Saturday, May 20, 2017

ಕವಿತೆ

*ಪ್ರೀತಿಯ ಹೆಸರೇ ನೀನು*

ಎದೆಯ ಗೂಡೊಳಗೆ
ಮೃದುವಾದ ಭಾವವು ಅರಳಿ
ಚೆಲುವು ಕರೆವ ಆತ್ಮೀಯತೆಯ
ಪ್ರೀತಿಯ ಹೆಸರೇ ನೀನು

ಮುಂಗಾರಿನ ಅಭಿಷೇಕಕೆ
ಮಳೆಬಿಲ್ಲಿನ ಮೈ ಪುಳಕವ
ತಂದ ವರುಣನು ಕರುಣೆಯ
ತೋರುವ ಪ್ರೀತಿಯ ಹೆಸರೇ ನೀನು

ಎಳೆಯ ಗಳಿಕೆಯ ಮೇಲೆ
ಮುತ್ತಿನ ಮಣಿಗಳ ಮಾಲೆ
ತಂದ ಇಬ್ಬನಿಯು
ಹೊಳೆವ ಪ್ರೀತಿಯ ಹೆಸರೇ ನೀನು

ಹಸಿರು ಪೈರಿನ ನಡುವೆ
ಚೆಲ್ಲಾಟವಾಡುವ ತಂಗಾಳಿಯೂ
ಕೂಡ ತಂಪಲ್ಲಿ ಗುನುಗುವ
ಪ್ರೀತಿಯ ಹೆಸರೇ ನೀನು

ಹರಿವ ನೀರಿನ ಬದುಕುವ
ಜುಳುಜುಳು ನಿನಾದವು
ನುಡಿವ ಮಿಡಿವ ರಾಗಾಲಾಪದ
ಪ್ರೀತಿಯ ಹೆಸರೇ ನೀನು

ಮನದ ಮೂಲೆಯಲೆಲ್ಲೋ
ಹಾಯಾಗಿ ಮಲಗಿರುವ
ಭಾವನೆಯ ಎದೆಯಲ್ಲಿ
ಉಲಿವ ಸಂಗೀತದ ಪ್ರೀತಿಯ ಹೆಸರೇ ನೀನು

0220ಪಿಎಂ16052917

*ಅಮುಭಾವಜೀವಿ*

ಕವಿತೆ

*ನಮ್ಮ ಹೋರಾಟ* ನೀ ನನ್ನೊಳಗೆ ನಾ ನಿನ್ನೊಳಗೆ ಎನ್ನುವುದೆಲ್ಲಾ ಬರೀ ಮಾತು ಪ್ರೀತಿಯಿಂದ ಪ್ರೀತಿಯಿಂದ ಬದುಕುವುದು ಅದು ಇಬ್ಬರಿಗೂ ಗೊತ್ತು ನನಗಾಗಿ ನೀನು ನಿನಗಾಗಿ ನಾನು ಬದುಕುವುದು ಅನಿವಾರ್ಯವೇ ಇಲ್ಲಿ ತುಂಬಾ ಹಚ್ಚಿಕೊಂಡಿರುವೆ ನಿನ್ನನ್ನು ಊಹಿಸಿಕೊಳ್ಳಲಾರೆ ನೀಡಿರುವ ಬದುಕನ್ನು ಎದೆಯ ಭಾವಗಳಿಗೆಲ್ಲ ಉಸಿರಾಗಿ ಬಂದೆ ನೀ ಕಂಡ ಕನಸುಗಳ ಹೆಸರಾಗಿ ಕಲ್ಪನೆಯ ಮೂಸೆಯಲ್ಲಿ ಅರಳಿದ ಹೂ ನೀನು ವಾಸ್ತವದ ಬೆಳಕಾಗಿ ಪುಳಕವಿತ್ತೆ ಜಾತಿಯಾಚೆಗೂ ನನ್ನನ್ನು ಜತನದಿ ಜೋಪಾನ ಮಾಡಿಕೊಂಡು ಬಂದೆ ಜೀವಮಾನದ ಕನಸು ನನಸಾಗಿ ನಿನ್ನೆ ತಾಯ್ಮಡಿಲಲಿ ಮಲಗಿದೆ ನಾನು ನೀನಿನ ಅಂತರವ ದೂಡಿ ನಮ್ಮಿಬ್ಬರೊಲವ ಜೊತೆ ಮಾಡಿ ಜಗದೆದುರು ಜಯಿಸ ಹೊರಟ ನಮ್ಮಿಬ್ಬರದು ನಿತ್ಯ ಸತ್ಯದ ಹೋರಾಟ 0713ಎಎಂ17052017 *ಅಮುಭಾವಜೀವಿ*

ಕವಿತೆ

*ನನ್ನವರ ಗುಡಿಸಲೊಳಗೆ* ನಾನು ಅರಳಬೇಕು ನನ್ನವರ ಗುಡಿಸಲೊಳಗೆ ಬೆಳಕಾಗಿ ಉಳಿಯಬೇಕು ಮೌಢ್ಯತೆಯ ಅಳಿಯಬೇಕು ಶಿಕ್ಷಣದ ನೇಗಿಲು ಹಿಡಿದು ನನ್ನವರ ಎದೆಯೊಳಗೆ ಅಕ್ಷರಗಳ ಸಾಕ್ಷರತೆಯ ಬೀಜ ಬಿತ್ತಬೇಕು ಅನಕ್ಷರತೆಯ ಕಿತ್ತು ಬಿಸುಟಬೇಕು ಶತಮಾನಗಳಿಂದ ಅಸ್ಪೃಶ್ಯತೆಯ ಕೊಳಕಿನಲಿ ಮಿಂದಿದ್ದು ಸಾಕೆನ್ನ ಜನ ನವಯುಗದ ಹೊಸದಿಶದತ್ತ ತೆರೆದುಕೊಳ್ಳಬೇಕೆಮ್ಮವರ ಮನ ಜಾತಿಗೋಡೆಯ ಕೆಡವಿ ಪ್ರೀತಿಯಿಂದಲಿ ಮೈದಡವಿ ಮನುಷ್ಯರಾಗಿ ಬದುಕಲು ಮಾನವೀಯ ಮೌಲ್ಯ ಬೆಳೆಸಬೇಕು ನನ್ನವರ ಹಸಿವಳಿದು ದುಡಿಯುವ ಕೈಗಳು ಬೇಡಿ ತಿನ್ನದಂತೆ ಜೀತಮುಕ್ತಗೊಳಿಸಿ ಭವಿಷ್ಯವನು ಬೆಳಗಬೇಕು ಸಾಕಿನ್ನು ನನ್ನವರಿಗೀ ಶಾಪ ಬೆಳಗಲಿ ವಿಮೋಚನೆಯ ದೀಪ ಸ್ವಾತಂತ್ರ್ಯದ ಹಣತೆ ಹಚ್ಚಿ ನೆಮ್ಮದಿಯ ಬದುಕು ನಾ ನೀಡಬೇಕು 0116ಪಿಎಂ18052017 *ಅಮುಭಾವಜೀವಿ*

ಕವಿತೆ

**ನೀನಿಲ್ಲದ ಕೊರತೆ*

ಈ ಏಕಾಂತವು ಕೊಲ್ಲುತಿದೆ
ಸಂಗಾತಿ ನೀ ನನ್ನೊಂದಿಗಿಲ್ಲದೆ
ಈ ಇರುಳು ಕೂಡ ಮರುಗುತಿದೆ
ನೀರಿರದ ಮರಳಿನಂತಾಗಿದೆ

ನಿನ್ನೊಲವಿನ ಸ್ಪರ್ಶ ಇಂದಿಲ್ಲ
ನಿನ್ನ ನಗುವಿನ ಹರ್ಷ ಮರೆತಿಲ್ಲ
ಇರುಳಲಿ ಹೊಳೆವ ತಾರೆಗಳಂತಹ
ಆ ನಿನ್ನ ನಯನಗಳ ಬೆಳಕಿಲ್ಲ

ಹಸಿರು ಪೈರು ನರ್ತಿಸಿದಂತೆ
ತಂಗಾಳಿಗೆ ನಿನ್ನ ಮುಂಗುರುಳ ಲಾಸ್ಯ
ಇಂದೇಕೋ ನನ್ನನೊಂಟಿಯಾಗಿಸಿ
ಸುಯ್ಯೆನ್ನುತ ತಂಗಾಳಿಯೂ ಮಾಡಿದೆ ಅಪಹಾಸ್ಯ

ನೀನಿರದ ಈ ಹಾಸಿಗೆಯಲಿ
ಬರಿ ಮುಳ್ಳಿನ ಕಲರವ ಕೇಳಿದೆ
ನಿದ್ದೆ ಹತ್ತದ ಕಣ್ಣುಗಳಲ್ಲಿ
ನಿನ್ನದೇ ಬಿಂಬ ಮೂಡಿ ಕಾಡಿದೆ

ಬೆಳದಿಂಗಳು ಕೂಡ ಬಿಸಿಯಾಗಿದೆ
ಈ ವಿರಹ ಸವಿನಿದ್ರೆಯ ಕಸಿದಿದೆ
ನಿನ್ನ ನೆನಪಿನ ಕೌದಿ ಹೊದ್ದರೂ
ನೀನಿಲ್ಲದ ಕೊರತೆಯ ಮೊರೆತ ಕೇಳುತಿದೆ

ಸಹಿಸಲಾರೆ ಈ ಒಂಟಿತನ
ಬರಿದಾಗಿದೆ ಹೃದಯ ಸಿಂಹಾಸನ 
ನೀ ಬಂದು ನೀಗು ಈ ವಿರಹ
ಸದಾ ನೀನಿರು  ನನ್ನ ಸನಿಹ

1146ಪಿಎಂ20052017
*ಅಮುಭಾವಜೀವಿ*

ಮೌನದಿ ತೆರೆದಿದೆ

*ಮೌನದಿ ತೆರೆದಿದೆ*

ಬೆಳಕಿನ ಸಿರಿಯನು ತಂದ ನೇಸರ
ನಳನಳಿಸುತಿದೆ ನೋಡಿಲ್ಲಿ ಪರಿಸರ
ಹಕ್ಕಿಗಳ ಚಿಲಿಪಿಲಿ ಕಲರವ
ಎಲೆಗಳ ಮೇಲೆ ಇಬ್ಬನಿಯ ಉತ್ಸವ

ಇನ ಬಂದನು ದಿನ ತಂದನು
ಬೆಳಗಾಯಿತು ಎಲ್ಲ  ಏಳಿರೆಂದನು
ತಂಗಾಳಿಯು ತುಸು ಮೆಲ್ಲ ಬೀಸಲು
ಗಿಡಮರ ತಲೆಬಾಗಿಹವು ನಮಸ್ಕರಿಸಲು

ಹರಿಯುವ ನದಿಯ ನೀರಿನ ನರ್ತನ
ಸವಿದನದೊ ರವಿ ಸಾಗರದಲೆಗಳ ಚುಂಬನ
ಮೊಗ್ಗು ಬಿರಿದು ದಳವ ತೆರೆದು
ಸೌಂದರ್ಯ ಸೌಗಂಧವ ಹಂಚಿತೆಲ್ಲೆಡೆಯೂ

ಹೊನ್ನರಥವನೇರಿ ಬರುವ ಭಾಸ್ಕರನ
ಹೊಸಚೈತನ್ಯದಿ ಸ್ವಾಗತಿಸಿತು ನಿಸರ್ಗ
ಇರುಳ ಕಳೆದು ಬೆಳಕು ಹರಿದು
ಇಳೆಯ ಚೆಲುವಾಯಿತು ಸ್ವರ್ಗ

ಏಳು ಮಾನವ  ಇನ್ನೇಕೆ ತಡ
ನೀನೂ ಸೇರಿಕೋ ಅದರ ಸಂಗಡ
ದಿನವಿದು ಮೌನದಿ ತೆರೆದಿದೆ
ನಿನ್ನುಪಯೋಗಕೆ ಕಾದಿದೆ

0639ಎಎಂ21052017
*ಅಮುಭಾವಜೀವಿ*

💐🌺🌱🌴🌿🌞👍🙏

ಅದಾವ ಶಕ್ತಿ ಕಾಪಾಡಬೇಕೋ

*ಅದಾವ ಶಕ್ತಿ ಕಾಪಾಡಬೇಕೋ*

ಭ್ರಷ್ಟ ದುಷ್ಟರು ಎಲ್ಲಾ
ಕೈಗೆ ಸಿಗದೆ ಮೆರೆಯುತಿಹರು
ದಕ್ಷ ಅಧಿಕಾರಿಗಳೆಲ್ಲಾ
ಅನುಮಾನಾಸ್ಪವಾಗಿ ಸಾಯುತಿಹರು

ಸ್ವಾತಂತ್ರ್ಯದ ಸಮಾನತೆ ಎಂಬುದು
ಸಂವಿಧಾನದ ಆಶಯವಾದರೆ
ಅಧಿಕಾರದಮಲೇರಿದ ನಾಯಕರು
ಅಧಿಕಾರಿಗಳ ಹಿಂಸಿಸಿ ದೌರ್ಜನ್ಯವೆಸಗುತಿಹರು

ಭ್ರಷ್ಟಾಚಾರದ ಕಬಂಧ ಬಾಹು
ಎಲ್ಲವನ್ನೂ ಕಬಳಿಸುತ್ತಿದೆ
ಸಾಮಾಜಿಕ ನ್ಯಾಯಕ್ಕೆ ಹೋರಾಡುವ
ಅಧಿಕಾರಿಗಳ ಬಲಿಯಾಗುತಿದೆ

ಮಾಫಿಯಾಗಳೇ ಇಂದು ಆಳುತಿವೆ
ಅಮಾಯಕರ ಹೆಣ ಬೀಳುತಿವೆ
ಕಾನೂನು ಕಣ್ಮುಚ್ಚಿ ಕೂತಿದೆ
ಪ್ರಾಮಾಣಿಕತೆ ಬೇಸತ್ತು ಸೋತಿದೆ

ನಿಷ್ಟಾವಂತರಿಗೆ ರಕ್ಷಣೆಯೇ ಇಲ್ಲ 
ಕಳ್ಳ ಖದೀಮರಿಗೆ ಶಿಕ್ಷೆಯೇ ಆಗುತಿಲ್ಲ
ಅಧರ್ಮದ ಕರ್ಮ ಕಳೆವುದು ಯಾವಾಗ
ಧರ್ಮ ಸಂಸ್ಥಾಪನೆಗೊಳ್ಳುವುದೇ ಈಗ

ದಕ್ಷತೆ ಮೆರೆದವರು ರಕ್ಷಿಸಲು
ಅದಾವ ಶಕ್ತಿ ಕಾಪಾಡಬೇಕೋ
ಅದೇ ಭ್ರಷ್ಟರನು ಬಚ್ಚಿಟ್ಟಿದೆ
ಅಮಾಯಕರ ದಮನ ಮಾಡುತಿದೆ.

1242ಪಿಎಂ20052916
*ಅಮುಭಾವಜೀವಿ*