Sunday, October 29, 2023

ಕವನ


*ಪ್ರೀತಿಯ ಸೂರಲಿ*
ತಾಳ್ಮೆಗೂ ಒಂದು ಮಿತಿ ಇದೆ
ಸಹನೆಗೂ ಒಂದು ಶಕ್ತಿ ಆಇದೆಯೇ ಥಥ
ಪ್ರೀತಿ ನಡೆಯಲಿ ಜ್ಯೋತಿ ರದ್ದು ತ್ರ ಬೆಳಗಿದೆ
ದ್ವೇಷ ಕಾರಿದರೆ ಜ್ವಾಲೆ ಉರಿದಿದೆ

ಹಿಂಸೆಯಿಂದ ಶಾಂತಿ ಸಾಧ್ಯವೇ
ನರ ನರರಲಿ ಯುದ್ಧ ವೇದ್ಯವೇ
ವಿಶ್ವಮಾನವರಲ್ಲವೇ ನಾವೆಲ್ಲ
ಭಯೋತ್ಪಾದನೆ ನಮಗೆ ಯೋಗ್ಯವಲ್ಲ

ಸ್ನೇಹದಿಂದ ಎಲ್ಲಾ ಪಡೆಯಬಹುದು
ಪ್ರೀತಿಯಿಂದ ಜಗವ ಗೆಲ್ಲಬಹುದು
ಆದರು ಏಕೀ ರಕ್ತಪಾತದ ಗುಂಗು
ಬೇಡ ನಮಗೆ ದ್ವೇಷಾಸೂಯೆ ಹಂಗು

ಸುಮ್ಮನಿದ್ದರೆ ಕೈಲಾಗದವರೆಂದಲ್ಲ
ಶಾಂತೀಯ ಬಯಸುವವರು ನಾವೆಲ್ಲ
ಕಾಲು ಕೆದರಿ ನಿಂತರೆ ಬಿಡುವುದಿಲ್ಲ
ನಮ್ಮ ತಾಳ್ಮೆಗೂ ಮಿತಿ ಇದೆ ಬಲ್ಲಿರೆಲ್ಲ

ಯುದ್ಧ ರಕ್ಕಸಿಗೆ ಮದ್ದು ನೀಡೋಣ
ಯುದ್ಧ ಮಾಡುವವರ ಸದ್ದಡಗಿಸೋಣ
ತಾಳ್ಮೆಯಿಂದ ಎಲ್ಲರ ಹೃದಯ ಗೆಲ್ಲೋಣ
ಪ್ರೀತಿಯ ಸೂರಲಿ ಒಂದಾಗಿ ಬಾಳೋಣ

0510ಪಿಎಂ24102023
*ಅಮುಭಾವಜೀವಿ ಮುಸ್ಟೂರು*

ಮುಗಿಲಲಿ ಮೂಡಿದ ಮಲ್ಲಿಗೆ ಚಿತ್ತಾರ
ನಲ್ಲೇ ಈ ನಿನ್ನ ಹಣೆಯ ಸಿಂಧೂರ
ನಮ್ಮ ನೆಲದ ಈ ಸಂಸ್ಕಾರ
ಮೆಚ್ಚಿ ನಾನಾದೆ ನಿನ್ನ ಪ್ರಿಯಕರ

ಅಂಬರಕ್ಕೆ ಸುಂದರ ಈ ಚಂದಿರ
ನಲ್ಮೆಯ ಬಾಳಿಗೆ ನೀನೆ ಆಧಾರ
ನಿನ್ನ ನಗೆಯೇ ಮನೆಗೆ ಶೃಂಗಾರ
ನಿನ್ನ ಗುಣ ಅಪ್ಪಟ ಬಂಗಾರ

ನೀನನ್ನ ಬಾಳ ಬೆಳಗು ನೇಸರ
ನಮ್ಮ ಬಾಳಲ್ಲಿ ಇಲ್ಲ ಅಪಸ್ವರ
ಮಾಗಿ ಚಳಿಗೆ ನೀನೇ ಚಾದರ
ನನ್ನೆಲ್ಲ ಭಾವಗಳಿಗೆ ನೀ ಸ್ವರಭಾರ

ನಲ್ಲ ನೀ ಬಾಳಹಾದಿಯ  ಗುರಿಕಾರ
ಒಲುಮೆಯಿಂದ ಮಾಡುವೆ ಉಪಚಾರ
ಮರೆಯಲಾರೆ ನೀ ನೀಡಿದ ಸಹಕಾರ
ಎಂದೆಂದಿಗೂ ದಿಗೂ ನಿನ್ನವೆ ನಿನ್ನ ಉಪಕಾರ

ನಲ್ಲ ನಮ್ಮೊಲವಿಗೆ ಆಗಸವೇ ಚಪ್ಪರ
ಸಂಪ್ರೀತಿ ತುಂಬಿದ ನಮ್ಮ ಸಂಸಾರ
ನಮ್ಮಲೆಂದು ಆಳಲಿಲ್ಲ ಅಧಿಕಾರ
ಒಲವಿತ್ತು ನಮ್ಮಿಬ್ಬರಲ್ಲಿ ಪರಸ್ಪರ

ಇದಕ್ಕೆ ಸಾರಿ ಹೇಳೋಣ ಡಂಗುರ
ಒಲವ ಪೂಜೆಗೆ ನಾವು ಕರ್ಪೂರ
ಎಂಥ ಅದ್ಭುತ ಪ್ರೀತಿಯ ಚಮತ್ಕಾರ
ನಿಜವಲ್ಲವೇ ಒಲವೇ ಜೀವನ ಸಾಕ್ಷಾತ್ಕಾರ

0515ಪಿಎಂ25102023
*ಅಮುಭಾವಜೀವಿ ಮುಸ್ಟೂರು*


ಗಡಿ ಬಿಡಿ ಬದುಕು 

ಏಕೆ ಇಷ್ಟೊಂದು ಗಡಿಬಿಡಿ ಬದುಕು
 ಒಳಿತಿಗಿಂತ ಹೆಚ್ಚೇ ಇಲ್ಲಿ ಕೆಡುಕು

ವೇಗದ ಜಗತ್ತಿನಲ್ಲಿ ಎಲ್ಲಕ್ಕೂ ಆತುರ
ಒತ್ತಡದ ಬದುಕಿದು ನೆಮ್ಮದಿಯ ತಾರದು
ಚಿಕ್ಕ ಚಿಕ್ಕ ಭಾಗವಾದ ಸಂಸಾರ
ಎಲ್ಲವನ್ನು ಒಬ್ಬರೇ ಹೊರಬೇಕು ಭಾರ

ಬೆಳಗಿನಿಂದ ಸಂಜೆವರೆಗೂ
ಸಂಜೆಯಿಂದ ಮುಂಜಾನೆವರೆಗೂ
ಪಾಳಿ ಲೆಕ್ಕದಲ್ಲಿ ದುಡಿಯುವ ಶ್ರಮ
ವಾರಂತ್ಯಕ್ಕಷ್ಟೇ ಸೀಮಿತ ಪ್ರೇಮ

ಹಣದ ಹಿಂದೆ ಓಡುವ ಬದುಕು
ನಗರ ಕೇಂದ್ರವಾಗಿದೆ ಎಲ್ಲದಕ್ಕೂ
ಬಂಧು ಬಾಂಧವರನೆಲ್ಲ ಬಿಟ್ಟು ದೂರ
ದುಡಿಮೆಯೊಂದೆ ಇಲ್ಲಿ ಎಲ್ಲಕ್ಕೂ ಆಧಾರ

ಕಾಲದ ಹಿಂದೆ ಓಡಲೇ ಬೇಕು
ದಟ್ಟಣೆಯ ಅಡೆತಡೆಯ ದಾಟಬೇಕು
ತಂತ್ರಜ್ಞಾನದ ತಿರುಗಣಿಯಲ್ಲಿ ತಿರುಗಿ
ದುಡಿದು ದಣಿದುಬೆಳೆದುಳಿಯಬೇಕು

ಒತ್ತಡದ ಜೀವನದಿಂದ ಒಮ್ಮತದ ಬದುಕಿಲ್ಲ
ಎಷ್ಟೇ ದುಡಿದರು ಯಾರಿಗೂ ನೆಮ್ಮದಿ ಇಲ್ಲ
ಸಂಸಾರಗಳು ವಿಚ್ಛೇದನದ ಹಾದಿ ಹಿಡಿದು
ಸಮಾಜದ ಸ್ವಾಸ್ಥ್ಯಕ್ಕೆ ಆತಂಕ ತಂದಿದೆಯಲ್ಲ

ಬೇಡ ಗಡಿಬಿಡಿಯ ಆ ಬದುಕು
ಹಾಸಿಗೆ ಇದ್ದಷ್ಟು ಕಾಲು ಚಾಚಿ ಬಾಳಬೇಕು
ಸಂತೃಪ್ತಿ ಜೀವನದ ಗುರಿಯಾಗಬೇಕು
ಸಂಪ್ರೀತಿಯು ಸಂಸಾರವ ಬೆಸೆಯಬೇಕು
೦೮೦೩ಪಿಎಂ೨೬೧೦೨೦೨೩
*ಅಮುಭಾವಜೀವಿ ಮುಸ್ಟೂರು*

ಗಜಲ್
ಮೋಡದ ನಡುವೆ ಇಣುಕಿದ ಚಂದಿರ ಭಾವಗೀತೆ ಹಾಡಿದ ನೋಡು
ಬೇಡದ ಬಂಧ ಕಳಚಿದ ಮೇಲೆ ಮನಸ್ಸಿನಾಚೆ ದೂಡಿದ ನೋಡು

ಗೋಡೆಯ ಮೇಲಿನ ಚಿತ್ತಾರದ ನವಿಲು ನಲಿವ ಮರೆತಿದೆ 
ಬೇಸರದಲ್ಲಿ ಆ ಚಂದಿರನು ಕೂಡ ಬೆಳದಿಂಗಳಲ್ಲಿ ಉರಿದ ನೋಡು

ಹಾಡುವ ಕೋಗಿಲೆ ದನಿಯಿಲ್ಲದೆ ಮೌನಿಯಾಗಿದೆ
ಕೈಗೂಡದ ಆಸೆಯ ಸಲುವಾಗಿ ಅಮಾವಾಸ್ಯೆಯ ಕತ್ತಲಿಗೆ ಜಾರಿದ ನೋಡು

ಬೆಂದ ಒಡಲಿನಲ್ಲಿ ಮೊಳಕೆ ಕೂಡ ಕಮರಿದೆ
ರವಿಯ ಎದುರಲಿ ಶಶಿಯು ಕಳೆಗುಂದಿದ ನೋಡು

ಸಾಗರ ಮಥನದಿ ಅಮೃತ ಸಿಕ್ಕಿತು ಅಮು
ಜಗವ ಕಾಯಲು ಶಿವ ನಂಜ ನುಂಗಿದ ನೋಡು

೦೮೩೫ಪಿಎಂ೨೬೧೦೨೦೨೩
*ಅಮುಭಾವಜೀವಿ ಮುಸ್ಟೂರು*

*'ಬರ'ದ ತನಗ*

ಬರದ ಬೇಗೆಯಲ್ಲಿ
ಬಂಜೆಯಾಯ್ತು ಭೂಮಿಯು
ಬೆವರು ಸುರಿಸಿದ
ರೈತನ ಕೈ ಖಾಲಿಯು

ಮೋಡವು ಹಡೆಯದೆ
ಮಳೆಯು ಬರಲಿಲ್ಲ
ನಿಗೂಢ ನಿಸರ್ಗದ
ಮರ್ಮ ತಿಳಿಯದಲ್ಲ

ಬಾಯಾರಿದ ಜೀವವು
ಹಂಬಲಿಸಿದೆ ನೀರ
ಬೇಸಿಗೆಯ ಬಿಸಿಲು
ತಾನೇ ಹೀರಿದೆ ಪೂರ

ಭೂತಾಯಿ ಕೈಚೆಲ್ಲಲು
ಮಕ್ಕಳಾದ್ರು ಕಂಗಾಲು
ಹೀಗಾದರೆ ಮುಂದೇನು
ಮರೆತಾರು ಒಕ್ಕಲು

ಬರ ನೀ ದೂರ ಓಡು
ನೋಡಲಾಗ್ತಲ್ಲೀ ಪಾಡು
ಆಹಾಕಾರ ಎದ್ದಿದೆ
ಕಣ್ಬಿಟ್ಟು ಇಲ್ಲಿ ನೋಡು

ಮಳೆಯು ಸುರಿಯಲಿ
ಹಸಿರು ಮೆರೆಯಲಿ
ರೈತರು ಉಳಿಯಲಿ
ಹಸಿವು ಮುಕ್ತವಾಗಲಿ

0434 ಪಿಎಂ 27102023
*ಅಮುಭಾವಜೀವಿ ಮುಸ್ಟೂರು*

ನೀನು ನೀರು ನಾನು ನೀರೆ
ನೀನು ಹರಿವೆ ನಾನು ಕೊರಗುವೆ
ನೀನು ಪಾವನೆ ನಾನು ವೇದನೆ
ನೀ ಸಾಗರ ಸೇರುವೆ 
ನಾ ಸಂಸಾರವೆಂದು ಕೂರುವೆ

ನಿನಗೂ ಇದೆ ಮೈಲಿಗೆ
ಆದರೂ ಬಂದು ಮಿಂದು ಪುನೀತರಾಗುವವರು
ನನಗೂ ಇದೆ ಮೈಲಿಗೆ
ದಿನ ರಾತ್ರಿ ಮೈಮುಟ್ಟಿ ಹೋದರು
ಮಾತ್ರ ಪತಿತೆಯ ಪಟ್ಟ ನೀಡಿದರು

ಎಲ್ಲರಿಗೂ ಬೇಕಾಗಿ
ಎಲ್ಲಾ ಕಾರ್ಯಕೂ ಹೊಂದಿಕೊಂಡು
ತೀರ್ಥದ ಸ್ಥಾನ ಪಡೆದು ಕೊಂಡೆ
ಉಂಡ ಎಲ್ಲರೂ ಕೊಚ್ಚೆ ಮಾಡಿ
ವ್ಯಭಿಚಾರದ ಕೋಪಕ್ಕೆ ತಳ್ಳಿ
ಅರ್ಥಹೀನ ಬದುಕಾಗಿಸಿದರು

ಮಾಲಿನ್ಯದ ದೌರ್ಜನ್ಯ ನೀ ಸಹಿಸಿದೆ
ಕ್ಷಾರದ ಸಾಗರದಲ್ಲಿ ನೀನು ಬೆರೆತೆ
ಮತ್ತೆ ಮಳೆ ಹನಿಯಾಗಿ ಜನ್ಮ ಪಡೆದೆ
ಸೌಜನ್ಯಕೂ ನನ್ನ ಮನವ ಕೇಳದೆ
ದೇಹ ಹಿಂಡಿ ಹೋದರು ಕಬ್ಬಿನಂತೆ
ಮರು ಹುಟ್ಟು ಬೇಡವೆನ್ನುವಷ್ಟು ಹಿಂಸಿಸಿದರು

ನಮ್ಮಿಬ್ಬರದು ಒಂದೇ ಕುಲ
ನೀನು ಸಲಿಲ ನಾನು ಅಬಲ
ನಮ್ಮಿಬ್ಬರಿಗೂ ಇಲ್ಲ ಶೀಲ
ಬೆರೆಸಿಕೋ ನಿನ್ನೊಂದಿಗೆ ನನ್ನ
ತೊಳೆದು ಬಿಡು ಅಂಟಿದ ಪಾಪವನ್ನ
ಪಾವನವಾಗಲಿ ನನ್ನ ಜೀವನ

೦೫೪೬ ಪಿಎಂ೨೭೧೦೨೦೨೩
*ಅಮುಭಾವಜೀವಿ ಮುಸ್ಟೂರು*

ನಿನ್ನ ಪ್ರೀತಿ ಸುಳ್ಳು ಸಖ
ಅದರಿಂದ ನನಗಿಲ್ಲ ಸುಖ

ಹರೆಯದ ಮುಂಜಾನೆಗೆ 
ಮಂಜಂತೆ ನೀ ಬಂದೆ
ಅರಿವಿನ ಬೆಳಕು ಸೋಕುವ ಮುಂಚೆ
ನೀ ಕಾಣದಂತೆ ಕರಗಿ ಹೋದೆ
ಏಕೆ ನೀನು ಹೀಗೆ
ತಪ್ಪಲಿಲ್ಲ ಬಾಳ ಬೇಗೆ

ಮುಗ್ಧ ಹೃದಯಕೆ ಪ್ರೀತಿಯ
ಬೆಳದಿಂಗಳು ಸುರಿದೆ
ಆ ಮೋಹದ ತೆರೆ ಸರಿಯುವುದರೊಳಗೆ
ನೀನನ್ನ ತೊರೆದು ಹೋಗಿದ್ದೆ
ಏನಿತ್ತು ನಿನ್ನ ಉದ್ದೇಶ
ಏಕೆ ನೀಡಿದೆ ಬಾಳಿಗೆ ವಿಷ

ಹೆಣ್ಣೆಂಬ ಕಾರಣಕ್ಕೆ
ಹೀಗೆ ಮೋಸ ಮಾಡಬಹುದೇ
ಹಣ್ಣನ್ನು ಸವಿದ ಮೇಲೆ
ಸಿಪ್ಪೆಯಂತೆ ಬಿಸಾಡಬಹುದೇ
ನನ್ನ ಭಾವನೆಗೆ ಬೆಲೆ ಇಲ್ಲವೇ
ನನ್ನ ವೇದನೆ ಅರ್ಥವಾಗುವುದಿಲ್ಲವೇ

ನಂಬಿಕೆಗೆ ದ್ರೋಹ ಬಗಿದೆ ಸಖ
ಅದರಿಂದ ನನ್ನ ಬಾಳಾಯಿತು ಶೋಕ
ನಿನ್ನ ಮೋಸದ ಆಟಕ್ಕೆ ಬಲಿಯಾದೆ
ನನ್ನ ಖುಷಿಯನೆಲ್ಲ ನಾಶ ಮಾಡಿದೆ
ನೊಂದ ಕಂಬನಿ ಒರೆಸುವ ಕೈ ನೀನಾಗಲಿಲ್ಲ
ಒಂಟಿ ಬದುಕಿ ತೋರುವೇ ನಿನ್ನ ಅಗತ್ಯವಿಲ್ಲ

7 21 ಪಿಎಂ 27 10 2023
*ಅಮುಭಾವಜೀವಿ ಮುಸ್ಟೂರು*







No comments:

Post a Comment