ಅನುದಿನದ ಸಂಗಾತಿ
ಆಕಾಶವಾಣಿ ಎಂಬ ಪ್ರಸಾರ ಭಾರತಿ
ಇಂದಿಗೂ ಎಂದೆಂದಿಗೂ ಜೊತೆಗಾತಿ
ಈ ಶತಮಾನದ ಹೆಮ್ಮೆಯ ನುಡಿ ಗಾರುಡಿ
ಉತ್ತರ ಧೃವದಿಂ ದಕ್ಷಿಣ ಧ್ರುವಕೂ
ಊರ್ಧ್ವದೆಡೆ ಮುಖ ಮಾಡಿ ಮುನ್ನಡೆವ
ಋಷ್ಯಶೃಂಗದೆತ್ತರ ಪ್ರಸಾರ ಮಾಡಿ
ಎಷ್ಟೊಂದು ಮಾಹಿತಿ ಮನರಂಜನೆ ಹೊತ್ತು ತಂದು
ಏಳಿಗೆಯತ್ತ ನಮ್ಮ ಕೊಂಡೊಯ್ದು ಜ್ಞಾನದ
ಐಶ್ವರ್ಯ ತುಂಬಿ ಸಮೃದ್ಧಗೊಳಿಸಿ
ಒಂದಾಗಿ ಸಾಗುತ್ತಿದೆ ಜೊತೆ ಜೊತೆಗೆ
ಓಡುತಿದೆ ಕಾಲದೊಂದಿಗೆ ಮುನ್ನುಗ್ಗಿ
ಔನತ್ಯದ ಸಾಂಗತ್ಯ ತಂದ
ಅಂತರಂಗದ ಅಭಿಮಾನ ತುಂಬಿದ
ಅಹ್ಲಾದಕರ ನುಡಿ ಒಡನಾಡಿ ಆಕಾಶವಾಣಿ
೯೦ನೇ ವರ್ಷಾಚರಣೆಯ
೧೧೦೮ಪಿಎಂ೧೦೦೬೨೦೨೫
ಅಮು ಭಾವಜೀವಿ ಮುಸ್ಟೂರು.
ನಡೆದದ್ದಂತೂ ನಡೆದೇ ಹೋಯಿತು
ನುಡಿಯುವವರಿಗೆ ತಟ್ಟದು ಆಪತ್ತು
ದುಡಿಯುವವರಿಗೆ ಶಿಕ್ಷೆಯ ವಿಧಿಸಿ
ಅಧಿಕಾರಕ್ಕೆ ಅಂಟಿಕೊಂಡಿದ್ದವರದೇ ತಾಕತ್ತು
ಅಭಿಮಾನದ ಹೊಳೆ ದೊಡ್ಡದು
ಆಚರಣೆಯ ಸ್ಥಳ ಚಿಕ್ಕದು
ಒಮ್ಮೆಲೇ ಮುಗಿಲೆದ್ದ ಪ್ರವಾಹಕ್ಕೆ
ಬೆರಳೆಣಿಕೆಯ ರಕ್ಷಕರಿಂದ ತಡೆಯಲಾಗದು
ಕಾಲ್ತುಳಿತಕ್ಕೆ ಜೀವ ಹಾರಿ ಹೋದವು
ಸತ್ತ ದೇಹಗಳು ಮಣ್ಣು ಸೇರಿದವು
ಯಾರೂ ಹೊಣೆ ಹೊರುವುದಿಲ್ಲ ಸಾವಿಗೆ
ಕಳೆದುಕೊಂಡವರಿಗಷ್ಟೇ ಗೊತ್ತದರ ನೋವು
ಕಾಳಜಿಯೇ ಇಲ್ಲ ಆಳುವವರಿಗೆ
ಮುಂಜಾಗ್ರತೆ ಇಲ್ಲ ಹೊಣೆ ಹೊತ್ತವರಿಗೆ
ಸಾವನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಕಿರುಚಾಟ
ಜನ ಮರಳೋ ಜಾತ್ರೆ ಮರುಳೋ ಕಾರಣ ಈ ದುರಂತಕೆ
ಗೆದ್ದವರು ಅಭಿನಂದನೆಗೆ ಅರ್ಹರು
ಅಧಿಕಾರದಲ್ಲಿರುವವರು ಅಭಿನಂದಿಸಿ ಖುಷಿಪಟ್ಟರು
ಸತ್ತವರು ಮರೆತೇ ಹೋದರು ಆ ಸಂಭ್ರಮದಲ್ಲಿ
ಸಾಂತ್ವಾನ ಹೇಳದೆ ಹೋದರು ಆ ಗೆದ್ದವರು
ಅಭಿಮಾನವಿರಬೇಕು ಅಂಧಾಭಿಮಾನ ಬೇಡ
ಸಂಕಷ್ಟಕ್ಕೆ ಯಾರು ಬರರು ನಿಮ್ಮ ಸಂಗಡ
ಜೀವ ಮುಖ್ಯ ಜೀವನ ಸೌಖ್ಯ ಮೊದಲು
ನಿಮ್ಮ ನಂಬಿದವರ ನೀವೇ ಸೇರಿಸಬೇಕು ದಡ
೦೬೪೩ಪಿಎಂ೧೧೦೬೨೦೨೫
*ಅಮು ಭಾವಜೀವಿ ಮುಸ್ಟೂರು*
*ಹಾಯ್ಕು-೧. ಮೌನ*
ನಿನ್ನ ಮೌನವೇ
ಪ್ರೇಮದ ಕವಿತೆಯು
ಬಾಳ ಹಾದಿಲಿ
*ಹಾಯ್ಕು-೨. ಧ್ಯಾನ*
ಪ್ರೀತಿಯ ಧ್ಯಾನ
ಮಾಡುತ ಮರೆತೆನು
ಕಳೆದು ಹೋಗಿ
*ಹಾಯ್ಕು-೩. ಜ್ಞಾನ*
ಹಚ್ಚಿದ ಜ್ಯೋತಿ
ಜ್ಞಾನದ ಸಂಕೇತವು
ಪ್ರೀತಿಯೇ ಗುರು
೦೩೧೪ಪಿಎಂ೧೨೦೬೨೦೨೫
ಅಪ್ಪಾಜಿ ಎ ಮುಸ್ಟೂರು ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ
ಅದೆಷ್ಟು ಕನಸುಗಳ ಕಟ್ಟಿ ಹಾರಿದ್ದವೋ
ಅದಾವ ಗುರಿಯ ಸೇರ ಬಯಸಿದ್ದವೋ
ಖುಷಿ ಖುಷಿಯಲ್ಲಿ ಬಾನಾಡಿಯಂತೆ ತೇಲಿ
ಗೂಡು ಸೇರುವ ತವಕದಲ್ಲಿದ್ದವರಿಗೆ ಎಂತಹ ಆಘಾತ
ಯಂತ್ರದ ಬಾನಾಡಿಯೊಂದು ಆಗತಾನೆ
ಗಗನದೆಡೆ ಚಿಮ್ಮಿ ಹೊರಟ ಪಯಣ
ಹುಟ್ಟಿದ ಭೂಮಿ ಬಿಟ್ಟು ಹಾರಿದವರ
ಹಣೆಯಲ್ಲಿ ಏನು ಬರೆದಿದ್ದು ಅದೆಷ್ಟು ದಾರುಣ
ಸಿರಿವಂತಿಕೆಯ ಅಗರ್ಭದಲ್ಲಿ ಹುಟ್ಟಿದ್ದ
ದುಡಿವ ಹೊಣೆಗಾರಿಕೆಯ ನೆಚ್ಚಿ ಹೊರಟಿದ್ದ
ಬಂಧು ಬಾಂಧವರ ಸೇರುವ ತವಕದಲ್ಲಿದ್ದ
ನೂರಾರು ಜೀವಗಳಿಗೆ ಒಂದೇ ಮುಕ್ತಿ ದಯಪಾಲಿಸಿದ್ದ
ಕರುಣೆ ಎಂಬುದೇ ಇಲ್ಲ ಆ ಸಾವಿಗೆ
ಇಷ್ಟೊಂದು ಧಾರುಣವಾಗಬೇಕಿದ್ದೆ ಕೊನೆಗೆ
ಏನೆಲ್ಲ ಜವಾಬ್ದಾರಿಗಳು ಜಾರಿ ಹೋದವು
ಲೋಹದ ಹಕ್ಕಿಯ ಅವಘಡದಿ ಬೆಂದವು
ಆಧುನಿಕತೆಯ ಅವಶ್ಯಕತೆ ಒಮ್ಮೊಮ್ಮೆ
ಬದುಕಲು ಅವಕಾಶ ನೀಡುವುದಿಲ್ಲ
ಅಮೂಲ್ಯ ಜೀವಗಳ ಅಂತ್ಯವೆಂದಿಗೂ
ನಂಬಿದವರಿಗೆ ಮತ್ತೆ ದಕ್ಕುವುದಿಲ್ಲ
ಚಿರಶಾಂತಿ ಇರಲಿ ನಿಮಗೆ
ಆ ಬ್ರಾಂತಿ ಕಾಡುವುದು ಕೊನೆವರೆಗೆ
ಏನೆಲ್ಲ ಸಾಧಿಸ ಹೊರಟ ಜೀವಗಳಿಗೆ
ಸಾವನ್ನು ಗೆಲ್ಲಲಾಗಲಿಲ್ಲ ಒಂದು ಘಳಿಗೆ
೦೬೩೩ಪಿಎಂ೧೨೦೬೨೦೨೫
*ಅಮು ಭಾವಜೀವಿ ಮುಸ್ಟೂರು*
ಮೋಡದ ಹಿಂದೆ ಓಡುವ ಚಂದಿರನಂತೆ
ಹಾರಾಡುವ ಅವಳ ಮುಂಗುರುಳಂತೆ
ತಂಗಾಳಿಯ ಮೆಲ್ಲ ತೀಡುವುದು
ಅವಳುಟ್ಟ ಸೀರೆ ಸೆರಗು ಹಾರಾಡುವಂತೆ
ಎಲೆ ಎಲೆ ಮೇಲೆ ಚೆಲ್ಲಿದ ಹನಿ ಸಾಲು
ಬೆಳದಿಂಗಳಲ್ಲೂ ಬೆವತ ಅವಳ ಬೆವರ ಹನಿಗಳು
ಮೋಡದ ಮರೆಯಲಿ ಚಕ್ಕಂದವಾಡುವ ಶಶಿಯಂತೆ
ಮುಂಗುರುದ ಮರೆಯಲಿ ರಂಗೇರಿದ ಗುಳಿಕೆನ್ನೆಯಂತೆ
ಗಿಡ ಮರಗಳ ಮೆತ್ತೆಯ ಮೇಲೆ
ನಿದ್ರೆಗೆ ಜಾರಿದ ಆ ದಂತ ಪಂಕ್ತಿ ಸಾಲೆ
ಆ ಚೆಲುವಿಗೆ ಸೋಲದವರುಂಟೆ
ಆ ಸೊಬಗನ್ನುಕಂಡು ಕವಿಯಾಗದವರುಂಟೆ
ಕೆತ್ತಿದವನಾರೋ ಈ ಕಲಾಕೃತಿಯ
ಮೆಚ್ಚಿಕೊಂಡು ಹುಚ್ಚೆದ್ದಿದೆ ಹರೆಯ
೧೧೦೫ಪಿಎಂ೧೩೦೬೨೦೨೫
*ಅಮು ಭಾವಜೀವಿ ಮುಸ್ಟೂರು*
ನಾನೊಂದು ತ್ರಿಜ್ಯ
ನೀನೋ ಸುತ್ತುವ ಪರಿಧಿ
ಪ್ರೀತಿಯ ಕೇಂದ್ರವ ಹಾದು
ವ್ಯಾಸವಾಗಿ ಕೂಡುವ ನಾವು
ಅತ್ತ ಇತ್ತ ಸುತ್ತ ಮುತ್ತ
ಬಾಗಿಲೇ ಇರದ ಕೋಟೆ ಬದುಕು
ಪ್ರಾಣ ಪೂರಣ ಗೈಯುತ
ಪೂರ್ಣದಲಿ ಹಣ್ಣಾಗುವ ಬಾ ನಾವು
ಬಿಂದು ಬಿಂದು ಬೆಸೆಯುವ
ರೇಖೆಯ ರೆಕ್ಕೆ ಬಿಚ್ಚಿ ಹಾರುವ
ಕೋನದ ತಿರುವುಗಳು ತಡೆಯಲಾರವು
ಮತ್ತೆ ಸೇರುವ ನಮ್ಮಿಬ್ಬರನು
ಚಂದಿರನಿರುವನು ಎಂದರೆ ಬಾನಲಿ
ಚೆಲುವೆ ನೀನಿದ್ದ ಹಾಗೆ ನನ್ನ ಮನಸಲ್ಲಿ
ತಾರೆಗಳು ಹೊಳೆಯುತ್ತಿರಲು ಅಲ್ಲಿ
ನಗುವ ಹೊಳಪು ನೋಡು ನನ್ನ ಮೊಗದಲ್ಲಿ
ಚಂದ್ರಿಕೆಗಾಗಿ ಕಾಯುವಳು ನೈದಿಲೆ
ಚಂಚಲೆ ಹೇಳು ನಿನ್ನ ನಾ ಸೇರಲೆ
ಬೆಳದಿಂಗಳ ಕಂಡು ಉಕ್ಕುವ ಶರಧಿ
ನೀ ಸಿಕ್ಕರೆ ದಕ್ಕಿದಂತೆ ನೆಮ್ಮದಿ
ತಂಗಾಳಿಗೆ ತೂಗಾಡಿದೆ ತರುಲತೆ
ನಿನ್ನ ಕೆನ್ನೆಯ ಮುದ್ದಿಸುವ ಮುಂಗುರುಳಂತೆ
ಫಳ ಫಳ ಹೊಳೆಯುವ ಕೋಲ್ಮಿಂಚು
ನಾನರಿಯೆ ಕಣ್ಣಂಚಿನ ಒಳಸಂಚು
ಈ ಇರುಳು ಆನಂದಮಯ ಹುಣ್ಣಿಮೆಯಲ್ಲಿ
ಸಕ್ಕರೆ ಮಾತಿನ ಅರಗಿಣಿ ಇರಲು ಜೊತೆಯಲ್ಲಿ
ತಾವರೆ ಕೊಳದಲ್ಲಿ ತೇಲುವ ಹಂಸೆಯಂತೆ
ನಾವಿಬ್ಬರು ಬೆರೆತ ಈ ಇರುಳೇ ಸ್ವರ್ಗದಂತೆ
ಆ ಚಂದ್ರನಿಗೂ ಈ ಭೂಮಿಗೂ ಮಿಲನ
ನನ್ನೊಳಗೆ ತಂದಿದೆ ಏನೋ ಸಂಚಲನ
ಪ್ರೀತಿಯ ಬಯಕೆಯ ಈ ಆಲಿಂಗನ
ಆ ಬೆಳ್ದಿಂಗಳ ಬೆಸೆದಿದೆ ನಮ್ಮ ಈ ಬಂಧನ
1046ಪಿಎಂ14062025
*ಅಮು ಭಾವಜೀವಿ ಮುಸ್ಟೂರು*