ವಿಷಯ :- *ನಮ್ಮ ಶಿಕ್ಷಕರು ನಮ್ಮ ಬದುಕಿನ ಮಾರ್ಗದರ್ಶಕರು*
ಲೇಖನದ ಶೀರ್ಷಿಕೆ :- *ನಮ್ಮ ಬದುಕಿನ ನಿರ್ಮಾತೃ ಶಿಕ್ಷಕ*
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಕವಿವಾಣಿಯಂತೆ ಗುರುವಿನ ಮಹತ್ವ ತುಂಬಾ ಅರ್ಥಪೂರ್ಣವಾಗಿ ಅಭಿವ್ಯಕ್ತವಾಗಿದೆ. ಮಾಂಸದ ಮುದ್ದೆಯಂತಹ ಮಗುವಿನಲ್ಲಿ ಸಮಾಜ ಒಪ್ಪಿತ ಸಂಸ್ಕಾರವನ್ನು ನೀಡುವುದರ ಮೂಲಕ ಚೆನ್ನಾಗಿ ರೂಪಿಸಲು ಭದ್ರ ಬುನಾದಿಯನ್ನು ಹಾಕುವಲ್ಲಿ ಶಿಕ್ಷಕರ ಪಾತ್ರ ಜವಾಬ್ದಾರಿಯುತವಾಗಿದೆ. ಶಿಕ್ಷಕ ತನ್ನ ಜ್ಞಾನದ ಜ್ಯೋತಿಯನ್ನು ಶಿಷ್ಯಂದಿರ ಮಸ್ತಕಕ್ಕೆ ತುಂಬುವ ಅವರ ಏಳಿಗೆಯಲ್ಲಿ ಖುಷಿಯನ್ನು ಕಾಣುವ ನಿಸ್ವಾರ್ಥ ವ್ಯಕ್ತಿ.
ಪ್ರತಿಯೊಂದು ಮಗುವೂ ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಟ್ಟು ವಿದ್ಯೆಯನ್ನು ಕಲಿಯುವುದು ಸಾಮಾನ್ಯ. ಆ ಕ್ಷೇತ್ರದಲ್ಲಿ ಶಿಕ್ಷಕ ಎಂಬ ವ್ಯಕ್ತಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಜೊತೆ ಜೊತೆಗೆ ಬದುಕಿನ ರೀತಿನೀತಿಗಳನ್ನು ಸಮಾಜದ , ದೇಶದ ಆಶಯ ಗುರಿಗಳನ್ನು ಮನದಟ್ಟು ಮಾಡಿಸಿ ಸಾಧನೆಯತ್ತ ಕೊಂಡೊಯ್ಯುವ ವಾಹಕನಾಗಿರುತ್ತಾನೆ. ಇಲ್ಲಿ ಅವನು ಜಾತಿ ಮತ ಪಂಥ ಶ್ರೀಮಂತ-ಬಡವ ಇತ್ಯಾದಿ ಯಾವುದೇ ಅಂಶಗಳನ್ನು ಪರಿಗಣಿಸದೆ ತನ್ನ ಶಿಷ್ಯ ಎಂದು ಸ್ವೀಕರಿಸಿ ಅವರ ಜ್ಞಾನವನ್ನು ಉನ್ನತೀಕರಿಸಲು ಪ್ರಯತ್ನಿಸುತ್ತಾನೆ.
ಶಿಕ್ಷಕ ಎಂದರೆ ನಮ್ಮ ಬಾಳಿನ ಪ್ರಮುಖ ನಿರ್ಮಾತೃ. ಬೆಳೆಯುವ ಪೈರಿನ ಗುಣಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಅದಕ್ಕೆ ಸೂಕ್ತ ವೇದಿಕೆಗಳನ್ನು ನೀಡುತ್ತಾ ಮಾರ್ಗದರ್ಶಿಸುವ ಮೂಲಕ ಗುರಿಯೆಡೆಗೆ ತಲುಪಿಸುವಲ್ಲಿ ತನ್ನೆಲ್ಲ ಶ್ರಮವನ್ನು ವ್ಯಯಿಸುತ್ತಾನೆ. ಗುರು ತನ್ನ ಜ್ಞಾನ ಮತ್ತು ವಿದ್ವತ್ತನ್ನು ಬೇರೊಬ್ಬರಿಗೆ (ವಿದ್ಯಾರ್ಥಿಗಳಿಗೆ) ವರ್ಗಾವಣೆ ಮಾಡಿದಾಗ ಮಾತ್ರ ದೇಶದ ಶಕ್ತಿ, ಜ್ಞಾನ ಸಂಪತ್ತಿನ ವೃದ್ಧಿ ಸಾಧ್ಯವಿದೆ. ಅಂದರೆ ಆತ ಗಳಿಸಿದ ವಿದ್ಯೆಯನ್ನು ಬೇರೆಯವರಿಗೆ ಧಾರೆಯೆರೆದು ಅವರ ಬದುಕು ರೂಪಿಸುವಂತಹ ಪ್ರಾಮಾಣಿಕ ಕೆಲಸ ಮಾಡುವವನೇ ನಿಜವಾದ ಗುರು. ಮಕ್ಕಳು ತಮ್ಮ ಇಚ್ಛಾಶಕ್ತಿಯನ್ನು ಬಳಸಿಕೊಂಡು ಸನ್ಮಾರ್ಗದಲ್ಲಿ ನಡೆದಾಗ ಗುರುವಿನ ಬದುಕು ಸಾರ್ಥಕವಾಗುತ್ತದೆ.
ಶಿಕ್ಷಕರು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರನ್ನು ನಾವು ನೋಡಿದ್ದೇವೆ. ಎಲ್ಲ ಸಾಧಕರ ಹಿಂದೆ ಗುರುವೊಬ್ಬ ಇದ್ದೇ ಇರುತ್ತಾನೆ. ಬದಲಾದ ಸಮಾಜಕ್ಕನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದೇ ಶಿಕ್ಷಕನ ಆದ್ಯ ಕರ್ತವ್ಯವಾಗಿರುತ್ತದೆ. *"ಆದರ್ಶಗಳ ಬಗ್ಗೆ ಮಾತನಾಡುವ ಶಿಕ್ಷಕನಾಗಿರದೇ ಶಿಕ್ಷಕನೇ ಆದರ್ಶವಾಗಿರಬೇಕು ಆಗ ಮಾತ್ರ ಇಡೀ ಸಮಾಜ ಅವನನ್ನು ಗೌರವಿಸುತ್ತದೆ".*ಪರರಲ್ಲಿ ದೋಷವನ್ನು ಹುಡುಕುವ ಬದಲು ತನ್ನ ದೋಷವನ್ನು ತಿದ್ದಿಕೊಳ್ಳುವವನೆ ಆದರ್ಶ ಶಿಕ್ಷಕ. "ಶಿಕ್ಷಕ ಕ್ರಿಯಾತ್ಮಕನಾಗಿರಬೇಕು. ಕೆಲಸದಲ್ಲಿ ವ್ಯತ್ಯಾಸವಾದಾಗ ಸಮಸ್ಯೆಯ ಮೂಲ ಹುಡುಕಿ ಅದರ ನಿವಾರಣೆಗೆ ಪ್ರಯತ್ನಿಸಬೇಕೇ ಹೊರತು , ಮೌನಕ್ಕೆ ಶರಣಾಗಬಾರದು. ಧೋರಣೆಯಲ್ಲಿ ಬದಲಾವಣೆ ತಂದು ಅನುಕರಣೀಯ ವಿಚಾರಗಳನ್ನು ಅಳವಡಿಸಿಕೊಳ್ಳುವ ಶಿಕ್ಷಕ ಶಿಕ್ಷಣದ ಮೂಲಕ ಸಮಾಜ ಸುಧಾರಣೆ ಮಾಡಬಲ್ಲ."
ಪ್ರತಿಯೊಬ್ಬ ಆದರ್ಶ ವ್ಯಕ್ತಿಗೆ ಆತನ ಗುರುವಿನ ಛಾಪು ಮಾತ್ರ ಸತ್ಯದ್ದೇ ಆಗಿರುತ್ತದೆ. ವ್ಯಕ್ತಿ ತನ್ನ ಜೀವನ ರೂಪಿಸಿಕೊಳ್ಳಲು ಶಿಕ್ಷಕ ಅವಶ್ಯ. ಆ ಕಾರ್ಯವನ್ನು ಅನುಷ್ಠಾನಗೊಳಿಸುವವರು ಶಿಕ್ಷಕ. ಜ್ಞಾನ ನೀಡುವ ಜೊತೆ ತಿಳುವಳಿಕೆ ಮತ್ತು ನಡವಳಿಕೆಗಳನ್ನು ವ್ಯಕ್ತಿಯ ಜೀವನದಲ್ಲಿ ತುಂಬುವ ಶಕ್ತಿ ಶಿಕ್ಷಕನಿಗಿರುತ್ತದೆ. ಬದುಕಿನ ಅನುಕ್ಷಣದಲ್ಲೂ ದಾರಿತೋರುವ ಮಾರ್ಗದರ್ಶಕನಾಗಿರುತ್ತಾನೆ. *ಶಿಕ್ಷಕರ ನಡೆ ನುಡಿ ಸರಳತೆ ಮಕ್ಕಳ ಮೇಲಿನ ಪ್ರೀತಿ ಇವು ಶ್ರೇಷ್ಠ ಶಿಕ್ಷಕನ ಗುಣಗಳಾಗಿರುತ್ತವೆ. ಶಿಕ್ಷಕರು ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಬೇಕು. ಅವನು ಸರ್ಕಾರ ಮೆಚ್ಚುವ ಶಿಕ್ಷಕನಾಗಿರುವ ಬದಲು ಜನ ಮೆಚ್ಚಿದ ಶಿಕ್ಷಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ನಾಗಿರಬೇಕು.* ವೈಜ್ಞಾನಿಕ ಮನೋಭಾವನ್ನು ಶಿಕ್ಷಕ ಹೊಂದಿದ್ದು ಅದನ್ನು ತನ್ನ ವಿದ್ಯಾರ್ಥಿಗಳಿಗೂ ವರ್ಗಾಯಿಸಬೇಕು. ಶಿಕ್ಷಕ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ಇಂದೀಕರಿಸಿಕೊಂಡು ಅದನ್ನು ತನ್ನ ವಿದ್ಯಾರ್ಥಿಗಳಲ್ಲಿ ಯಶಸ್ವಿಯಾಗಿ ಮೂಡಿಸಬೇಕಾಗಿದೆ.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರು, ಶಿಕ್ಷಕ ಎಂಬ ಪದ ಅತ್ಯಂತ ಮಹತ್ವವಾದದ್ದು. ಗುರುವಿನಂತೆ ಶಿಷ್ಯ ರೂಪುಗೊಳ್ಳುತ್ತಾನೆ. ಹಾಗಾಗಿ ಗುರು ಸಮಾಜಮುಖಿಯಾಗಿದ್ದರೆ ಶಿಷ್ಯ ಸಮಾಜದ ಏಳಿಗೆಗೆ ಅಣಿಯಾಗುತ್ತಾನೆ. ಇಲ್ಲವಾದಲ್ಲಿ ಸಮಾಜ ಕಂಟಕನಾಗುತ್ತಾನೆ. ಹಾಗಾಗಿ ಶಿಕ್ಷಕ ಎಲ್ಲರ ಬದುಕಿನ ಮಾರ್ಗದರ್ಶಕನಾಗಿ, ಸಮಾಜದ ಏಳಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡಬೇಕು. ಗುರುಪರಂಪರೆ ಅತ್ಯಂತ ದೊಡ್ಡದಿದೆ. ಅದರ ಆಳ ಹರಿವುಗಳನ್ನು ಅರಿತು ತಮ್ಮ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಗುರುತರವಾದ ಹೊಣೆ ಶಿಕ್ಷಕರ ಮೇಲೆ ಇದೆ. *ಎಷ್ಟೇ ತಂತ್ರಜ್ಞಾನ ಮುಂದುವರೆದಿದ್ದರೂ ಅದು ಶಿಕ್ಷಕನ ಸ್ಥಾನವನ್ನು ತುಂಬಲಾರದು.* ಹಾಗಾಗಿ ಶಿಕ್ಷಕ ತುಂಬಾ ಪ್ರಾಮಾಣಿಕನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳ, ನವಸಮಾಜದ ಬದುಕಿನ ಮಾರ್ಗದರ್ಶಕನಾಗಿ ಶಿಕ್ಷಕ ಎಂದೆಂದೂ ಆದರಣೀಯವಾಗಿ, ಪೂಜಿತನಾಗಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತಾನೆ.
ಇಂದು ನಾವೆಲ್ಲಾ ಏನೇನು ಆಗಿದ್ದೇವೆಯೋ ಅದಕ್ಕೆಲ್ಲ ಕಾರಣರಾದವರು ನಮ್ಮನ್ನು ತಿದ್ದಿ ತೀಡಿದ ಶಿಕ್ಷಕರಾಗಿದ್ದಾರೆ. ಬದುಕಿನ ಪ್ರತಿ ಹಂತದಲ್ಲೂ ಎದೆಗುಂದದೆ ಮುನ್ನಡೆಯುವ ಆತ್ಮ ವಿಶ್ವಾಸವನ್ನು ತುಂಬಿ ಈ ಸಮಾಜಕ್ಕೆ ನಮ್ಮನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಆಶಯಗಳು, ಆದರ್ಶಗಳು ನಮ್ಮನ್ನು ಇಂದಿಗೂ ಕಾಯುತ್ತಿವೆ. ಒಂದಕ್ಷರವನ್ನು ಕಲಿಸಿದಾತಂ ಗುರು ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಏಳಿಗೆಗೆ ಸಹಕರಿಸಿದ ಎಲ್ಲ ಗುರು ಸಮಾನರಾದ ವ್ಯಕ್ತಿಗಳಿಗೆ ನಾವು ಆಭಾರಿಯಾಗಿ ಋಣ ತೀರಿಸಬೇಕಾಗಿದೆ. ಆ ಮೂಲಕ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಅಂತಹ ಎಲ್ಲ ಮಹನೀಯರನ್ನು ಸ್ಮರಿಸುತ್ತಾ ನಮ್ಮ ಬಾಳ ಹಾದಿಯನ್ನು ಸವೆಸೋಣ ಅಲ್ಲವೇ.
*ಅಮುಭಾವಜೀವಿ ಮುಸ್ಟೂರು.*
ಶಿಕ್ಷಕರು.
ಮುಸ್ಟೂರು ಅಂಚೆ, ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ
8496819281