ನಾಲ್ಕು ಗೋಡೆಯ ನಡುವೆ
ನೀ ಬಂಧಿಯಾಗಿ ಕಳೆದು ಹೋಗಿದ್ದೆಯಲ್ಲವೇ
ಒಲೆಯ ಮುಂದೆ ಕೂತು ಊದಿ ಊದಿ
ಹೊಗೆಯೊಳಗೆ ನೀ ಮುಳುಗಿ ಹೋಗಿದ್ದೆಯಲ್ಲವೇ
ಗಂಡಿನ ಬಿಗಿ ಹಿಡಿತದಲ್ಲಿ
ಅಸ್ತಿತ್ವವಿಲ್ಲದೆ ಒದ್ದಾಡುತ್ತಿದ್ದೆ
ಸಾಮರ್ಥ್ಯ ನಿನ್ನೊಳಗಿದ್ದರೂ ಕೂಡ
ಸಂಸಾರಕ್ಕಾಗಿ ತೆರೆಮರೆಯಲಿ ಕುಳಿತಿದ್ದೆ
ಹಿರಿಯರೆದುರು ತಲೆಯೆತ್ತಿ ನಿಲ್ಲದೆ
ತಲೆಯಾಡಿಸುವ ಸೂತ್ರದ ಬೊಂಬೆಯಾಗಿದ್ದೆ
ತಾಳಿಯ ಬೇಲಿಯೊಳಗಿದ್ದು
ಆ ತಾಳ್ಮೆಗೆ ನೀ ರಾಯಭಾರಿಯಾಗಿದ್ದೆ
ತನ್ನೊಳಗಿನ ತುಮುಲ ತಾಕಲಾಟಗಳನ್ನು ಬದುಗಿಟ್ಟು
ಸಂಸಾರದ ಗುಟ್ಟು ರಟ್ಟಾಗಲು ಬಿಡದೆ ಶ್ರಮಿಸಿದ್ದೆ
ಅಲ್ಲಲ್ಲಿ ಸಿಡಿದೆದ್ದು ವ್ಯವಸ್ಥೆಗೆ ಸ್ತ್ರೀಶಕ್ತಿಯ
ತಾಕತ್ತನ್ನು ನಿರೂಪಿಸಿ ಗೆದ್ದು ಬಂದಿದ್ದೆ
ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಿ
ತಾನು ಸಶಕ್ತಳೆಂದು ಸಾಬೀತುಪಡಿಸಿದೆ
ಶಿಕ್ಷಣದ ಜ್ಯೋತಿಯಿಂದ ಬತ್ತಿಯಾಗಿ ಉರಿದು
ಅವರೇ ಎಂಬ ಕತ್ತಲೆಯನ್ನು ಓಡಿಸಿ ಬೆಳಕಾಗಿ ನಿಂದೆ
ಹೊಸ್ತಿಲ ದಾಟಿ ಎಲ್ಲ ರಂಗದಲ್ಲೂ
ಸಮರ್ಥಳೆಂದು ಇತಿಹಾಸ ಬರದೆ
ಬಳೆ ತೊಡುವ ಕೈ ಭವಿಷ್ಯ ಬರೆಯುವ
ಸಾರಥ್ಯ ವಹಿಸಿ ಸಾಫಲ್ಯವ ಕಂಡೆ
ಸ್ತ್ರೀ ಎಂದರೆ ಮೂಗು ಮುರಿವ ಕಾಲ ತಳ್ಳಿ
ಸಾಧನೆಯ ಮೇರುವಾಗಿ ಜಗದೆದುರು ನಿಂತೆ
ಪುರುಷ ಪ್ರಾಧಾನ್ಯದಲ್ಲೂ ಸಮಶಕ್ತಿಯ
ಗುರಿ ತಲುಪಿ ಇತಿಹಾಸ ಬದಲಿಸಿದೆ
೧೦೫೬ಪಿಎಂ೧೫೦೪೨೦೨೪
*ಅಮು ಭಾವಜೀವಿ ಮುಸ್ಟೂರು*
ಕಿತ್ತು ತಿನ್ನುವ ಬಡತನ
ಅದರ ಮೇಲೊಂದಿಷ್ಟು ಅಜ್ಞಾನ
ಬದುಕನ್ನೇ ನಾಶ ಮಾಡಿತು
ಉಳ್ಳವರ ಅಟ್ಟಹಾಸ
ಹಸಿವಿನ ಸಹವಾಸ
ಬದುಕನ್ನೇ ಬೀದಿಗೆ ತಂದಿತು
ಇಲ್ಲದವರ ಅನಿವಾರ್ಯತೆ ಕಂಡು
ಆಮಿಷ ತೋರಿಸಿ ಕೊಂಡು ಕೊಂಡು
ರಸ ಹೀರಿ ಸಿಪ್ಪೆಯಂತೆ ಬೀದಿಗೆಸೆದರು
ಹರೆಯದ ಕುರುಹುಗಳು ಹತ್ತಾರು
ಚಿಂದಿಯೊಳಗೆ ಇಣುಕುವ ಕಣ್ಗಳು ನೂರು
ದೇವದಾಸಿಯ ಪಟ್ಟ ಕಟ್ಟಿ ಬಳಸಿಕೊಂಡರು
ದೇವರ ಹೆಸರಲ್ಲಿ ಮಾಡಿ ಮೋಸ
ರಣಹದ್ದುಗಳಂತೆ ಹೀರಿದರು ರಸ
ಬೀದಿ ಬಸವಿ ಎಂದು ಬಿಂಬಿಸಿ
ಹೋಗಿ ಬರುವ ಕಣ್ಣುಗಳಿಗೆ ಆಹಾರವಾಗಿ
ಅವರ ತೀಟೆ ತೀರಿಸುವ ವಸ್ತುವಾಗಿ
ಬಳಸಿ ಎಸೆದರು ಕನಸುಗಳ ಸಾಯಿಸಿ
ಬಡವರ ಹೆಣ್ಣಾಗಿ ಹುಟ್ಟಿದ್ದು ಮೊದಲ ತಪ್ಪು
ಕಾಮುಕರ ಕಪಿಮುಷ್ಠಿಯಲ್ಲಿ ಮಲಗಿದ ಹೂವು
ಮೌದ್ಯದ ಹಿಂದೆ ಬಲಿಯಾಯ್ತು ಬದುಕು
ಶಿಕ್ಷಣ ವಂಚಿತ ಭವಿಷ್ಯ ದಾರಿ ತಪ್ಪಿ
ಕತ್ತಲೆ ಜಗದ ಬದುಕನ್ನು ಅಪ್ಪಿ
ಸಂಕಷ್ಟಗಳ ಸರಮಾಲೆ ನೀರಿದ್ದು ಬರಿ ಕೆಡಕು
೦೩೩೨ಎಎಂ೧೬೦೪೨೦೨೪
*ಅಮು ಭಾವಜೀವಿ ಮುಸ್ಟೂರು*
No comments:
Post a Comment