬದುಕಿನಲ್ಲೂ ಭಾವನೆಗಳ ಇರಬೇಕು, ಆಗಲೇ ಅವನ ಜೀವನದಲ್ಲಿ ಆಸೆ ಇರಲು ಸಾಧ್ಯ. ಹಾಗೆ ನೋಡಿದರೆ ಕವಿ ಎಂದರೆ ಎಲ್ಲರ ಮನೋಭಾವಗಳನ್ನು ತನ್ನದೇ ಮನದ ಆಲೋಚನೆಗಳ ನೆಲೆಗಟ್ಟಿನ ಮೇಲೆ ಹೆಣೆಯುತ್ತಾನೆ. ಅವನು ತನ್ನ ಜೀವನದಲ್ಲಿ ಅದನ್ನು ಅನುಭವಿಸಿ ಇರಬೇಕೆಂಬ ನಿಯಮವಿಲ್ಲ. ಜಗತ್ತಿನಲ್ಲಿ ತಾನು ನೋಡುವ ಕೇಳುವ ಅನೇಕ ವಿಚಾರಗಳನ್ನು ತನ್ನದೇ ವಿಮರ್ಶಾತ್ಮಕ ದೃಷ್ಟಿಯಲ್ಲಿ ವಿಶ್ಲೇಷಿಸಿ ಆ ಬಗ್ಗೆ ತನ್ನ ಅಭಿಪ್ರಾಯಗಳನ್ನು ಬೆರೆಸುತ್ತಾ ಅವರ ಭಾವನೆಗಳನ್ನು ಬೆಳೆಸುತ್ತಾ ಸಾಗಿ ಒಂದು ಮುತ್ತಿನಂತಹ ಕವನ ಕತೆ-ಕಾದಂಬರಿಗಳ ಹಂದರವನ್ನು ನಿರ್ಮಿಸುತ್ತಾನೆ. ಆ ಮೂಲಕ ಮುಂದಿನ ಜನಾಂಗಕ್ಕೆ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಹೋಗುತ್ತಾನೆಯೇ ವಿನಹ ಅದಕ್ಕೆ ಕಥಾವಸ್ತು ಕಥಾನಾಯಕ ಆಗಲಾರ ಬದಲಾಗಿ ಆ ಪಾತ್ರದ ರೂವಾರಿ ಅಷ್ಟೇ.
ನಮ್ಮ ಜನ ಮೊದಲು ಯೋಚಿಸುವುದು ಬರೀ ಕೆಟ್ಟದ್ದನ್ನೇ. ಯಾವುದೇ ಒಬ್ಬ ಮನುಷ್ಯನ ಬಗ್ಗೆ ಒಂದು ಒಳ್ಳೆಯ ಭಾವನೆಯನ್ನು ಇಟ್ಟುಕೊಳ್ಳಲು ಇವರ ಗಂಟೇನು ಹೋಗುತ್ತದೆ ಅಂತ. ಏಕೆಂದರೆ ಒಬ್ಬ ಅಂತರಂಗದ ಭಾವನೆಗಳಲ್ಲಿ ಒಳಿತು ಕೆಡಕುಗಳ ತುಲನಾತ್ಮಕ ವಿಮರ್ಶೆ ಅವನಿಂದಲೇ ಆಗುತ್ತಿರುತ್ತದೆ. ಹಾಗಾಗಿ ಯಾರು ಉತ್ತಮ ವಿಮರ್ಶಕ ಆಗಿರುತ್ತಾನೋ ಅವನೊಬ್ಬ ಉತ್ತಮ ಬರಹಗಾರನಾಗಿರುತ್ತಾನೆ. ಅವನ ಬದುಕನ್ನು ಒಳ್ಳೆಯ ಪಥದಲ್ಲಿ ಸಾಗಿಸಲು ಶ್ರಮ ಪಡುತ್ತಾನೆ. ಹಾಗೆಯೇ ಅವನು ಎಲ್ಲರ ಭಾವನೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ನಿಜವಾಗಲೂ ಅವನನ್ನು ಎಲ್ಲರೂ ಇಷ್ಟಪಡುತ್ತಾರೆ . ಹಾಗೂ ಅವನ್ನು ಅವರೆಲ್ಲರ ಅನುಭವಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತಾ ಹೋಗುತ್ತಾನೆ . ಇಲ್ಲಿ ಯಾವುದೋ ಸಂಕುಚಿತ ಭಾವನೆಯಿಂದ ನೋಡದೆ ವಿಶಾಲ ದೃಷ್ಟಿಯಿಂದ ಅವಲೋಕಿಸಿದಾಗ ನಿಜವಾಗಲೂ ಆ ವ್ಯಕ್ತಿಯ ಕಳಕಳಿಯ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
ನನಗನ್ನಿಸಿದ ಒಂದು ಸಂಗತಿಯೆಂದರೆ ನಾವು ಏನೇ ಕೆಲಸ ಮಾಡಿದರು ಅದು ಅದರ ಬಗ್ಗೆ ಆಸಕ್ತಿ ತಿಳುವಳಿಕೆ ಇದ್ದವರಿಗೆ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ. ಅಂತಹ ವ್ಯಕ್ತಿ ಅವನನ್ನು ತೇಜೋವಧೆ ಮಾಡದೆ ಅವನ ಕೆಲಸವನ್ನು ಶ್ಲಾಘಿಸಿ ಪ್ರೋತ್ಸಹವನ್ನು ನೀಡುತ್ತಾನೆ. ಅದನ್ನು ಬಿಟ್ಟು ಅದರ ಗಂಧಗಾಳಿ ಗೊತ್ತಿಲ್ಲದವರು ಅಂತಹ ವಿಚಾರಗಳ ಬಗ್ಗೆ ಕ್ಷುಲ್ಲಕ ಮಾತುಗಳನ್ನಾಡಿ ನಮ್ಮ ಏಳಿಗೆಗೆ ಮುಳ್ಳು ಆಗುತ್ತಾರೆ. ಆದ್ದರಿಂದ ಅಂತಹ ಕ್ಷುಲ್ಲಕ ಮಾತು ಚರ್ಚೆಗಳಿಗೆ ತಲೆಕೆಡಿಸಿಕೊಳ್ಳದಿರುವುದೇ ಬುದ್ಧಿವಂತಿಕೆ.
ಭಾವನೆಗಳಿಗಿಂತ ಅನುಭವ ದೊಡ್ಡದು. ಒಂದಿದ್ದರೆ ಎಂತಹ ಭಾವನೆಗಳನ್ನು ಬೇಕಾದರೂ ಸುಲಭವಾಗಿ ವ್ಯಕ್ತ ಪಡಿಸಬಹುದು.4 ಜನರೊಳಗೆ ಬರುವ ಅನುಭವದ ಮಾತುಗಳನ್ನು ಕೇಳಿ ಹಾಗಾಗಿ ತನ್ನ ವಿಚಾರ ಚಿಂತನೆಗಳನ್ನು ಗುರುತಿಸಿಕೊಳ್ಳುವಂತಹ ವ್ಯಕ್ತಿ ನಾನು ಆಗಿದ್ದರೂ ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ ಇಂತಹ ಕೀಳು ವಿಚಾರಗಳು ಬಂದಾಗ ನನಗೆ ತುಂಬಾ ನೋವಾಯ್ತು. ಅದಕ್ಕಾಗಿ ನಾನು ಹೇಳುವುದಿಷ್ಟೇ ಕೇವಲ ಭಾವನೆಗಳಿಂದಲೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವ ಬದಲು ನಿಜವಾಗಿಯೂ ಆ ಭಾವನೆಗಳಲ್ಲಿರುವ ಸತ್ಯಾಂಶಗಳ ಬಗ್ಗೆ ಅವಲೋಕಿಸಿ ಆಲೋಚಿಸಬೇಕು. ಆಗ ಮಾತ್ರ ವಾಸ್ತವದ ಗುರುತು ಅವರಿಗೆ ಸಿಗುತ್ತದೆ. ಅಂತಹ ಸನ್ನಿವೇಶದಲ್ಲಿ ಅವನ ಕೆಲಸ ಎಷ್ಟೇ ಕೆಟ್ಟದಿರಲಿ ಅವರ ಪ್ರಯತ್ನಕ್ಕೆ ಒಂದು ಒಳ್ಳೆಯ ಮಾತನಾಡುವ ಮನೋಭಾವ ಬಂದೇ ಬರುತ್ತದೆ. ಯಾವುದೇ ವಿಚಾರವನ್ನು ತನ್ನ ಮೂಗಿನ ನೇರಕ್ಕೆ ನೋಡದೆ ಸಾರ್ವತ್ರಿಕವಾಗಿ ಅದರ ಹೊಳಹುಗಳನ್ನು ಅರ್ಥಮಾಡಿಕೊಂಡಾಗ ಬರಹಗಾರನ ಬರಹಕ್ಕೆ ನಿಜವಾದ ಬೆಲೆ ಸಿಗುತ್ತದೆ. ಇಲ್ಲದಿದ್ದರೆ ಬರಹಗಾರನಿಗೆ ಬರಹವೇ ಬೇಡವೆಂಬ ಮನಸ್ಥಿತಿ ಬಂದರೂ ಅಚ್ಚರಿಯಿಲ್ಲ.
*ಅಮು ಭಾವಜೀವಿ*
*04042002ರಲ್ಲಿ ಪಡೆದ ಲೇಖನ ಹಿಂತಿರುಗಿ ನೋಡಿದಾಗ*
No comments:
Post a Comment