Wednesday, September 21, 2022

ಕವನ

ಹೀಗೆ  ಆಗುವುದೆಂದು
ಅರಿಯಬೇಕಾಗಿತ್ತು ಅಂದು

ಸ್ನೇಹದ ಕೋರಿಕೆ ಬಂದಾಗಲೇ 
ಅದರ ಹಿಂದಿನ ಉದ್ದೇಶ  ಅರಿಯಬೇಕಿತ್ತು
ಅವಳ  ಅಂತರಂಗದ ಬಯಕೆಯ 
ಎಳೆವೆಯಲ್ಲಿಯೇ ತಿರಸ್ಕರಿಸಬೇಕಿತ್ತು

ಸಲಿಗೆಯ ಸರಹದ್ದು ಮೀರುವಾಗ
ಬೇಲಿಯ ಹಾಕಿಕೊಳ್ಳಬೇಕಿತ್ತು
ಪ್ರೀತಿಯ ಪ್ರಸ್ತಾಪ ಬಂದಾಗಲಾದರೂ
ಅವಳ ಸ್ವಾರ್ಥದ ಸೋಗನರಿಯಬೇಕಿತ್ತು

ನಡು ವಯಸಿನಲಿ ಬಾಗಿದ ಗಿಡ ಕಂಡು 
ಅವಳೆಸೆದ ಪಾಶದಿಂದ ತಪ್ಪಿಸಿಕೊಳ್ಳಬೇಕಿತ್ತು
ಒಡೆಯನಿದ್ದ ಮನೆಯೊಡತಿಯಾಕೆಯ
ಕಾಮದ ವಾಸನೆಯನಾದರು ಗ್ರಹಿಸಬೇಕಿತ್ತು

ಬಯಸದೇ ಒಲಿದು ಬಂದವಳ ಒತ್ತಾಸೆಗಳಿಗೆ
ಆಸರೆಯಾಗಲು ಅನುಮತಿಸಬಾರದಿತ್ತು
ಇನ್ನೊಬ್ಬರ ಸ್ವತ್ತು ಅವಳು ಬಳಿ ಬಂದಾಗ 
ತಿಳಿ ಹೇಳಿ ತಿರುಗಿ ಕಳಿಸಬೇಕಿತ್ತು

ಸ್ವಾರಸ್ಯವಿರದ ಸಂಸಾರದಿಂದ ಬೆಂದು
ನೊಂದಿಹಳೆಂದು ಮೋಸಹೋಗಬಾರದಿತ್ತು
ಸಲ್ಲದ ಆರೋಪ ಮಾಡಿದಾಗಲೂ
ಕ್ಷಮಿಸಿ ಅವಮಾನವ ಸಹಿಸಬಾರದಿತ್ತು

ಕಥೆ ಕಟ್ಟಿ  ಅನುಕಂಪ ಗಿಟ್ಟಿಸಿಕೊಳ್ಳಹೊರಟವಳ
ಆ ಎಲ್ಲ ಮಾತುಗಳ ನಂಬಬಾರದಿತ್ತು
ಇಷ್ಟೆಲ್ಲಾ ರಾದ್ದಾಂತವಾದ ಮೇಲೂ
ಅವಳ ಚರಿತ್ರೆಯ ಜಗದೆದುರೆ ತೆರೆದಿಡಬೇಕಿತ್ತು

ವ್ಯಕ್ತಿತ್ವಕೆ ಮಸಿ ಬಳಿದವಳ ಪಾತಿವ್ರತ್ಯದ
ಸಾಕ್ಷಿಯ ಸಂಗ್ರಹಿಸಿಟ್ಟುಕೊಳ್ಳಬೇಕಿತ್ತು
ಅಪವಾದ ಬಂದ ಮೇಲಾದರೂ 
ಅವಳ ಕುರಿತು ಮಾತನಾಡದೇ ಇರಬಾರದಿತ್ತು.

ಈಗೆಲ್ಲ ಮುಗಿದು ಹೋಗಿದೆ  
ಅವಳ ತೊರೆದಾಗಿದೆ
ಅನುಭವಿಸಿದ ನೋವು  ಅವಮಾನಗಳಿಗೆ
ಅವಳಿಗೆ ಪಾಠ ಕಲಿಸುವ ಕಾಲ ಬರಬೇಕಿದೆ
1156ಪಿಎಂ21092022
*ಅಮುಭಾವಜೀವಿ ಮುಸ್ಟೂರು*







    

Tuesday, September 20, 2022

ಲೇಖನ

ಇದು ಭ್ರಮಾ ಜಗತ್ತು  .ಇಲ್ಲಿ ಚಲಾವಣೆಯಲಿದ್ದರಷ್ಟೇ ಬೆಲೆ. ಮೂಲೆಗುಂಪಾದರೆ ಮರೆತೇಬಿಡುವರು ಕ್ಷಣದಲ್ಲೇ.
ಇಲ್ಲಿ ವ್ಯಕ್ತಿತ್ವಕಿಂತ ವ್ಯಕ್ತಿ ಪೂಜೆಗೆ ಮಹತ್ವ ಕೊಡುವ ಜನರೆದುರು ಅಪರಿಚಿತನಾಗುಳಿಯುವುದು ಮೇಲು. ಕಾಲಕ್ಕೆ ತಕ್ಕಂತೆ ಜನರ  ಅಭಿಪ್ರಾಯಗಳು  ಬದಲಾಗುತ್ತವೆ.ಹೀಗೆ ಬದಲಾಗುವ ಜನರೊಂದಿಗೆ ನಂಟು ಹೊಂದುವ ದರ್ದು ಏನಿಲ್ಲ. ತಿರಸ್ಕರಿಸಿದ ಜನರನ್ನೂ ನಾವು ತಿರಸ್ಕಾರದಿಂದ ದೂರವಿಡಬೇಕು.ಇಲ್ಲಿ ಯಾರನ್ನೂ ಯಾರೂ ನಂಬಿ ಕೂತಿಲ್ಲ. ಅವರವರ ಪಾಡಿಗೆ ಅವರು ಸಾಗತಿರಬೇಕು.ಗೆದ್ದೆತ್ತಿನ ಬಾಲ ಹಿಡಿದು ಎಲ್ಲ ಸವಲತ್ತುಗಳ ಪಡೆಯುವರೆ ಅಧಿಕರಿರುವರು.

       ಬೇಕೆಂದಾಗ ಬಳಸಿಕೊಂಡು ಬೇಡವಾಗಲು ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟವನಾಗಿಸಿ ತಾನೇ ಒಳ್ಳೆಯವನು/ ಳು ಎಂದು ಬೀಗುವ ಜನರನ್ನೇ ಎಲ್ಲರೂ ನಂಬುತ್ತಾರೆ. ಒಬ್ಬರ ಓಲೈಕೆಗಾಗಿ ಇನ್ನೊಬ್ಬರ ತೇಜೋವಧೆ ಮಾಡುವ  ಆಷಾಢಭೂತಿಗಳೇ ತುಂಬಿ ಹೋಗಿದ್ದಾರೆ.ಅವಕಾಶವಾದಿಗಳ ಮುಂದೆ ಸ್ವಾಭಿಮಾನಿಯಾಗಿ ಬದುಕುವ  ಆತ್ಮಗೌರವ  ಹೊಂದಿರುವ ಯಾರೂ ಕೂಡ  ಅಂತವರ  ಆರೋಪಗಳಿಗೆ ತಲೆಕೆಡಿಸಿಕೊಳ್ಳಬಾರದು. ಬದಲಾಗಿ ಟೀಕೆ ಟಿಪ್ಪಣಿಗಳು ಎಂದಿಗೂ ಮೇಲೆಳಲು ಮೆಟ್ಟಿಲಾಗಬೇಕೇ ವಿನಃ ತುಳಿಯುವವರ ಮುಂದೆ ತಲೆಬಾಗಬಾರದು.

       ವ್ಯಕ್ತಿಯ ವ್ಯಕ್ತಿತ್ವ  ಎಂಬುದು ಯಾರೋ ಕೊಡುವ ಪ್ರಮಾಣ ಪತ್ರದಲ್ಲಿ. ಅದು ನಾವು ನಂಬಿದ ತತ್ವ ಸಿದ್ದಾಂತ ಆದರ್ಶಗಳ ಮೂರ್ತರೂಪ. ಯಾವ ಕುನ್ನಿಗಳ ಕುಹಕಿಗಳ ಬಾಯಿಚಪಲದ ಮಾತುಗಳಿಗೆ ಕಿವಿಗೊಡಬಾರದು. ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿಯುವವರೆಂದಿಗೂ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು  ಆಗದವರೇ ಆಗಿರುತ್ತಾನೆ.ಕೊಚ್ಚೆಯಲಿ ಮಿಂದವನಿಗೆ ಸ್ವಚ್ಛ ವ್ಯಕ್ತಿತ್ವದ ಹಿನ್ನೆಲೆ ತಿಳಿಯಲೂ ಸಾಧ್ಯವಾಗದು. ಕೇವಲ ಯಾವುದೋ ಪೂರ್ವಾಗ್ರಹ ಪೀಡಿತನಾಗಿ ಬೊಗಳುತ್ತಿರುತ್ತಾನೆ.

       ಆನೆ ನಡೆದದ್ದೇ ಹಾದಿ ಎಂಬಂತೆ ನಮ್ಮ ಪಾಡಿಗೆ ನಾವು ಸಾಗುತಿರಬೇಕು.ಕೊಚ್ಚೆ ಜನರ ತುಚ್ಛ ಮಾತುಗಳಿಗೆ ಉತ್ತರಿಸಲು ಹೋಗಬಾರದು. ಚರಂಡಿಯಲಿ ವಟಗುಡುವ ಕಪ್ಪಗೆ ಶೃಂಗ ಶಿಖರವನ್ನು ಸ್ಪರ್ಶಿಸಲೂ ಆಗದು  ಆ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಇರದು. ಆತ್ಮಸಾಕ್ಷಿಗೆ ಅಂಜಿದವನು ಆತ್ಮ ಗೌರವದಿಂದ ಬಾಳುತ್ತಾನೆ.ಅವಹೇಳನ ಮಾಡುವವನು ಅವನತಿ ಹೊಂದುತ್ತಾರೆ. ಸತ್ಯದ ಮುಖ ಕಾಣುವ ತನಕ ಪ್ರಾಮಾಣಿಕವಾಗಿ ಪಾರದರ್ಶಕ ನಡೆನುಡಿಯಿಂದ ಮುನ್ನ್ನಡೆಯುತಿರಬೇಕಷ್ಟೇ.

1113ಪಿಎಂ20092022
*ಅಮುಭಾವಜೀವಿ ಮುಸ್ಟೂರು *

Saturday, September 3, 2022

ಕವನ

ಸ್ಥಾನದ ಮಹತ್ವ  ಅರಿಯದವ
ದೊಡ್ಡ ಸ್ಥಾನದಿ ಕೂತರೇನು
ಹೇಸಿಗೆ ಕಂಡ ಶ್ವಾನ ತನ್ನ 
ಬುದ್ದಿ ಬಿಟ್ಟು ಬದುಕುವುದೇನು
ಮಠದೊಳಗಿನ ಬೆಕ್ಕಿನ ಬಣ್ಣ 
ಬಯಲಾಗಲು ಈ ಗೌರವ ಯಾಕಿನ್ನು

ತನ್ನ ತಾ ಹಿಡಿತದಲ್ಲಿಡಲಾಗದ ಗುರು
ಸಮಾಜಕೆ ಕೊಡುವ ಸಂದೇಶವೇನು
ಮುಖವಾಡ ಕಳಚಿದ ಮೇಲೂ
ಮುಖ ಮುಚ್ಚಿಕೊಳ್ಳುವ  ಅಗತ್ಯವೇನು
ತಪ್ಪು ಮಾಡಿಲ್ಲ  ಎಂದಾದ ಮೇಲೆ
ಇಷ್ಟೆಲ್ಲಾ ರಂಪಾಟಗಳ  ಅರ್ಥವೇನು

ನೈತಿಕತೆಯನೇ ಕಳೆದುಕೊಂಡು 
ಅನೈತಿಕವಾಗಿ ನಡೆದು ಕೊಂಡು
ಗುರು ಪರಂಪರೆಗೆ ಮಸಿ ಬಳಿದಾಯ್ತು
ಕಾವಿಯು ಕಾಮವ ಸುಡದ ಮೇಲೆ
ಧರ್ಮಗುರು ಅಧರ್ಮಿಯಾದ ಮೇಲೆ 
ನಂಬಿಕೆಯೂ ಈಗ  ನಂಬದಾಯ್ತು

ಬೆಂಬಲಕೀಗ ನೈತಿಕಯೇ ಇಲ್ಲ 
ಪ್ರಭಾವ ಬೀರಲು ನಾಚಿಕೆಯಾಗೊಲ್ಲ
ದೊಡ್ಡವರೆನಿಸೊಂಡವರ ಸಣ್ಣತನವಿದು
ಎಚ್ಚೆತ್ತುಕೊಳ್ಳಬೇಕಿನ್ನು ಸಮಾಜ 
ಅರಿಯಬೇಕಿಂತ ಢೋಂಗಿತನದ ನಿಜ
ಧರ್ಮಕ್ಕೂ ಕಳಂಕ ಮೆತ್ತಿಕೊಂಡಿತಿಂದು

1133ಪಿಎಂ03092022
*ಅಮು ಭಾವಜೀವಿ ಮುಸ್ಟೂರು*