Monday, May 13, 2024

ಲೇಖನ

*ದೇವರ ದೇವರು*

ಅಮ್ಮ  ಎಂಬ ನಂಬಿಕೆಯ ನಾವೆಯಲ್ಲಿ ಪಯಣಿಸುವ ಪಯಣಿಗರು ನಾವು.ಹೆಣ್ಣಾಗಿ ಹುಟ್ಟಿದಂದೇ ಅವಳು ತಾಯಿಯ ಗುಣ ಹೊತ್ತು ಬೆಳೆದು ಬಂದವಳು.ಮಗಳಾಗಿ ಅಕ್ಕನಾಗಿ ತಂಗಿಯಾಗಿ ತನ್ನವರ ನೋವುನಲಿವುಗಳಿಗೆ ಮುಂಚೂಣಿ ಭಾಗಿದಾರಳಾಗಿ ಎಲ್ಲರಿಗೂ ನೆರಳಾದವಳು.ಎಲ್ಲವನ್ನೂ ತಯಾರಿಸಿ ನಂತರ ಎಲ್ಲ ಮುಗಿದರೂ ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುವ ಪಾಠ ಅವಳಿಗೆ ಕರಗತ.

ಈ ಮನೆಯ ಹೆಣ್ಣು  ಆ ಮನೆ ಮಗನ ಹೆಂಡತಿಯಾಗಿ ಬಡ್ತಿ ಪಡೆಯುವುದರೊಂದಿಗೆ ಅವಳ ಮತ್ತೊಂದು ಬಗೆಯ ಹೋರಾಟ ಪ್ರಾರಂಭವಾಗುತ್ತದೆ.ಹೊಸ ಜನರೊಂದಿಗೆ ಹೊಂದಿಕೊಳ್ಳುತ್ತಾ ತನ್ನವರನ್ನೂ ನೆನೆಯುತ್ತಾ ತನ್ನ ಸಂಸಾರದ ಹೊಣೆ ಹೊರುವಳು. ಗಂಡನ ಪ್ರಿಯ ಸತಿಯಾಗಿ ಪ್ರೇಮಕಾಮಗಳಲ್ಲಿ ಅವನೊಡನೆ ಬದುಕ ಹಂಚಿಕೊಂಡು ಬವಣೆಗಳ ನುಂಗಿಕೊಂಡು ಮಗುವಿಗೆ ಜನ್ಮ ಕೊಡುವ ತಾಯಿ ದೇವರಿಗೂ ದೇವರು.

ತಾಯಿಯ ಜವಾಬ್ದಾರಿ ಸಿಕ್ಕ ಕ್ಷಣದಿಂದಲೇ ಅವಳ ಬದುಕಿನ ರೀತಿಯೇ ಬದಲಾಗುತ್ತದೆ.ತನಗಾಗಿ ಬದುಕುತ್ತಿದ್ದ ಜೀವ ಈಗ ತನ್ನ ಕಂದನಿಗಾಗಿ ಇಡೀ ಬದುಕನ್ನೇ ತ್ಯಾಗ ಮಾಡಿ ಬೆಳೆಸುತ್ತಾಳೆ.ನೂರಾರು ಹೊಂಗನಸುಗಳ ಕಟ್ಟುತ್ತಾಳೆ.ತಾನೇನಾಗಿಲ್ಲವೋ ಅದನ್ನೆಲ್ಲಾ ತನ್ನ ಮಗುವಿಗಾಗಿ ದೊರಕಿಸಿಕೊಡಲು ಜೀವವನ್ನೇ ಒತ್ತೆ ಇಟ್ಟು ದುಡಿಯುತ್ತಾಳೆ.ತನಗೇನೇ ಕೆಲಸವಿದ್ದರೂ ಮಗುವಿಗಾಗಿ ಎಲ್ಲವನ್ನೂ ಬದಿಗಿಟ್ಟು ಬದುಕ ಕಟ್ಟಿಕೊಡುತ್ತಾಳೆ ಅಮ್ಮ.  ಎದೆ ಹಾಲುಣಿಸುವುದರಿಂದ ಹಿಡಿದು ಸ್ನಾನ ಮಾಡಿಸಿ  ಅಲಂಕಾರ ಮಾಡಿ ಮುದ್ದಾಡಿ ರಮಿಸಿ ಜೋಗುಳ ಹಾಡಿ ಮಲಗಿಸುವ ತನಕ  ಅವಳಿಗೆ ಬೇರೆ ಜಗತ್ತೇ ಬೇಕಿಲ್ಲ.  ಈ ನಡುವೆ ಮನೆಗೆಲಸವನ್ನೂ ಮುಗಿಸಿಕೊಂಡು ತನ್ನವರ ಊಟೋಪಚಾರಕ್ಕೆ ಯಾವುದೇ ಭಂಗ ಬರದಂತೆ ಎಲ್ಲ ಕಾರ್ಯಗಳನ್ನು ಮುಗಿಸಿ ಕಂದನೊಉಅಂದಿಗೆ ಕಲೆತು ಮಗುವಾಗಿ ಆ ಎಲ್ಲ ದಣಿವು ಆಯಾಸವನ್ನು ಮರೆತುಬಿಡುತ್ತಾಳೆ ಅಮ್ಮ.

ಬೆಳಿಗ್ಗೆ  ಎಲ್ಲರಿಗೂ ಮುಂಚೆ ಎದ್ದು ಕಸ ಗುಡಿಸಿ  ಸ್ನಾನ ಮಾಡಿ ತುಳಸಿ ಪೂಜೆ ಮುಗಿಸಿ ಅಡುಗೆ ತಯಾರಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಎಲ್ಲರಿಗೂ ಇದ್ದಲ್ಲಿಗೇ ಹೋಗಿ ಬಡಿಸುತ್ತಾ ,ಆಗಾಗ್ಗೆ ಕಂದನ ಯೋಗಕ್ಷೇಮ ನೋಡಿಕೊಳ್ಳುತ್ತ ತಾನು  ಊಟ ಮಾಡುವುದನ್ನೆ ಮರೆಯುತ್ತಾಳೆ.ಇಷ್ಟೆಲ್ಲ ಮಾಡಿ ಅವಳು ಊಟ ಮಾಡುವಷ್ಟೊತ್ತಿಗೆ ಸೂರ್ಯ ನೆತ್ತಿ ಮೇಲಿರುತ್ತಾನೆ.

ಮಗು ಬೆಳೆದಂತೆಲ್ಲ ಅಮ್ಮನ ಕೆಲಸ ಕಡಿಮೆ ಆದರೂ ಮಗು ಮೇಲಿನ ಪ್ರೀತಿ ಕಡಿಮೆಯಾಗದು.ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸುವುದರಿಂದ ಹಿಡಿದು ಮಗುವಿನ ಆಟ ಪಾಠ ಎಲ್ಲದರತ್ತಲೂ ತನ್ನನ್ನೇ ತೊಡಗಿಸಿಕೊಂಡು ಬಿಡುವಿಲ್ಲದೆ ದುಡಿಯುತ್ತಿರುತ್ತಾಳೆ ಅಮ್ಮ.  ಅಮ್ಮ  ಎನ್ನುವ ಸ್ಥಾನಕ್ಕೆ ಮೇಲುಕೀಳುಗಳ ಯಾವ ಸೋಂಕೂ ತಾಗಲಾರದು .ಏಕೆಂದರೆ  ಅಮ್ಮ  ಅಮ್ಮನೇ .ಅಮ್ಮನ ಆ ಕೆಲಸವನ್ನು ಅಮ್ಮನೇ ಮಾಡಿದಾಗ ಮಕ್ಕಳ ಭವಿಷ್ಯ ಬೆಳಗುತ್ತದೆ.*ದೀಪದ ಪ್ರತಿರೂಪ ಅಮ್ಮ*.ತನ್ನೊಲವ ಬತ್ತಿಗೆ ಮಮತೆಯ ತೈಲವೆರೆದು ಕನಸುಗಳ ಜ್ಯೋತಿ ಹಚ್ಚಿ ಜಗಕೆ ಬೆಳಕ ನೀಡುವಳು.ತಾ ಮಾತ್ರ ಕತ್ತಲಲ್ಲೇ ಊಳಿಯುವಳು.ಅಮ್ಮನ ಈ ಕಾರ್ಯ ಹೊಗಳಲು ಪದಗಳೇ ಬಾರವು.

ಅಂತ ಅಮ್ಮನನ್ನು ಬೆಳೆದ ಮಕ್ಕಳು ಬೀದಿಗೆ ತಳ್ಳದೇ ಅನಾಥಾಶ್ರಮದ ಪಾಲು ಮಾಡದೆ ದಿನ ಬೆಳಗೆದ್ದು ಅವಳ ನಿರ್ಮಲ ಆಶೀರ್ವಾದ ಪಡೆದು ತನ್ನ ಕಾರ್ಯದಲ್ಲಿ  ತೊಡಗಿದರೆ ಯಾವ ಕೆಲಸವೂ ವಿಫಲವಾಗುವುದ್ದಿಲ್ಲ. ಅಮ್ಮ ಬರೀ ಅಮ್ಮನಲ್ಲ ಅಮ್ಮ. ಅವಳು ಈ ಜಗದಿ ನಮ್ಮ ಕಣ್ಣೆದುರಿಗಿರು ದೇವತೆ.ಅವಳನ್ನು ಆತ್ಮೀಯವಾಗಿ ಗೌರವ ಪೂರ್ವಕವಾಗಿ ಬಾಳಿಸುವ ಕರ್ತವ್ಯ ನಮ್ಮದಾಗಬೇಕು

*ಅಮ್ಮಂದಿರ ದಿನದ ಶುಭಾಶಯಗಳು*

ಇಂತಿ ನಿಮ್ಮವ 

*ಅಮುಭಾವಜೀವಿ*
1112ಎಎಂ14052017