*ಕಲಿಯುವ ಸಮಯಕ್ಕೆ ಕಲಿಸುವ ವಸ್ತು ಕಲಿಯುವವರ ಕೈಸೇರಲಿ*
ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣದ ಮಹತ್ವ ಪ್ರಮುಖವಾಗಿರುತ್ತದೆ. ಭವಿಷ್ಯದ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ಆ ಕಾಲಘಟ್ಟದ ಶಿಕ್ಷಣದ ಮೇಲೆ ನಿಂತಿದೆ. ದೇಶದ ಏಕತೆ ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಶಿಕ್ಷಣದ ವ್ಯವಸ್ಥೆ ಉತ್ತರವಾಗಿ ನಿಲ್ಲಬೇಕು. ಅದಕ್ಕಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದು ಪಠ್ಯಕ್ರಮದ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು. ಅದಕ್ಕೆ ಪೂರಕವಾದ ಪ್ರಾದೇಶಿಕವಾದ ಪಠ್ಯವಸ್ತುವನ್ನು ಆಯ್ಕೆ ಮಾಡಿ ಪಠ್ಯಕ್ರಮದ ಚೌಕಟ್ಟಿಗೆ ಹೊಂದಿಸಿ ತಯಾರಾಗುವ ಬಹುಮುಖ್ಯವಾದ ಆಕರವೇ ಪಠ್ಯಪುಸ್ತಕ.
ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಏನನ್ನು ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಮಾರ್ಗದರ್ಶಿಸುವುದು ಪಠ್ಯಕ್ರಮವಾದರೆ ಅದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸುವ ಕೆಲಸ ಪಠ್ಯಪುಸ್ತಕ ಮಾಡುತ್ತದೆ. ಶಾಲಾ ಕೋಣೆಯಲ್ಲಿ ಕಲಿಯುತ್ತಿರುವ ಮಗುವಿಗೆ ಇಡೀ ದೇಶದ ಸಮಗ್ರತೆ ಏಕತೆ ಸಾಂಸ್ಕೃತಿಕ ಪರಂಪರೆ ಇತಿಹಾಸ ವರ್ತಮಾನ ಎಲ್ಲವನ್ನೂ ಪಠ್ಯಪುಸ್ತಕದಲ್ಲಿ ಅಳವಡಿಸಿ ಕಲಿಸುವ ಹೊಣೆಗಾರಿಕೆ ಶಿಕ್ಷಣ ಇಲಾಖೆ ಮತ್ತು ಅದರ ಸಹಭಾಗಿದಾರರಾ ಸರ್ಕಾರ, ಬುದ್ಧಿಜೀವಿಗಳು, ಇತಿಹಾಸಕಾರರು, ಉನ್ನತ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು ಶಾಲಾ ಶಿಕ್ಷಕರು ಎಲ್ಲರೂ ಸೇರಿ ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆ ತರದಂತಹ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿದೆ.
ಸಮಾಜದ ಶೈಕ್ಷಣಿಕ, ಆರ್ಥಿಕ, ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಗಳು ನಿರ್ಧಾರವಾಗುವುದು ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಿಂದ ವಿದ್ಯಾರ್ಥಿಗಳಿಗೆ ನೀಡುವ ವಸ್ತುನಿಷ್ಠ, ಸತ್ಯನಿಷ್ಠ ವೈಜ್ಞಾನಿಕ ಚಿಂತನೆಯಲ್ಲಿ ಮಕ್ಕಳನ್ನು ಧನಾತ್ಮಕವಾಗಿ ರೂಪಿಸುವ ನಿಟ್ಟಿನಲ್ಲಿ ಮೇಲಿನ ಎಲ್ಲಾ ಭಾಗಿದಾರರು ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಪಠ್ಯಪುಸ್ತಕದಲ್ಲಿ ಮುದ್ರಣವಾಗುವ ವಿಚಾರಗಳು ಮಗುವಿನ ವಾಸ್ತವಿಕ ಬದುಕಿಗೆ ಹತ್ತಿರವಾಗಿರಬೇಕು. ಅವನು ಪಡೆದ ಶಿಕ್ಷಣ ಅವನ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿರಬೇಕು. ಜೀವನದಲ್ಲಿ ಅವನು ಎದುರಿಸುವ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಕಲಿಯುವ ವಯಸ್ಸಿನಲ್ಲಿ ಮಗುವಿಗೆ ಗೋಚರಿಸಬೇಕು. ಕಲಿಯುವ ವಾತಾವರಣದಲ್ಲಿ ಮಗು ತಪ್ಪು-ಒಪ್ಪುಗಳ ಪರಾಮರ್ಶೆ ಮಾಡಲು ಅವಕಾಶವಿರಬೇಕು. ಮುಂದಿನ ಸಮಾಜವನ್ನು ಕಟ್ಟುವ ಬುನಾದಿಯಾಗಿ ಮಗುವಿನ ಮನಸ್ಥಿತಿಗೆ ಸತ್ಯವಾದುದನ್ನೇ ತುಂಬಬೇಕು. ಆಗ ಮಾತ್ರ ಬಲಿಷ್ಠ ಸಮಾಜ ಪ್ರಜ್ಞಾವಂತ ರಾಷ್ಟ್ರವನ್ನು ಕಟ್ಟುವ ಶಿಕ್ಷಣದ ಧ್ಯೇಯಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ಅಲ್ಲದೆ ಕೇವಲ ರಾಷ್ಟ್ರದೊಳಗಿನ ಜಾತಿ ಧರ್ಮ ಸಾಮಾಜಿಕ ನ್ಯಾಯ ಮುಂತಾದ ಅಂಶಗಳಿಗೆ ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪಠ್ಯಪುಸ್ತಕ ರಚನೆಯಾಗಬೇಕು. ಜೊತೆಜೊತೆಗೆ ಪ್ರಪಂಚದಲ್ಲಿ ನಡೆಯುತ್ತಿರುವ ಆಗುಹೋಗುಗಳಿಗೂ ಪಠ್ಯಪುಸ್ತಕದಲ್ಲಿ ಜಾಗವಿರಬೇಕು. ಇಡೀ ಮನುಕುಲದ ಅಭ್ಯುದಯಕ್ಕಾಗಿ ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಠ್ಯವಸ್ತು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತರಾದ ವ್ಯಕ್ತಿಗಳು ಕುಳಿತು ನಿರ್ಧಾರ ಮಾಡುವುದಲ್ಲ ಬದಲಾಗಿ ಶಿಕ್ಷಣದ ವ್ಯವಸ್ಥೆಗೆ ಅಡಿಪಾಯವಾದ ಶಿಕ್ಷಕರು ಮತ್ತು ಪೋಷಕರ ಒಟ್ಟಾಭಿಪ್ರಾಯದಲ್ಲಿ ಶಿಕ್ಷಣ ಪಡೆದ ಮಗು ಬದುಕನ್ನು ಕಟ್ಟಿಕೊಳ್ಳುವ ಮಾರ್ಗಸೂಚಿಯಾಗಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳು ರೂಪಿತಗೊಳ್ಳ ಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಆದರೆ ಕಲಿಸುವ ಹಾಗೂ ಕಲಿಕೆಗೆ ತೊಡಗಿಸುವ ವ್ಯಕ್ತಿಗಳ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲದೆ ಕೇವಲ ಆಳುವ ಸರ್ಕಾರಗಳ ಅದರ ಹಿಂದಿನ ಪಕ್ಷಗಳ ತತ್ವ-ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಭವಿಷ್ಯದ ರಾಷ್ಟ್ರ ನಿರ್ಮಾಣದಲ್ಲಿ ಎಂಥ ಮನಸ್ಥಿತಿಗಳನ್ನು ಹುಟ್ಟು ಹಾಕುತ್ತಿದ್ದೇವೆ ಎಂಬ ಪರಿಜ್ಞಾನ ಇಲ್ಲದಂತಾಗಿ ಶಾಲೆಗಳು ಶುರುವಾದರೂ ಪಠ್ಯಪುಸ್ತಕಗಳು ಕೈಗೆ ಸಿಗದಂತೆ ಮಗುವಿನ ಕಲಿಕಾ ಸಮಯವನ್ನು ಹಾಳು ಮಾಡುತ್ತಿರುವ ಜೊತೆಜೊತೆಗೆ ನಡೆಯುತ್ತಿರುವ ವಾದ-ವಿವಾದಗಳು ಮಗುವಿನ ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಸೃಷ್ಟಿಸಿ ಅವನು ಶಿಕ್ಷಣದಿಂದ ದೂರವುಳಿಯುವ, ತಾನು ಕಲಿತ ವಿದ್ಯೆಯಿಂದ ತನ್ನ ವಾಸ್ತವ ಬದುಕಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂಬುದನ್ನು ಅರಿತಾಗ ಅವನು ಕಲಿಕೆಯಿಂದ ವಿಮುಖನಾಗಿ ಬಾಲ್ಯದಲ್ಲಿ ದುಡಿಯುವ ಸಂಪಾದನೆ ಮಾಡುವ ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳುವ ಅಪಾಯವಿದೆ.
ಯುದ್ಧಕಾಲದ ಶಸ್ತ್ರಭ್ಯಾಸವೆಂಬಂತೆ ಪಠ್ಯ ಪುಸ್ತಕದ ಕುರಿತಾದ ವಾದ-ವಿವಾದಗಳು ಪರಿಹಾರವನ್ನು ಸೂಚಿಸದೆ ಶಾಲೆಗಳಲ್ಲಿ ಕಲಿಕಾ ಸಮಯ ಪ್ರಾರಂಭವಾಗುವ ಮುಂಚೆ ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು ಮಗುವಿನ ಕೈ ಸೇರಿದಾಗ ಮಾತ್ರ ಕಲಿಕೆ ನಿರಂತರತೆಯನ್ನು ಕಾಯ್ದುಕೊಂಡು ಯಶಸ್ವಿಯಾಗುತ್ತದೆ. ಆದ ದುರಂತವೆಂದರೆ ಶಾಲೆಗಳು ಪ್ರಾರಂಭವಾದರೂ ಪಠ್ಯಪುಸ್ತಕ ರಚನೆಯ ವಿವಾದಗಳು ಇನ್ನೂ ಪಠ್ಯಪುಸ್ತಕ ರಚನೆ ಮಾಡುವ ಸಮಿತಿಯ ಆಯ್ಕೆಯಾದ ಸದಸ್ಯರ ಕುರಿತಾಗಿಯೇ ಚರ್ಚೆಯಾಗುತ್ತಿರುವುದು ಈ ವ್ಯವಸ್ಥೆಯ ಅಸ್ಥಿರತೆಯನ್ನು ಸೂಚಿಸುತ್ತದೆ. ಕಲಿಯುವ ಮಗುವಿನ ಕಲಿಕಾ ಸಮಯವನ್ನು ವ್ಯರ್ಥ ಮಾಡುತ್ತಿರುವ ಮಕ್ಕಳ ಭವಿಷ್ಯವನ್ನು ದಾರಿ ತಪ್ಪಿಸುತ್ತಿರುವ ಈ ಸನ್ನಿವೇಶದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿರುವ ಸರ್ಕಾರಗಳು ಮೂಕ ಪ್ರೇಕ್ಷಕನಂತೆ ಕೈಕಟ್ಟಿ ಕೂತಿರುವುದು ಎಷ್ಟು ಸರಿ. ಪಠ್ಯಪುಸ್ತಕ ರಚನೆ ಶಾಲೆ ಪ್ರಾರಂಭವಾಗುವ ಮುಂಚೆ ತೀರ್ಮಾನವಾಗಿ ಮುದ್ರಣವಾಗಿ ಶಾಲೆಯ ಮೊದಲ ದಿನವೇ ಮಗುವಿನ ಕೈಗೆ ಸೇರಿ ಅವನ ಕಲಿಕಾ ಸಮಯ ಸದುಪಯೋಗವಾಗುವಂತಿರಬೇಕು. ಅದು ಬಿಟ್ಟು ಶಾಲೆ ಪ್ರಾರಂಭವಾಗಿ ತಿಂಗಳುಗಟ್ಟಲೆ ಕಳೆದರು ಪಠ್ಯಪುಸ್ತಕಗಳಿಲ್ಲದೆ ಕಲಿಸುವ ಶಿಕ್ಷಕರು ಕಲಿಯುವ ಮಕ್ಕಳು ಪಡುತ್ತಿರುವ ಕಷ್ಟ ಈ ವಿವಾದಗಳನ್ನು ಸೃಷ್ಟಿಸುತ್ತಿರುವ ಅದನ್ನು ಬಹು ದೂರ ಒಯ್ಯುತ್ತಿರುವ ಜನರಿಗೆ ಕಾಣಿಸುತ್ತಿಲ್ಲವೇ. ಎರಡು ವರ್ಷಗಳಿಂದ ಕುಂಠಿತವಾಗಿರುವ ಮಕ್ಕಳ ಶಿಕ್ಷಣದ ಮರು ಪೂರಣ ಕಾರ್ಯ ನಡೆಯುತ್ತಿದೆಯಾದರೂ ಅದಕ್ಕೆ ಪೂರಕವಾದ ಕಲಿಕಾ ಸರಕುಗಳಿಲ್ಲದೆ ಪರದಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ದೋಷಪೂರಿತವಲ್ಲದ ಸರ್ವಸಮ್ಮತವಾದ ವಾಸ್ತವದ ನೆಲೆಗಟ್ಟಿನ ಸತ್ಯವನ್ನು ಮನಗಾಣಿಸುವ ಕಲಿತ ಮಗು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಸಾಮರ್ಥ್ಯವನ್ನು ತಂದುಕೊಡುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಶಿಕ್ಷಣ ಪಡೆದುಕೊಂಡ ವ್ಯಕ್ತಿ ಸದೃಢ ಬದುಕನ್ನು ಕಟ್ಟಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಾನು ತೊಡಗಿಸಿಕೊಂಡು ತನ್ನ ಜೀವಿತಾವಧಿಯಲ್ಲಿ ತಾನು ಮತ್ತು ತನ್ನ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಮೂಲಕ ಅವನ ಜೀವನ ಸಾರ್ಥಕವಾಗಲು ಶಿಕ್ಷಣ ಪೂರಕವಾಗಿ ಸಹಾಯ ಮಾಡಬೇಕಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ವಿವಾದಗಳನ್ನು ಸೃಷ್ಟಿಸುವ ಅದನ್ನು ಪ್ರಚೋದಿಸುವ ಪರ-ವಿರೋಧಗಳ ಪರಾಕಾಷ್ಠೆಯಲ್ಲಿ ಕಲಿಯುವ ಮಕ್ಕಳ ಭವಿಷ್ಯಕ್ಕೆ ಕೊಡಲಿಪೆಟ್ಟು ಬಿಡುತ್ತಿರುವುದನ್ನು ಯಾರೂ ಗಮನಿಸುತ್ತಿಲ್ಲ ಅನಿಸುತ್ತದೆ. ಹಾಗಾಗಿ ಅತಿ ತುರ್ತಾಗಿ ಎಲ್ಲ ವಿವಾದಗಳಿಗೆ ತೆರೆ ಎಳೆದು ಶಾಲೆ ಪ್ರಾರಂಭದ ದಿನವೇ ಮಕ್ಕಳ ಕೈಗೆ ಕಲಿಯುವ ವಸ್ತು ಸಿಕ್ಕು ಅವರ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಕಲಿಯುವ ಸಮಯದ ಪ್ರತಿ ಕ್ಷಣವೂ ಉಪಯೋಗವಾಗುವಂತೆ ಸರ್ಕಾರಗಳು ಇಲಾಖೆ ಜವಾಬ್ದಾರಿಯಿಂದ ತೀರ್ಮಾನಗಳನ್ನು ಕೈಗೊಂಡು ಅಂತ್ಯ ಕಾಣದ ವಿವಾದಗಳನ್ನು ಕೈಬಿಟ್ಟು ಯಾವುದೇ ಪ್ರಮಾದಕ್ಕೆ ಅವಕಾಶ ನೀಡದಂತೆ ಬಹುಬೇಗ ಅದಕ್ಕೆಲ್ಲ ತೆರೆ ಎಳೆದು ಕಲಿಯುವ ಮತ್ತು ಕಲಿಸುವವರ ಗೊಂದಲಗಳಿಗೆ ಪರಿಹಾರ ನೀಡುವ ಪಠ್ಯಪುಸ್ತಕಗಳು ಆದಷ್ಟು ಬೇಗ ಅವರ ಕೈಸೇರಿ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ಕಾರ್ಯನಿರ್ವಹಿಸಲು ಅನುವು🔔 ಮಾಡಿಕೊಡಬೇಕಾಗಿದೆ.
0526ಎಎಂ04062022
*ಅಮುಭಾವಜೀವಿ ಮುಸ್ಟೂರು*