ಚಡಪಡಿಸುತಿದೆ ಜೀವ
ತಳಮಳಗೊಂಡಿದೆ ಭಾವ
ಉತ್ತರವ ಹುಡುಕಿ ಹೊರಟಿದೆ
ಬೆಟ್ಟವೇ ಎದುರು ನಿಂತು ಕೇಳಿದೆ
ಶಾಂತಿಯ ನೆಲದಲ್ಲಿ
ಕ್ರಾಂತಿಯ ಕೋವಿ ಹಿಡಿದು
ಸ್ವಾತಂತ್ರ್ಯದ ಹಣತೆ ಹಚ್ಚಬಹುದೇ ?
ಪ್ರೀತಿಯಿಂದ ಬದುಕುವವರ
ಮನದೊಳಗೆ ದ್ವೇಷವ ಬಿತ್ತಿ
ಸಹಬಾಳ್ವೆಯ ಮೂಡಿಸಬಹುದೇ ?
ಸ್ನೇಹದ ಸಮಭಾವದಲ್ಲಿ
ಅಸಮಾನತೆಯ ಕಿಡಿ ಹೊತ್ತಿಸಿ
ಹೋರಾಟಕೆ ಇಂಬುಕೊಟ್ಟರೆ ಹೇಗೆ ?
ರಕ್ತದ ಮಡುವಿನಲ್ಲಿ ಒದ್ದಾಡಿ
ಹಕ್ಕಿನ ಕೂಸಿಗೆ ಹಾಲುಣಿಸಲು
ಹಿಂಸೆಯ ಹಾದಿ ಹಿಡಿಯುವುದೇ ?
ಜಾತಿಯ ಅಸ್ತ್ರವ ಹಿಡಿದು
ಕ್ಷೋಭೆಗೆ ಮುನ್ನುಡಿ ಬರೆದು
ಶಾಂತಿಯ ಕದಡಬಹುದೇ ?
ಮನುಜಮತದ ವಿಶ್ವಪಥದಿ
ಸಮಬಾಳು ಸಮಪಾಲಿಗಾಗಿ
ಸಂವಿಧಾನಕೆ ತೋರಬೇಕಲ್ಲವೇ ಬದ್ಧತೆ !??
1203ಪಿಎಂ02032017
ಅಮು ಭಾವಜೀವಿ