#ಅಮುಭಾವಬುತ್ತಿ 05
ಖಾಲಿ ಜೀಕುತಿದೆ ಬಾ ಗೆಳತಿ
ನನ್ನೆದೆಯ ಜೀವ ಜೋಕಾಲಿ
ನೀ ಕುಳಿತುಕೊಳ್ಳದೆ ಅಲ್ಲಿ
ನೇತಾಡಿದಂತೆ ಹೆಣ ಕುಣಿಕೆಯಲ್ಲಿ
ಮನದ ಕೊಂಬೆಯ ಬಳಸಿ
ಕಲ್ಪನೆಯ ಹಗ್ಗದ ಬಂಧಿಸಿ
ಕನಸುಗಳನು ಜೀಕಿರುವೆ
ಒಲವು ಜೋಲಿಯೊಳು ಕೂತು
ನಂಬಿಕೆಯ ಬಿಗಿ ಹಿಡಿದು
ಅಂಜಿಕೆಯ ಜೊತೆ ನಡೆದು
ಹೊಂದಾಣಿಕೆಯ ಹೊಯ್ದಾಟದಿ
ಕಾಯಿದೆ ಎದೆ ನಿನ್ನ ಕನವರಿಕೆಯಲಿ
ಬೇಸರದ ಬಿರುಗಾಳಿಗೆ ಸಿಕ್ಕು
ಹೊಯ್ದಾಡಿದೆ ನನ್ನೆದೆಯ ಭಾವ
ಈಗಲೋ ಇಲ್ಲ ಆಗಲೋ
ಕನಲಿದೆ ಪ್ರೀತಿಸುವ ಈ ಜೀವ
ಬೆರಳುಗಳ ಬಿಗಿ ಹಿಡಿದು
ಹನಿವ ಕಂಬನಿಯ ತಡೆದು
ಭಯದ ಕರೆಗೆ ಬಸವಳಿದು
ಜೀಕುತಿದೆ ನೀ ಬರುವ ದಾರಿ ನಡೆದು
1052ಪಿಎಂ080816
*ಅಮುಭಾವಜೀವಿ ಮುಸ್ಟೂರು*