Thursday, August 3, 2023

ಕವನ

ಅವಳಂದಳೆಂದು
ನಾ ನೊಂದುಕೊಳ್ಳುವುದಿಲ್ಲ
ಅವಳಿರುವ ತನಕ ನನಗೊಂದು ಬೆಲೆ
ಅವಳೇ ನನ್ನ ಭಾವದಾ ಸೆಲೆ

ಹರೆಯವೆಂಬ ಹರಿವ ನದಿಗೆ
ಅಣೆಕಟ್ಟು ಕಟ್ಟಿದರು ಅಂದು ನನಗೆ
ನಾ ನಿಲ್ಲಬೇಕು ಗೆಲ್ಲಬೇಕು
ಅವಳ ಆಣತಿಯಂತೆಯೇ ಹರಿಯುತಿರಬೇಕು

ಕೈ ಹಿಡಿದವಳು
ತೋರಿದೆಡೆ ಬೆರಳು
ಬಹಳ ಬೆಳಕು ಹಗಲಿರುಳು
ದಾಂಪತ್ಯದ ಹಣತೆ ಕುಡಿಯಲು

ಮುನಿದಾಗ ಅವಳು ನಾ
ಸಂತೈಸಲೇಬೇಕು
ಅವಳಿಗಲ್ಲ ನಾನು ನನಗಾಗಿ ಅವಳು
ಅವಳಿಂದಲೇ ನನ್ನೆಲ್ಲಾ ಏಳು ಬೀಳು

ಸತಿ ಅವಳು ಮತಿ ನನಗೆ
ಗತಿ ಅವಳು ಸಮ್ಮತಿ ಇರೋವರೆಗೆ
ಮನೆಯೆಂಬ ಸೂರಿನ ಆಧಾರ
ಅವಳೇ ಬಾಳ ತನುವಿನ ಶೃಂಗಾರ

ನಾನೆಂದರೆ ಅವಳಿಗೆ ದೈವ
ಅವಳೆಂದರೆ ನನಗೆ ಜೀವ
ಸಾಮರಸ್ಯದ ಈ ಸರಸ ಗೀತೆ
ಹಾಡಬೇಕು ನಾವಿಬ್ಬರೂ ಸ್ವರ ಕೆಡದಂತೆ

೦೨೩೧ಪಿಎಂ೧೭೦೧೨೦೧೫
ಅಮುಭಾವಜೀವಿ ಮುಸ್ಟೂರು

ತುಟಿ ಬಲಿಯುವ ಮುನ್ನ

ಹಾಲುಗಲ್ಲದ ಹಸುಳೆಗೇಕೆ
ಇಂಗ್ಲೀಷಿನ ಹಾಲಾಹಲವನೀಯುವಿರಿ
ತುಟಿ ಬಲಿಯುವ ಮುನ್ನವೇ
ಕಟಿ ಮೇಲೆ ಮಣಬಾರವೇಕೆ ಹೊರಿಸುವಿರಿ

ಕನ್ನಡವೆಂಬ ಹೊನ್ನುಡಿಗಿಂತ
ಹಿತವನು ಕಾಣುವಿರೇ ನೀವಲ್ಲಿ ?
ವಯಸ್ಸಿಗೂ ಮೀರಿದ ಹೊರೆಯ
ಹೊತ್ತು ಕಲಿಯಬೇಕೆ ಮಗುವಲ್ಲಿ !?

ಮಣ್ಣಿನ ಸೊಗಡಿನ ಭಾಷೆಯ ದೂಡಿ
ಯಾರದೋ ಪೊಳ್ಳು ಪ್ರತಿಷ್ಠೆಯ ನೋಡಿ
ಅದಕ್ಕೆ ತುತ್ತಾಗಿಸಿ ನಿಮ್ಮದೇ ಕಾರಣ ಕೊಡಿ
ಸಂಭ್ರಮಿಸುವ ನಿಮಗೇನಾಗಿದೆ ದಾಡಿ

ನಮ್ಮ ಜನಪದಕ್ಕಿಂತ ಸಾರ ಉಂಟೆ ಅಲ್ಲಿ
ವಚನಕಿಂತ ವಿವೇಚನೆಯುಂಟೆ ಅದರಲ್ಲಿ
ಕನ್ನಡ ನೆಲ ಜಲ ಅನ್ನವುಂಡರೂ
ಅನ್ಯರ ಆ ವ್ಯಾಮೋಹವೆಕೆ ನಮಗಿಲ್ಲಿ

ಪ್ರೀತಿಯಿಂದ ಕಲಿತ ಭಾಷೆಯ ಸೂರು
ಮುಂದೆ ನಿಮ್ಮನ್ನು ಸಲಹುವ ತವರು
ಇಂದೇ ನೀವವರನು ಬೇರೆ ಮಾಡಿದರೆ
ಮುಂದೆ ನಿಮ್ಮನ್ನು ಕಾಯಬೇಕು ಆ ದೇವರೇ

ಸರ್ಕಾರಗಳಿಗೆ ಬದ್ಧತೆ ಇಲ್ಲ
ಹಣದಾಹಕ್ಕೆ ಚೂರು ಕಡಿವಾಣವಿಲ್ಲ
ಪ್ರೀತಿಯಷ್ಟೇ ಸುಂದರ ನಮ್ಮ ಕನ್ನಡ
ಪ್ರತಿಷ್ಠೆಯ ಶಿಕ್ಷಣ ಮಾಧ್ಯಮ ಬೇಡವೇ ಬೇಡ

5:37 ಎಎಂ 16.01.2015
ಅಮು ಭಾವಜೀವಿ ಮುಸ್ಟೂರು

ನೀ ಬಂದ ಘಳಿಗೆಯಿಂದ

ನನ್ನೊಳಗೆ ನೀ ಅವತರಿಸಿದ ಘಳಿಗೆ
ಏನೇನೋ ಬಯಕೆಗಳು ನನ್ನೊಳಗೆ
ಆ ಕ್ಷಣಕ್ಕೆ ಆ ದಿನಕ್ಕೆ ಅದು ಸಿಕ್ಕರೆ
ಸದಾ ಖುಷಿ ಮನಸ್ಸಿಗೆ

ಕಂದ ನನ್ನೊಳು ನೀ ಬೆಳೆವಾಗ
ನಾನು ನಾನಾಗಿರುವುದಿಲ್ಲ
ನನ್ನೊಳಗೆ ನೀ ಬಯಸಿದಂತೆ
ಇರುವೆ ನಿತ್ಯ ನಾ ಹೊರಗೆ

ನನ್ನೊಳಗಿನ ನಿನ್ನ ಮಿಸುಕಾಟ
ಮಾತಿಲ್ಲದೆ ನನ್ನೊಳಗೆ ಏನೋ ಸಂಕಟ
ಕಂದ ಒಂಟಿ ನೀನಲ್ಲಿ ಹೇಗಿರುವೆಯೋ
ಸದಾ ನಿನ್ನದೇ ಯೋಚನೆ ಮನದಲ್ಲಿ

ಬಸುರಿ ಎಂಬ ಕುಸುರಿಯಲ್ಲಿ
ತಾಯಿ ಎಂಬ ಪಾತ್ರ ನಿನ್ನಿಂದ
ನವಮಾಸ ನಿನ್ನ ನಾ ಹೊತ್ತು
ಪ್ರಸವದ ನಂತರ ಹೊಸ ಜೀವನದಾನಂದ

ನೂರು ನಿರೀಕ್ಷೆ ನಿನ್ನ ಮೇಲೆ
ಗಂಡೋ, ಹೆಣ್ಣೋ ಎಂಬ ಲೆಕ್ಕಚಾರವಾಗಲೇ
ನನ್ನ ರಕ್ತ ಬಸಿದ ನೋವು
ಮಾಯವಾಯಿತು ಕೇಳಿ ನಿನ್ನ  ಅಳುವು

ಹೆಣ್ಣಾದವಳಿಗೆ ತಾಯಪಟ್ಟ 
ಕಂದ ಅದು ನೀ ಕೊಟ್ಟ ಘನತೆ
ಜಗಕೆ ನೀ ಬಂದ ಘಳಿಗೆಯಿಂದ
ನಾ ಅಳಿಯುವ ತನಕ ಉಳಿಯುವುದೆನ್ನ ಮಮತೆ

೦5೦5 ಪಿಎಂ 18-01.2015
ಅಮುಭಾವಜೀವಿ ಮುಸ್ಟೂರು

ಆ ಋಣಕ್ಕಾಗಿ

ಇಳಿ ಬಿಸಿಲ ಸಂಜೆಯಲಿ
ನೀ ನಡೆವ ಹಾದಿಯಲಿ
ಗೋಧೂಳಿಯ ಘಳಿಗೆ
ಬಂದೆ ನೀ ನನ್ನೊಳಗೆ

ಇನ್ನೇನು ಕತ್ತಲ ಆವರಿಸುವಾಗ
ಮೂಡಿತು ಒಂದು ಆಶಾಕಿರಣ
ಬೆಳದಿಂಗಳಿನಂತ ನಿನ್ನೊಲವೆನಿಂದ
ನನ್ನೊಳಗೆ ಪುಟಿಯಿತು ಚೇತನ

ಇರುಳು ತಂಗಾಳಿ ಬೀಸುವಾಗ
ಹಿತವಾದ ರಾತ್ರಿಗಂಪು ಸೆಳೆವಾಗ
ನನ್ನೇ ನಾ ಮರೆತು ಕುಳಿತೆ
ನೆನೆಯುತ್ತಾ ಮನದಿ ಪ್ರಣಯ ಗೀತೆ

ನಿನ್ನ ಸ್ಪರ್ಶ ತಂದ ಆ ಬಿಸಿಗೆ
ಬೆವರು ಮೂಡಿತು ಇಬ್ಬನಿಯ ಹಾಗೆ
ಪ್ರೇಮವಂಕುರಿಸಿದ ಮಾಯೆಗೆ
ಮರುಳಾದೆ ನಾ ಇರುಳ ಛಾಯೆಗೆ

ನಾಚಿಕೆಯ ಮೊಗ್ಗು ಬಿರಿಯುತಿದೆ
ಹೆಣ್ತನದ ಸೌಂದರ್ಯ ಅರಳುತ್ತಿದೆ
ಬೇಕು ಬೇಕೆನಿಸುವ ಈ ಸುಖ
ನನಗಿತ್ತವನು ನೀನಲ್ಲವೇ ಸಖ

ಹರೆಯದ ಹೊರಗೆ ಬಾಗುವ ಮುನ್ನ
ಊರುಗೋಲಾಗಿ ನಿಂತೆ ನೀನು
ನೀನಿತ್ತ ಆಸರೆಗೆ  ಪ್ರತಿಯಾಗಿ
ನನ್ನ ಬದುಕ ಮುಡಿಪೆಡುವೆ ಆ ಋಣಕ್ಕಾಗಿ

೦516 ಪಿಎಂ 18.01.2015
ಅಮುಭಾವಜೀವಿ ಮುಸ್ಟೂರು

ಏನು ಮಾಡಲಿ ಈಗ

ಹರೆಯದಾ ದಾಹಕ್ಕೆ
ಒಲವಿನ ಮೋಹಕ್ಕೆ
ಮರಳಾದೆ ನಾ ಮರುಳಾದೆ
ಅದರಿಂದ ನೀ ನನಗೆ ಉರುಳಾದೆ

ಹೆತ್ತವರ ಆ ಬೇಲಿಯ ದಾಟಿ
ಹುಚ್ಚು ಕೋಡಿ ಮನದ ಎಲ್ಲೆ ಮುಟ್ಟಿ
ಆಕರ್ಷಣೆಯ ಪರಿಭ್ರಮಣೆಗೆ ಸಿಲುಕಿ
ಬದುಕನ್ನು ನುಚ್ಚುನೂರಾಗಿಸಿಕೊಂಡೆ

ಬದಲಾದ ಈ ದೇಹದಲ್ಲಿ
ಬಯಕೆಗಳಿಗೆ ಆಳುವ ಅಧಿಕಾರವಿತ್ತೆ
ಕಣ್ಪಟ್ಟಿ ಕಟ್ಟಿದ ಹೆಂಣ್ತನವ
ಮೋಸದ ಕೋಣೆಯೊಳಗೆ ಬಲಿ ಕೊಟ್ಟೆ

ಕತ್ತಲೆಯ ಕೂಪದೊಳಗೆ
ಬೆತ್ತಲಾಗಿದ್ದೆ ಬೆಳಕಾಗುವುದರೊಳಗೆ
ಶೀಲದಾಭರಣ ದೋಚಿ ಹೋದವನ
ಕೃತ್ಯಕ್ಕೆ ಹೇಸಿ ಬಿಕ್ಕಳಿಸಿ ಅಳುತ್ತಿದ್ದೆ

ಎಲ್ಲಾ ಕಳೆದುಕೊಂಡುದುದನು
ಉಳಿಸಿಕೊಂಡು ಬಳಲಿರುವೆ
ಬೇಲಿಗೆ ಬೆಂಕಿ ಇಟ್ಟ ನನಗೆ
ರಕ್ಷಣೆ ಎಂಬುದೆಲ್ಲಿದೆ ಕೊನೆಯವರೆಗೆ

ಈ ಜಗದ ನೋಟವೀಗ
ನನ್ನ ಈಟಿಯಾಗಿ ಚುಚ್ಚುತಿದೆ
ನಾನೇನು ಮಾಡಲಿ ಈಗ
ಬದುಕ ಕೊಲ್ಲುವಾಸೆ ಹೆಚ್ಚುತ್ತಿದೆ

5:32 ಪಿಎಂ 18.01.2015
ಅಮುಭಾವಜೀವಿ ಮುಸ್ಟೂರು