ಇಲ್ಲಿ ಯಾರು ಯಾರನ್ನು ಬೆಳೆಸುವುದಿಲ್ಲ. ಬೆಳೆಯುವ ಮೂಲ ಗೊತ್ತಿದ್ದವನು ತಾನಾಗೆ ಬೆಳೆಯುತ್ತಾನೆ. ಇಲ್ಲವೆಂದರೆ ತಾನಿದ್ದಲ್ಲಿಯೇ ಅಳಿದು ಹೋಗುತ್ತಾನೆ. ಪ್ರತಿಭೆ ಎಂದು ಕೂತರೆ ಪುಕ್ಸಟ್ಟೆ ಕೆಲಸಕ್ಕೂ ಯಾರು ನಮ್ಮನ್ನ ಮಾತನಾಡಿಸುವುದಿಲ್ಲ. ಇಲ್ಲೇನಿದ್ದರೂ ದೊಡ್ಡವರ ಹಿಂಬಾಲಕರಾಗಿರಬೇಕು, ಇಲ್ಲ ಸಾಕಷ್ಟು ಹಣದ ಅಧಿಕಾರದ ಕುಳಗಳಾಗಿರಬೇಕು. ಬೆಳೆದು ದೊಡ್ಡವರಾದವರೆಲ್ಲ ಯಾರೂ ಕೂಡ ಬೆಳೆಯುವವರ ಬೆನ್ನು ತಟ್ಟುವ ಗೋಜಿಗೆ ಹೋಗುವುದಿಲ್ಲ. ಅವರೇನಿದ್ದರೂ ಅವರ ಹಿಂಬಾಲಕರು, ಅವರ ಚಿರಪರಿಚಿತರು, ಅವರು ಹೇಳಿದ್ದನ್ನೆಲ್ಲ ಮಾಡುವಂತಹ ಅಮಾಯಕರನ್ನು ಬೆಳೆಸುವ ನಾಟಕವಾಡಿ ಸಮಾಜದೆದುರು ಬೀಗುತ್ತಿರುತ್ತಾರೆ. ಸ್ಥಳೀಯವಾಗಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ತಮ್ಮ ಆಚೆ-ಈಚೆ ಓಡಾಡುವವರನ್ನೇ ಮೆಚ್ಚಿ ಮೆರೆಸುತ್ತಿರುತ್ತಾರೆ. ಪ್ರತಿಭೆ ಇದ್ದು ಅವಕಾಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವವರು ಅವರ ಕಣ್ಣಿಗೂ ಬೀಳುವುದಿಲ್ಲ ಅಂತಹವರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸುವುದೂ ಇಲ್ಲ.
ಈಗಿನ ಎಲ್ಲಾ ಚಟುವಟಿಕೆಗಳು ಪ್ರಭಾವಿಗಳ ಕೃಪಾಪೋಷಿತವಾಗಿರುವುದರಿಂದ ಅವರ ಇಚ್ಛೆಯಂತೆ, ಅವರ ಸ್ವೇಚ್ಛೆಯಂತೆ, ಅವರನ್ನು ಮೆಚ್ಚಿಸುವ ಸಲುವಾಗಿಯೇ ಜನರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅವರ ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ವೈಯಕ್ತಿಕ ಕಾರ್ಯಕ್ರಮಗಳಾದರೆ ಅದು ಯಾರು ಪ್ರಶ್ನಿಸುವುದಿಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವಾಗ ಸರ್ವರನ್ನು ಒಳಗೊಂಡ ವೇದಿಕೆಯಾಗಿರದೇ ಕೇವಲ ಹೊಗಳು ಭಟ್ಟರ ಒಡ್ಡೋಲಗವಾಗಿರುತ್ತದೆ. ಅಲ್ಲಿ ಪ್ರಚಾರ ಬಯಸದ, ಯಾರಿಗೂ ತಮ್ಮತನವನ್ನು ಮಾರಿಕೊಳ್ಳದ, ತಮ್ಮ ಕಾಯಕ ನಿಷ್ಠೆಯನ್ನು ಪ್ರಾಮಾಣಿಕವಾಗಿ ಮಾಡುವವರು ನಿಕೃಷ್ಟವಾಗಿ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ತಮಗಾದ ಅನ್ಯಾಯದ ವಿರುದ್ಧ ಸಿಡಿದ್ದೇಳಲಾಗದೆ ಅಲ್ಲಿ ನಡೆಯುತ್ತಿರುವ ಅ(ಪ)ಟ್ಟಹಾಸಗಳನ್ನು ನೋಡಿ ಸಹಿಸಿಕೊಳ್ಳಲಾಗದೆ ಮರ ಮರ ಮರುಗಿ ಕೊರಗುತ್ತಾ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ. ಇಂತಹ ಕಾರ್ಯಕ್ರಮಗಳ ಹೊಣೆ ಹೊತ್ತವರು ತಾವೇನು ಮಹತ್ ಸಾಧನೆ ಮಾಡಿ ಗೆದ್ದುಬಿಟ್ಟಿದ್ದೇವೆ ಎಂದು ಓಡಾಡುತ್ತಿರುತ್ತಾರೆ. ಹಣ ಅಧಿಕಾರ ವರ್ಚಸ್ಸು ಯಾವುದು ಇರದವರು ಅವರ ಪಾಲಿಗೆ ನಿಷ್ಪ್ರಯೋಜಕರು. ಅವರನ್ನು ಕಣ್ಣೆತ್ತಿಯೂ ನೋಡಿದಷ್ಟು ಅವಮಾನ ಮಾಡಿ ಬೀಗುತ್ತಿರುತ್ತಾರೆ.
ಯಾವುದೇ ಕಾರ್ಯಕ್ರಮಗಳು ನಡೆಯುತ್ತಿರುವ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದವರು ಕೂಡ ಇವರ ಬೇಳೆ ಬೇಯಿಸಲು ಒಪ್ಪುವುದಿಲ್ಲವೆಂದರೆ ಅವರನ್ನು ಕಾಲ ಕಸವಾಗಿ ನೋಡುವ ಅವರನ್ನು ಸೌಜನ್ಯಕಾದರೂ ಆಹ್ವಾನಿಸುವ ವೇದಿಕೆಯಲ್ಲಿ ಸ್ಥಾನ ನೀಡುವ ಯಾವ ಔದಾರ್ಯವನ್ನು ತೋರಿಸುವುದೇ ಇಲ್ಲ. ಅಂಥವರ ಪರಿಸ್ಥಿತಿ ಹೀಗಾದರೆ ಇನ್ನೂ ಬೆಳೆಯುತ್ತಿರುವ ಉದಯೋನ್ಮುಖರು ಎಲೆ ಮರೆಯ ಕಾಯಿಯಂತಿರುವ ಅದೆಷ್ಟೋ ಪ್ರತಿಭೆಗಳು ಬೆಳಕಿಗೆ ಬರದೆ ಅಲ್ಲೇ ಕತ್ತಲಲ್ಲೇ ಕಮರಿ ಹೋಗುತ್ತಿದ್ದಾರೆ. ಸಾರ್ವಜನಿಕ ಸಂಘ ಸಂಸ್ಥೆಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆದರು ಕೂಡ ಸರ್ವರೂ ಒಪ್ಪಿತವಾಗುವಂತಹ ವ್ಯಕ್ತಿ ವ್ಯಕ್ತಿತ್ವಗಳನ್ನು ಗುರುತಿಸುವಲ್ಲಿ ವಿಫಲವಾಗಿ ಕೇವಲ ತಮ್ಮ ಸುತ್ತಮುತ್ತಲಿನ ಹತ್ತು ಜನರನ್ನೇ ದೊಡ್ಡವರೆಂದು ಬಿಂಬಿಸಿ ಅವರಿಂದ ಜೈಕಾರ ಪಡೆದು ಸಾಧಕರನ್ನು ನಾವೇ ಗುರುತಿಸಿ ಗೌರವಿಸಿದ್ದೇವೆ ಎಂದು ದೊಡ್ಡದಾಗಿ ಪ್ರಚಾರಗಿಟ್ಟಿಸಿ ಕೊಳ್ಳುತ್ತಿದ್ದಾರೆ.
ಇವತ್ತು ಕಾಲ ಬದಲಾಗಿದೆ. ಯಾರದೋ ಮರ್ಜಿಯಲ್ಲಿ ಪ್ರತಿಭೆ ಅರಳುವ ಅನಿವಾರ್ಯತೆ ಈಗಿಲ್ಲ. ಹೀಗೆಲ್ಲಾ ಸಾಕಷ್ಟು ಮಾಧ್ಯಮಗಳು ಸ್ವಪ್ರಯತ್ನದಿಂದ ಮೇಲೆ ಬರುವವರಿಗೆ ಅವರದೇ ಆದ ಸ್ವತಂತ್ರ ವೇದಿಕೆಯನ್ನು ಸೃಷ್ಟಿಸಿಕೊಂಡು ಜಗತ್ತಿನದುರು ತೆರೆದುಕೊಳ್ಳುವ ಅವಕಾಶ ಇದ್ದರೂ ಕೂಡ ಇಂಥವರ ತಿರಸ್ಕಾರದಿಂದ ನೊಂದುಕೊಳ್ಳುವವರೇ ಹೆಚ್ಚು. ನಾವು ಹೊರಗಡೆ ಎಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ನಮ್ಮ ನೆಲ ನಮ್ಮವರು ಇರುವ ಜಾಗಗಳಲ್ಲಿ ನಮ್ಮನ್ನು ಗುರುತಿಸುವುದಿರಲಿ ಗಮನಿಸುವ ಕೆಲಸವನ್ನು ಮಾಡುವುದಿಲ್ಲ. ಇದರಿಂದ ಬೇಸತ್ತ ಅದೆಷ್ಟೋ ಪ್ರತಿಭೆಗಳು ಯಾರಿಗೂ ಕಾಣದಂತೆ ಮರೆಯಲ್ಲಿ ಮರೆಯಾಗಿ ಹೋಗುತ್ತಿವೆ. ಪ್ರಭಾವಿಗಳ ಬೆಂಬಲಿತರ ಈ ಅಟ್ಟಹಾಸಗಳು ಕಡಿಮೆಯಾಗುವವರೆಗೂ ನೈಜ ಪ್ರತಿಭೆಗಳು ಅವಕಾಶದ ಹುಡುಕಾಟದಲ್ಲಿರುವವರು ಬೆಳಕಿಗೆ ಬರುವುದು ಅನುಮಾನ.
೦೭೨೧ಪಿಂ೧೭೦೨೨೦೨೫
*ಅಮು ಭಾವಜೀವಿ ಮುಸ್ಟೂರು*
ಮಾತು ತಪ್ಪುವವರೇ ಎಲ್ಲ ಇಲ್ಲಿ
ಬೆಳೆಯುವವರಿಗೆ ಹಾಕುವರೆಲ್ಲ ಬೇಲಿ
ನಂಬಿಕೆ ಇಲ್ಲದ ನಾನಾ ಜನ
ನಕಲಿ ಎಂದು ನಿತ್ಯ ನಗುವರು ಇಲ್ಲಿ
ಸುಳ್ಳು ಸುಳ್ಳು ಆಪಾದನೆ ಹೊರಿಸಿ
ಸಾಕ್ಷಿ ಕೇಳಲು ತಲೆಮರೆಸಿ
ಓಡಿ ಹೋಗುವರು ನಿರ್ಬಂಧಿಸಿ
ಗಾಳಿಯಲ್ಲಿ ಗುಂಡು ಹಾರಿಸುವರು ಹೆದರಿಸಿ
ಆಧಾರವಿಟ್ಟುಕೊಂಡು ಆಪಾದಿಸಬೇಕು
ಅಪವಾದ ಹೊರಿಸುವ ಮೊದಲು ಯೋಚಿಸಬೇಕು
ಅವಮಾನ ಮಾಡುವುದೇ ಕಾಯಕವಾಗಿರಲು
ಅಂತರಂಗದ ಶುದ್ದಿ ಉಳ್ಳವರೇ ಅವರು
ಎಲ್ಲರೂ ಮುಖವಾಡ ಹೊತ್ತ ಕಚಡಗಳು
ಪೂರ್ವಗ್ರಹ ಪೀಡಿತರಾದವರೆಲ್ಲ
ಪರಾಮರ್ಶಿಸುವ ಯೋಗ್ಯತೆ ಯಾರಿಗೂ ಇಲ್ಲ
ಅವರವರ ಮೂಗಿನ ನೇರಕ್ಕೆ ನಡೆವರು
ಬೆಳೆಯುವವರ ಸಹಿಸಲಾಗದೆ ತಡೆಯುವರು
ಪ್ರತ್ಯಕ್ಷ ಕಂಡರೂ ಪ್ರಮಾಣಿಸದ ಶೀಲವಂತರು
ಇಂಥವರಿಂದ ಯಾವ ಲಾಭವಿಲ್ಲ ಪ್ರಾಮಾಣಿಕರಿಗೆ
ಸ್ವಚ್ಛತೆ ಕಾಣದು ಕೊಚ್ಚೆ ಮನದವರಿಗೆ
೦೧೫೬ಪಿಎಂ೨೧೦೨೨೦೨೫
*ಅಮು ಭಾವಜೀವಿ ಮುಸ್ಟೂರು*
ಸಾವಿಗೆ ಹತ್ತಿರವಾಗಿ
ಬದುಕಿಗೆ ಉತ್ತರವಾಗಿ
ಸಾಗುತಿದೆ ಪಯಣ
ಶೀರ್ಷಿಕೆ:- *ಅವಳ ಹಸ್ತಾಕ್ಷರದೊಂದಿಗೆ ಕಾಪಾಟು ಸೇರಲಿ ಬದುಕು*.
ಹೆಣ್ಣು ಮಾಯೆಯ ರೂಪ. ಅವಳೊಮ್ಮೆ ಮನಸ್ಸಿಗೆ ಹೊಕ್ಕರೆ ಸಾಕು ಎಲ್ಲವೂ ಚಂದ. ಅವಳ ಮಾತನ್ನು ಮೀರುವ ಧೈರ್ಯ ಖಂಡಿತ ಇರುವುದಿಲ್ಲ. ಅವಳು ಕುಣಿಸಿದಂತೆ ಕುಣಿಯಬೇಕು ನಟಿಸಿದಂತೆ ನಾಟಕವಾಡಬೇಕು. ಸೂತ್ರದ ಗೊಂಬೆಯಂತೆ ಸದಾ ಅವಳ ಆಣತಿಯಂತೆ ನಗಬೇಕು ಅಳಬೇಕು. ಅವಳು ಹಿಡಿಸಿದ ಹುಚ್ಚಿಗೆ ಜಗದಿ ಎಲ್ಲವೂ ಸರಿಯಾಗಿ ಕಾಣುತ್ತದೆ. ಅವಳು ನಮ್ಮೊಳಗೆ ಇರುವ ತನಕ ಯಾವ ತಪ್ಪು ತಪ್ಪಾಗಿ ಕಾಣುವುದಿಲ್ಲ. ಒಮ್ಮೆ ಆಚೆ ಅವಳು ಹೊರಟು ಹೋದಳು ಎಂದರೆ ಆಗ ಇಡೀ ಜಗತ್ತೇ ಖಾಲಿ ಖಾಲಿ. ಅಲ್ಲಿಯವರೆಗೂ ಜಾಲಿ ಮೂಡ್ನಲ್ಲಿದ್ದ ಮನಸ್ಸು ಎಲ್ಲವನ್ನು ಕಳೆದುಕೊಂಡು ಬರಿಗೈಲಿ ಅಲೆಯುವಂತೆ ಮಾಡಿಬಿಡುತ್ತದೆ. ಅದಕ್ಕೆ ಹೆಣ್ಣು ಮಾಯೆ ಅಂದದ್ದು.
ನಮ್ಮ ಮನೆಯಲ್ಲಿ ಇರುವ ಅಮ್ಮ ಅಕ್ಕ ತಂಗಿಯರು ಇವರ್ಯಾರು ಅಷ್ಟೊಂದು ಪ್ರಭಾವ ಬೀರುವುದಿಲ್ಲ. ಆದರೆ ಹೊರಗಿನಿಂದ ಬಂದ ಅವಳು ಅದೇನು ಮೋಡಿ ಮಾಡುತ್ತಾಳೋ ಗೊತ್ತಿಲ್ಲ. ಒಮ್ಮೆ ಮನಸ್ಸಿಗೆ ಹಿಡಿಸಿಬಿಟ್ಟಳು ಎಂದ ಮೇಲೆ ಅವಳು ಹೇಳಿದ್ದೆಲ್ಲ ವೇದವಾಕ್ಯ. ಅವಳು ತೋರ್ಬೆರಳು ತೋರಿದರೆ ಕ್ಷಣಮಾತ್ರದಲ್ಲಿ ಅವಳೆದುರು ತಂದು ನಿಲ್ಲಿಸುವ ಸಾಹಸ ಪ್ರತಿ ಗಂಡಿನಲ್ಲೂ ಮೈಗೂಡಿಕೊಳ್ಳುತ್ತದೆ. ಹರೆಯದ ಅಮಲಿನಲ್ಲಿರುವವರಿಗಂತೂ ಸುಂದರ ಹೆಣ್ಣು ಅಪ್ಸರೆಯ ರೀತಿ. ಅವಳ ಮುಂದೆ ಬೇರೆ ಯಾರು ನಿಲ್ಲುವುದಿಲ್ಲ ಎಲ್ಲರನ್ನು ನಿವಾಳಿಸಿ ತೆಗೆದುಬಿಡಬೇಕು ಎನ್ನುವಷ್ಟು ಹಚ್ಚಿಕೊಂಡು ಬಿಡುತ್ತಾರೆ. ಅವಳ ವೈಯಾರ ಅವಳ ನಗು ಅವಳ ವೇಷ ಭೂಷಣ ಅವಳ ಮಾತು ಎಲ್ಲವೂ ಮರಳು ಮಾಡುವ ಸಾಧನಗಳು. ಇದರಲ್ಲಿ ನಾಟಕೀಯವಿದೆಷ , ಅವಳ ಸ್ವಾರ್ಥವಿದೆ, ಎನ್ನುವುದೇ ಅರ್ಥವಾಗುವುದಿಲ್ಲ. ಅವಳು ಹಾಕಿದ ಗೆರೆಯನ್ನು ದಾಟದಾಗದಷ್ಟು ಅಸಮರ್ಥರಾಗಿ ಹೋಗಿರುತ್ತಾರೆ. ಅಷ್ಟೊಂದು ಗಾಢವಾದ ಆಕ್ರಮಣವನ್ನು ಅವಳು ಗಂಡಿನ ಮನದಲ್ಲಿ ಹೃದಯದಲ್ಲಿ ಒಟ್ಟಾರೆ ಬದುಕಿನಲ್ಲಿಯೇ ಮಾಡಿಬಿಟ್ಟಿರುತ್ತಾಳೆ. ಅದು ಅವಳ ಅತಿಕ್ರಮಣ ಎಂದು ಎಲ್ಲಿಯೂ ಅನುಮಾನ ಪಡುವ ಮನಸ್ಥಿತಿ ಗಂಡಿಗೆ ಇರುವುದೇ ಇಲ್ಲ. ಅಂತ ವಿಶ್ವಾಮಿತ್ರನೇ ಹೆಣ್ಣಿನ ಮೋಡಿಗೆ ಮರುಳಾದನೆಂದರೆ ಇನ್ನು ಸಾಮಾನ್ಯ ಜನರ ಪಾಡು ಹೇಳುತೀರದು.
ಬದುಕಿನ ಪ್ರತಿ ತಿರುವುಗಳಲ್ಲೂ ಗಂಡಿಗೆ ಹೆಣ್ಣಿನ ಸಹಾಯ ಬೇಕೇ ಬೇಕು. ಅದು ತಾಯಿಯಾಗಿರಲಿ ಸಹೋದರಿಯಾಗಿರಲಿ ಸ್ನೇಹಿತೆಯಾಗಿರಲಿ ಮನದನ್ನೇ ಆಗಿರಲಿ. ಅವಳ ಮಾರ್ಗದರ್ಶನವಿಲ್ಲದೆ ಒಂದು ಹುಲ್ಲು ಕಡ್ಡಿಯನ್ನು ಎತ್ತಿ ಇರುವಷ್ಟು ಸಮರ್ಥನಲ್ಲ ಈ ಗಂಡು. ಆದರೆ ಪ್ರೀತಿಯ ಅಮಲಿನಲ್ಲಿ ತೇಲುತ್ತಿರುವ ಗಂಡಿಗೆ ಅಂಕುಶ ಹಾಕಿ ತನಗೆ ಬೇಕಾದರೆ ರೀತಿಯಲ್ಲಿ ಬಳಸಿಕೊಳ್ಳುವ ಬೆಳೆಸುವ ಉಳಿಸುವ ಅಳಿಸುವ ಎಲ್ಲಾ ಸಾಮರ್ಥ್ಯ ಆ ಹೆಣ್ಣಿಗಿದೆ. ತಾಯಿ ಗೆಳತಿ ಸೋದರಿ ಇವರೆಲ್ಲ ಒಂದು ಹಂತದವರೆಗೆ ಮಾತ್ರ ಗಂಟಿನ ಏಳಿಗೆಗೆ ಬೇಕಾಗುತ್ತಾರೆ. ಅವರದೆಲ್ಲ ನಿಸ್ವಾರ್ಥ ಸಹಕಾರವಾಗಿರುತ್ತದೆ. ಆದರೆ ಹರೆಯದ ಅಮಲಿನಲ್ಲಿ ಪ್ರೀತಿಯ ಖೆಡ್ಡದಲ್ಲಿ ಬಿದ್ದ ಮೇಲೆಯೇ ಇವರ್ಯಾರು ಮುಖ್ಯ ಅನ್ನಿಸುವುದಿಲ್ಲ. ಆಗ ಅವಳೊಬ್ಬಳೇ ಪ್ರಪಂಚ, ಅವಳೊಬ್ಬಳೇ ಬಯಕೆ ಬಿನ್ನಹ. ಅವಳ ಹಿಂದೆ ಎಲ್ಲವನ್ನು ಬಿಟ್ಟು ಹೋಗುವಷ್ಟು ಧಾರಾಳತನ ಈ ಗಂಡಿನದ್ದು. ಅವಳೆಂದರೆ ಏಕೆ ಹೀಗೆ?! ಅವಳ ಮೇಲಿನ ಅವಗಾಹನೆ ತನ್ನನ್ನೇ ತಾನು ಮರೆಸಿ ಬಿಡುತ್ತದೆ. ಅವಳು ನೋಡುತ್ತಾಳೆ ಕಾಡುತ್ತಾಳೆ ಆಡಿಸುತ್ತಾಳೆ ಪೀಡಿಸುತ್ತಾಳೆ ಕೊನೆಗೆ ಎಲ್ಲವೂ ಬರಿದಾಗಿಸಿ ಓಡಿ ಹೋಗುತ್ತಾಳೆ. ಎಲ್ಲ ತರಲು ಜೊತೆ ಇದ್ದ ಅವನು ಕೊನೆಯದರಲ್ಲಿ ಮಾತ್ರ ಒಬ್ಬಂಟಿಯಾಗಿ ಬಿಡುತ್ತಾನೆ. ಒಂದು ಸಣ್ಣ ಸುಳಿವು ಸಹ ಕೊಡದ ಹಾಗೆ ಅವಳು ಅವನನ್ನು ತಿರಸ್ಕರಿಸಿ ಹೋದಾಗ ಇಡೀ ಜಗತ್ತೇ ಶೂನ್ಯವೆನಿಸಿಬಿಡುತ್ತದೆ ಅವನಿಗೆ. ಆಗ ಹೆಣ್ಣಿನ ಮೋಹ ಎಂತಹದ್ದು ಎಷ್ಟೊಂದು ಕೆಟ್ಟದ್ದು ಎಷ್ಟೊಂದು ಕ್ರೂರವಾದದ್ದು ಎಂಬುದು ಅರಿವಿಗೆ ಬರುತ್ತದೆ. ಅಷ್ಟು ಹೊತ್ತಿಗೆ ಆಗಲೇ ಕಾಲ ಮಿಂಚಿ ಹೋಗಿ ಎಲ್ಲ ಕಳೆದುಕೊಂಡು ಬರಿಗೈಯಾಗಿ ಅಕ್ಷರಶಃ ದಿವಾಳಿಯಾಗಿರುತ್ತಾನೆ.
ಏಕೆ ಹೀಗಾಯ್ತು ಎಂಬುದನ್ನು ಆಲೋಚಿಸಲು ಅವನಲ್ಲಿ ವ್ಯವಧಾನವಿಲ್ಲದೆ ದುಶ್ಚಟಗಳ ದಾಸನಾಗಿ ಬೀದಿ ಬೀದಿಗಳಲ್ಲಿ ಭಿಕ್ಷುಕನಂತೆ ಅಲೆಯಬೇಕಾಗುತ್ತದೆ. ಇಷ್ಟೆಲ್ಲಕೂ ಕಾರಣ ಹೆಣ್ಣೆಂಬ ಮಾಯೆ ಅವನು ಒಳಗೆ ಆವರಿಸಿ ಅವನನ್ನು ಹೇಗಿದ್ದವನು ಹೇಗಾದ ಎನ್ನುವ ಇತಿಹಾಸಕ್ಕೆ ಸಾಕ್ಷಿಯನ್ನು ಒದಗಿಸಿ ಮರೆಯಾಗಿ ಹೋಗಿರುತ್ತದೆ. ಹೆಣ್ಣನ್ನು ಬಯಸುವುದು ತಪ್ಪಲ್ಲ ಅದು ಪ್ರಕೃತಿಯ ನಿಯಮ. ಆದರೆ ತಾನು ಬಯಸುವ ಹೆಣ್ಣು ತನಗೆಷ್ಟು ಅವಶ್ಯಕತೆ ಇದೆ ಎಂಬುದನ್ನು ಅರಿತು ಅದಕ್ಕೆ ಹೊಂದುವಂತಹವಳನ್ನು ಆಯ್ಕೆ ಮಾಡಿಕೊಳ್ಳದ ತಪ್ಪಿಗೆ ಇಡೀ ಬದುಕನ್ನೇ ನರಕವಾಗಿಸಿಕೊಳ್ಳುವ ಮತ್ತೆ ಸರಿಪಡಿಸಿಕೊಳ್ಳಲಾಗದ ಮಟ್ಟಕ್ಕೆ ತಲುಪಿ ಬಿಡುತ್ತಾನೆ. ಆಗ ಅವನನ್ನು ಸಮಾಧಾನಿಸಲು ತನ್ನವರೆನ್ನುವ ಬಂಧುಗಳಿರುವುದಿಲ್ಲ ಅವನ ಪರಿಸ್ಥಿತಿಯನ್ನು ನೋಡಿ ಮರುಗುವ ಸಮಾಜ ನಗುವ ವಸ್ತುವನ್ನಾಗಿಸಿ ಆನಂದಿಸುತ್ತದೆಯೇ ಹೊರತು ಅವನ ನೋವಿಗೆ ಮುಲಾಮಂತು ಹಚ್ಚುವುದಿಲ್ಲ. ಹೀಗೆ ಹುಚ್ಚು ಹಿಡಿಸುವುದು ಹೆಣ್ಣಿನ ತಪ್ಪಲ್ಲ. ಅದು ಅವಳ ನಡೆ ನುಡಿಗಳಿಗೆ ಅಂಟಿದ ಶಾಪವಿದ್ದಂತೆ. ಅವಳೇನು ತನ್ನನ್ನೇ ಬಯಸು ಎಂದು ಎಲ್ಲರೂ ಕೇಳಿರುವುದಿಲ್ಲ. ಆದರೆ ಅವಳ ಮನಸಲ್ಲಿ ಏನಿದೆ ಎಂದು ಅರಿಯುವ ಮೊದಲೇ ಗಂಡು ಮನಸೋತು ಬಿಟ್ಟಿರುತ್ತಾನೆ. ಆಗ ಉನ್ಮಾದದಲ್ಲಿ ವಾಸ್ತವದ ಅರಿವು ಇರುವುದಿಲ್ಲ ಭವಿಷ್ಯದ ಯೋಚನೆಯು ಇರುವುದಿಲ್ಲ. ಇರುವಷ್ಟು ಸಮಯ ಅವಳೊಂದಿಗೆ ಕಳೆಯಬೇಕೆಂಬುದೊಂದೆ ಅವನ ಉತ್ಕಟ ಇಚ್ಛೆಯಾಗಿರುತ್ತದೆ. ಅದಕ್ಕಾಗಿ ಏನೇ ಕಷ್ಟ ಬಂದರೂ ಏನೇ ಮಾತುಗಳು ಬಂದರೂ ಯಾರೇ ತನ್ನನ್ನು ಬಿಟ್ಟು ಹೋದರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಏನೆಲ್ಲ ಕಳೆದುಕೊಂಡರು ಅವಳೊಬ್ಬಳು ತನಗೆ ದಕ್ಕಿರುವೆಂದು ಸೊಕ್ಕಿನಿಂದ ಉಕ್ಕಿ ಹೋಗಿರುತ್ತಾನೆ. ಆ ರಭಸದಲ್ಲಿ ಆಕಸ್ಮಿಕವಾಗಿ ಅವಳು ತನ್ನನ್ನು ಎಷ್ಟು ಇಲ್ಲಿಯವರೆಗೆ ಅನುರಕ್ತೆಯಾಗಿರುತ್ತಾಳೆ ಎಂಬುದನ್ನೇ ಆಲೋಚಿಸದಷ್ಟು ಕಳೆದು ಹೋಗಿರುತ್ತಾನೆ.
ಹೆಣ್ಣು ಸೌಂದರ್ಯದಲ್ಲಿ ಅವಳು ಹೇಗಿದ್ದರೂ ಗಂಡಿನ ನೋಟದಲ್ಲಿ ಸ್ಫುರದ್ರೂಪಿಯಾಗಿ ಕಂಡಳೆಂದಾದರೆ ಅವನು ಯಾವುದನ್ನು ಲೆಕ್ಕಿಸುವುದಿಲ್ಲ. ಆದರೆ ಹೆಣ್ಣು ಕೆಲವೊಮ್ಮೆ ಗಂಡಿನ ವ್ಯಕ್ತಿತ್ವ ಅಂತಸ್ತು ಸೌಂದರ್ಯ ದೇಹದಾರ್ಢ್ಯತೆ ಮುಂತಾದ ಮಾನದಂಡಗಳನಿಟ್ಟುಕೊಂಡು ಆ ಮೂಲಕ ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಲ್ಪನೆಯಲ್ಲಿ ಗಂಡಿನ ಮೋಹಕ್ಕೆ ಸಿಲುಕಬಹುದು. ಆದರೆ ಯಾವ ಹೆಣ್ಣು ಪರೀಕ್ಷಿಸದೆ ವಾಸ್ತವ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಒಲಿಯುವುದಿಲ್ಲ. ಪ್ರೀತಿಯ ಅಮಲು ದೈಹಿಕ ವಾಂಚೆಗಳು ಆ ಇಬ್ಬರನ್ನು ಕುರುಡರನ್ನಾಗಿಸಿ ಒಬ್ಬರೊಳಗೊಬ್ಬರು ಕಳೆದುಹೋಗುವ ಹಾಗೆ ಮಾಡಿಬಿಡುತ್ತದೆ. ಅದೆಲ್ಲವೂ ತೀರಿದ ಮೇಲೆ ಇಬ್ಬರ ನಡುವೆ ಮನಸ್ತಾಪ, ತಿರಸ್ಕಾರ ,ಅಧಿಕಾರದ ದರ್ಪ, ಅಸಹಾಯಕತೆ, ಅನಿವಾರ್ಯತೆ, ಹಾಗೂ ಉಸಿರುಗಟ್ಟಿಸುವ ಕಾಳಜಿಗಳು ಸಂಬಂಧಗಳಲ್ಲಿ ಬಿರುಕು ಉಂಟುಮಾಡಲು ಕಾರಣೀಭೂತವಾಗುತ್ತವೆ. ಅಷ್ಟರಲ್ಲಾಗಲೇ ಎಲ್ಲವೂ ಮೀರಿ ಹೋಗಿರುತ್ತದೆ, ಮೋಹದ ಮಾಯೆ ಬಣ್ಣ ಕಳಚಿ ಮಣ್ಣಾಗಿರುತ್ತದೆ. ಆಗ ಪರಸ್ಪರರಲ್ಲಿ ಎಲ್ಲವೂ ತಪ್ಪು ತಪ್ಪಾಗಿ ಗೋಚರಿಸುತ್ತವೆ. ಅದನ್ನು ಹೇಳುವ ಭರದಲ್ಲಿ ಸಂಬಂಧಗಳು ಹಳಸುತ್ತವೆ. ಅನುಬಂಧಗಳು ಕಳಚುತ್ತವೆ. ಆಕಾಂಕ್ಷೆಗಳು ಅರ್ಥ ಕಳೆದುಕೊಳ್ಳುತ್ತವೆ. ಅವಲಂಬನೆ ನೇಣುಗೆಯುತ್ತದೆ. ಸ್ವಾಭಿಮಾನ ಜಾಗೃತವಾಗುತ್ತದೆ. ಅಭಿಮಾನ ಸತ್ತು ಹೋಗಿರುತ್ತದೆ. ಹೆಜ್ಜೆ ಹೆಜ್ಜೆಗೂ ಅನುಮಾನ ಹೊಂಚು ಹಾಕಿ ಕಾದು ಕುಳಿತು ಇಬ್ಬರ ನಡುವೆ ಬಿರುಕು ತರಲು ಹವಣಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಮೈಯೊಳಗೆ ಹೊಕ್ಕ ಮೋಹ ಮಾಯೆ ಮೆಲ್ಲನೆ ಆಚೆ ಹೋಗಿಬಿಟ್ಟಿರುತ್ತದೆ. ವಾಸ್ತವವನ್ನು ಅರಗಿಸಿಕೊಳ್ಳಲಾಗದೆ, ಇಷ್ಟೆಲ್ಲಾ ಆಗಿರುವುದು ಅಂದಿನ ಆ ಮಾಯೆ ಎಂಬುದು ಅರಿವಿಗೆ ಬಂದಾಗ ತನ್ನ ಬಗ್ಗೆ ತನಗೆ ಕೀಳರಿಮೆ ಉಂಟಾಗಿ ಅಕ್ಷರಶಹ ಮೃಗವಾಗುತ್ತಾನೆ. ಅಂದು ಬುದ್ದಿ ಹೇಳಿದವರು ಶತ್ರುಗಳಾಗಿರುತ್ತಾರೆ ಆದರೆ ಇಂದು ಬುದ್ಧಿ ಹೇಳುವವರು ಇಲ್ಲದೆ ಸಂತೈಸುವವರು ಇಲ್ಲದೆ ಅದರಿಂದ ಆಚೆ ಬರಲು ಒದ್ದಾಡುತ್ತಿರುತ್ತಾನೆ. ಅವಳಿಗೋಸ್ಕರ ಎಲ್ಲರನ್ನು ಎಲ್ಲವನ್ನು ದೂರ ಮಾಡಿಕೊಂಡವನಿಗೆ ಈಗ ಅದನ್ನು ಮತ್ತೆ ಪಡೆಯಲಾಗದೆ ಆಗಿರುವ ಗಾಯಕ್ಕೆ ಮುಲಾಮು ಸಿಗದೇ ಬದುಕಿನಲ್ಲಿ ನೋವಿನ ಸುನಾಮಿಯನ್ನೇ ಆಹ್ವಾನಿಸಿಕೊಂಡು ಬಾಳಿನ ವಿನಾಶಕ್ಕೆ ಈಡಾಗುತ್ತಾನೆ.
ಈ ಹೆಣ್ಣಿನ ಮಾಯೆ ಎಂಬುದು ಎಷ್ಟೆಲ್ಲಾ ಅನಾಹುತಗಳನ್ನು ಮಾಡಿ ಹೋದರು ಅದು ಬಿಟ್ಟು ಹೋಗಿರುವ ಕುರುಹುಗಳು ಬದುಕಿನ ಪುಟದಲ್ಲಿ ನೋವಿನ ಅಚ್ಚಳಿಯದ ನೆನಪುಗಳಾಗಿ ಉಳಿದು ಹೋಗುತ್ತವೆ. ಮಾಯೆ ಏನೋ ಬಿಟ್ಟಿರುತ್ತದೆ ಆದರೆ ಅದರ ಛಾಯೆ ಶಾಶ್ವತವಾಗಿ ಬೀರೂರಿ ಬಿಟ್ಟಿರುತ್ತದೆ. ಇಷ್ಟೆಲ್ಲ ಹೇಳಿದ ಮೇಲೆ ಹೆಣ್ಣು ಮಾಯೆ ಎಂಬುದು ಒಪ್ಪಿತವಾದರೂ ಆ ಮಾಯೆಯ ಮೋಡಿಗೆ ಸಿಲುಕದ ಹಾಗೆ ಜಾಣ್ಮೆಯನ್ನು ವಹಿಸುವ ವ್ಯಕ್ತಿ ಬದುಕಲ್ಲಿ ಸಫಲನಾಗುತ್ತಾನೆ. ಎಲ್ಲರಿಗೂ ಮಾದರಿಯಾಗಿರುತ್ತಾನೆ. ಅವನು ಗೇರು ಬೀಜದ ಹಾಗೆ ಹಣ್ಣಿಗೆ ಅಂಟಿಕೊಂಡಿದ್ದರು ಅದರ ಯಾವುದೇ ಬಂಧದಲ್ಲಿ ಬಂಧಿಯಾಗದೆ ಆನಂದದ ಬದುಕನ್ನು ಅನುಭವಿಸುತ್ತಾನೆ. ಪ್ರತಿಯೊಬ್ಬನು ಈ ರೀತಿಯಾಗಿ ಬದುಕಿದಾಗ ಮಾಯೆ ಎಂಬುದು ಬಳಿ ಸುಳಿಯಲಾರದೆ ಹೆಣ್ಣು ಎಂಬುದು ಬದುಕಿನ ಬೆಳಕಾಗಿ ಜೀವನಕ್ಕೆ ನೆರಳಾಗಿ ಪಯಣಕ್ಕೆ ಸಹಚಾರಿಯಾಗಿ ಆನಂದಕ್ಕೆ ಅನುರಾಗಿಯಾಗಿ ಸ್ನೇಹದ ಸೇತುವೆಯಾಗಿ ಪ್ರೀತಿಯ ಚೇತನವಾಗಿ ಏಳುಬೀಳುಗಳಲ್ಲಿ ಸಂಗಾತಿಯಾಗಿ ಸಂತೃಪ್ತ ಜೀವನಕ್ಕೆ ಸಹಧರ್ಮಿಣಿಯಾಗಿ ಸಕಲ ಇಷ್ಟಾರ್ಥಗಳನ್ನು ಪೂರೈಸಿ ಜೀವನ ಆರಂಭದ ಮುನ್ನುಡಿಯೊಂದಿಗೆ ಸಾವಿನ ಸಾಮಿಪ್ಯದಲ್ಲಿ ಸಾರ್ಥಕತೆಯ ಬೆನ್ನುಡಿ ಬರೆಯುತ್ತಾಳೆ. ಬಾಳ ಪುಸ್ತಕದಲ್ಲಿ ನೆಮ್ಮದಿಯ ಸಮೃದ್ಧಿಯನ್ನು ಕಟ್ಟಿಕೊಡುವ ಹೆಣ್ಣೊಬ್ಬಳ ಖುಷಿಯ ಹಸ್ತಾಕ್ಷರದೊಂದಿಗೆ ಬಾಳ ಸಂಪುಟದ ಕಪಾಟಿನಲ್ಲಿ ಅಮರವಾಗಿ ಉಳಿಯಲಿ.
೧೧೨೩ಪಿಎಂ೨೩೦೨೨೦೨೫
ಅಮು ಭಾವಜೀವಿ ಮುಸ್ಟೂರು