*ನಿನ್ನ ಮಡಿಲಲಿ*
ಈ ಕೋಪ ಸರಿಯಿಲ್ಲ
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ
ಮುದ್ದಾಗಿ ಮಾತಾಡು ಚೆಲುವೆ
ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು
ಹೂವಾಗಿ ಅರಳಿದವು ಸುಮಗಳು
ಏಕಾಂಗಿ ಚಂದಿರನಿಗೆ ನೀ ಜೊತೆಯಾಗು
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು
ಹೊಳೆವ ಹೊಂಗೆರೆಯ ಕಿರಣ ನಿನ್ನ ನಗು
ನಿನ್ನ ಮಡಿಲಲ್ಲಿಆಔಞಞಟಸಸಕೀಸಂಈಂ ಂಂ ಮಗು nhi hota he jaha
ನಿನ್ನ ಪ್ರೀತಿಯ ಮಾತು ಜೇನಂತೆ
ಕೋಪದಿ ನುಡಿದರೆ ಗುಡುಗು ಸಿಡಿಲಂತೆ
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ
ಸಾಗರ ಕಿನಾರೆಯಲಿ ನಾ ಕಾಯುವೆ
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ
೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*
ಹಾಕದಿರು ನೀ ಕಣ್ಣೀರು
ನನ್ನಾಸೆಗದು ತಣ್ಣೀರು
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು
ನಲ್ಮೆಯ ಗೆಳತಿಯೆ ನೀನು
ನನ್ನ ಪಾಲಿಗೆ ಸವಿ ಜೇನು
ನೀನಾಡುವ ಮಾತೆಲ್ಲ ನನಗೆ
ಸ್ಪೂರ್ತಿಯ ಚಿಮ್ಮು ಹಲಗೆ
ಹೃದಯಕ್ಕೆ ನೀ ಹೇಳು ಸಾಂತ್ವನ
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ
ನೀನಿಲ್ಲದ ಈ ಬಾಳು ಸೆರೆವಾಸ
ನೀನಲ್ಲವೇ ನನ್ನ ಬಾಳ ವಿಶೇಷ
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ
ನೂರಾರು ಕನಸುಗಳು ನನಸಾಗಲಿ
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ
ನಮ್ಮಿಬ್ಬರ ಅನುಬಂಧ ಅಮರವಾಗಲಿ
೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
ನೊಂದಿದೆ ಜೀವ
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ
ಅಮ್ಮ ಕಷ್ಟಪಟ್ಟು ಕೊಟ್ಟ ಜೀವ
ಅಪ್ಪ ದುಡಿದು ದಣಿದು ನೀಡಿ ಜೀವನ
ಸಣ್ಣದೊಂದು ಕಾರಣಕ್ಕೆ
ಸತ್ತು ಬಿಡುವ ಮನಸು ದುರ್ಬಲ
ಸ್ನೇಹದ ನಂಬಿಕೆಯಾಗು
ಪ್ರೀತಿಯ ಬೆಂಬವಾಗು
ಬದುಕಿನ ಪ್ರತಿ ಕ್ಷಣವೂ
ಆನಂದದಿ ಮುಂದೆ ಸಾಗಲಿ
ಯಾರಿಗಿಲ್ಲ ಇಲ್ಲಿ ನೋವು
ಯಾರಿಗಿಲ್ಲ ಇಲ್ಲಿ ಸಾವು
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು
ಸಾವೇ ಬಂದು ಕರೆದರೂ
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ
ಬಿಡು ಬಿಡು ಚಿಂತೆಯ ಓ ಜೀವವೇ
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ
ಇಂದಿನ ಹಂಬಲ ಹೆಚ್ಚಾಗಲಿ
೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು
#ಒಲವಿನ #ಭಜನೆ
ಮೋಡಗಳು ಮುಸುಕಿದ ರಾತ್ರಿಯಲಿ
ತಂಗಾಳಿ ಬೀಡುವ ಹೊತ್ತಿನಲ್ಲಿ
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ
ಎದೆಯ ಭಾವಗಳ ನೀರವತೆ
ವಿರಹ ವೇದನೆಯ ಕವಿತೆ
ಮರುಕದಲ್ಲಿ ಮುಲುಕುತ್ತಾ ಮಲಗಿದೆ
ನಿದ್ರೆಯು ಹತ್ತದ ಕಣ್ಗಳಲ್ಲಿ
ಮದ್ಯಧೂಮಪಾನಗಳ ಜೊತೆಯಲ್ಲಿ
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು
ಮರೆತರೂ ಮರುಕಳಿಸಿ ಅಣಕಿಸುತ್ತಿದೆ
ಕಪ್ಪೆಗಳ ವಟಗುಟ್ಟುವ ಶಬ್ದ
ನರಿಗಳು ಕೂಗುವ ಸದ್ದು
ಓ ಎನ್ನುವ ನಾಯಿಗಳ ಆಕ್ರಂದನ
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು
ಏಕಾಂತವೂ ಇಲ್ಲಿ ನಿತ್ಯ ಬಂಧನ
ತಬ್ಬಲಿಯು ನೀನಾದೆ ಹೃದಯವೇ
ನಾ ಒಬ್ಬಂಟಿಯಾದೆ ಓ ಸಮಯವೇ
ಬೆಳಕು ಹರಿಯುವ ತನಕ ಒಲವಿನದೇ ಭಜನೆ
ದಕ್ಕಿದ ದಾರಿದ್ರೆಲ್ಲ ನೀಗಿ
ಮತ್ತೆ ಹೊಸತನದ ಪ್ರೇಮಿಯಾಗಿ
ದಿನವನ್ನಾರಂಭಿಸುವುದೆನ್ನ ಚಿಂತನೆ
೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು
*ಬಾಳ ಯಾತ್ರೆಯ ದಿಬ್ಬಣ*
ನೀಲ ನಭದ ನಿನ್ನ ನಲ್ಮೆಯಲ್ಲಿ
ಮೂಡಿ ಬಂದ ಚಂದ್ರ ಬಿಂಬ
ನಿನ್ನ ತಾರುಣ್ಯಕ್ಕೆ ತಲೆಬಾಗಿತು
ಹಸಿರ ಮಡಿಲ ತೊಟ್ಟಿನಲ್ಲಿ
ಬಿರಿದ ಮೊಗ್ಗು ಅರಳುವಲ್ಲಿ
ನಿನ್ನ ರೂಪದ ಗಂಧ ಹೊಮ್ಮಿತು
ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು
ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ
ನಿನ್ನನ್ನೇ ಮೋಹಿಸುತ್ತಿತ್ತು
ನೈದಿಲೆ ಅರಳುವ ಹೊತ್ತು
ಪೌರ್ಣಿಮೆಯು ಹಾಲು ಚೆಲ್ಲಿತ್ತು
ನಿನ್ನ ಬರುವಿಕೆಗಾಗಿ ಕಾಯುತ
ನಲ್ಲ ನಲ್ಲೆಯರ ಸರಸ ಸಲ್ಲಾಪ
ಇರಹವಿರದ ಸಂತೃಪ್ತ
ಇಲಿಯಳಧರ ಸವಿಯುತ
ಮಧುಚಂದ್ರದ ಈ ಮಿಲನ
ಮಧುಬಟ್ಟಲ ಸವಿ ಪಾನ
ಬದುಕಿಗೆ ರಸದೌತಣ
ಬದುಕು ನಿತ್ಯ ನೂತನ
ಭರವಸೆ ತುಂಬಿದ ಈ ಬಂಧನ
ಬಾಳಯಾತ್ರೆಯ ದಿಬ್ಬಣ
೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ*
ಬಾನ ಅಂಚಲ್ಲಿ ಮೂಡಿದ
ಚಿತ್ತಾರದ ಸವಿ ರೂಪ ನೀನು
ಇರುಳ ಬಾಂದಳದಲ್ಲಿ ಮಿನುಗುವ
ತಾರೆಗಳ ಗೆಳತಿಯೇ ನೀನು
ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು
ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ
ಮಧುವನರಸಿ ಬರುವ ದುಂಬಿಯಂತೆ
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ
ಹದವಾಗಿ ನೆನೆದ ಮಣ್ಣಿಂದ ಮೂಡಿದ
ಸೊಬಗ ಶೃಂಗಾರದ ಪ್ರತಿಮೆ ನೀನು
ಏನೆಂದು ಬಣ್ಣಿಸಲಿ ನಿನ್ನ ರೂಪ
ಯಾವ ಉಪಮೆಯು ಸಾಲದು ಇನ್ನು
ಅಂತರಂಗದ ಭಾಷೆಗೆ ನೀ ನುಡಿಯಾಗು
ಕವಿ ಭಾವದ ತುಡಿತಕೆ ಮಿಡಿತವಾಗು
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು
೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ
ಕರ್ನಾಟಕ ರಾಜ್ಯ ಘಟಕ
ದತ್ತಪದ:- *ಹಸಿವು*
ಶೀರ್ಷಿಕೆ:- *ಹಸಿದ ಜೀವ*
ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ
ಚಿಂದಿ ಹುಟ್ಟ ದೇಹದೊಳಗೆ
ಹಸಿವು ಸಮರ ಸಾರಿದೆ
ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ
ಅಸುನೀಗಿ ಮೋರಿ ಸೇರುತ್ತಿದೆ
ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ
ಮಮ್ಮಲ ಮರುಗಿದೆ ಹಸಿದ ಜೀವ
ಅನ್ನ ದೇವರು ಎಂದು ಹೇಳುವರೆಲ್ಲ
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ
ವ್ಯರ್ಥ ಮಾಡುವಿರೇಕೆ ಅನ್ನವನ್ನು
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು
ಪೈರು ಅನ್ನವಾಗುವವರೆಗೆ
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು
೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
ಬೆಳಕೇ ಇರದ ಕಪ್ಪು ಕತ್ತಲ ಹಾದಿ
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ
ಕಷ್ಟಗಳ ಕಾರಿರುಳು ಕವಿದು
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ
ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು
ಗುರಿ ಮುಟ್ಟುವತ್ತ ಸಾಗಿದೆ ಪಯಣ
ಹಾದಿ ತೋರುವ ಮಾರ್ಗದರ್ಶಕರೆಲ್ಲ
ಅಲ್ಲಲ್ಲೆ ನಡುವೆ ಬಿಟ್ಟು ಹೋದರು
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ
ಏನೇ ಆದರೂ ಗೆಲ್ಲಬೇಕು ಬದುಕನ್ನು
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ
ಎಂಬ ಭರವಸೆಯ ಈ ಹೋರಾಟ
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ
ಅಂಜದಿರು ಮನವೇ ಮುನ್ನುಗ್ಗು ನೀನು
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು
೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
ಎಲ್ಲೆಲ್ಲಿಯೂ ನೀನಿರುವೆ ಎಂದು
ಹುಡುಕುತ್ತಾ ಅಲೆಯುತ್ತಿರುವೆ
ಕಾಣದೆ ನೀನು ಎಲ್ಲಿ ಹೋದೆ
ಬದುಕಿನಲ್ಲಿ ಬಳಲಿ ಬಂದೆ
ನಿನ್ನ ಪಾದ ಸ್ಪರ್ಶಕಾಗಿ ಕಾದೆ
ನಿನ್ನ ಕಾಣದೆ ನಾ ಕಂಗಾಲಾದೆ
ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ
ಹೂ ಹಾಸಿನ ದಾರಿ ಕಾಣದಾದೆ
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ
ಕನವರಿಕೆಯ ಬದುಕಾಗಿದೆ
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು
ಅಂತರಂಗವೀಗ ಶುದ್ದಿಯಾಗುತ್ತಿದೆ
ಅಹಂಕಾರವೆಲ್ಲ ಕಮರಿಹೋಗಿದೆ
ಶರಣಾಗತಿಯೊಂದೇ ನಿನ್ನ ತೋರಿದೆ
ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು
ಬವಣೆಗಳ ಸಮರ ನಿಲ್ಲಲಿ
ಪ್ರೀತಿಯ ಪ್ರಕಾರ ಎಚ್ಚಲಿ
ನೋವಿಗೆ ನೀ ನೀಡು ಮದ್ದು
ನಿನ್ನಾಲಯಕ್ಕೆ ಬಂದಿರುವೆ
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ
೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು*
#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು
ಅಂತರಂಗ ನೋಯುತ್ತಿದೆ
ಅನುಬಂಧ ಕಳಚುತಿದೆ
ಏಕೆ ಹೀಗೆ ಎನ್ನುವುದು
ಅರಿಯದಾಗಿ ಹೋಗಿದೆ
ಪ್ರೀತಿ ಬೆಸೆದ ಬಾಂಧವ್ಯ
ನೋವ ನೀಡುವುದು ಸಂಭಾವ್ಯ
ಕಾರಣ ಏನೇ ಇದ್ದರೂ
ನೋವಿಗೆ ಮದ್ದು ನೀನೇ ಇನಿಯ
ಎದೆಯ ಭಾವಗಳ ಬೆಳಕಿಗೆ
ಗ್ರಹಣ ಬಡಿದು ಕತ್ತಲಾಗಿ
ಕಣ್ಣೀರಿನ ಹನಿಗಳ ಸಾಲು
ಬತ್ತಿ ಹೋಗಿದೆ ವೇದನೆಗೆ
ನನ್ನವರೆಂಬುವರೆಲ್ಲರೂ ದೂರ
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ
ಬದುಕಿನ ಯಾನಕ್ಕೆ ತಿರುವುಗಳು ನೂರು
ದಿಕ್ಕು ತಪ್ಪಿದೆ ಗುರಿ ತೋರುವರಾರು
ಹೆಣ್ಣಿನ ಬಾಳೆ ಹೀಗೆ
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ
ಬೇಕಾದವರು ಬೇಕಾದ ರೂಪ ನೀಡಿ
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು
ತಾಯಿ ಮಡದಿ ಮಗಳು ಸೋದರಿ
ಗೆಳತಿ ಗುರು ಇನ್ನು ಏನೇನು ಹೆಸರು
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು
೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*