Tuesday, March 24, 2020
ಕವನ ಲೇಖನ
Saturday, March 21, 2020
ಯುಗಾದಿ ಹಬ್ಬದ ಮಹತ್ವ
ಯುಗಾದಿ ಹಬ್ಬದ ಮಹತ್ವ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಅದರದೇ ಆದ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಹಬ್ಬಗಳ ಆಚರಣೆಗೆ ಧಾರ್ಮಿಕ ವೈಚಾರಿಕ , ವೈಜ್ಞಾನಿಕ ನೈಸರ್ಗಿಕವಾದ ಮಹತ್ವವನ್ನು ನೀಡಲಾಗಿದೆ. ಆಯಾ ಕಾಲಮಾನಕ್ಕೆ ತಕ್ಕಂತೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಹಬ್ಬಗಳ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆಯಾಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾರೆ ಅದಕ್ಕೆಂದೇ ವಿಶೇಷವಾಗಿ ತಯಾರಿಸಿದ ಭಕ್ಷ್ಯ ಭೋಜನಗಳನ್ನು ಸೇವಿಸುವ ಮೂಲಕ ಅರ್ಥಪೂರ್ಣ ಆಚರಣೆಗಳನ್ನೂ ಆಚರಿಸಿಕೊಂಡು ಬರಲಾಗುತ್ತಿದೆ.
ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ವರ್ಷದ ಮೊದಲ ಹಬ್ಬವೇ ಯುಗಾದಿ. ಅಂದರೆ ಯುಗದ + ಆದಿ = ಯುಗಾದಿ , ಯುಗ ಎಂದರೆ ವರ್ಷ ಆದಿ ಎಂದರೆ ಆರಂಭ. ಈ ಪದದ ಅರ್ಥ ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಇಡೀ ಪ್ರಕೃತಿಯೇ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿ ಹೊಸಚಿಗುರಿನೊಂದಿಗೆ ಕಂಗೊಳಿಸುತ್ತಾ ಚೈತ್ರ ಆಗಮನದ ವಸಂತನಿಗೆ ಸ್ವಾಗತ ಕೋರುತ್ತದೆ. ಇಡೀ ನಿಸರ್ಗದ ತುಂಬಾ ಹೊಸತನ ಮನೆಮಾಡಿರುತ್ತದೆ. ಕೆಂದಳಿರಿನ ಚಿಗುರಿನ ಜೊತೆಗೆ ಬಿರಿದ ಮೊಗ್ಗುಗಳು ಅರಳಿ ಹೊಸ ಕಂಪಿನ ನರುಗಂಪನ್ನು ಸೂಸಿ , ಹಕ್ಕಿಗಳ ಕಲರವದ ಜೊತೆಗೆ ಸಂಭ್ರಮಾಚರಣೆಯಲ್ಲಿ ಮುಳುಗಿರುತ್ತದೆ. ಮೊಗ್ಗು ಮಿಡಿಕಾಯಿ ಹಣ್ಣುಗಳಿಂದ ಮೈದುಂಬಿದ ಗಿಡ-ಮರಗಳಲ್ಲಿ ಚಿಕ್ಕಪುಟ್ಟ ಪ್ರಾಣಿ ಪಕ್ಷಿ ಕೀಟಗಳು ಆಹಾರಕ್ಕಾಗಿ ಆಶ್ರಯಿಸುತ್ತವೆ. ಬೇಸಿಗೆಯ ಬಿರುಬಿಸಿಲಿನಲ್ಲಿಯೂ ತಣ್ಣನೆಯ ನೆರಳು ನೀಡುವ ಮರಗಿಡಗಳು ಹೊಸವರ್ಷದ ಸಮೃದ್ಧಿಯ ಸಂಕೇತವಾಗಿ ಕಾಣಿಸುತ್ತವೆ. ಇಡೀ ಪ್ರಕೃತಿ ಹಸುರಿನಿಂದ ಸಮೃದ್ಧವಾಗಿರುತ್ತದೆ.
ಮಾನವರಾದ ನಾವುಗಳು ಈ ಹಬ್ಬವನ್ನು ವಿಶೇಷವಾಗಿ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಚಾಂದ್ರಮಾನದ ಲೆಕ್ಕಾಚಾರದಲ್ಲಿ ಅಮಾವಾಸ್ಯೆಯನ್ನು ಮೊದಲದಿನ ಎಂದು ನಂಬಿಕೊಂಡು ಬಂದಿರುವ ನಾವುಗಳು ಅಂದು ಪುರುಷರು ಮಕ್ಕಳಾದಿಯಾಗಿ ಮೈಯಿಗೆ ಹರಳೆಣ್ಣೆ, ಅರಿಶಿನ ಮಿಶ್ರಣ ಮಾಡಿ ಹಚ್ಚಿಕೊಂಡು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಓಡಾಡಿ ನಂತರ ಸ್ನಾನ ಮಾಡಿ ಹೊಸಬಟ್ಟೆಗಳನ್ನು ತೊಟ್ಟು ಮನೆಯಲ್ಲಿ ಪೂಜೆ ಮಾಡಿದ್ದಲ್ಲದೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಪಡೆಯುವುದು ವಾಡಿಕೆ. ಅದರ ಜೊತೆಗೆ ಎಳೆಯ ಮಾವಿನ ಎಲೆಗಳನ್ನು ಬೇವಿನ ಎಸಳುಗಳನ್ನು ಸೇರಿಸಿ ಮನೆಯ ಬಾಗಿಲುಗಳಿಗೆ ತೋರಣ ಕಟ್ಟಿ ಅಲಂಕರಿಸುತ್ತಾರೆ. ಹೆಂಗಳೆಯರು ಮನೆಯ ಮುಂದೆ ಸಗಣಿಯಿಂದ ನೆಲ ಸಾರಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಹಬ್ಬದ ಕಳೆಯನ್ನು ತರುತ್ತಾರೆ. ಅಲ್ಲದೆ ಹೊಸದಾಗಿ ಬೆಳೆದ ನವಧಾನ್ಯಗಳನ್ನು ಬೇಯಿಸಿ ಉಣಬಡಿಸುತ್ತಾರೆ. ಪಾಯಸ ಹೋಳಿಗೆ ಮುಂತಾದ ಸಿಹಿತಿನಿಸುಗಳನ್ನು, ಹೊಸದಾಗಿ ತಯಾರಿಸಿದ ಹಪ್ಪಳ ಸಂಡಿಗೆ ಚಕ್ಕುಲಿ ಮುಂತಾದ ತಿಂಡಿಗಳನ್ನು ಮಾಡಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಸವಿಯನ್ನು ನೀಡುತ್ತಾರೆ.
ಯುಗಾದಿ ಹೊಸ ವರ್ಷವಾದ್ದರಿಂದ ಮನೆಯಲ್ಲಿ ಬಾಳಿಬದುಕಿ ಹೋದ ಹಿರಿಯರನ್ನು ನೆನಪಿಸಿಕೊಳ್ಳುವ ಸಲುವಾಗಿ ಹಿರಿಯರ ಪೂಜೆಯನ್ನು ಮಾಡುವ ಮೂಲಕ ಹೊಸ ಪೀಳಿಗೆಗೆ ಹಿರಿಯರನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಬದುಕಿನ ನೋವು-ನಲಿವುಗಳನ್ನು, ಕಷ್ಟ-ಸುಖಗಳನ್ನು, ಏಳುಬೀಳುಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ಹಂಚುವ ಮೂಲಕ ಬಾಂಧವ್ಯ ಬೆಸೆಯುವ ಅರ್ಥಪೂರ್ಣ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಬೆಲ್ಲದ ಉಪಯೋಗವೂ ಕೂಡ ಪ್ರಕೃತಿಯಲ್ಲಿ ಉಂಟಾಗಿರುವ ಬಿಸಿಲಿನ ಪರಿಣಾಮವನ್ನು ಎದುರಿಸಲು ಸಹಕಾರಿಯಾಗುತ್ತದೆ. ಬೇವು ಕಷ್ಟಗಳ ಸಂಕೇತವಾದರೆ ಬೆಲ್ಲ ಸುಖದ ಸಂಕೇತವಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಏರಿದ ಬಿಸಿಲಿನ ತಾಪವನ್ನು ತಣಿಸಿಕೊಳ್ಳುವುದಕ್ಕಾಗಿ ಪರಸ್ಪರರಿಗೆ ಅದರಲ್ಲೂ ಬೀಗರಾದವರಿಗೆ ನೀರನ್ನೆರೆಚುವ ಮೂಲಕ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ. ಅದರ ಜೊತೆಗೆ ಬೇರೆ ಬೇರೆ ಜಾನಪದ ಕ್ರೀಡೆಗಳನ್ನು, ಪುರಾಣ ಪಠಣಗಳನ್ನು, ಇಡೀ ವರ್ಷ ನಡೆಯಬಹುದಾದ ಜಾತಕ ಫಲಗಳ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಯುಗಾದಿಯ ದಿನದಂದು ಆರಂಭಿಸುವ ಎಲ್ಲಾ ಕಾರ್ಯಗಳು ಸಫಲವಾಗುತ್ತವೆ ಎಂಬ ನಂಬಿಕೆಯಿಂದ ಹೊಸ ಯೋಜನೆಗಳು, ಹೊಸ ಚಿಂತನೆಗಳು, ಹೊಸ ಕಾರ್ಯಕ್ರಮಗಳನ್ನು ಕೈಗೊಂಡು ಸಂಭ್ರಮಿಸುತ್ತಾರೆ. ಇದೆಲ್ಲದರ ಜೊತೆಗೆ ಅತ್ಯಂತ ಮುಖ್ಯವಾಗಿ ಚಾಂದ್ರಮಾನ ಯುಗಾದಿ ಅದ್ದರಿಂದ ಚಂದ್ರನ ದರ್ಶನ ದೊಂದಿಗೆ ಯುಗಾದಿ ಹಬ್ಬಕ್ಕೆ ಮಂಗಳ ಹಾಡಲಾಗುತ್ತದೆ. ಅಮಾವಾಸ್ಯೆಯ ನಂತರ ಅತ್ಯಂತ ಸೂಕ್ಷ್ಮವಾಗಿ ಸಂಜೆಯ ವೇಳೆ ಗೋಚರವಾಗುವ ಚಂದ್ರನ ದರ್ಶನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತವರಿಗೆ ಚಂದ್ರದರ್ಶನವಾಗುತ್ತಿದ್ದಂತೆ ಸಂಪ್ರದಾಯದಂತೆ ಪೂಜೆ ಮಾಡಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಮನೆಯಲ್ಲಿ ಇರುವ ಹಿರಿಯರ ಪದಗಳಿಗೆ ನಮಸ್ಕರಿಸಿ, ಬಂಧು ಬಾಂಧವರೊಂದಿಗೆ ಚಂದ್ರದರ್ಶನದ ಶುಭಾಶಯವನ್ನು ಕೋರುತ್ತಾ ಪರಸ್ಪರ ಸಂಭ್ರಮಿಸುತ್ತಾರೆ. ಅಲ್ಲದೆ ಜನರು ಯುಗಾದಿಯ ನಂತರ ತಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು 'ಮೊದಲು' ಮಾಡುವ ಸಲುವಾಗಿ ನೇಗಿಲನು ಹೂಡಿ ಭೂಮಿತಾಯಿಗೆ, ನೇಗಿಲು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಬೇಸಾಯದ ಚಟುವಟಿಕೆಗಳನ್ನು ಆರಂಭಿಸಿ ವರ್ಷವಿಡಿ ಮಳೆ-ಬೆಳೆ ಚೆನ್ನಾಗಿ ಆಗಿ ರೈತನ ಬದುಕು ಹಸನಾಗಲಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಾರೆ.
ಒಟ್ಟಾರೆಯಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಕೆಲಸಕಾರ್ಯಗಳಿಗೆ ಅದರದೇ ಆದ ಧಾರ್ಮಿಕ ಸಾಂಪ್ರದಾಯಿಕ ವೈಜ್ಞಾನಿಕ ವೈಚಾರಿಕ ಕಾರಣಗಳಿದ್ದು ಅದೆಲ್ಲದರ ಒಟ್ಟು ಮೊತ್ತ ಮಾನವನ ಬದುಕು ಪ್ರಕೃತಿಯ ಜೊತೆಜೊತೆಗೆ ಸಂಭ್ರಮದ ಸಮೃದ್ಧಿಯ ಸಂತಸದಾಯಕ ನೆಮ್ಮದಿಯ ಬದುಕನ್ನು ಪಡೆಯುವುದಾಗಿದೆ. ಆಚರಣೆಗಳ ನೆಪದಲ್ಲಿ ಬಂಧುಬಾಂಧವರ ಸಮಾಗಮ ನೋವುಗಳನ್ನೆಲ್ಲ ಮರೆತು ನಲಿವಿನಲ್ಲೂ ಜೊತೆಯಾಗುವ ಅನುಪಮ ಬಾಂಧವ್ಯ ಬೆಸೆಯುವ ಸಂದರ್ಭ ಹಬ್ಬಗಳ ಆಚರಣೆಗೆ ಮೂಲ ಪ್ರೇರಣೆ. ಅದರಲ್ಲೂ ಯುಗಾದಿ ಮಾನವರಿಗಷ್ಟೇ ಅಲ್ಲ ಇಡೀ ಪ್ರಕೃತಿಯೇ ಹೊಸತನದಿಂದ ಸಂಭ್ರಮಿಸುವ ಕಾಲ. ಹೊಸ ಸಂವತ್ಸರದ ಹೊಸ ಮಾಸದ ಹೊಸ ಋತುವಿನ ಆಗಮನದಿಂದ ಹಿಂದಿನ ವರ್ಷದ ಕಷ್ಟನಷ್ಟಗಳೇನೇ ಇರಲಿ ಪ್ರಸ್ತುತ ವರ್ಷದಲ್ಲಾದರೂ ಎಲ್ಲ ಕಷ್ಟನಷ್ಟಗಳು ಕಳೆದು ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸುತ್ತಾ ಮತ್ತೆ ಇಂದಿನ ಜೀವನಕ್ಕೆ ಮರಳುತ್ತೇವೆ. ಖುಷಿಯ ಕ್ಷಣಗಳನ್ನು ಮೆಲುಕುಹಾಕುತ್ತಾ ವರ್ಷವಿಡಿ ನಮ್ಮ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾ ಬದುಕಿನ ಪುಟಗಳಲ್ಲಿ ಅನುಭವದ ಸಾಲುಗಳನ್ನು ದಾಖಲಿಸುತ್ತಾ ಮುಂದಿನ ಪೀಳಿಗೆಗೆ ವೇದಿಕೆಯನ್ನು ಸಿದ್ಧಪಡಿಸಿ ನಮ್ಮ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ. ಎಲ್ಲರೂ ಬೇವು-ಬೆಲ್ಲವನ್ನು ಹಂಚಿ ತಿಂದು ಖುಷಿಯಿಂದ ಹೊಸವರ್ಷವನ್ನು ಆಚರಿಸೋಣ, ಸಂಭ್ರಮಿಸೋಣ.
ಎಲ್ಲರಿಗೂ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು
ದಿನಾಂಕ 21032020
ಅಮು ಭಾವಜೀವಿ