Saturday, May 20, 2017

ಕವಿತೆ

**ನೀನಿಲ್ಲದ ಕೊರತೆ*

ಈ ಏಕಾಂತವು ಕೊಲ್ಲುತಿದೆ
ಸಂಗಾತಿ ನೀ ನನ್ನೊಂದಿಗಿಲ್ಲದೆ
ಈ ಇರುಳು ಕೂಡ ಮರುಗುತಿದೆ
ನೀರಿರದ ಮರಳಿನಂತಾಗಿದೆ

ನಿನ್ನೊಲವಿನ ಸ್ಪರ್ಶ ಇಂದಿಲ್ಲ
ನಿನ್ನ ನಗುವಿನ ಹರ್ಷ ಮರೆತಿಲ್ಲ
ಇರುಳಲಿ ಹೊಳೆವ ತಾರೆಗಳಂತಹ
ಆ ನಿನ್ನ ನಯನಗಳ ಬೆಳಕಿಲ್ಲ

ಹಸಿರು ಪೈರು ನರ್ತಿಸಿದಂತೆ
ತಂಗಾಳಿಗೆ ನಿನ್ನ ಮುಂಗುರುಳ ಲಾಸ್ಯ
ಇಂದೇಕೋ ನನ್ನನೊಂಟಿಯಾಗಿಸಿ
ಸುಯ್ಯೆನ್ನುತ ತಂಗಾಳಿಯೂ ಮಾಡಿದೆ ಅಪಹಾಸ್ಯ

ನೀನಿರದ ಈ ಹಾಸಿಗೆಯಲಿ
ಬರಿ ಮುಳ್ಳಿನ ಕಲರವ ಕೇಳಿದೆ
ನಿದ್ದೆ ಹತ್ತದ ಕಣ್ಣುಗಳಲ್ಲಿ
ನಿನ್ನದೇ ಬಿಂಬ ಮೂಡಿ ಕಾಡಿದೆ

ಬೆಳದಿಂಗಳು ಕೂಡ ಬಿಸಿಯಾಗಿದೆ
ಈ ವಿರಹ ಸವಿನಿದ್ರೆಯ ಕಸಿದಿದೆ
ನಿನ್ನ ನೆನಪಿನ ಕೌದಿ ಹೊದ್ದರೂ
ನೀನಿಲ್ಲದ ಕೊರತೆಯ ಮೊರೆತ ಕೇಳುತಿದೆ

ಸಹಿಸಲಾರೆ ಈ ಒಂಟಿತನ
ಬರಿದಾಗಿದೆ ಹೃದಯ ಸಿಂಹಾಸನ 
ನೀ ಬಂದು ನೀಗು ಈ ವಿರಹ
ಸದಾ ನೀನಿರು  ನನ್ನ ಸನಿಹ

1146ಪಿಎಂ20052017
*ಅಮುಭಾವಜೀವಿ*

No comments:

Post a Comment