Sunday, October 29, 2023

ಕವನ


*ಪ್ರೀತಿಯ ಸೂರಲಿ*
ತಾಳ್ಮೆಗೂ ಒಂದು ಮಿತಿ ಇದೆ
ಸಹನೆಗೂ ಒಂದು ಶಕ್ತಿ ಆಇದೆಯೇ ಥಥ
ಪ್ರೀತಿ ನಡೆಯಲಿ ಜ್ಯೋತಿ ರದ್ದು ತ್ರ ಬೆಳಗಿದೆ
ದ್ವೇಷ ಕಾರಿದರೆ ಜ್ವಾಲೆ ಉರಿದಿದೆ

ಹಿಂಸೆಯಿಂದ ಶಾಂತಿ ಸಾಧ್ಯವೇ
ನರ ನರರಲಿ ಯುದ್ಧ ವೇದ್ಯವೇ
ವಿಶ್ವಮಾನವರಲ್ಲವೇ ನಾವೆಲ್ಲ
ಭಯೋತ್ಪಾದನೆ ನಮಗೆ ಯೋಗ್ಯವಲ್ಲ

ಸ್ನೇಹದಿಂದ ಎಲ್ಲಾ ಪಡೆಯಬಹುದು
ಪ್ರೀತಿಯಿಂದ ಜಗವ ಗೆಲ್ಲಬಹುದು
ಆದರು ಏಕೀ ರಕ್ತಪಾತದ ಗುಂಗು
ಬೇಡ ನಮಗೆ ದ್ವೇಷಾಸೂಯೆ ಹಂಗು

ಸುಮ್ಮನಿದ್ದರೆ ಕೈಲಾಗದವರೆಂದಲ್ಲ
ಶಾಂತೀಯ ಬಯಸುವವರು ನಾವೆಲ್ಲ
ಕಾಲು ಕೆದರಿ ನಿಂತರೆ ಬಿಡುವುದಿಲ್ಲ
ನಮ್ಮ ತಾಳ್ಮೆಗೂ ಮಿತಿ ಇದೆ ಬಲ್ಲಿರೆಲ್ಲ

ಯುದ್ಧ ರಕ್ಕಸಿಗೆ ಮದ್ದು ನೀಡೋಣ
ಯುದ್ಧ ಮಾಡುವವರ ಸದ್ದಡಗಿಸೋಣ
ತಾಳ್ಮೆಯಿಂದ ಎಲ್ಲರ ಹೃದಯ ಗೆಲ್ಲೋಣ
ಪ್ರೀತಿಯ ಸೂರಲಿ ಒಂದಾಗಿ ಬಾಳೋಣ

0510ಪಿಎಂ24102023
*ಅಮುಭಾವಜೀವಿ ಮುಸ್ಟೂರು*

ಮುಗಿಲಲಿ ಮೂಡಿದ ಮಲ್ಲಿಗೆ ಚಿತ್ತಾರ
ನಲ್ಲೇ ಈ ನಿನ್ನ ಹಣೆಯ ಸಿಂಧೂರ
ನಮ್ಮ ನೆಲದ ಈ ಸಂಸ್ಕಾರ
ಮೆಚ್ಚಿ ನಾನಾದೆ ನಿನ್ನ ಪ್ರಿಯಕರ

ಅಂಬರಕ್ಕೆ ಸುಂದರ ಈ ಚಂದಿರ
ನಲ್ಮೆಯ ಬಾಳಿಗೆ ನೀನೆ ಆಧಾರ
ನಿನ್ನ ನಗೆಯೇ ಮನೆಗೆ ಶೃಂಗಾರ
ನಿನ್ನ ಗುಣ ಅಪ್ಪಟ ಬಂಗಾರ

ನೀನನ್ನ ಬಾಳ ಬೆಳಗು ನೇಸರ
ನಮ್ಮ ಬಾಳಲ್ಲಿ ಇಲ್ಲ ಅಪಸ್ವರ
ಮಾಗಿ ಚಳಿಗೆ ನೀನೇ ಚಾದರ
ನನ್ನೆಲ್ಲ ಭಾವಗಳಿಗೆ ನೀ ಸ್ವರಭಾರ

ನಲ್ಲ ನೀ ಬಾಳಹಾದಿಯ  ಗುರಿಕಾರ
ಒಲುಮೆಯಿಂದ ಮಾಡುವೆ ಉಪಚಾರ
ಮರೆಯಲಾರೆ ನೀ ನೀಡಿದ ಸಹಕಾರ
ಎಂದೆಂದಿಗೂ ದಿಗೂ ನಿನ್ನವೆ ನಿನ್ನ ಉಪಕಾರ

ನಲ್ಲ ನಮ್ಮೊಲವಿಗೆ ಆಗಸವೇ ಚಪ್ಪರ
ಸಂಪ್ರೀತಿ ತುಂಬಿದ ನಮ್ಮ ಸಂಸಾರ
ನಮ್ಮಲೆಂದು ಆಳಲಿಲ್ಲ ಅಧಿಕಾರ
ಒಲವಿತ್ತು ನಮ್ಮಿಬ್ಬರಲ್ಲಿ ಪರಸ್ಪರ

ಇದಕ್ಕೆ ಸಾರಿ ಹೇಳೋಣ ಡಂಗುರ
ಒಲವ ಪೂಜೆಗೆ ನಾವು ಕರ್ಪೂರ
ಎಂಥ ಅದ್ಭುತ ಪ್ರೀತಿಯ ಚಮತ್ಕಾರ
ನಿಜವಲ್ಲವೇ ಒಲವೇ ಜೀವನ ಸಾಕ್ಷಾತ್ಕಾರ

0515ಪಿಎಂ25102023
*ಅಮುಭಾವಜೀವಿ ಮುಸ್ಟೂರು*


ಗಡಿ ಬಿಡಿ ಬದುಕು 

ಏಕೆ ಇಷ್ಟೊಂದು ಗಡಿಬಿಡಿ ಬದುಕು
 ಒಳಿತಿಗಿಂತ ಹೆಚ್ಚೇ ಇಲ್ಲಿ ಕೆಡುಕು

ವೇಗದ ಜಗತ್ತಿನಲ್ಲಿ ಎಲ್ಲಕ್ಕೂ ಆತುರ
ಒತ್ತಡದ ಬದುಕಿದು ನೆಮ್ಮದಿಯ ತಾರದು
ಚಿಕ್ಕ ಚಿಕ್ಕ ಭಾಗವಾದ ಸಂಸಾರ
ಎಲ್ಲವನ್ನು ಒಬ್ಬರೇ ಹೊರಬೇಕು ಭಾರ

ಬೆಳಗಿನಿಂದ ಸಂಜೆವರೆಗೂ
ಸಂಜೆಯಿಂದ ಮುಂಜಾನೆವರೆಗೂ
ಪಾಳಿ ಲೆಕ್ಕದಲ್ಲಿ ದುಡಿಯುವ ಶ್ರಮ
ವಾರಂತ್ಯಕ್ಕಷ್ಟೇ ಸೀಮಿತ ಪ್ರೇಮ

ಹಣದ ಹಿಂದೆ ಓಡುವ ಬದುಕು
ನಗರ ಕೇಂದ್ರವಾಗಿದೆ ಎಲ್ಲದಕ್ಕೂ
ಬಂಧು ಬಾಂಧವರನೆಲ್ಲ ಬಿಟ್ಟು ದೂರ
ದುಡಿಮೆಯೊಂದೆ ಇಲ್ಲಿ ಎಲ್ಲಕ್ಕೂ ಆಧಾರ

ಕಾಲದ ಹಿಂದೆ ಓಡಲೇ ಬೇಕು
ದಟ್ಟಣೆಯ ಅಡೆತಡೆಯ ದಾಟಬೇಕು
ತಂತ್ರಜ್ಞಾನದ ತಿರುಗಣಿಯಲ್ಲಿ ತಿರುಗಿ
ದುಡಿದು ದಣಿದುಬೆಳೆದುಳಿಯಬೇಕು

ಒತ್ತಡದ ಜೀವನದಿಂದ ಒಮ್ಮತದ ಬದುಕಿಲ್ಲ
ಎಷ್ಟೇ ದುಡಿದರು ಯಾರಿಗೂ ನೆಮ್ಮದಿ ಇಲ್ಲ
ಸಂಸಾರಗಳು ವಿಚ್ಛೇದನದ ಹಾದಿ ಹಿಡಿದು
ಸಮಾಜದ ಸ್ವಾಸ್ಥ್ಯಕ್ಕೆ ಆತಂಕ ತಂದಿದೆಯಲ್ಲ

ಬೇಡ ಗಡಿಬಿಡಿಯ ಆ ಬದುಕು
ಹಾಸಿಗೆ ಇದ್ದಷ್ಟು ಕಾಲು ಚಾಚಿ ಬಾಳಬೇಕು
ಸಂತೃಪ್ತಿ ಜೀವನದ ಗುರಿಯಾಗಬೇಕು
ಸಂಪ್ರೀತಿಯು ಸಂಸಾರವ ಬೆಸೆಯಬೇಕು
೦೮೦೩ಪಿಎಂ೨೬೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಗಜಲ್
ಮೋಡದ ನಡುವೆ ಇಣುಕಿದ ಚಂದಿರ ಭಾವಗೀತೆ ಹಾಡಿದ ನೋಡು
ಬೇಡದ ಬಂಧ ಕಳಚಿದ ಮೇಲೆ ಮನಸ್ಸಿನಾಚೆ ದೂಡಿದ ನೋಡು

ಗೋಡೆಯ ಮೇಲಿನ ಚಿತ್ತಾರದ ನವಿಲು ನಲಿವ ಮರೆತಿದೆ 
ಬೇಸರದಲ್ಲಿ ಆ ಚಂದಿರನು ಕೂಡ ಬೆಳದಿಂಗಳಲ್ಲಿ ಉರಿದ ನೋಡು

ಹಾಡುವ ಕೋಗಿಲೆ ದನಿಯಿಲ್ಲದೆ ಮೌನಿಯಾಗಿದೆ
ಕೈಗೂಡದ ಆಸೆಯ ಸಲುವಾಗಿ ಅಮಾವಾಸ್ಯೆಯ ಕತ್ತಲಿಗೆ ಜಾರಿದ ನೋಡು

ಬೆಂದ ಒಡಲಿನಲ್ಲಿ ಮೊಳಕೆ ಕೂಡ ಕಮರಿದೆ
ರವಿಯ ಎದುರಲಿ ಶಶಿಯು ಕಳೆಗುಂದಿದ ನೋಡು

ಸಾಗರ ಮಥನದಿ ಅಮೃತ ಸಿಕ್ಕಿತು ಅಮು
ಜಗವ ಕಾಯಲು ಶಿವ ನಂಜ ನುಂಗಿದ ನೋಡು

೦೮೩೫ಪಿಎಂ೨೬೧೦೨೦೨೩
*ಅಮುಭಾವಜೀವಿ ಮುಸ್ಟೂರು*

*'ಬರ'ದ ತನಗ*

ಬರದ ಬೇಗೆಯಲ್ಲಿ
ಬಂಜೆಯಾಯ್ತು ಭೂಮಿಯು
ಬೆವರು ಸುರಿಸಿದ
ರೈತನ ಕೈ ಖಾಲಿಯು

ಮೋಡವು ಹಡೆಯದೆ
ಮಳೆಯು ಬರಲಿಲ್ಲ
ನಿಗೂಢ ನಿಸರ್ಗದ
ಮರ್ಮ ತಿಳಿಯದಲ್ಲ

ಬಾಯಾರಿದ ಜೀವವು
ಹಂಬಲಿಸಿದೆ ನೀರ
ಬೇಸಿಗೆಯ ಬಿಸಿಲು
ತಾನೇ ಹೀರಿದೆ ಪೂರ

ಭೂತಾಯಿ ಕೈಚೆಲ್ಲಲು
ಮಕ್ಕಳಾದ್ರು ಕಂಗಾಲು
ಹೀಗಾದರೆ ಮುಂದೇನು
ಮರೆತಾರು ಒಕ್ಕಲು

ಬರ ನೀ ದೂರ ಓಡು
ನೋಡಲಾಗ್ತಲ್ಲೀ ಪಾಡು
ಆಹಾಕಾರ ಎದ್ದಿದೆ
ಕಣ್ಬಿಟ್ಟು ಇಲ್ಲಿ ನೋಡು

ಮಳೆಯು ಸುರಿಯಲಿ
ಹಸಿರು ಮೆರೆಯಲಿ
ರೈತರು ಉಳಿಯಲಿ
ಹಸಿವು ಮುಕ್ತವಾಗಲಿ

0434 ಪಿಎಂ 27102023
*ಅಮುಭಾವಜೀವಿ ಮುಸ್ಟೂರು*

ನೀನು ನೀರು ನಾನು ನೀರೆ
ನೀನು ಹರಿವೆ ನಾನು ಕೊರಗುವೆ
ನೀನು ಪಾವನೆ ನಾನು ವೇದನೆ
ನೀ ಸಾಗರ ಸೇರುವೆ 
ನಾ ಸಂಸಾರವೆಂದು ಕೂರುವೆ

ನಿನಗೂ ಇದೆ ಮೈಲಿಗೆ
ಆದರೂ ಬಂದು ಮಿಂದು ಪುನೀತರಾಗುವವರು
ನನಗೂ ಇದೆ ಮೈಲಿಗೆ
ದಿನ ರಾತ್ರಿ ಮೈಮುಟ್ಟಿ ಹೋದರು
ಮಾತ್ರ ಪತಿತೆಯ ಪಟ್ಟ ನೀಡಿದರು

ಎಲ್ಲರಿಗೂ ಬೇಕಾಗಿ
ಎಲ್ಲಾ ಕಾರ್ಯಕೂ ಹೊಂದಿಕೊಂಡು
ತೀರ್ಥದ ಸ್ಥಾನ ಪಡೆದು ಕೊಂಡೆ
ಉಂಡ ಎಲ್ಲರೂ ಕೊಚ್ಚೆ ಮಾಡಿ
ವ್ಯಭಿಚಾರದ ಕೋಪಕ್ಕೆ ತಳ್ಳಿ
ಅರ್ಥಹೀನ ಬದುಕಾಗಿಸಿದರು

ಮಾಲಿನ್ಯದ ದೌರ್ಜನ್ಯ ನೀ ಸಹಿಸಿದೆ
ಕ್ಷಾರದ ಸಾಗರದಲ್ಲಿ ನೀನು ಬೆರೆತೆ
ಮತ್ತೆ ಮಳೆ ಹನಿಯಾಗಿ ಜನ್ಮ ಪಡೆದೆ
ಸೌಜನ್ಯಕೂ ನನ್ನ ಮನವ ಕೇಳದೆ
ದೇಹ ಹಿಂಡಿ ಹೋದರು ಕಬ್ಬಿನಂತೆ
ಮರು ಹುಟ್ಟು ಬೇಡವೆನ್ನುವಷ್ಟು ಹಿಂಸಿಸಿದರು

ನಮ್ಮಿಬ್ಬರದು ಒಂದೇ ಕುಲ
ನೀನು ಸಲಿಲ ನಾನು ಅಬಲ
ನಮ್ಮಿಬ್ಬರಿಗೂ ಇಲ್ಲ ಶೀಲ
ಬೆರೆಸಿಕೋ ನಿನ್ನೊಂದಿಗೆ ನನ್ನ
ತೊಳೆದು ಬಿಡು ಅಂಟಿದ ಪಾಪವನ್ನ
ಪಾವನವಾಗಲಿ ನನ್ನ ಜೀವನ

೦೫೪೬ ಪಿಎಂ೨೭೧೦೨೦೨೩
*ಅಮುಭಾವಜೀವಿ ಮುಸ್ಟೂರು*

ನಿನ್ನ ಪ್ರೀತಿ ಸುಳ್ಳು ಸಖ
ಅದರಿಂದ ನನಗಿಲ್ಲ ಸುಖ

ಹರೆಯದ ಮುಂಜಾನೆಗೆ 
ಮಂಜಂತೆ ನೀ ಬಂದೆ
ಅರಿವಿನ ಬೆಳಕು ಸೋಕುವ ಮುಂಚೆ
ನೀ ಕಾಣದಂತೆ ಕರಗಿ ಹೋದೆ
ಏಕೆ ನೀನು ಹೀಗೆ
ತಪ್ಪಲಿಲ್ಲ ಬಾಳ ಬೇಗೆ

ಮುಗ್ಧ ಹೃದಯಕೆ ಪ್ರೀತಿಯ
ಬೆಳದಿಂಗಳು ಸುರಿದೆ
ಆ ಮೋಹದ ತೆರೆ ಸರಿಯುವುದರೊಳಗೆ
ನೀನನ್ನ ತೊರೆದು ಹೋಗಿದ್ದೆ
ಏನಿತ್ತು ನಿನ್ನ ಉದ್ದೇಶ
ಏಕೆ ನೀಡಿದೆ ಬಾಳಿಗೆ ವಿಷ

ಹೆಣ್ಣೆಂಬ ಕಾರಣಕ್ಕೆ
ಹೀಗೆ ಮೋಸ ಮಾಡಬಹುದೇ
ಹಣ್ಣನ್ನು ಸವಿದ ಮೇಲೆ
ಸಿಪ್ಪೆಯಂತೆ ಬಿಸಾಡಬಹುದೇ
ನನ್ನ ಭಾವನೆಗೆ ಬೆಲೆ ಇಲ್ಲವೇ
ನನ್ನ ವೇದನೆ ಅರ್ಥವಾಗುವುದಿಲ್ಲವೇ

ನಂಬಿಕೆಗೆ ದ್ರೋಹ ಬಗಿದೆ ಸಖ
ಅದರಿಂದ ನನ್ನ ಬಾಳಾಯಿತು ಶೋಕ
ನಿನ್ನ ಮೋಸದ ಆಟಕ್ಕೆ ಬಲಿಯಾದೆ
ನನ್ನ ಖುಷಿಯನೆಲ್ಲ ನಾಶ ಮಾಡಿದೆ
ನೊಂದ ಕಂಬನಿ ಒರೆಸುವ ಕೈ ನೀನಾಗಲಿಲ್ಲ
ಒಂಟಿ ಬದುಕಿ ತೋರುವೇ ನಿನ್ನ ಅಗತ್ಯವಿಲ್ಲ

7 21 ಪಿಎಂ 27 10 2023
*ಅಮುಭಾವಜೀವಿ ಮುಸ್ಟೂರು*







Friday, October 13, 2023

ಕವಿತೆ

*ಹೊಸ ಭರವಸೆ*
ಕಾರ್ಮೋಡ ಕವಿದು
ಬಳಲಿದ ಭೂಮಿ ನೆನೆದು
ಹಸಿರಾಗುವ ಕನಸು ಕಂಡು
ಕವಿ ಭಾವ ನಲಿದಿದೆ

ಕಾಮನಬಿಲ್ಲು ಕಮಾನು ಕಟ್ಟಿದೆ
ಬರದ ಛಾಯೆ ಮೆಲ್ಲ ಕರಗಿದೆ
ಮಳೆ ಸುರಿದು ಧರೆ ತಣಿದಿತ್ತು
ನವಿಲು ಗರಿ ಬಿಚ್ಚಿ ಕುಣಿಯುತ್ತಿತ್ತು

ನಿಸರ್ಗ ತಾ ಸ್ವರ್ಗವಾಯ್ತು
ನೆನೆದ ಮಣ್ಣು ಕಂಪು ಬೀರಿತ್ತು
ನೆಲಕೆ ಬಿದ್ದ ಬೀಜ ಮೊಳೆಯಿತು
ಜಗವೆಲ್ಲ ಹಸಿರುಟ್ಟು ನಲಿತಿತ್ತು

ಬದುಕಿಗೀಗ ಹೊಸ ಭರವಸೆ
ಗರಿಗೆದರಿವೆ ನವ ನಿರೀಕ್ಷೆ
ಮಯೂರಿ ನಲಿದು ಕುಣಿಯುವಂತೆ
ವರ್ಷ ಋತು ಸಂಭ್ರಮಿಸುತಿದೆ

ಹೊಸ ಕವಿತೆಗೆ ಸ್ಫೂರ್ತಿ ತಂತು
ಕಾವ್ಯದ ಮಹಾಪೂರ ಹರಿದಿತ್ತು
ನವ ಭಾವದ ಗರಿ ಬಿಚ್ಚಿ ಹಾರಿತು
ಮಳೆ ಬಂದ ಖುಷಿ ಇಮ್ಮಡಿಸಿತು
0809ಪಿಎಂ09102023
*ಅಮುಭಾವಜೀವಿ ಮುಸ್ಟೂರು*


ಎದೆಯಾಳದ ಭಾವಕೆ
ಮುನ್ನುಡಿ ಬರೆದ ಕಾರಣಕ್ಕೆ
ನಾನೊಂದು ಚೆಲುವ ಕವಿತೆಯಾದೆ
ಹೃದಯದ ತಾಳಕೆ
ಒಲವಿನ ಮೇಳ ಸೇರಿ
ನಾನಿಂದು ಚೆಲುವ ಭಾವಗೀತೆಯಾದೆ

ಒಂಟಿ ಪಯಣದ ದಾರಿಯುದ್ದಕು
ಬೆಂಬಲಿಸಿದ ಭರವಸೆ ನೀನು
ಹಂಬಲಿಸಿದ ಗುರಿ ಮುಟ್ಟಿದೆ‌ ನಾನು
ಹೃದಯದ ಗುಡಿಯಲ್ಲಿದ್ದ ನೀನು
ಪ್ರೀತಿಯಲ್ಲಿ ಹರಸಿ ಕಳಿಸಿದೆ ನನ್ನನ್ನು
ಖ್ಯಾತಿಯ ಸದ್ಗತಿ ಸಿಕ್ಕಿತಷ್ಟೇ ಸಾಕು

ಯಾರಿಂದು ಕೇಳುವ ಜನರಿಗೆ
ನಾನು ಯಾರೆಂದು ತೋರಿದೆ
ಅದಕ್ಕೆಲ್ಲ ಪ್ರೇರಣ ನೀ ತಾನೆ
ಎಲೆ ಮರಿಯ ಕಾಯಿಗೆ
ಹಣ್ಣಾಗಿಸಿ ಜಗದ ಕಣ್ತೆರಿಸಿದೆ
ಸವಿಯುಂಡ ಜನರು ಹರಸಿದರು ಕೊನೆಗೆ

೦೩೨೮ಪಿಎಂ೧೦೧೦೨೦೨೩
*ಅಮುಭಾವಜೀವಿ ಮುಸ್ಟೂರು

ಕಾಲವದು ಓಡುತಿದೆ
ಕನಸುಗಳು ಕಮರುತಿದೆ
ಭರವಸೆ ಬತ್ತಿರಲು
ನಿರೀಕ್ಷೆಗಳು ಹುಸಿಯಾದವು

ವಿಚ್ಛೇದನಗೊಂಡ ಮೋಡಗಳು
ಕಾರ್ಮೋಡದ ಗರ್ಭ ಕಟ್ಟುತ್ತಿಲ್ಲ
ಮಳೆ ಹನಿಯ ಪ್ರಸವವಾಗುತ್ತಿಲ್ಲ
ಧರೆಯ ಮಕ್ಕಳ ಹಸಿವು ನೀಗುತ್ತಿಲ್ಲ 

ಒಡಲ ಮೇಲ್ಪದರದ ನಾಳಗಳು
ಜೀವ ಜಲವಿಲ್ಲದೆ ಬತ್ತಿ ಬರಿದಾಗಿವೆ
ಒಡಲಾಳದ ತಗ್ಗುಗಳು ಬಿರುಕು ಬಿಟ್ಟು
ಹನಿ ನೀರಿಗೆ ಬಾಯ್ದೆರೆದು ಕೂತಿವೆ

ಧಗೆಗೆ ದಹಿದಹಿಸಿ ರೈತನೊಡಲು
ಮಾಂಸವಿಲ್ಲದ ಮೂಳೆ ತಡಿಕೆಯಾಗಿದೆ
ಬರದ ಹೊಡೆತಕೆ ಸಿಲುಕಿದ ಭೂಮಿ
ಹಸಿರುಡದೆ ಬಂಜೆಯಾಗಿ ಹೋಗಿದೆ

ಮೋಡಗಳ ಮಿಲನವಾಗದೆ ಮಳೆ ಬಾರದು
ಬರದ ಭೀಕರತೆ ಮುಂದುವರಿಯಬಾರದು
ನಾಳೆಗಳ ಭರವಸೆ ಸತ್ತು ಹೋಗುವ ಮುನ್ನ
ಮಳೆ ಬಂತು ಇಳೆಯ ಆಪತ್ತು ಕಳೆಯಬೇಕಿದೆ

೦೫೩೮ಪಿಎಂ೧೦೧೦೨೦೨೩
ಅಮುಭಾವಜೀವಿ ಮುಸ್ಟೂರು

ಒಲವಿನ ಜೀವವೇ ಕೇಳು
ಪ್ರೀತಿ ಇಲ್ಲದ ಬಾಳೇಕೆ ಹೇಳು

ಒಲವೇ ಜೀವನ ಸಾಕ್ಷಾತ್ಕಾರ
ಎಂದೂ ತಪ್ಪದಿರಲಿ ಲೆಕ್ಕಾಚಾರ
ನಂಬಿಕೆಯೇ ಪ್ರೀತಿಯ ಆಧಾರ
ಸಹಜೀವನವೇ ಬಾಳ್ವೆಯ ಸಂಸ್ಕಾರ

ಅರಿತು ಬಾಳಿದರೆ ಸ್ವರ್ಗ ಸುಖ
ಅಹಮಿಕೆ ಇರಲು ಬಾಳು ನರಕ
ಮನ ಅರಿಯದಿದ್ದರೆ ಬಾಳ್ವೆ ಏಕೆ ?
ಮನಸ್ತಾಪವಿದ್ದರೆ ಬಾಳು ಸಾಗದು ಜೋಕೆ !

ಏನೇ ಬರಲಿ ಜೀವನ ಪಯಣ
ಆಗಲಿ ಪರಸ್ಪರರಿಗೂ ಪ್ರೇರಣ
ಪ್ರೀತಿಯು ಆಳಲಿ ಬಾಳ ಪೂರ
ಎಂದೂ ತಲೆ ಹಾಕದಿರಲಿ ಅಧಿಕಾರ

ನೋವು ನಲಿವು ಬಾಳಿನ ಕಣ್ಣು
ಸಮಭಾವದಲಿರಲು ಗಂಡು ಹೆಣ್ಣು
ಆಡುವ ಮಾತಲಿ ಸಭ್ಯತೆಯಿರಲಿ
ನೋಡುವ ನೋಟ ಸಮವಿರಲಿ

ಮನೆ ಎಂದರೆ ಮನಸುಗಳ ಮಿಲನ
ಒಲವಾಳಿದರೆ ಬಾಳು ಚಂದದ ಕವನ
ನಳನಳಿಸಲಿ ಸಂಸಾರದ ಕುಸುಮ
ಸಹಜವಾಗರಲಿ ಈ ಪ್ರೇಮ

೦೬೪೨ಪಿಎಂ೧೦೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಒಲವ ಕೊಂದವಳೆದುರು
ಬೆಳೆದು ನಿಲ್ಲಬೇಕು
ಗೆಲುವು ಸಾಧಿಸದಿದ್ದರೂ
ಅವಳೆದುರು ಸೋಲದಿರಬೇಕು

ನಂಬಿಕೆ ಇಲ್ಲದವರು ಜೊತೆ
ವಾದ ಮಾಡುವ ಅವಶ್ಯಕತೆಯಿಲ್ಲ
ವಿಶ್ವಾಸ ಇಲ್ಲದವಳ ಜೊತೆ
ಕೈಚಾಚಿ ಗೋಗರೆವ ಅವಶ್ಯಕತೆಯಿಲ್ಲ

ಬೇಡದ ಬಂಧವ ಕಳಚಲು
ಅವರಿವರ ಒಪ್ಪಿಗೆ ಇಲ್ಲವೆಂಬ ಮಾತು
ಯಾರ್ಯಾರನೋ ಒಪ್ಪಿಸುವ
ಸಂಬಂಧ ಬೇಕಿಲ್ಲ ಇನ್ನೆಂದೂ

ಬದುಕಿನ ಪಾಠ ಕಲಿಸಿ ಹೋದಳು
ನಂಬಿಕೆ ದ್ರೋಹದ ದರ್ಶನ ಮಾಡಿಸಿದಳು
ಇನ್ನು ಏಕೆ ಬೇಕು ಇಂತವಳ ಸ್ನೇಹ
ವಿದಾಯದ ಸಂದೇಶವಿದು ಬೇಡ ಸಂದೇಹ

ಅವಳು ಎದುರು ಬಂದರೂ ತಿರುಗಿ ನೋಡದಂತೆ
ಓಡಾಡಬೇಕು ಮಾಡಿದೆ ಚಿಂತೆ
ವ್ಯಕ್ತಿತ್ವಕೆ ಮಸಿ ಬಳಿದು ಹೋದಳು
ಅಸ್ತಿತ್ವ ಉಳಿಸಿಕೊಂಡು ಬೆಳೆಯಬೇಕು

೦೯೧೨ಪಿಎಂ೧೧೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಜೀವನ ಒಂದು ಹೋರಾಟ 
ಎದುರಿಸಬೇಕು ಸಂಕಷ್ಟ 
ನಡೆವ ಮನುಷ್ಯ ಎಡವ ಬೇಕು
ಎದ್ದ ಮೇಲೆ ಬೀಗದೆ ಬಾಗಿರಬೇಕು

ನೋವು ನಲಿವು ಶಾಶ್ವತವಲ್ಲ ಬಾಳಲಿ
ಸೋತು ಗೆಲ್ಲಬೇಕು ಪಂದ್ಯದಲ್ಲಿ
ಏರುವವ ಬೀಳಲೇ ಬೇಕು 
ಬಿದ್ದವನು ಮತ್ತೆ ಎದ್ದು ನಿಲ್ಲಬೇಕು

ಜಗಳ ಬೇಡ ಸಹ ಪಯಣಿಕರೊಂದಿಗೆ
ಮುಗುಳುನಗೆ ಬೀರು ಎಲ್ಲರೊಂದಿಗೆ
ಯಾವುದು ಶಾಶ್ವತವಲ್ಲ ಜೀವನದೊಳಗೆ
ಅಹಮಿರದ ಬಂಧವಿರಲಿ ಎಲ್ಲರೊಂದಿಗೆ

ಬಿದ್ದವರನ್ನು ಕಂಡು ನಗಬಾರದು
ಮೇಲೆತ್ತಿದವರ ಮರೆಯಬಾರದು
ತುಂಬಿದ ಕೊಡ ತುಳುಕದಂತಿರಬೇಕು
ನಂಬಿರವರ ಜೊತೆ ಆನಂದದಿಂದಿರಬೇಕು

ಏಳುಬೀಳುಗಳು ಸಹಜ ಬದುಕಿನಲ್ಲಿ
ಕಷ್ಟ ಸುಖ ಶಾಶ್ವತವಲ್ಲ  ಜೀವನದಲ್ಲಿ
ನೆನ್ನೆಗಳ ಎಂದಿಗೂ ಮರೆಯದಿರು
ನಾಳೆಯ ಭರವಸೆಯನೆಂದಿಗೂ ಕಳೆಯದಿರು

೦೯೩೧ಪಿಎಂ೧೧೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಬಾಳೆಂಬ ಹೋರಾಟದ ಮೊದಲ ಸೇನಾನಿ
ಜೀವ ನೀಡುವ ದೇವತೆ ಈ ಜನನಿ

ಕಷ್ಟ ಸುಖಗಳ ಮೆಟ್ಟಿ ನಿಂತ ಜೀವ
ಏನೇ ಬಂದರು ಎದುರಿಸಿ ಪಡೆವಳು ಗೆಲುವ
ಹೆಜ್ಜೆ ಹೆಜ್ಜೆಗೂ ಅವಳ ಬದುಕೊಂದು ಹೋರಾಟ
ಆದರೂ ತೀರುತ್ತಿಲ್ಲ ಅವಳ ಸಂಕಟ

ಮಾತೇ ಸೋದರಿ ಸ್ನೇಹಿತೆ ಮಡದಿಯಾಗಿ
ಸೇವಕಿ ಶಿಕ್ಷಕಿ ರಕ್ಷಕಿ ಮೊದಲಾಗಿ
ಹಗಲಿರುಳು ದುಡಿವ ನಿಸ್ವಾರ್ಥ 
ತನಗಂತೂ ಏನನ್ನು ಬಯಸದ ಮುಗ್ಧ ಜೀವ

ಹೆಣ್ಣೆಂದು ಜರಿಯದಿರು, 
ಅವಳಿಗೂ ಸ್ವಾತಂತ್ರ್ಯವಿದೆ
ಒಂದು ಪ್ರೋತ್ಸಾಹ ಆಸರೆ ನೀಡಿ ನೋಡು
ಜಗವ ಗೆದ್ದು ಆಳುವ ಸಾಮರ್ಥ್ಯವಿದೆ

ಗಂಡು ಹೆಚ್ಚಲ್ಲ ಹೆಣ್ಣು ಕೀಳಲ್ಲ ಜಗದಲ್ಲಿ
ಸಮಾನತೆಯ ನೋಟವಿರಲಿ ನಡೆನುಡಿಯಲ್ಲಿ
ಮನೆ ಹೊಲಗದ್ದೆ ಕಚೇರಿಗಳಲ್ಲಿ ಸೈ ಎನಿಸಿಕೊಂಡಿಹಳು
ಅವಳ ಸಾಧನೆಗೆ ಜಯ ಎಂದರೆ ಸಾಕು, ಬೀಗಿ ಬಾಗುವಳು

ಅವಳ ಮೇಲೆ ಬೇಡ ತಾತ್ಸಾರ ನೀಡಿ ಸಂಸ್ಕಾರ
ತೊಟ್ಟಿಲು ತೂಗುವ ಕೈ ನಿಭಾಯಿಸುವುದು ಎಲ್ಲಾ ಅಧಿಕಾರ
ಅವಳ ಸಾಧನೆಯ ಶರವೇಗವ ಯಾರು ತಡೆಯಲಾರರು
ಸದಾ ಬೆಂಬಲವಾಗಿ ನಿಲ್ಲಬೇಕವಳಿಗೆಲ್ಲರೂ

೦೪೫೮ಪಿಎಂ೧೨೧೦೨೦೨೩
*ಅಮುಭಾವಜೀವಿ ಮುಸ್ಟೂರ*


ಬದುಕುವ ದಾರಿಯಲಿ ಅಂಜಕೆ ಪಡದಿರು
ಯಾರೂ ನಿನ್ನವರಿಲ್ಲ ಎಂದು ಬೇಸರಿಸದಿರು
ನಡೆ ಮುಂದೆ ನಡೆ ಮುಂದೆ ನಿನ್ನ ಗುರಿಯೆಡೆಗೆ
ಗೆದ್ದ ಮೇಲೆ ಎಲ್ಲರೂ ಬರುವರು ನಿನ್ನೊಂದಿಗೆ

೦೫೨೩ಪಿಎಂ೧೨೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಗಜಲ್

ಹೂವಿಗೆ ಸುಗಂಧವಾಗಿ ಬಂದೆಯಾ, ಒಲವಹನಿ ಕಾಡದಂತೆ
ಹೃದಯ ಮೂಕವಾಗಿ ಹೋಗಿದೆ ಪ್ರೀತಿಯ ದನಿ ಕೇಳಿತ್ತಿದ್ದಂತೆ

ನಾರು ಕೂಡ ಹೂವಿನ ಜೊತೆ ಸ್ವರ್ಗ ಸೇರಿ ಹೋಯಿತು
ಭಾವದ ಹಾಡು ಅಕ್ಷರವಾಗಿ ಲೇಖನಿ ಬರೆದಂತೆ

ಇರುಳ ಬಾಂದಳದಲ್ಲಿ ಚುಕ್ಕಿ ಚಂದ್ರಮರು ಬೆರೆತುಹೋಗಿಹರು
ಮುಂಜಾನೆಯ ಎದೆಯಲ್ಲಿ ಭಾವಮೂಡಿತು
ಇಬ್ಬನಿ ಹೊಡೆದಂತೆ

ಕೋಗಿಲೆಯ ಹಾಡು ಹೃದಯಕ್ಕೆ ಹಿತ ತಂತು ಮೂರು ಹೊತ್ತು
ಸುಮದೆದೆಯೊಳಗೆ  ಕೂತ  ದುಂಬಿಯ ಮಾರ್ದನಿ ಹೊಮ್ಮಿದಂತೆ

ನಿಸರ್ಗದ ಚೆಲುವಿಗೆ ಮಾರು ಹೋಯ್ತು ಅಮುಭಾವಜೀವ
ಇರುಳ ಮಧುಪಾತ್ರೆಯಲಿ ಚಾಂದನಿ ಮಿಂದೆದ್ದಂತೆ

೦೮೩೪ಪಿಎಂ೧೨೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಹೂವಂತೆ ಕೋಮಲ ನೀ
ನಿನ್ನ ಕಾಯುವ ಮುಳ್ಳಾಗಿರಲೇನು
ಇಬ್ಬನಿಯಂತೆ ಶುಭ್ರ ನೀನು
ನಿನ್ನ ಸೇರಿ ಹೊಳೆಯುವ ಕಿರಣವಾಗಲೇನು
ಬಾನಲ್ಲಿ ಹೊಳೆವ ಬೆಳ್ಳಿ ಚುಕ್ಕಿ ನೀನು
ನಿನ್ನೊಂದಿಗೆ ಬೆರೆವ ಶಶಿಯಾಗಲೇನು 
ಜೇನಂತೆ ಮಧುರ ಸವಿ ನೀನು
ನಿನ್ನ ಸ್ನೇಹ ಬಯಸುವ ದುಂಬಿಯಾಗಲೇನು
ನೀಲ ಬಾನಿನ ಬೆಳ್ಳಿ ಮೋಡ ನೀನು
ಕಾಮನಬಿಲ್ಲುಂತೆ ಜೊತೆಯಾಗಲೇನು
ನಿಸರ್ಗದ ಚೆಲುವ ಖಜಾನೆ ನೀನು
ಅಲ್ಲಿ ನನ್ನೊಲವ ಖಾತೆ ತೆರೆಯಲೇನು
ಪ್ರೀತಿಯ ಪ್ರತಿರೂಪವೂ ನೀನು
ನಿನ್ನಡಿಯ ನೆರಳಾಗಿ ಸದಾ ಜೊತೆಗಿರಲೇನು
ಉತ್ತರಿಸಿ ನಗೆಯ ಬಿತ್ತರಿಸು
ಕವಿ ಸತ್ವದ ವ್ಯಕ್ತಿತ್ವ ಸ್ವೀಕರಿಸು

೦೫೧೩ಎಎಂ೧೩೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಶೀರ್ಷಿಕೆ :- *ನಿನದೇ ಗುಂಗು*

ಯಾರು ನೀನು ಹೆಸರು ಏನು
ನನ್ನ ಸೆಳೆಯಲು ಕಾರಣವೇನು
ಇದೇನು ಪ್ರೀತಿಯ ಆಕರ್ಷಣೆಯೋ
ಯೌವ್ವನ ಕಾಲದ ಅನ್ವೇಷಣೆಯೋ
ಅರಿಯದಾಗಿದೆ ನನ್ನೀ ಮನ
ನಿನ್ನದೇ ಗುಂಗಲ್ಲಿದೆ ಗಮನ

ಪ್ರಾಯ ಬಂದಾಗ ನಿನ್ನ ನೆನಪಾದಾಗ
ಹೃದಯದೊಳಗೆ ಎಂತದೋ ಉದ್ವೇಗ
ಹಸಿವು ನಿದಿರೆ ಎಲ್ಲ ಮರೆಸಿ ಕಾಡುವೆ
ಒಮ್ಮೆ ಹೇಳಿಬಿಡು ನೀನೆಲ್ಲಿ ಅಡಗಿರುವೆ
ಪ್ರೀತಿಯ ರೂಪವು ನಿನ್ನದೇನು
ನಿನ್ನನೆ ಹುಡುಕುತ್ತಾ ಬಂದಿಹೆನು

ಮತ್ತೆ ಮತ್ತೆ ನಿನ್ನ ನೆನಪು ಕಾಡಲು
ಮರೆತೋಯ್ತು ನನಗೆ ಹಗಲು ಇರುಳು
ಯಾವ ರೂಪದ ಮಾಯಾಂಗನೆ ನೀನು
ಹೀಗೆ ನನ್ನ ಕಾಡುವ ಕಾರಣವೇನು

ಹರೆಯವಿದು ಸೋಲುತಿದೆ
ಮರೆಯದಂತೆ ಜ್ಞಾಪಿಸುತ್ತಿದೆ
ಒಮ್ಮೆ ಮುಖ ತೋರು ಚಂದ್ರ ಚಕೋರಿ
ನಿನಗಾಗಿ ಮಾಡಿಕೊಳ್ಳುವೆ ಜೀವನ ತಯಾರಿ
ಎದುರು ಬಂದು ಪ್ರಾಯದ ಗಾಯಕ್ಕೆ ಮುಲಾಮು ಹಚ್ಚು
ಇನ್ನು ಸಹಿಸಲಾರೆ ನಾ ನಿನ್ನ ಪ್ರೇಮದ ಹುಚ್ಚು

೦೯೪೪ಎಎಂ೧೩೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಒಲವ ಅರಸಿ ಹೃದಯವಾಸಿ
ನನ್ನೆದೆಯ ಆಸರೆಯುಂಟು
ಕ್ಷಣ ವಿರಮಿಸು ನಿಶ್ಚಿಂತೆಯಿಂದ
ಸಂಸಾರಕ್ಕಾಗಿ ದುಡಿದು ದಣಿವ ಜೀವ
ತನಗಾಗಿ ಏನನ್ನು ಬಯಸದ ಭಾವ
ಈ ಹೃದಯದ ಅರಮನೆ ನಿನ್ನದೇ ಕಣೆ
ಶ್ವಾಸೋಚ್ಚಾಸ ನಾವಿಬ್ಬರೂ ಬಾಳಿಗೆ
ಇರಲಿ ಈ ಅನ್ಯೋನ್ಯತೆ ಕೊನೆಯವರೆಗೆ
ಹಣದ ಶ್ರೀಮಂತಿಕೆಯಲ್ಲಿ ಬಡವರು ನಾವು
ಗುಣದ ಧೀಮಂತಿಕೆಯಲಿ ಸಿರಿವಂತರು ನಾವು
ಏಳುಬೀಳುಗಳೇನಿರಲಿ ಬಾಳಲಿ
ನೋವು ನಲಿವುಗಳೇನೇ ಇರಲಿ ಬದುಕಲಿ
ನನಗೆ ನೀನು ನಿನಗೆ ನಾನು ಆಸರೆ
ನಾವಿಬ್ಬರೀಗ ಒಲವಿನ ಕೈಸರೆ
ನಿನ್ನ ಕಂಬನಿ ಒರೆಸುವ ಕೈ ನಾನು
ನಿನ್ನ ನೋವಿಗೆ ಸ್ಪಂದಿಸುವ ಸ್ನೇಹಿತ ನಾನು
ಮೌನದಿ ಬೇಡು ಈ ಎದೆಯ ಗೂಡು
ಮನದಿಂಗಿತ ಈಡೇರಿಸುವುದು ನೋಡು

೦೩೪೦ಪಿಎಂ೧೩೧೦೨೦೨೩
*ಅಮುಭಾವಜೀವಿ ಮುಸ್ಟೂರು*