Tuesday, December 19, 2017

ಕವಿತೆ

*ಮುದಗೊಳ್ಳಲಿ ಹೃದಯ*

ಬಂದನದೋ ಬಂದನದೋ
ಜಗ ಬೆಳಗಲು ಸೂರ್ಯ
ತೆರೆದನದೋ ಚಂದವಿದು
ಪ್ರಕೃತಿಯ ಸೌಂದರ್ಯ

ಇರುಳ ಏಕತಾನತೆ ಕಳೆದು
ಬೆಳಕ ಘನತೆ ತಂದು
ಹಕ್ಕಿಗಳಿಂಚರದ ಸಡಗರಕೆ
ಹೂಚೆಲುವಿನ ಉಡುಗೊರೆಯಿತ್ತ

ಎಲೆಯ ಮೇಲಿನ ಇಬ್ಬನಿಯಲ್ಲಿ
ದಿನಕೆ ಮುನ್ನುಡಿ ಬರೆದ
ಕಾಲದ ರಥವನೇರಿ ನಿಲ್ಲದೆ
ದಿನವೆಲ್ಲ ದಣಿಯದೆ ನಡೆದ

ದಿನಕರನ ದಯವಿರದೆ
ಬದುಕಿಗೆಂದೂ ಬೆಳಕಿಲ್ಲ
ಈ ಹಿತಕರ ಅನುಭವ
ಪಡೆಯದೇ ದಿನದಿ ಖುಷಿ ಇಲ್ಲ

ಶುಭೋದಯದ ಆಶಯ
ಸವಿಯೋಣ ಆ ವಿಸ್ಮಯ
ಮುಂಜಾನೆಯ ಈ ಸಮಯ
ಮುದಗೊಳ್ಳಲಿ ಹೃದಯ

0818ಎಎಂ20122017
ಅಮುಭಾವಜೀವಿ
(ಅಪ್ಪಾಜಿ ಎ ಮುಸ್ಟೂರು)

Thursday, December 14, 2017

ಕವಿತೆ

*ಬೇಕೊಂದು ಗೆಳೆತನ*

ಈ ಬದುಕೇ ಸಾಕಾಗಿದೆ
ಇಲ್ಲಿ ಬರೀ ನೋವೇ ತುಂಬಿದೆ
ಬೇಸರದ ಬಿಸಿಯುಸಿರು
ಸುಡುತಲಿದೆ ಬಾಳ ಹಸಿರನು

ಏಕಾಂಗಿ ಈ ಪಯಣ
ಬದುಕಲಿ ಬಲು ಧಾರುಣ
ಏಕಾಂತಕೂ ಸ್ವಂತಿಕೆಯಿಲ್ಲ
ಭಾವಕೂ ಸ್ವಾದವಿಲ್ಲ

ಪ್ರೀತಿ ಮರೀಚಿಕೆಯಾಗಿ
ನಗುವೇ ಮಾಯವಾಗಿ
ಬೋಳು ಬೀಳಿನ ನಡುವೆ
ಅತೃಪ್ತ ಮನದೊಳೇನೋ ಗೊಡವೆ

ನಾನು ಎಂಬ ನೆಲೆಗೆ
ನನ್ನವರೆಂಬುವ ಬೆಲೆ ಇಲ್ಲ
ಯಾರೂ ಇರದ ಬದುಕಲ್ಲಿ
ನೆಮ್ಮದಿಗೆ ಜಾಗ ಇನ್ನೆಲ್ಲಿ

ಸಾಕು ಒಂಟಿತನ
ಬೇಕೊಂದು ಗೆಳೆತನ
ಬೇಸರವ ಕಳೆದು
ಹಸಿರು ನಳನಳಿಸಲು

0307ಪಿಎಂ14122017

*ಅಮುಭಾವಜೀವಿ*

Wednesday, December 13, 2017

ಗಜಲ್ ಮಾಹಿತಿ

ಗಜ಼ಲ್ ದ್ವಿಪದಿಗಳಲ್ಲಿರುವ ಕಾವ್ಯ (ಷೇರ್)
ಮೊದಲ ಷೇರ್ ಮತ್ಲಾ, ಕೊನೆಯದು ಮಕ್ತಾ.

ಸಾಲಿನ ಕೊನೆಯಲ್ಲಿ ಆವರ್ತವಾಗುವ ಪದ ರದೀಫ್.
ಮತ್ಲಾದಲ್ಲಿ ರದೀಫ್ ಎರಡೂ ಸಾಲಲ್ಲಿ ಬರಬೇಕು. ಮುಂದಿನ ಷೇರ್ (ದ್ವಿಪದಿ)ಗಳಲ್ಲಿ ಎರಡನೇ ಸಾಲಿನ ಕೊನೆಯಲ್ಲಿ ಮಾತ್ರ.
ಮಕ್ತಾ ದಲ್ಲಿ ಕವಿ ತನ್ನ ಅಂಕಿತವನ್ನು ಸೂಚಿಸಿ, ಮುಕ್ತಾಯಗೊಳಿಸುತ್ತಾನೆ, ಸಾಮಾನ್ಯವಾಗಿ. ಇದು ಕಡ್ಡಾಯವಲ್ಲ.
ರದೀಫ್ ಹಿಂದಿನ ಪದ ಕಾಪಿಯಾ . ಇದು ರದೀಫ್ ನ ಕ್ರಮದಲ್ಲೇ ಬರುವ ಪ್ರಾಸಬದ್ಧ ಪದ. ಆದರೆ ಒಂದೇ ಪದ ಅಲ್ಲ .
ರದೀಫ್ ಇಲ್ಲದೆ ಕೇವಲ ಕಾಪಿಯಾ ಬರೆದೂ ಗಜ಼ಲ್ ಬರೆಯಬಹುದು. ಆಗ ಕಾಪಿಯಾ ಸಾಲಿನ ಕೊನೆಯ ಪದ.
ಇದು ಗಜ಼ಲ್ ನ ಬೇಸಿಕ್ , ರಾಚನಿಕ ರೂಪ.
[13/12 3:59 pm] ‪+91 86604 40307‬: ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬರ ಕಸೀದ ಎಂಬ ಕಾವ್ಯ ಪ್ರಕಾರದ ಪೀಠಿಕೆಯ ದ್ವಿಪದಿಗಳಿಂದ ಗಜಲ್ ರಚಿತವಾದವೆಂದು ಹೇಳುವರಾದರೂ ಅದು ಬೆಳೆದದ್ದು ಈರಾನ್‌ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣವಾಗಿರಲಿಲ್ಲ. ಹಿಂದುಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದುದರಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಅದನ್ನು ನನ್ನ ಮುಂದೆ ವ್ಯಕ್ತ್ಪಪಡಿಸಿಯೂ ಇದ್ದರು. ಹಾಗಾದರೆ ಈ ಕುರಿತು ಪತ್ರಿಕೆಗಳಲ್ಲಿ ಏಕೆ ಸ್ಪಷ್ಟನೆ ನೀಡಬಾರದು? ಎಂದು ಅವರನ್ನು ಕೇಳಿದ್ದೆ. ತಮ್ಮ ಕೃತಿಯಲ್ಲಿ ಅದನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಅವರ ಕೃತಿಯಲ್ಲಿ ಇದರ ಪ್ರಸ್ತಾಪವಿದೆ.

ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ, ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ನಾನು ಇವುಗಳಲ್ಲಿ ಕೆಲವನ್ನು ಗಜಲಿನ ವಸ್ತುಗಳನ್ನಾಗಿ ಬಳಸಿಕೊಂಡಿದ್ದೇನೆ. ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ದ್ವಿಪದಿಗಳನ್ನು ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ದ್ವಿಪದಿಗಳನ್ನು ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ-ಹೂವಿನ ಹಾರದ ದಾರದಂತೆ. ಸಮರ್ಥ ಕವಿಯಾದವನು ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ.

ಗಜಲ್‌ನ ರಚನೆ : ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ. ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲಿನಲ್ಲಿ ಐದರಿಂದ ಇಪ್ಪತ್ತೈದರವರೆಗೆ ಷೇರ್(ದ್ವಿಪದಿ)ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಗಜಲಿನ ಒಂದು ಚರಣಕ್ಕೆ ಮಿಸ್ರ ಎನ್ನುತ್ತಾರೆ. ದ್ವಿಪದಿಗೆ ಷೇರ್ ಎನ್ನುತ್ತಾರೆ.ಮತ್ಲಾ: ಗಜಲಿನ ಮೊದಲ ದ್ವಿಪದಿಗೆ ಮತ್ಲಾ  ಎನ್ನುತ್ತಾರೆ. ಇದರ ಎರಡೂ ಚರಣಗಳಲ್ಲಿ ಕಾಫಿಯ ಮತ್ತು ರದೀಫ್ ಈ ಎರಡೂ ಪ್ರಾಸಗಳು ಇರಲೇಬೇಕು. ಇವು ಒಂದರ ಮುಂದೆ ಒಂದು ಬರುತ್ತವೆ.ಕಾಫಿಯ: ಇದು ಒಂದು ಪ್ರಾಸ. ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ. ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣಗಳ ಮತ್ತು ಇನ್ನುಳಿದ ದ್ವಿಪದಿಗಳ ಎರಡನೆಯ ಚರಣದ ಅಂತ್ಯದಲ್ಲಿ ಪುನ: ಪುನ: (ಸ್ಥಾಯಿಯಾಗಿ ಅಲ್ಲ) ಬರುವುದಕ್ಕೆ ಕಾಫಿಯ ಎನ್ನುತ್ತಾರೆ. ಸ್ಥಾಯಿಯಾಗಿ ಅಂದರೆ ಬಂದ ಶಬ್ದವೆ ಬರಬಾರದು ಎಂದರ್ಥ. ಆದರೆ ಆ ಶಬ್ದಕ್ಕೆ ಬೇರೆ ಬೇರೆಯಾದ ಅರ್ಥವಿದ್ದರೆ ಅದನ್ನು ಬಳಸಬಹುದು. ಉದಾಹರಣೆಗೆ ತುಂಬಿ : ಇದಕ್ಕೆ  ಎರಡು ಅರ್ಥಗಳಿವೆ. ಪೂರ್ಣವಾಗಿ ಮತ್ತು ಭ್ರಮರ. ಹೀಗೆ ಬೇರೆ ಬೇರೆಯಾದ ಅರ್ಥವಿರುವ ಶಬ್ದಗಳನ್ನು ಬಳಸಬಹುದು. ರವಿ ಎಂಬುದು ಕಾಫಿಯಾದಲ್ಲಿ ಬಹಳ ಮುಖ್ಯವಾದುದು. ಕಾಫಿಯಾದ ನಿಜವಾದ ಮತ್ತು ಕೊನೆಯದಾದ ಅಕ್ಷರಕ್ಕೆ ರವಿ ಎನ್ನುತ್ತಾರೆ. ಉದಾಹರಣೆಗೆ : ಚಿಗುರು ಮತ್ತು ಅಲರು. ಇವುಗಳಲ್ಲಿ ರು ರವಿಯಾಗಿದೆ. ರವಿ ಕಾಫಿಯಾದ ಬೇರು. ಇದಿಲ್ಲದೆ ಕಾಫಿಯಾ ಆಗುವುದಿಲ್ಲ. (ಚಿಗುರು ಎಂದರೆ ಕುಡಿ, ಮೊಳಕೆ, ಅಲರು ಎಂದರೆ ಹೂವು, ಅರಳು)ರದೀಫ್: ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ, ಪೂರ್ಣ ಅರ್ಥ ಕೊಡುವ ಶಬ್ದಗಳ ಗುಂಪು ಮತ್ತು ಅಕ್ಷರ; ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ.ಗಜಲಿಗೆ ರದೀಫ್‌ನ ಅವಶ್ಯಕತೆ ಇಲ್ಲ. ರದೀಫ್ ಇಲ್ಲದ ಗಜಲ್‌ಗಳಿವೆ. ಆದರೆ ಕಾಫಿಯಾ ಮಾತ್ರ ಗಜಲಿಗೆ ಬೇಕೇ ಬೇಕು. ಅನೇಕರು ರದೀಫ್ ಇಲ್ಲದ ಗಜಲ್‌ಗಳನ್ನು ಮೆಚ್ಚುವುದಿಲ್ಲ. ರದೀಫ್‌ನ್ನು ಬಳಸಿದ ಗಜಲ್‌ಗಳಿಗೇ ಹೆಚ್ಚಿನ ಮಾನ್ಯತೆ. ಆದರೆ ರದೀಫ್ ಇಲ್ಲದ ಗಜಲ್‌ಗಳ ಸೃಷ್ಟಿ ಆಗುತ್ತಲೇ ಬಂದಿದೆ. ಮಖ್ತ: ಗಜಲಿನ ಕೊನೆಯ ದ್ವಿಪದಿಗೆ ಮಖ್ತ ಎನ್ನುತ್ತಾರೆ. ಕವಿ ತನ್ನ ಕಾವ್ಯನಾಮವನ್ನು ಇದರಲ್ಲಿ ಹೇಳಿಕೊಂಡಿರುತ್ತಾನೆ. ಅನೇಕ ವೇಳೆ ಕವಿ ತನ್ನ ಕಾವ್ಯನಾಮವನ್ನೇ ಹೇಳಿರುವುದಿಲ್ಲ. ಹೇಳಬೇಕೆಂಬ ಕಡ್ಡಾಯವೇನೂ ಇಲ್ಲ. ಕೆಲವು ಕವಿಗಳು ಮತ್ಲಾದಲ್ಲಿಯೂ ತಮ್ಮ ಕಾವ್ಯನಾಮವನ್ನು ಹೇಳಿಕೊಂಡಿರುವುದುಂಟು. (ನಾನು ನನ್ನ ಕಾವ್ಯನಾಮವನ್ನು ಸಿದ್ಧ ಎಂದು ಇರಿಸಿಕೊಂಡಿದ್ದೇನೆ).ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗeಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ. 

ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ, ಮೃದು, ಮಧುರ ಭಾವ ಹಾಗೂ ಶಬ್ದಗಳು. ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯವು ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರದು. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ ಗಜಲ್ ಮತ್ತು  ಬಿಡಿ ದ್ವಿಪದಿ ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ. ಗಜಲ್ ಸಂಕಲನಗಳೂ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಾಗಿವೆ.

-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

Wednesday, December 6, 2017

ಕವಿತೆ

*ಹೇಗೆ ಮರೆಯಲಿ*

ಹೇಗೆ ಮರೆಯಲಿ ನಾನು
ನೀ ಕೊಟ್ಟ ನೆನಪುಗಳು
ನನ್ನೆದೆಯ ಆಳದಲಿ
ಉಳಿದಿರುವಾಗ

ಒಂದೊಂದು ನೆನಪು
ಕಾಡಿದಾಗಲೂ ನೀನನ್ನ ಜೊತೆ
ಕಳೆದ ಆ ದಿನಗಳು
ಮತ್ತೆ ಮರುಕಳಿಸಿದಂತಾಗುವುದು

ನೆನಪುಗಳೇ ಹೀಗೆ ಅಲ್ವಾ
ನೋಯಿಸವು ನರಳಿಸವು
ಕಳೆದ ಕ್ವಣಗಳನು ಮತ್ತೆ ಮಧುರವಾಗಿಸುವಂತಹವು

ಮಳೆ ಬಂದು ನಿಂತಾಗ
ಉದುರುವ ಮರದ ಹನಿಗಳಂತೆ
ಈ ನೆನಪು ಮನದಾಳದಿ ಅಗೆದರೂ ಖಾಲಿಯಾಗದ ಗಣಿಯಂತೆ

ಮರೆಯುವುದು ಸಾಧ್ಯವೇ ಇಲ್ಲ ತೊರೆಯುವ ಸಂಭವವೇ ಇಲ್ಲ ಎಲ್ಲ ಅಚ್ಚೊತ್ತಿವೆ ಎದೆಯೊಳಗೀಗ ನೆನಪುಗಳ ನೆನೆವುದೊಂದು ಸುಯೋಗ

0516ಎಎಂ07122017 *ಅಮುಭಾವಜೀವಿ*