Thursday, May 30, 2019

ಪ್ರೀತಿಯೆಂದರೆ,,,,,,,?

*ಪ್ರೀತಿಯೆಂದರೆ...............?*

ಪ್ರೀತಿ ಎಂಬುದು ಒಂದು ಭಾವನೆ. ಪ್ರತಿ ಜೀವದ ಚೈತನ್ಯ ಸ್ವರೂಪ ಈ ಪ್ರೀತಿ. ಈ ಜಗತ್ತು ನಿಂತಿರುವುದು, ಈ ಜಗತ್ತು ಬಯಸುವುದು , ಈ ಜಗತ್ತು ಆರಾಧಿಸುವುದು, ಈ ಜಗತ್ತಿನ ಅಡಿಪಾಯ ಆಗಿರುವುದು ಪ್ರೀತಿ ಮಾತ್ರವೇ. ಪ್ರತಿಯೊಂದು ಜೀವಿಯು ಪ್ರೀತಿಯ ಮಡಿಲಲ್ಲಿ ಆಡಿ ಬೆಳೆದು ಬದುಕಿನ ಗುರಿಯನ್ನು ಮುಟ್ಟಿರುತ್ತದೆ. ಸೂರ್ಯ ಹುಟ್ಟಿದಾಗ ಆ ಕಿರಣಗಳ ಸೋಕಿ ಮೊಗ್ಗು ಹೂವಾಗಿ ಅರಳುತ್ತದೆ. ಅರಳಿದ ಹೂವಿನಲ್ಲಿ ದುಂಬಿ ಬಂದು ಮಕರಂದವನ್ನು ಹೀರುತ್ತವೆ. ಆ ಸವಿಯಾದ ಜೇನನ್ನು ಮನುಷ್ಯ ಅಪಹರಿಸಿ ಸುಖಿಸುತ್ತಾನೆ. ಪ್ರೀತಿ ಜಗವನ್ನು ಆಳುತ್ತದೆ. ತಾರತಮ್ಯರಹಿತ ಬದುಕನ್ನು ಪಡೆಯಲು ಪರಸ್ಪರರು ಪ್ರೀತಿಸಿದರೆ ಸಾಕು.

ಪ್ರೀತಿ ಯಾವಾಗಲೂ ಏನನ್ನೂ ಕೇಳುವುದಿಲ್ಲ ಬದಲಾಗಿ ಇನ್ನು ತಾನೆ ಕೊಡುತ್ತದೆ ಎನ್ನುವ ಅನಾಮಿಕನ ಮಾತಿನಂತೆ ಪ್ರೀತಿಗಾಗಿ ನಾವಲ್ಲಾ ನಮಗಾಗಿ ಪ್ರೀತಿ ಮಾತ್ರ ಇದೆ. ಈ ಜಗತ್ತು ಪ್ರೀತಿಯನ್ನು ಮರೆತ ಕ್ಷಣ ರಣರಂಗವಾಗಿ ರಕ್ತದ ಕೋಡಿ ಹರಿಸುತ್ತದೆ. ಪ್ರೀತಿಗೆ ಯಾವ ಅಳತೆಗಳು ಇಲ್ಲ. ಅದು ಅನಂತ, ಇತರರಿಗೆ ಅದನ್ನು ಕೊಟ್ಟಷ್ಟು ನಮ್ಮಲ್ಲಿ ಅಧಿಕಗೊಳ್ಳುವ ಸಂಪತ್ತು ಪ್ರೀತಿ. ಆ ಪ್ರೀತಿ ಹೃದಯದಲ್ಲಿ ಸಂತೃಪ್ತಿ , ಸಮಾಧಾನ , ಸಹಬಾಳ್ವೆ, ಸಂಬಂಧ ಅನುಬಂಧ, ನೋವು ನಲಿವುಗಳನ್ನು ಮೆಟ್ಟಿ ನಿಲ್ಲುವ ಬದುಕಿನ ಅನುಸಂಧಾನವೇ ಪ್ರೀತಿ.

   ಪ್ರೀತಿಯೆಂದರೆ ಕೆಲವರು ಅಸಹ್ಯ ಪಟ್ಟುಕೊಳ್ಳುತ್ತಾರೆ. ಅದರಿಂದ ಮಾರು ದೂರ ನಿಲ್ಲುತ್ತಾರೆ , ಬೆಚ್ಚಿಬೀಳುತ್ತಾರೆ. ಅಷ್ಟರಮಟ್ಟಿಗೆ ಪ್ರೀತಿಯೆನ್ನುವುದು ಅರ್ಥಹೀನವಾಗಿದೆ . ನೋಡುವ ಕಣ್ಣಿಗೆ ಹಗುರವಾಗಿದೆ. ಹೀಗಿದ್ದರೂ ಪ್ರೀತಿ ಪ್ರೀತಿಯಾಗಿಯೇ ಉಳಿದಿದೆ. ಪ್ರೀತಿ ಎಂದರೆ ಕೇವಲ ದೇಹದ ಆಕರ್ಷಣೆಯಲ್ಲ. ನಿಜವಾದ ಪ್ರೀತಿ ಮನಸ್ಸಿಗೆ ಸಂಬಂಧಿಸಿರುತ್ತದೆ. ಹೃದಯ ಮತ್ತು ಮನಸ್ಸುಗಳ ಮಧುರ ಮಾತು ಮತ್ತು ಮೌನವಷ್ಟೇ. ಏಕೆಂದರೆ ಪ್ರೀತಿ ಮನಸ್ಸು ಮತ್ತು ಹೃದಯಕ್ಕೆ ಸಂಬಂಧಿಸಿದ್ದಾಗಿರುತ್ತದೆ.

     ಪರಿಶುದ್ಧ ಪ್ರೀತಿ ಯಾವತ್ತೂ ಯಾರನ್ನೂ ನೋಯಿಸುವುದಿಲ್ಲ. ಚಿಕ್ಕ ನೋವನ್ನು ಕೊಡುವುದು ಸಹ ಪ್ರೀತಿಯಾಗಿರುವುದಿಲ್ಲ. ನಿಜವಾದ ಪ್ರೀತಿ ಯಾವಾಗಲೂ ತ್ಯಾಗವನ್ನು ಬೇಡುವುದಿಲ್ಲ. ಪ್ರೀತಿ ಎನ್ನುವುದು ಪ್ರದರ್ಶನದ ವಸ್ತುವಲ್ಲವೇ ಅಲ್ಲ. ಕೈ ಕೈ ಹಿಡಿದು ನಡೆದಾ ಕ್ಷಣ , ಅಪ್ಪಿ ಖುಷಿಯಿಂದ ಕುಣಿದ ಕ್ಷಣ ಅದನ್ನು ಪ್ರೀತಿ ಎನ್ನಲಾಗದು. ಪ್ರೀತಿಯ ಹೃದಯಕ್ಕೆ ಸಂಬಂಧಿಸಿದ್ದು ಮನಸ್ಸಿಗೆ ಆತುಕೊಂಡು ಇರುವಂತದ್ದು. ಪರಿಶುದ್ಧ ಪ್ರೀತಿ ಯಾವತ್ತೂ ನಿಷ್ಟೆ ಮತ್ತು ನಂಬಿಕೆಯನ್ನು ಮಾತ್ರ ಬಯಸುತ್ತದೆ. ಪ್ರೀತಿ ಎನ್ನುವುದು ಸೆಕ್ಸ್ ಅಲ್ಲ. ಬದಲಾಗಿ ಅದು ಬದುಕಿನ ಕೊನೆಯವರೆಗೂ ಆನಂತರವೂ ಉಳಿಯುವ ಆತ್ಮೀಯ ಅನುಸಂಧಾನ. ಪರಿಶುದ್ಧ ಪ್ರೀತಿ ಖುಷಿ ಕೊಡುತ್ತದೆ ಅಭಿಮಾನದಿಂದ ನೋಡುವಂತೆ ಮಾಡುತ್ತದೆ. ಹೊಸ ಬಾಂಧವ್ಯಕ್ಕೆ ಮುನ್ನುಡಿಯಾಗುತ್ತದೆ.

*ಪ್ರೀತಿಯೆನ್ನುವುದು ಹೃದಯದ ಆಳದಲ್ಲೆಲ್ಲೋ ಸುಮ್ಮನೆ ಹುಟ್ಟಿ ಮೈ ಮನಸ್ಸನ್ನೆಲ್ಲ ಆವರಿಸಿಕೊಂಡು ಬಿಡುವ ಒಂದು ದಟ್ಟವಾದ ಭಾವನೆ* ಪ್ರೀತಿ ಯಾವತ್ತೂ ಫೋರ್ಸ್ ನಿಂದ ಹುಟ್ಟುವುದಿಲ್ಲ. ಅದೆಂತಹ ದೊಡ್ಡ ಕಾರಣವೇ ಇರಲಿ, ಅದೆಷ್ಟು ಮೇಲಿನಿಂದ ಬೇಕಾದರೂ ಬಂದು ಬೀಳಲಿ ಹೃದಯದಲ್ಲಿ ಹುಟ್ಟಿದ ಪ್ರೀತಿ ಚೂರಾಗುವುದಿಲ್ಲ ಬೇರಾಗುವುದಿಲ್ಲ.

        *ಪ್ರೀತಿಯೆಂದರೆ ಪ್ರೀತಿಯೇ ಹೊರತು ಬೇರೆ ಅರ್ಥವಿಲ್ಲ* ಈ ಪ್ರೀತಿ ನಮ್ಮ ಬದುಕಿನ ಸುಖ ನೆಮ್ಮದಿ ಸಾರ್ಥಕತೆ ಸಂಭ್ರಮ ಹೀಗೆ ಪಾಸಿಟಿವ್ ಎನ್ನುವುದೆಲ್ಲ ಏನಿದೆಯೋ ಅದೆಲ್ಲಕ್ಕೂ ಪ್ರೀತಿಯೇ ಕಾರಣ. ಇದು ನಮ್ಮ ಮನಸ್ಥಿತಿಯ ಪ್ರತಿಬಿಂಬವೇ ಹೊರತು ಬೇರೇನೂ ಅಲ್ಲ. ಸಂಯಮವನ್ನು ಕಾಪಾಡಿಕೊಂಡಿದ್ದೇ ಹೌದಾದರೆ ಅದು ಯಾವತ್ತೂ ಯಾರ ಬದುಕನ್ನು ಹಾಳು ಮಾಡುವುದಿಲ್ಲ. ಹುಚ್ಚು ಬಯಕೆಗಳಿಗೆ ಪ್ರೀತಿಯ ಮುಖವಾಡ ತೊಡಿಸಿ ಅದನ್ನು ಪ್ರೀತಿ ಎಂದು ತೋರಿಸುವ ಕೆಟ್ಟ ಮನಸ್ಸುಗಳಿಂದ ಪ್ರೀತಿಗೆ ಒಂದಿಷ್ಟು ಕೆಟ್ಟ ಹೆಸರು ಅಂಟಿಕೊಂಡಿದೆಯೇ ಹೊರತು ಪ್ರೀತಿ ಯಾವತ್ತಿಗೂ ಪ್ರೀತಿಯಾಗಿ ಉಳಿದಿರುತ್ತದೆ ನಮ್ಮ ಬದುಕನ್ನು ಬೆಳೆಸಿ ಬೆಳಗುತ್ತದೆ. ಪ್ರೀತಿಯೆನ್ನುವುದು ಯಾವತ್ತಿದ್ದರೂ ಖುಷಿಕೊಡುತ್ತದೆ. ನಮ್ಮ ನಂಬಿಕೆ ಎಷ್ಟು ಗಟ್ಟಿಯಾಗಿರುತ್ತದೆಯೋ ನಮ್ಮ ಪ್ರೀತಿಯು ಸಹ ಅಷ್ಟೇ ಗಟ್ಟಿಯಾಗಿರುತ್ತದೆ.

       ಬದುಕು ಬದುಕಾಗಿಯೇ ಇರಬೇಕೆಂದರೆ ಬದುಕಿನಲ್ಲಿ ಪ್ರೀತಿ ತುಂಬಿರಬೇಕು. ಆದ್ದರಿಂದ ಬದಕಿನಲ್ಲಿ ಏನು ಇಲ್ಲದೇ ಇದ್ದರೂ ಪ್ರೀತಿ ಇರಬೇಕು. ನಾವು ಸೋತಾಗ ಗೆಲ್ಲಿಸುವುದು, ಅತ್ತಾಗ ಕಣ್ಣೀರು ಒರೆಸಿ ಸಮಾಧಾನ ಮಾಡುವುದು , ಸೊರಗಿದೆ ಬದುಕಿಗೆ ಉಲ್ಲಾಸ ತುಂಬುವುದು, ಕೊನೆ ಎಂದುಕೊಂಡ ಬದುಕಿಗೆ ಹೊಸ ದಿಕ್ಕು ತೋರಿಸುವುದು, ಈ ಬದುಕಿನಲ್ಲಿ ಪ್ರೀತಿ ಏನೆಲ್ಲಾ ಆಗಿಬಿಡುತ್ತದೆ. ಆದರೆ ಈ ಪ್ರೀತಿ ಎಂಬುದು ಕೇವಲ ಗಂಡು-ಹೆಣ್ಣಿನ ಆಕರ್ಷಣೆ ಯಲ್ಲ . ಅದು ಈ ಜೀವಜಗತ್ತಿನ ಪ್ರತಿಯೊಂದು ಹಂತದಲ್ಲೂ ಪರಸ್ಪರ ಕೊಡು-ಕೊಳ್ಳುವಿಕೆಯ ಮುಖಾಂತರ ಬದುಕಿನ ರೀತಿನೀತಿಗಳನ್ನು ಅರಿತು ನಡೆಯುವ ಪರಿಪಾಠವಾಗಿದೆ. ಪ್ರೀತಿ ಕೇವಲ ಮನುಷ್ಯರಿಗೆ ಸಂಬಂಧಿಸಿದ್ದಲ್ಲ. ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಅಂತಃಕರಣವೇ ಪ್ರೀತಿಯಾಗಿದೆ. ನಾವು ಎಲ್ಲರನ್ನೂ ಪ್ರೀತಿಸೋಣ ಎಲ್ಲವನ್ನೂ ಪ್ರೀತಿಸೋಣ.  ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕೋಣ.

ಅಮು ಭಾವಜೀವಿ

ಅಧಾರ :- *ಓ ಮನಸೇ*  ಮತ್ತು *ನಿಮ್ಮೆಲ್ಲರ ಮಾನಸ*

Tuesday, May 21, 2019

ಕವನ

*14 ವರ್ಷ ಹಳೆಯ ಕವಿತೆ*

*ಕೂಲಿಗ ನಾ ಸಾಲಿಗ*

ಸಾಲಿಗನು ನಾನು
ಕೂಲಿಗನು ನಾನು
ಈ ಜಗದ ಬಾಳೊಳಗೆ
ಇರುವ ಮೂರು ದಿನದೊಳಗೆ

ಹೆತ್ತು ಹೊತ್ತ ತಾಯಿ ಋಣದ ಸಾಲ
ಸಾಕಿ ಬೆಳೆಸಿದ ತಂದೆ ಋಣದ ಸಾಲ
ವಿದ್ಯೆ ಕೊಟ್ಟ ಗುರುವಿನ ಸಾಲದ
ಹೊರೆ ಹೊತ್ತ ಬಾಲನು ನಾನು

ಹೊತ್ತ ಭೂಮಿಯ ಸಾಲ
ಕುಡಿಯುವ ಗಾಳಿ ನೀರಿನ ಸಾಲ
ತಿನ್ನೋ ಅನ್ನ ಹೋಗೋ ಮಣ್ಣ
ಋಣಗಳ ಸಾಲ ತೀರಿಸ ಬಂದವ ನಾನು

ಅನ್ನಕ್ಕಾಗಿ ವೃತ್ತಿ ಹಿಡಿದು
ನಂಬಿದವರಿಗೆ ಆಸರೆಯಾಗಿ
ಬಾಳ ಬಂಡಿಯನೆಳೆವ
ಕೂಲಿಗನು ನಾನು

ಪ್ರೇಮ ಕಾಮಗಳಿಂದ ಒಂದಾಗಿ
ಕುಲಕೊಬ್ಬ ವಾರಸುದಾರನನಿತ್ತು
ಭವಿಷ್ಯದ ಬೆಳಕಿಗಾಗಿ
ಹಗಲಿರುಳು ದುಡಿಯುವ ಕೂಲಿಗನು ನಾನು

544ಪಿಎಂ01092005
ಅಮು ಭಾವಜೀವಿ

*ಜೀವ ಚೇತನ*

ಮಾಗಿ ಚಳಿಯ ಮಬ್ಬಿನಲ್ಲಿ
ಬೆಳ್ಳಿ ಮೂಡೋ ಹೊತ್ತಿನಲ್ಲಿ
ಉಷೆಯ ರಥವನೇರಿ ಬಂದ
ಜಗವ ನಿದ್ರೆ ಮಂಪರಿನಿಂದೆಬ್ಬಿಸಿ
ಏಳಿ ಎದ್ದೇಳಿರೆಂದು ಎಚ್ಚರಿಸಿ
ಹೊಂಗಿರಣ ಚಾಚಿ ಬಂದ

ಮೊಗ್ಗುಗಳ ಮೈ ಸವರಿ
ದಳಗಳ ಮೆಲ್ಲ ಬಿಡಿಸಿ
ಸೌಂದರ್ಯದ ಕದ ತೆರೆದ
ತಬ್ಬಿ ಹಿಡಿದ ಎಲೆಗಳಿಗೆ
ಎಳೆ ಬಿಸಿಲ ಬಿಸಿ ಮುಟ್ಟಿಸಿ
ಬೆಳಗಾಯಿತೇಳಿರೆಂದ

ಶಾಂತ ಕಡಲಿನೆದೆಯಲಿ
ಧುಮುಕಿ ಹೊಂಬಣ್ಣ ಬೆರೆಸಿ
ಅಲೆಗಳಿಂದ ಸಂದೇಶ ಕಳುಹಿಸಿದ
ಉಲ್ಲಾಸದಿ ತೆರೆಗಳೆಲ್ಲ ಸಂಭ್ರಮದಿ
ದಡವ ಮುಟ್ಟಿ ಹಿಂದೆ ಓಡಲು
ಬಿಸಿಲ ಝಳ ಏರಿಸಿ ನಡೆದ

ದಿನದ ಕಾಯಕ ಪ್ರಾರಂಭಿಸಿ
ಜಗದ ಕಾರ್ಯವ ನೆನಪಿಸಿ
ಎಲ್ಲಕ್ಕೂ ಜೀವ ಚೇತನ ತಂದ
ಪ್ರಕೃತಿಯ ಈ ವಿಸ್ಮಯ
ಪ್ರತಿ ಕ್ಷಣವೂ ತೆರೆದಿಡುತ
ದಿನದೊಡೆಯ ತಾ ಮೆರೆದ

0702ಎಎಂ12012019
*ಅಮು ಭಾವಜೀವಿ*

*ಭಾರತದ ಸೂರ್ಯ ಸ್ವಾಮಿ ವಿವೇಕಾನಂದರ ಜನ್ಮದಿನದ ಹಾರ್ದಿಕ ಶುಭಾಶಯಗಳು ಶುಭೋದಯದೊಂದಿಗೆ*

*ಯಾರು ಕಲಿಸಿದವರು*

ಓ ಬೆಳ್ಳಿ ಮೋಡಗಳೇ
ನಿಮ್ಮನ್ನು ಅಲ್ಲಿ ತಳ್ಳುವವರ್ಯಾರು
ಓಡುವ ಪ್ರತಿ ಕ್ಷಣ ಒಂದೊಂದು
ಚಿತ್ತಾರ ಬಿಡಿಸುವವ ಅವನಾರು

ನೀಲಿ ಬಾನಿನ ಒಡೆಯ
ಆ ಸೂರ್ಯನಿಗೆ ಅಡ್ಡ ನಿಲ್ಲುವಿರಿ
ಬಿಸಿಲಲ್ಲಿ ಬೆಂದು ಬಳಲಿದವರಿಗೆ
ಕ್ಷಣ ತಂಪು ನೆರಳನ್ನು ನೀಡುವಿರಿ

ತಾರೆಗಳ ಬಳಗದ ಗೆಳೆಯ ಬೆಳದಿಂಗಳೀವ ಶಶಿಯ
ಮೊಗದ ಮೇಲೆ ಪರದೆಯಾಗಿ ಜಾರಿ
ನೀವು ಆ ಇರುಳೊಳಗೂ ಹೊಳೆಯುವಿರಿ

ಸಂಜೆಯ ರಂಗಿಗೆ ನಿಮ್ಮ ಬಣ್ಣ ಬಯಲಾಗಿ
ಶೃಂಗಾರ ರಸ ನಿಮಿಷ ಗೋಧೂಳಿಗಾಗಿ
ಭಾವನೆಗಳ ಚಿತ್ತಾರವಾಗಿ
ಮರೆಯಾಗುವಿರಿ ನೀವು ಅಲ್ಲಿ ಕರಗಿ

ಯಾರು ನಿಮಗಿದನ್ನೆಲ್ಲ ಕಲಿಸಿದ ಗುರು
ಹೇಳಬಾರದು ಒಮ್ಮೆ ಅವನ ಹೆಸರು
ಮೌನ ತೊರೆದು ಮಾತಾಡಿ
ರೆಕ್ಕೆ ಇರದೇ ಹಾರುವ ಓ ಬಾನಾಡಿ

*ಅಮು ಭಾವಜೀವಿ*
1 10 2004.04:35 ಪಿಎಂ

ಕವನಗಳು

[ *ಇರುಳ ಬಾಂದಣದಲ್ಲಿ ಚುಕ್ಕಿ*
*ಮಿನುಗಿದಂತೆ ನನ್ನವಳ ನಗು*
*ಆ ನಗುವ ಬೆಳಕಲ್ಲಿ ಕಂಡೆ*
*ಅವಳೊಂದು ಮುಗ್ಧ ಮಗು*

*ಅಮುಭಾವಜೀವಿ*

ನಿನ್ನದೆಂಬುದೊಂದು ಬದುಕಿದೆ
ಅದಕೂ ಒಂದು ಆಶಯವಿದೆ
ನಡೆ ಮುಂದೆ ಎಡವದಂತೆ
ಗುರಿಯ ಹೊರತು ಬೇಡ ಚಿಂತೆ
ಏರು ನೀ ಎತ್ತರಕ್ಕೆ
ಹೋಗು ನೀ ನೊಂದವರ ಹತ್ತಿರಕ್ಕೆ
ಎಲ್ಲರ ಹೃದಯ ಗೆಲ್ಲು
ಆಗ ನೋಡು ನಿನ್ನ ಸೊಲ್ಲು
ಎಲ್ಲೆಲ್ಲೂ ನಿನ್ನದೇ ಗುಲ್ಲು
ನೀ ನಡೆವ ಹಾದಿ
ನೀಗಲಿ ಬೇಗುದಿ.

1130pm 170415

*ಅಮು ಭಾವಜೀವಿ*
[

*ಮತದಾನ ಮಾಡೋಣ ಬನ್ನಿರಿ*

ಮತದಾನ ಮಾಡೋಣ ಬನ್ನಿರಿ
ಪ್ರಜಾಪ್ರಭುತ್ವದ ಹಬ್ಬ ಮಾಡೋಣ ಬನ್ನಿರಿ

ಆಮಿಷಗಳ ಆಚೆ ಬಿಟ್ಟು
ಆತ್ಮಗೌರವಕ್ಕೆ ಬೆಲೆಕೊಟ್ಟು
ದೇಶದ ಉನ್ನತಿಗಾಗಿ
ಮರೆಯದೇ ಮತ ಹಾಕೋಣ ಬನ್ನಿರಿ

ಮತದಾನದ ಹಕ್ಕು ಸಿಕ್ಕ
ಪ್ರತಿ ಪ್ರಜೆಯ ಕರ್ತವ್ಯ ವಿದು
ನಿನ್ನ ಒಪ್ಪಿತ ಸರ್ಕಾರ ತರಲು
ಇಂದೇ ಮತ ಹಾಕೋಣ ಬನ್ನಿರಿ

ಪ್ರಜಾಪ್ರಭುತ್ವದ ಹಬ್ಬ ಇದು
ಸಂಭ್ರಮದಿ ಭಾಗವಹಿಸಿ
ಸಮೃದ್ಧಿಯ ಭವಿಷ್ಯಕ್ಕಾಗಿ
ಇಂದೇ ಮತ ಹಾಕೋಣ ಬನ್ನಿರಿ

ವಂಚಿತರಾಗದೆ ಸಂಚಿತಗೊಳಿಸಿ
ಸುಭದ್ರ ಸರ್ಕಾರ ತಂದು
ಐದು ವರ್ಷದ ಅಭಿವೃದ್ಧಿಗೆ
ಇಂದೇ ಮತ ಹಾಕೋಣ ಬನ್ನಿರಿ

ತಾತ್ಸಾರವಂತೂ ಬೇಡವೇ ಬೇಡ
ಉತ್ಸಾಹದಿ ಪಾಲ್ಗೊಳ್ಳೋಣ
ಪ್ರಜಾಪ್ರಭುತ್ವ ಬಲಗೊಳಿಸಲು
ಇಂದೇ ಮತ ಹಾಕೋಣ ಬನ್ನಿರಿ

ವೃದ್ಧರು ದುರ್ಬಲರೊಡಗೂಡಿ
ನವ ಮತದಾರರೇ ಹೆದರಬೇಡಿ
ಚುನಾವಣೆ ಇದು ಮತ ಚಲಾವಣೆ ಮಾಡಿ
ನಾಳೆಯ ಪ್ರಗತಿಗೆ ಇಂದೇ ಗುಂಡಿ ಒತ್ತಿ ಬಿಡಿ

06:30ಪಿಎಂ17042019

*ಅಮು ಭಾವಜೀವಿ*

ಭುಗಿಲೆದ್ದಿದೆ ಧಗೆ*

ಜೀವಜಲ ಬತ್ತುತಿದೆ
ಎಲ್ಲೆಲ್ಲೂ ಆಹಾಕಾರವೆದ್ದಿದೆ
ಅಂದು ಉಳಿಸಿಕೊಳ್ಳದ ತಪ್ಪಿಗೆ
ಇಂದು ಭುಗಿಲೆದ್ದಿದೆ ಈ ಧಗೆ

ಆಗ ಎಷ್ಟೊಂದು ಚಂದವಿತ್ತು
ನದಿ ಹಳ್ಳ ತೊರೆ ಎಲ್ಲ ತುಂಬಿತ್ತು
ಬಿಸಿಲು ಬಿಸಿಲಾಗೇ ಇತ್ತು
ನಿಸರ್ಗವೇ ನಕ್ಕು ನಲಿದಿತ್ತು

ಕಾಡನೆಲ್ಲಾ ಕಡಿದು ಮಾನವ
ಅತಂತ್ರಗೊಳಿಸಿದ ಆ ಸಮತೋಲನವ
ಬಿಸಿಲು ಧಗೆಯಾಗಿ ಸುಡುತಿದೆ ಈಗ
ಪ್ರಕೃತಿ ಕೈಚೆಲ್ಲಿ ಕೂತಿದೆ ತಾಳದೆ ಬೇಗೆ

ಮಾನವನ ದುರಾಸೆಯಿಂದ
ಮಲಿನವಾಯ್ತು ಗಾಳಿಯ ಕಂದ
ವಿಷ ಉಗುಳಿದ ತಪ್ಪಿಗಾಗಿ
ಅನುಭವಿಸಬೇಕೀ ಬೇಗೆ ಧಗೆ

ಇದ್ದುದನೆಲ್ಲ ನಾಶ ಮಾಡಿ
ಹೊರಟ ಇರದುದರತ್ತ ಓಡಿ
ಮಾಡಿದುದ ಉಣ್ಣಲೇಬೇಕು
ಇನ್ನಾದರೂ ಎಚ್ಚೆತ್ತುಕೊಳ್ಳ ಬೇಕು

ರಕ್ಷಿಸೋಣ ಜೀವಜಲ
ಉಳಿಸಿಕೊಳ್ಳೋಣ ಸಕಲ
ಮತ್ತೆ ಮರುಕಳಿಸಲಿ ಆ ಸಮೃದ್ದಿ
ಇದರಿಂದ ಮಾನವ ಕಲಿ ನೀ ಬುದ್ದಿ

0101ಪಿಎಂ18042016
*ಅಮು ಭಾವಜೀವಿ*

ಸೋತ ಬದುಕಿನ ಸಂಜೀವಿನಿ*

ಜಗದಾದಿ ಅಂತ್ಯಗಳ
ನೋವು ಸಂತೋಷಗಳ
ರಾಗ ದ್ವೇಷಗಳ ಆಚೆಗೂ
ನಿಲ್ಲುವ ಬಂಧವೇ ಸ್ನೇಹ

ರಕ್ತ ಸಂಬಂಧಕೂ ಮಿಗಿಲಾಗಿ
ಸೂಕ್ತ ಕಾಲಕ್ಕೆ ಜೊತೆಯಾಗಿ
ಆಪ್ತತೆಯಲ್ಲಿ ಆಪ್ಯಾಯಮಾನ
ಸೋತ ಬದುಕಿನ ಸಂಜೀವಿನಿ ಈ ಸ್ನೇಹ

ಬದುಕಿಗೆ ಬರ ಎರಗಿದಾಗ
ವರವಾಗಿ ಬಂದು ಹುರಿದುಂಬಿಸಿ
ಮತ್ತೆ ಚಿಗುರುವ ಪ್ರಕೃತಿಗೆ
ವಸಂತದಂತೆ ಈ ಸ್ನೇಹ

ಎಲ್ಲ ಏಳು-ಬೀಳುಗಳಿಗೂ
ಗೆಲ್ಲುವ ಛಲ ತುಂಬಿ
ಬಾಳ ಪ್ರಯಾಣಕೆ  ಸ್ಪೂರ್ತಿ
ನಂಬಿಕೆಗೆ ಅರ್ಹ ಈ ಸ್ನೇಹ

ಅಂತಸ್ತಿನ ಆಸೆಪಡದೆ
ಹೃದಯ ನಿವಾಸಿಯಾಗಿ
ಬದುಕಿನ ಹದವರಿತು
ಮುನ್ನಡೆಸುವ ಮಾರ್ಗದರ್ಶಿ ಈ ಸ್ನೇಹ

ಸ್ನೇಹ ಬೇಕು ಎಲ್ಲದಕ್ಕೂ
ಬದುಕಿನ ಭರವಸೆಯಾಗಿ
ತಾಳ್ಮೆಯ ನೆರಳಾಗಿ
ಸೋಲನ್ನು ಗೆಲುವಾಗಿಸುವುದು ಈ ಸ್ನೇಹ

*ಅಮುಭಾವಜೀವಿ*

ನೀನೇ ಆಯುಧವಾಗು*

ಇನ್ನು ಯಾರೂ ಬರರು
ಹೆಣ್ಣೆ ನಿನ್ನ ರಕ್ಷಣೆಗೆ
ನಿನಗೆ ನೀನೇ ಆಯುಧವಾಗು
ಕಾಮುಕರ ಪೈಶಾಚಿಕತೆಗೆ

ಯಾವ ಕಾನೂನು ತಡೆಯಲಾರದು
ನಿನ್ನ ಮೇಲಿನ ದೌರ್ಜನ್ಯವ
ಎಲ್ಲಾ ಮುಗಿದ ಮೇಲೆ ದೀಪ ಹಚ್ಚಿ
ಪ್ರತಿಭಟಿಸಿ ಕೇಳುವುದು ನ್ಯಾಯವ

ಯಾರೇ ನಿನ್ನೊಂದಿಗಿರಲಿ
ನಿನ್ನ ರಕ್ಷಣೆಯ ಹೊಣೆ ನೀನೇ ಹೊರು
ಮಿಂಚಿ ಹೋದ ಕಾಲಕ್ಕೆ
ಆರ್ಭಟಿಸಿ ಮೂರೇ ದಿನದಲ್ಲಿ ಮರೆವರು

ನಿರ್ಭಯಳಿಂದ ಹಿಡಿದು ಇಂದು
ಮಧುವಿನ ತನಕ ನಡೆದದ್ದೇ ಹೀಗೆ
ಕಾನೂನು ಬಲಗೊಳ್ಳಲೆ ಇಲ್ಲ
ಅಮಾಯಕ ಹೆಣ್ಣುಗಳ ರಕ್ಷಸಲಾಗಲಿಲ್ಲ

ಚಂಡಿಯಾಗು ಚಂಡಾಲರ
ರುಂಡಗಳ ಚಂಡಾಡಲು
ಭದ್ರ ಕಾಳಿಯೇ ಮೊದಲಾಗು
ಕಾಮಪಿಶಾಚಿಗಳ ರಕ್ತ ಹೀರಲು

ಹೆಜ್ಜೆ ಹೊರಗಿಡುವ ಮೊದಲೇ
ನಿನ್ನೊಂದಿಗಿರಲಿ ಆತ್ಮರಕ್ಷಣೆಯ ಅಸ್ತ್ರ
ಕೊಲ್ಲಲು ಬಂದವನನೇ ಕೊಂದು ಬಿಡು
ಹೆದರದೆ ಹೆದರಿಸುವಂತಿರಲಿ ನಿನ್ನ ಪಾತ್ರ

1215ಎಎಂ20042019
*ಅಮು ಭಾವಜೀವಿ*

*ಸ್ವಾಗತ ಕೋರಲು*

ಮೂಡಣದ ಅಂಚಿನಿಂದ
ಹೊಸ ಭರವಸೆ ತಂದ
ಬಾನದೊರೆಗೆ ಸ್ವಾಗತ ಕೋರಲು
ಮಂಜಿನ ಹನಿಗಳು ಸಜ್ಜಾಗಿವೆ

ಮಾಮರದ ಮರೆಯಲ್ಲಿ ಕೂತು
ಇನಿದನಿಯಲಿ ಹಾಡಿರಲು ಕೋಗಿಲೆ
ತಂಗಾಳಿಯ ಆ ಸ್ಪರ್ಶಕ್ಕೆ
ನಲಿದಾಡಿವೆ ಚಿಗುರೆಲೆ

ಆಗಸದ ಬಯಲಿನಲ್ಲಿ
ಮೋಡಗಳ ಮರೆಯಲ್ಲಿ
ಹೊಸ ಕಿರಣಗಳ ರಂಗಾವಳಿ
ಎಲ್ಲೆಲ್ಲೂ ಹೊಂಬಣ್ಣದ ಚಿತ್ರಾವಳಿ

ಸಾಗರದ ಅಲೆಗಳು ತೇಲಿ
ತೀರದೆದೆಗೆ ಮುತ್ತನಿಕ್ಕಿ
ಅಲ್ಲಲ್ಲಿ ಹೊಳೆವ ರವಿಯು
ಹೊಸತನದ ಪುಳಕ ತಂತು

ಭೂರಮೆಯ ಒಡಲಲ್ಲಿ
ನವ ವಸಂತದ ಸಂಭ್ರಮ ನೋಡಿ
ಕವಿ ಮನವು ಹಿಗ್ಗಿ ನಲಿದು
ನವ ಭಾವದ ಸ್ಪೂರ್ತಿ ಪಡೆದಿದೆ

0719ಎಎಂ22042019

ಅಮು ಭಾವಜೀವಿ

ಶುಭ ಉದಯ ಶುಭ ದಿನ

*೧•ಗೆಲುವಿನ ಭಿಕ್ಷೆ*

ಎಷ್ಟೊಂದು ನಿರೀಕ್ಷೆಗಳು
ಈ ಪುಟ್ಟ ಬದುಕಿಗೆ

ರೈತನ ನಿರೀಕ್ಷೆ ಒಂದೇ
ಬರವೆಂಬುದೆರಗದೆ
ಸಕಾಲಕೆ ಮಳೆ ಬರಲಿ
ತನ್ನ ಫಸಲು ಕೈಗೆ ಬರಲಿ

ವಿದ್ಯಾರ್ಥಿಯ ನಿರೀಕ್ಷೆ ಅದೊಂದೇ
ವರ್ಷವೆಲ್ಲ ಕಷ್ಟಪಟ್ಟು  ಓದಿದ್ದು
ಮೂರು ಗಂಟೆಯ ಪರೀಕ್ಷೆ ಬರೆದು
ಉನ್ನತ ಶ್ರೇಣಿಯಲಿ ತೇರ್ಗಡೆಯಾಗೋದು

ಹೆತ್ತವರ ನಿರೀಕ್ಷೆ ನೂರಾರು
ಮಕ್ಕಳ ಭವಿಷ್ಯ ಉಜ್ವಲವಾಗಲಿ
ಕಷ್ಟ  ಎಂದೂ ಅವರಿಗೆ ಬಾರದಿರಲಿ
ಮುಪ್ಪಿನಲಿ ತಮ್ಮ ಕೈ ಹಿಡಿಯಲಿ

ನಾಯಕರ ನಿರೀಕ್ಷೆ ಹಲವು
ಚುನಾವಣೆಯಲ್ಲಿಯ ಗೆಲುವು
ಮಂತ್ರಿಪದವಿಯ ಗಳಿಸಿ ಜನರ
ಸೇವೆಸಲ್ಲಿಸುವ ಕಳಕಳಿಯು

ಒಬ್ಬೊಬ್ಬರದು ಒಂದೊಂದು ನಿರೀಕ್ಷೆ
ಅದಕಾಗಿ ಎದುರಿಸಬೇಕು ಪರೀಕ್ಷೆ
ಕೈಹಿಡಿಯಬೇಕೆಲ್ಲಾ ಸಮೀಕ್ಷೆ
ಅಗಲೇ ಗೆಲುವಿನ ಖುಷಿ ಭಿಕ್ಷೆ

0608ಎಎಂ22042017
*ಅಮುಭಾವಜೀವಿ*

*ಎರಡು ವರ್ಷಗಳ ಹಿಂದೆ ಬರೆದ ಕವನ*

*ತಂದ ಜೀವಕಳೆ*

ಮುಂಗಾರಿನ ಈ ಅಭಿಷೇಕ
ತಂತು ಇಳೆ ಮೈಗೆ ಪುಳಕ
ಗುಡುಗು ಸಿಡಿಲಾರ್ಭಟಕೆ
ಬೆಚ್ಚಿ ಜೀವಗಳೆದೆಯಲಿ ಅಂಜಿಕೆ

ಸಸ್ಯ ಶಾಮಲೆಗೆ ಜಳಕ  ಮಾಡಿಸಿ
ಹಸಿರಿನುಡುಗೆಯ ಚಂದದಿ ಉಡಿಸಿ
ಸುಮಗಳ ಪರಿಮಳ ಪಸರಿಸಿ
ಹೊಸ ಭಾಷ್ಯ ಬರೆದ ಮಳೆರಾಯ

ಕೆರೆಕಟ್ಟೆಗಳ ಒಡಲ ತುಂಬಿಸಿ
ಅಂತರ್ಜಲವ ಮರುಪೂರ್ಣಿಸಿ
ವರ್ಷವಿಡಿ ಬಾಳ ಹಸನಾಗಿಸಿ
ನಿಸರ್ಗಕೆ ತಂದ ಜೀವಕಳೆಯ

*ಅಮು ಭಾವಜೀವಿ*

*ನಿನ್ನ ನಲ್ಲನ ಸ್ವಾಗತಿಸು*

ಅವನು ಬಂದನು ಏಳೆ ಭೂರಮೆ
ಮೆಲ್ಲ ನಿನ್ನ ನಲ್ಲನ ಸ್ವಾಗತಿಸು
ಗಂಟೆ ಜಾಗಟೆ ದನಿಯು ಬೇಡ
ಹಕ್ಕಿಗಳ ಇಂಚರವೆ ಸಾಕು

ಬಾರೆ ನೀರೆ ಅವನ ಪಾದ ತೊಳೆದು
ಬಿರಿದ ಸುಮಗಳಿಂದ ಅಲಂಕರಿಸು
ಇರುಳ ಓಡಿಸ ಬಂದಿಹನು
ಆರತಿಯನೆತ್ತಿ ಅಭಿನಂದಿಸು

ನೆನ್ನೆಗಳ ಹಿಮ್ಮೆಟ್ಟಿಸಿ
ನಾಳೆಗಳ ಬೆನ್ನ ಹತ್ತಿ
ಇಂದು ಬಂದಿಹನು ಬೆಳಕ ಹೊತ್ತು
ಮುಂಜಾನೆಯ ಮಂಜಿನ ಜೊತೆಗೆ

ಏಳು ಎದ್ದೇಳು ಸಸ್ಯ ಶಾಮಲೆ
ಇನಿದನಿಯಲ್ಲಿ ಹಾಡುತಿದೆ ಕೋಗಿಲೆ
ತನ್ನ ಹೊಂಗಿರಣದಿಂದ ಬಿಸಿ ಮುಟ್ಟಿಸಲು
ರವಿ ಬಂದಿಹನು ಬಾನೊಳಗಿಂದ

ನಿತ್ಯ ಜಂಜಡಗಳೊಳಗೂ
ಮತ್ತೆ ಬರುವ ಅವನ ನಿಷ್ಠೆ
ನಮ್ಮ ಜಡತ್ವ ತೊಲಗಿಸಿ
ಚುರುಕು ಮುಟ್ಟಿಸಿದ

ಎಲ್ಲರೂ ಸೇರಿ ಆರಾಧಿಸೋಣ
ಅವನ ಬರುವಿಕೆಯ ಆನಂದಿಸೋಣ
ಜಗದ ಕತ್ತಲೆ ಕಳೆದ ರವಿಗೆ
ನಮ್ಮ ಕೃತಜ್ಞತೆಯ ಅರ್ಪಿಸೋಣ

0633ಎಎಂ 26042019
*ಅಮು ಭಾವಜೀವಿ*

ನಿನ್ನ ಪ್ರೀತಿ ದನಿಯ ಕೇಳಿ*

ಯಾವ ಭಾವದ ಜೀವ ನೀನು
ಯಾವ ನೋವಿನ ದನಿಯು ನೀನು
ಹೃದಯ ಮಿಡಿಯುತಿದೆ ನಿನಗಾಗಿ
ಬಂದ ಕಷ್ಟಗಳನ್ನೆಲ್ಲ ತಳ್ಳಿ
ಈ ನಿನ್ನ ದನಿಯ ಕೇಳಿ ಕೇಳಿ
ನಲಿದಿದೆ ಹೃದಯ ಹಿಗ್ಗಿ ಹಿಗ್ಗಿ

ಮಾಮರದ ಚಿಗುರು ತಿಂದು
ಹೂವಿನ ಎದೆಯ ಜೇನ ಕುಡಿದು
ಮಧುರ ಗಾನ ನುಡಿದಿಹೆ
ಬರಡು ನೆಲದ ಒಡಲಿನಲ್ಲಿ
ಬೀಜ ಮೊಳೆವ  ಬಯಕೆ ತಂದು
ಮತ್ತೆ ಎಲ್ಲಾ ಹಸಿರಾಗಿಸಿಹೆ

ಈ ಸಂಜೆಯ ಬಣ್ಣದಂತೆ
ಬಾನಿರುಳಿನ ಬೆಳದಿಂಗಳಂತೆ
ನಿನ್ನ ಈ ಗಾನ ಮಾಧುರ್ಯ
ಕಣ್ಣ ಹನಿಯ ಅಲ್ಲೇ ತಡೆದು
ಮನದ ಭಾವನೆಗಳು ತಾನೆ ಮಿಡಿದು
ತೆರೆಯಿತು ಬಾಳ ಆಂತರ್ಯ

ನೋವಿಗಿನ್ನಿಲ್ಲಿ ಜಾಗವಿಲ್ಲ
ಸಾವಿನಂಜಿಕೆ ಮೊದಲಿಲ್ಲ
ನನ್ನ ಹಾಡು ಕೇಳುವಾಗ
ಬದುಕಿನ ಅನುಭವವೇ ಸಾಹಿತ್ಯ
ಪಟ್ಟ ಕಷ್ಟಗಳು ಅದರ ಲಾಲಿತ್ಯ
ನೆಮ್ಮದಿ ಇನ್ನು ನೀ ಹಾಡುವಾಗ

0644 ಪಿಎಂ 26042019

*ಅಮುಭಾವಜೀವಿ*

*ಏಳು ಗೆಳೆಯ*

ಏಳು ಗೆಳೆಯ ಎದ್ದೇಳು
ಮೂಡಣದಲ್ಲಿ ರವಿ ಮೂಡಿಹನು
ಬದುಕ ಬೀದಿಯ ಶುಚಿಗೊಳಿಸಿ
ಮನದಂಗಳವ ಸಿಂಗರಿಸೋಣ

ನಿದ್ರೆಯ ಮಂಪರು ಸಾಕಿನ್ನು
ಜಗದ ಸೊಬಗು ನೋಡು ಬಾ
ಇರುಳ ವಿಶ್ರಾಂತಿ ಸಾಕಿನ್ನು
ಮುಂಜಾನೆಯ ಲವಲವಿಕೆಯ ಸವಿ ಬಾ
ಇದು ಬರೀ ಬೆಳಗಲ್ಲ
ನಮ್ಮಿಬ್ಬರ ಬದುಕಿನ ಆರಂಭ

ಹಕ್ಕಿಗಳೆದ್ದು ಹಾರುತ ನಲಿದಿವೆ
ವಾಯುವಿಹಾರ ಹೋಗುವ ಬಾ
ಹೂಗಳರಳಿ ಪರಿಮಳ ಸೂಸಿವೆ
ದುಂಬಿಗಳಂತೆ ಮಧು ಹೀರುವ ಬಾ
ಇಲ್ಲಿ ನಿಸರ್ಗದ ನಗು ನಮ್ಮದಾಗಲಿ
ನಮ್ಮಿಬ್ಬರ ಬಂದ ಬಲಗೊಳ್ಳಲಿ

ತೀರದ ಬಳಿಯಲಿ ಕೂತು
ಹರಿವ ನೀರೊಳು ಕಾಲಾಡಿಸುವ ಬಾ
ತಂಟೆ ಮಾಡುವ ತುಂಟ ಮೀನುಗಳಂತೆ
ಒಲವಿನ ಒರತೆಯಲಿ ಮೀಯೋಣ ಬಾ
ನಮ್ಮಿಬ್ಬರ ಈ ಜೀವನ
ಆಗಲಿ ಪ್ರಕೃತಿಯ ಸುಂದರ ಕವನ

ಮುಂಜಾನೆಯು ತೆರೆದಿದೆ
ಇಬ್ಬನಿಯು ಕರೆದಿದೆ
ಇಬ್ಬರು ಕೂಡಿ ನಡೆಯೋಣ
ಜೀವನದಾನಂದವ ಸವಿಯೋಣ

06:39 ಎಎಂ 27 4 2019
*ಅಮು ಭಾವಜೀವಿ*

*ಪ್ರೀತಿಯ ರಕ್ಷೆ*

ಬೆಳದಿಂಗಳ ಜೊತೆ
ತಂಗಾಳಿ ಇರುವಂತೆ
ಹೂವಿನ ಜೊತೆಗೆ
ಪರಿಮಳ ಇರುವಂತೆ
ಬದುಕಲಿ ನಿನ್ನೊಂದಿಗೆ
ನಲ್ಲ ಸದಾ ನಾನಿರುವೆ

ಹಸಿವಿಗೆ ಅನ್ನವಿರುವಂತೆ
ಅಂದಕೆ ಚಿನ್ನ ಬೇಕಾದಂತೆ
ಬದುಕಿಗೆ ನೀನೇ ಬೇಕು
ನೋವಿಗೆ ಔಷಧಿ ನೀನು
ನಲಿವಿನ ನಗುವು ನೀನು
ನನ್ನ ನೆಮ್ಮದಿಗೆ ನೀನಿರಬೇಕು

ಮುಂಜಾನೆ ಮಂಜಂತೆ
ಕರುಗುವೆ ನಿನ್ನ ಪ್ರೀತಿಯಲಿ
ಹರಿವ ನೀರಂತೆ ನಲಿವೆ
ನಿನ್ನ ಮಡಲಲಿ ಮಲಗಿ
ಕಣ್ಣ ನೀರಂತೆ ಜೊತೆಯಿರುವೆ
ನಿನ್ನ ನೋವು ನಲಿವಿಗೆ ಹೆಗಲಾಗಿ

ಸದಾ ನಗುತಿರು ಹುಣ್ಣಿಮೆಯಂತೆ
ಸದಾ ಸ್ಪೂರ್ತಿಯ ನೀಡು ರವಿಯಂತೆ
ಬದುಕಿದು ನನಗೆ ಭಿಕ್ಷೆ
ನಿನ್ನ ಪ್ರೀತಿಯಿದು ನನಗೆ ರಕ್ಷೆ

1030ಪಿಎಂ09052019

*ಅಮು ಭಾವಜೀವಿ*

ಬಂದಂತೆ ಬರೆಯುವೆ
ಅದಕೆ ನೀನೇ ಸ್ಪೂರ್ತಿ
ಕೈ ಹಿಡಿದು ನಡೆಸು
ನನಗೆ ಬೇಕಿಲ್ಲ ಕೀರ್ತಿ
ನಿನ್ನ ಪ್ರೋತ್ಸಾಹದ
ಒಂದು ಬೆರಳ ಹಿಡಿದು
ನಾ ಬೆಳೆವೆ ಲತೆಯಂತೆ
ನನ್ನ ಕಾಯಲಿ ಅಲ್ಲಿ ನಿನ್ನ
ತಾಯಿ ಹೃದಯದ ಮಮತೆ

*ಅಮು ಭಾವಜೀವಿ*

*ತಾಯಿ ಮಮತಾಮಯಿ*

ತಾಯಿ ಎಂಬ ಜೀವದಿ
ಎಂಥ ಮಾಯೆ ಇದೆಯೋ
ಅಮ್ಮನಾಗಿ ಎಲ್ಲ ಜೀವವ
ಸಲಹುವಳು ಯಾರ ಕಾಯದೆ

ಬೀದಿ ಬದಿಯ ರಸ್ತೆಯಲ್ಲಿ
ಮೊಲೆಯ ಚೀಪೋ ಹತ್ತಾರು
ಮರಿಗಳ ಸಲಹೊ ನಾಯಿ
ಅದೊಂದು ಮಮತಾಮಯಿ

ಗೂಡು ಕಟ್ಟಿ ಮೊಟ್ಟೆ ಇಟ್ಟು
ಕಾವು ಕೊಟ್ಟು ಗುಟುಕನಿಟ್ಟು
ರೆಕ್ಕೆ ಬಲಿಯೇ ಹಾರುವ ಹಕ್ಕಿ
ಪಡೆಯಿತು ತಾಯೊಲವನುಕ್ಕಿ

ದೊಡ್ಡಿಯಲ್ಲಿ ನ ಪುಟ್ಟ
ಕರುವನರಸಿ ಓಡಿ ಬರುವ ಗೋವು
ಕೆಚ್ಚಲಲಿ ಹಾಲನಿಳಿಸಿ
ಸಲಹುವುದು ತಾಯೊಲವು

ಮಾಂಸ ತಿಂದರು ಮೊಲೆಯೂಡಿಸಿ
ಬೇಟೆಯಾಟದಿ ಮರಿಯ ಪಳಗಿಸಿ
ಬದುಕುವ ಕಲೆಯ ಕಳಿಸಿದಾಕಿ
ಅವಳೇ ತಾಯಿ ಎಂಬ ದೇವತೆ

ಗಂಡಿನೆಲ್ಲ ಕಾಟ ಸಹಿಸಿ
ತನ್ನ ಮಗುವ ಮುದ್ದಿನಲಿ
ಹಸಿವನು ಮರೆತು ಹರಸುವಳು
ತಾಯೆಂಬ ನಿಸ್ವಾರ್ಥದಾತೆ

02:34 ಪಿಎಂ 10 11 2016
*ಅಮು ಭಾವಜೀವಿ*

(ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬುಳ್ಳನಹಳ್ಳಿ ಜಗಳೂರು ತಾಲ್ಲೂಕು )

ಚಿತ್ರ ಕವನ ಸ್ಪರ್ಧೆಗಾಗಿ*

*ಮಾಡಿದವಗೆ ನೀಡು ಭಿಕ್ಷೆ*

ನಿನ್ನ ಕೈಯ ಸಾಮರ್ಥ್ಯವನರಿಯದೇ
ಹಸ್ತಸಾಮುದ್ರಿಕೆಯ ಮೊರೆ ಹೋಗಬೇಡ
ನಿನ್ನ ಶ್ರಮದ ಫಲವ ನೀನುಣ್ಣುವೆ
ಅದನೆಂದು ನೀ ಮರೆಯಬೇಡ

ಹಸ್ತದೊಳಗಿನ ರೇಖೆಗಳೆಂದೂ
ನಿನ್ನ ಭವಿಷ್ಯವ ನುಡಿಯಲಾರವು
ದುಡಿವ ನಿನ್ನ ಕೈಯಿಂದ ದಣಿದು
ತಣಿದಾಗಲೇ ಸುಖ ನಿನಗೊದಗುವುದು

ನಿನ್ನ ಭಾಗ್ಯದ ರೇಖೆಯನು
ಯಾವ ಹೋಮ ಹವನ ಬದಲಿಸವು
ಬೆವರ ಹನಿಯ ಬೆಲೆಯನೆಂದು
ಜ್ಯೋತಿಷ್ಯದ ನಂಬಿಕೆ ಕೊಡದು

ನಿನ್ನ ದುಡಿಮೆಯ ನಂಬಿ ಬಾಳು
ಹಸನಾಗುವುದಾಗ ನಿನ್ನ ಬಾಳು
ಬರೀ ಸಮಯ ವ್ಯರ್ಥ ಮಾಡದೆ
ಕಾಲದರ್ಥವ ತಿಳಿದು ಮುನ್ನಡೆ

ಮಾಡಿದವನಿಗೆ ನೀಡು ಭಿಕ್ಷೆ
ಇದು ಈ ಜಗವು ನಮಗಿತ್ತ ಪರೀಕ್ಷೆ
ದೇವರೆಂಬುದು ಇಲ್ಲ ಇಲ್ಲಿ
ದುಡಿಮೆಯೇ ದೇವರೆಂದು ತಿಳಿ

ಜ್ಯೋತಿಷ್ಯದ ಮಾತು ಕೇಳಿ
ಸೋಮಾರಿಯಾಗಿ ಕೂರದೆ
ನಿನ್ನ ಯುಕ್ತಿ ಶಕ್ತಿಗಳ ಆಸಕ್ತಿಯಿಂದ
ಭವಿಷ್ಯವನೇ ಬದಲಿಸಲು ಹೊರಡು

0656ಪಿಎಂ11052019
*ಅಮು ಭಾವಜೀವಿ*

*ತಾಯಂದಿರ ದಿನದ ಶುಭಾಶಯಗಳೊಂದಿಗೆ*

*ಅಮ್ಮ ಎಂಬ ಮಾತು*

ಅಮ್ಮ ಎಂಬ ಒಂದು ಮಾತು
ಸಲಹುವುದು ಮೂರು ಹೊತ್ತು
ಅಮ್ಮ ಇಲ್ಲದ ಜಗವೇ ಇಲ್ಲ
ಅವಳಿಗೆ ಸಮ ಇಲ್ಲಿ ಏನೂ ಇಲ್ಲ

ನವಮಾಸ ಹೊರುವಳು
ಆ ನೋವನೆಲ್ಲ ಸಹಿಸುವಳು
ಕಂದನ ಮುಖ ನೋಡಿ ನೋವ ಮರೆವಳು
ಮಗುವಿಗಾಗಿ ಬದುಕ ಮುಡುಪಿಡುವಳು

ತನ್ನ ಹಸಿವ ಮುಚ್ಚಿಟ್ಟು
ನಮ್ಮ ಹಸಿವ ನೀಗುವಳು
ತಾನು ಹರಿದ ಸೀರೆಯುಟ್ಟರೂ
ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ ಖುಷಿ ಪಡುವಳು

ಅವಳ ಪ್ರೀತಿ ಸಾಗರದಷ್ಟು
ಅವಳು ಸುಖಿಸುವುದು ಸಾಸಿವೆಯಷ್ಟು
ಮಕ್ಕಳಿಗಾಗಿ ಮುಡಿಪಾದ ಬದುಕು ಅವಳದು
ಅವಳ ಸುಖವಾಗಿಡುವುದು ನಮ್ಮ ಹೊಣೆಯಾಗಿಹುದು

ದಿನಗಳ ಲೆಕ್ಕವಿಡದವಳಿಗೆ
ಒಂದು ದಿನ ಅದೇಕೆ
ಪ್ರತಿ ಕ್ಷಣ ಪ್ರತಿಸ್ಪಂದಿಸುವ
ಜೀವವ ನಿತ್ಯ ಸಲಹಬೇಕು ನಾವು

ಮಾತೆ ನಿನಗೆ ನನ್ನ ನಮನ
ನಿನಗೆ ಮುಡಿಪು ಈ ಕವನ
ನೀನಿರದೆ ಇಲ್ಲ ಜೀವನ
ನೀನೇ ಈ ಬದುಕಿನ ಚೇತನ

0920ಎಎಂ12052019

*ಅಮು ಭಾವಜೀವಿ*

ಕೋರಿಕೆ*

ಈ ನಿನ್ನ ಹೆಗಲು
ನನಗದುವೆ ನೆರಳು
ನಲ್ಲ ಜೀವನದುದ್ದಕೂ
ನೀನಿರುವ ತನಕ
ನನಗಿಲ್ಲ ಚಿಂತೆ
ನಲ್ಲೆ ಯಾವ ಕಾರಣಕೂ

ನಿನ್ನೊಲವ ಈ ಅಪ್ಪುಗೆ
ನನ್ನನಿಟ್ಟಿತು ಬೆಚ್ಚಗೆ
ಪ್ರಿಯಸಾಕಿಷ್ಟು ಬದುಕಿಗೆ
ನನಗಾಸರೆ ನೀನು
ನಿನ್ನ ಕೈ ಸೆರೆ ನಾನು
ಜೀವವಿರೊತನಕ ಜೊತೆಗಿರುವೆನು

ಬದುಕಲಿ ಏನೇ ಬರಲಿ
ಇರುವೆ ಹೀಗೆ ಜೊತೆಯಲಿ
ಇಲ್ಲ ನನಗೆ ಯಾವ ಅಂಜಿಕೆ
ನೀನೊಂದು ವರ
ಈ ಪ್ರೀತಿ ಅಮರ
ನಮ್ಮೀ ಚಿರಬಾಂಧವ್ಯದ ಕೋರಿಕೆ

*ಅಮು ಭಾವಜೀವಿ*

*ಕಾಲ್ಗೆಜ್ಜೆ*

ನಿನ್ನ ಕಾಲ್ಗೆಜ್ಜೆ ದನಿಯು
ಮಾರ್ದನಿಸಿದೆ ನನ್ನೆದೆಯ ಬಡಿತದಿ
ನೀನಿಲ್ಲಿ ಮೆಲ್ಲ ಅಡಿಯಿಡು
ಬೆಚ್ಚೀತು ನನ್ನ ಪುಟ್ಟ ಹೃದಯ
ನಿನ್ನೀ  ಮೃದು ಪಾದ ಸೋಕಿ
ಬಿರಿದರಳಿವೆ ನನ್ನಧರಗಳು
ಈ ಕೋಮಲ ಕಾಲ ಸ್ಪರ್ಶಿಸಿ
ಕಂಪಿಸುತ್ತಿವೆ ನನ್ನ  ಬೆರಳುಗಳು
ಬಲಗಾಲಿಟ್ಟು ಬಾ ಪ್ರಿಯೆ ಒಳಗೆ
ಪ್ರೀತಿಜ್ಯೋತಿಯ ಬೆಳಗು ಬಾಳಿಗೆ.

*ಅಮು ಭಾವಜೀವಿ*

: *ನಾ ಕಂಡ ಕನಸು*

ನಾ ಕಂಡ ಕನಸಿದು
ಮೊನ್ನೆಯ ರಾತ್ರಿ
ನೀ ನೀಡುವೆಯಾ
ಅದನು ನನಸಾಗಿಸುವ ಖಾತ್ರಿ

ಸಂಜೆಗತ್ತಲು ಮೆಲ್ಲ
ಮಗ್ಗುಲ ಬದಲಿಸಿ
ಮಲಗುವಾಗ ತಂಗಾಳಿ
ಮೆಲ್ಲ ಜೋಗುಳವ ಹಾಡಿತ್ತು

ಕರಿ ಕಪ್ಪು ಬಾನನಲಿ
ಚುಕ್ಕೆ ಮೂಡುತ ಅಲ್ಲಲ್ಲಿ
ಪೂರ್ಣಿಮೆಯ ಚಂದ್ರ
ಬರುವ ದಾರಿಯ ಕಾದಿತ್ತು

ನೆಲದ ಹುಲ್ಲು ಹಾಸಿನ ಮೇಲೆ
ತಂಪಿನ ಇಬ್ಬನಿಯ ಸಾಲು
ಬೆಳದಿಂಗಳಲಿ ಮೈಮರೆತು
ಸರತಿಯಲಿ ನಿಂತು ಸ್ವಾಗತ ಕೋರಿತ್ತು

ಆ ಸುಂದರ ಬಯಲಿನಲಿ
ಇರುಳ ಮಂಚದ ಮೇಲೆ
ನಾವಿಬ್ಬರೂ ಕೂತು ಆಡಿದ
ಮಾತುಗಳಿಗೆ ಸುತ್ತಲ ಮೌನ ಸಾಕ್ಷಿಯಾಗಿತ್ತು

ಮೂಡಣದಿ ರವಿಕಿರಣ ತೂರಿ
ನಿದ್ರೆ ಮಂಪರು ಮೆಲ್ಲ ಜಾರಿ
ಕನಸು ಕರಗಿತ್ತು ಮನಸು ಮುದಗೊಂಡಿತ್ತು
ವಾಸ್ತವದ ಬೆಳಕು ಹರಿದಿತ್ತು

0128ಪಿಎಂ13052019
*ಅಮು ಭಾವಜೀವಿ*

ನೀನಂದು ನನ್ನ ಕರೆದೆ
ನಾನಾಗ ನಿನ್ನ ತೊರೆದೆ
ಆ ನೋವೀಗ ನನ್ನ ಕಾಡಿದೆ
ಬೇಕೆನ್ನಲು ನೀನೆಲ್ಲೂಕಾಣದೆ

ಒಲವಿನ ಕಿರುದೀಪ ನೀನಾಗಿ
ಅಹಮಿನ ಬಿರುಗಾಳಿ ನಾನಾಗಿ
ನಿನ್ನ ಬಾಳಗೊಡಲಿಲ್ಲ ನಾನು
ಅದರಿಂದ ನಾ ಸಾಧಿಸಲಿಲ್ಲ ಏನನ್ನು

ಮಳೆಯಾಗಿ ಸುರಿವಾಗ ನಿನ್ನ
ಕಾಳಜಿ ನಾ ಮಾಡಲೇ ಇಲ್ಲ
ಬಿರು ಬೇಸಿಗೆ ಉರಿಕಾರುತಿರಲು
ಈಗ ಬಯಸಲು ನೀ ಸಿಗುತಿಲ್ಲ

ಅಕ್ಷರಕೆ ಸ್ವರವಾಗು ನೀನು
ನಿನ್ನಿಂದ ಪದವಾಗುವೆ ನಾನು
ಹಾಡಲ್ಲಿ ಇಂಪಾಗಿ ಸೇರು ನೀನು
ನೋವ ಮರೆವ ಭಾವವಾಗುವೆ ನಾನು

ಮರೆತು ಬಿಡು ಹಿಂದಿನದನ್ನು
ಕಾಪಾಡು ಈ ಸಂಧಿಗ್ದದಿ ನನ್ನ
ಇನ್ನೆಂದು ಘಟಿಸದು ಅದು
ಬದುಕು ಸಂಘಟಿಸುವಂತದ್ದು,,

0148ಪಿಎಂ130516

*ಅಮುಭಾವಜೀವಿ*

*ದೇವರ ದೇವರು*

ಅಮ್ಮ  ಎಂಬ ನಂಬಿಕೆಯ ನಾವೆಯಲ್ಲಿ ಪಯಣಿಸುವ ಪಯಣಿಗರು ನಾವು.ಹೆಣ್ಣಾಗಿ ಹುಟ್ಟಿದಂದೇ ಅವಳು ತಾಯಿಯ ಗುಣ ಹೊತ್ತು ಬೆಳೆದು ಬಂದವಳು.ಮಗಳಾಗಿ ಅಕ್ಕನಾಗಿ ತಂಗಿಯಾಗಿ ತನ್ನವರ ನೋವುನಲಿವುಗಳಿಗೆ ಮುಂಚೂಣಿ ಭಾಗಿದಾರಳಾಗಿ ಎಲ್ಲರಿಗೂ ನೆರಳಾದವಳು.ಎಲ್ಲವನ್ನೂ ತಯಾರಿಸಿ ನಂತರ ಎಲ್ಲ ಮುಗಿದರೂ ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುವ ಪಾಠ ಅವಳಿಗೆ ಕರಗತ.

ಈ ಮನೆಯ ಹೆಣ್ಣು  ಆ ಮನೆ ಮಗನ ಹೆಂಡತಿಯಾಗಿ ಬಡ್ತಿ ಪಡೆಯುವುದರೊಂದಿಗೆ ಅವಳ ಮತ್ತೊಂದು ಬಗೆಯ ಹೋರಾಟ ಪ್ರಾರಂಭವಾಗುತ್ತದೆ.ಹೊಸ ಜನರೊಂದಿಗೆ ಹೊಂದಿಕೊಳ್ಳುತ್ತಾ ತನ್ನವರನ್ನೂ ನೆನೆಯುತ್ತಾ ತನ್ನ ಸಂಸಾರದ ಹೊಣೆ ಹೊರುವಳು. ಗಂಡನ ಪ್ರಿಯ ಸತಿಯಾಗಿ ಪ್ರೇಮಕಾಮಗಳಲ್ಲಿ ಅವನೊಡನೆ ಬದುಕ ಹಂಚಿಕೊಂಡು ಬವಣೆಗಳ ನುಂಗಿಕೊಂಡು ಮಗುವಿಗೆ ಜನ್ಮ ಕೊಡುವ ತಾಯಿ ದೇವರಿಗೂ ದೇವರು.

ತಾಯಿಯ ಜವಾಬ್ದಾರಿ ಸಿಕ್ಕ ಕ್ಷಣದಿಂದಲೇ ಅವಳ ಬದುಕಿನ ರೀತಿಯೇ ಬದಲಾಗುತ್ತದೆ.ತನಗಾಗಿ ಬದುಕುತ್ತಿದ್ದ ಜೀವ ಈಗ ತನ್ನ ಕಂದನಿಗಾಗಿ ಇಡೀ ಬದುಕನ್ನೇ ತ್ಯಾಗ ಮಾಡಿ ಬೆಳೆಸುತ್ತಾಳೆ.ನೂರಾರು ಹೊಂಗನಸುಗಳ ಕಟ್ಟುತ್ತಾಳೆ.ತಾನೇನಾಗಿಲ್ಲವೋ ಅದನ್ನೆಲ್ಲಾ ತನ್ನ ಮಗುವಿಗಾಗಿ ದೊರಕಿಸಿಕೊಡಲು ಜೀವವನ್ನೇ ಒತ್ತೆ ಇಟ್ಟು ದುಡಿಯುತ್ತಾಳೆ.ತನಗೇನೇ ಕೆಲಸವಿದ್ದರೂ ಮಗುವಿಗಾಗಿ ಎಲ್ಲವನ್ನೂ ಬದಿಗಿಟ್ಟು ಬದುಕ ಕಟ್ಟಿಕೊಡುತ್ತಾಳೆ ಅಮ್ಮ.  ಎದೆ ಹಾಲುಣಿಸುವುದರಿಂದ ಹಿಡಿದು ಸ್ನಾನ ಮಾಡಿಸಿ  ಅಲಂಕಾರ ಮಾಡಿ ಮುದ್ದಾಡಿ ರಮಿಸಿ ಜೋಗುಳ ಹಾಡಿ ಮಲಗಿಸುವ ತನಕ  ಅವಳಿಗೆ ಬೇರೆ ಜಗತ್ತೇ ಬೇಕಿಲ್ಲ.  ಈ ನಡುವೆ ಮನೆಗೆಲಸವನ್ನೂ ಮುಗಿಸಿಕೊಂಡು ತನ್ನವರ ಊಟೋಪಚಾರಕ್ಕೆ ಯಾವುದೇ ಭಂಗ ಬರದಂತೆ ಎಲ್ಲ ಕಾರ್ಯಗಳನ್ನು ಮುಗಿಸಿ ಕಂದನೊಉಅಂದಿಗೆ ಕಲೆತು ಮಗುವಾಗಿ ಆ ಎಲ್ಲ ದಣಿವು ಆಯಾಸವನ್ನು ಮರೆತುಬಿಡುತ್ತಾಳೆ ಅಮ್ಮ.

ಬೆಳಿಗ್ಗೆ  ಎಲ್ಲರಿಗೂ ಮುಂಚೆ ಎದ್ದು ಕಸ ಗುಡಿಸಿ  ಸ್ನಾನ ಮಾಡಿ ತುಳಸಿ ಪೂಜೆ ಮುಗಿಸಿ ಅಡುಗೆ ತಯಾರಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಎಲ್ಲರಿಗೂ ಇದ್ದಲ್ಲಿಗೇ ಹೋಗಿ ಬಡಿಸುತ್ತಾ ,ಆಗಾಗ್ಗೆ ಕಂದನ ಯೋಗಕ್ಷೇಮ ನೋಡಿಕೊಳ್ಳುತ್ತ ತಾನು  ಊಟ ಮಾಡುವುದನ್ನೆ ಮರೆಯುತ್ತಾಳೆ.ಇಷ್ಟೆಲ್ಲ ಮಾಡಿ ಅವಳು ಊಟ ಮಾಡುವಷ್ಟೊತ್ತಿಗೆ ಸೂರ್ಯ ನೆತ್ತಿ ಮೇಲಿರುತ್ತಾನೆ.

ಮಗು ಬೆಳೆದಂತೆಲ್ಲ ಅಮ್ಮನ ಕೆಲಸ ಕಡಿಮೆ ಆದರೂ ಮಗು ಮೇಲಿನ ಪ್ರೀತಿ ಕಡಿಮೆಯಾಗದು.ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸುವುದರಿಂದ ಹಿಡಿದು ಮಗುವಿನ ಆಟ ಪಾಠ ಎಲ್ಲದರತ್ತಲೂ ತನ್ನನ್ನೇ ತೊಡಗಿಸಿಕೊಂಡು ಬಿಡುವಿಲ್ಲದೆ ದುಡಿಯುತ್ತಿರುತ್ತಾಳೆ ಅಮ್ಮ.  ಅಮ್ಮ  ಎನ್ನುವ ಸ್ಥಾನಕ್ಕೆ ಮೇಲುಕೀಳುಗಳ ಯಾವ ಸೋಂಕೂ ತಾಗಲಾರದು .ಏಕೆಂದರೆ  ಅಮ್ಮ  ಅಮ್ಮನೇ .ಅಮ್ಮನ ಆ ಕೆಲಸವನ್ನು ಅಮ್ಮನೇ ಮಾಡಿದಾಗ ಮಕ್ಕಳ ಭವಿಷ್ಯ ಬೆಳಗುತ್ತದೆ.*ದೀಪದ ಪ್ರತಿರೂಪ ಅಮ್ಮ*.ತನ್ನೊಲವ ಬತ್ತಿಗೆ ಮಮತೆಯ ತೈಲವೆರೆದು ಕನಸುಗಳ ಜ್ಯೋತಿ ಹಚ್ಚಿ ಜಗಕೆ ಬೆಳಕ ನೀಡುವಳು.ತಾ ಮಾತ್ರ ಕತ್ತಲಲ್ಲೇ ಊಳಿಯುವಳು.ಅಮ್ಮನ ಈ ಕಾರ್ಯ ಹೊಗಳಲು ಪದಗಳೇ ಬಾರವು.

ಅಂತ ಅಮ್ಮನನ್ನು ಬೆಳೆದ ಮಕ್ಕಳು ಬೀದಿಗೆ ತಳ್ಳದೇ ಅನಾಥಾಶ್ರಮದ ಪಾಲು ಮಾಡದೆ ದಿನ ಬೆಳಗೆದ್ದು ಅವಳ ನಿರ್ಮಲ ಆಶೀರ್ವಾದ ಪಡೆದು ತನ್ನ ಕಾರ್ಯದಲ್ಲಿ  ತೊಡಗಿದರೆ ಯಾವ ಕೆಲಸವೂ ವಿಫಲವಾಗುವುದ್ದಿಲ್ಲ. ಅಮ್ಮ ಬರೀ ಅಮ್ಮನಲ್ಲ ಅಮ್ಮ. ಅವಳು ಈ ಜಗದಿ ನಮ್ಮ ಕಣ್ಣೆದುರಿಗಿರು ದೇವತೆ.ಅವಳನ್ನು ಆತ್ಮೀಯವಾಗಿ ಗೌರವ ಪೂರ್ವಕವಾಗಿ ಬಾಳಿಸುವ ಕರ್ತವ್ಯ ನಮ್ಮದಾಗಬೇಕು

*ಅಮ್ಮಂದಿರ ದಿನದ ಶುಭಾಶಯಗಳು*

ಇಂತಿ ನಿಮ್ಮವ

*ಅಮುಭಾವಜೀವಿ*
1112ಎಎಂ14052017

*ಶವವಾಗಿ.......?*

ಸವಿಗನಸು ಬೀಳುವ ಹೊತ್ತು
ಚಂದಿರನು ಬಾನೊಳಗೆ
ಬೆಳದಿಂಗಳ ರಥವೇರಿ ಬರಲು
ಆ ಹುಣ್ಣಿಮೆಯ ಹೊಳಪಲ್ಲಿ
ತಣ್ಣನೆಯ ಗಾಳಿಯಲಿ
ಸಂಭ್ರಮಿಸುವ ಪೈರಿನಂತೆ
ಅವಳ ಮುಂಗುರುಳ ಲಾಸ್ಯಕೆ
ನಾ ನಿಂತಲ್ಲೇ ವಶವಾಗಿಹೋದೆ
ಆದರೆ ಅವಳತ್ತ ಆ ವಿರಹದಲಿ
ಬೆಂದು ಬಸವಳಿದು ಶವವಾದೆ

*ಅಮು ಭಾವಜೀವಿ*

*ಚಿಂತೆ  ಕಾಂತೆ*

ಚಿಂತೆಗಳು ಕಂತೆ ಕಂತೆ
ಕಾಡಿದವು ಮತ್ತೆ ಮತ್ತೆ
ಆದರೂ ಬರಲಿಲ್ಲ ನನ್ನ ಕಾಂತೆ
ನಾ ಕಾದೆ ಅವಳಿಗಾಗಿ ಶಬರಿಯಂತೆ

ಅಮು ಭಾವಜೀವಿ

*ಮರೆಯದಿರು*

ತೊರೆಯದಿರು ಮರೆಯದಿರು
ಎದೆಯಗೂಡೊಳಿರುವೆ ನಾನು
ನೆನೆಯುತಿರು ನಗಿಸುತಿರು
ನಿನ್ನೊಲವಿಗೆ ಹಂಬಲಿಸುತಿಹೆನು

ನನ್ನವನು ನೀನೆಂಬ ಹಮ್ಮಿಂದ
ನಾ ಬೀಗಿದ್ದರೆ ಮನ್ನಿಸು
ನಿನ್ನ ತನವನ್ನ ಬೆಂಬಲಿಸುವವಳು
ನಾನೆಂದು ನನ್ನ ನೀ ಪ್ರೀತಿಸು

ಹೆತ್ತವರ ಆಶೋತ್ತರಗಳ
ದಿಕ್ಕರಿಸಿ ನಿನ್ನ ನಾ ಪಡೆದೆ
ಅವರ ನೋವಿಗೆ ಮುಲಾಮಾಗುವಂತೆ
ನಾವಿಬ್ಬರೂ ಬಾಳೋಣ ಬೇಡ ಗೊಡವೆ

ನನಗಾಗಿ ನೀ ಬಂದುದು
ಅದೃಷ್ಟದ ಬಾಗಿಲು ತೆರೆದಂತೆ
ನಿನಗಾಗಿ ನಾ ಬಾಳುವೆ
ಮರದಡಿಯ ಆ ನೆರಳಂತೆ

ಈ ಜಗಕೆ ನಮ್ಮಿಬ್ಬರ ಬಂಧ
ಆಗಲಿ ಹೊಸದೊಂದು ಪಾಠ
ನಮ್ಮಿಬ್ಬರ ಪ್ರೀತಿಯ ಬದುಕಾಗಲಿ
ಅಲ್ಲಿ ಎಲ್ಲಾ ಇಷ್ಟ ಪಡುವ ಸಂಪುಟ.

*ಅಮು ಭಾವಜೀವಿ*
0708ಎಎಂ150515

ನಿನ್ನ ಮೌನವನು ಮಾತಾಗಿಸಲು
ನನ್ನ ಧ್ಯಾನವನು ಒತ್ತೆ ಇರಿಸಿದೆ
ನಿನ್ನ ಮೊಗದಲಿ ಮಿಂಚೊಂದು
ಮೂಡಲು ನಾ ಮಳೆಯಾಗಿ ಸುರಿದೆ

ಹದ ಮಳೆಗೆ ಮಿದುವಾದ ಭುವಿಗೆ
ಒಲವಿನ ಬೀಜವ ಬಿತ್ತಿ ಬೆಳೆವ
ಫಲ ಬಂದ ಸುಗ್ಗಿಯಲಿ ಹಿಗ್ಗಿ
ಪ್ರಣಯದಮಲಿನಲಿ ತೇಲಿ ನಲಿವ

ಮತ್ತೆ ಮಾತು ಮೌನವಾಗಿ
ರಾತ್ರಿಯ ನೀರವತೆ ಹಿತವಾಗಿ
ಸವಿವ ಬದುಕಿನ ರಸನಿಮಿಷ
ಬಾಳಲಿ ತೊರೆಯಾಗಿ ಹರಿಯಲಿ ಹರುಷ

ನನ್ನ ನಿನ್ನಂತ ಕಂದಮ್ಮಗಳು
ಕಿಲಕಿಲ ನಗುತಿರಲಿ ಸದಾ
ನನಗೆ ನೀನು ನಿನಗೆ ನಾನಾಗಿರುವ
ಬಾಳಲಿ ಬರದಂತೆ ಒಂದಿಷ್ಟೂ ವಿಶಾದ

ನೀನು ಬತ್ತಿ ನಾನು ಜ್ಯೋತಿ
ಇರಲಿ ಹಣತೆಯ ಪ್ರಶಾಂತತೆ
ನೀನು ರವಿ ನಾನು ಶಶಿ
ಬಾಳಲಿ ಪ್ರವಹಿಸಲಿ ಪ್ರಖರತೆ

ಅಮರ ಪ್ರೇಮಿಗಳು ನಾವು
ಶಿಲೆಯಲರಳಿದ ಲತೆಯ ಹೂವು
ಬಾಳ ತುಂಬ ಪ್ರವಹಿಸಲಿ ನಗುವು
ನಮ್ಮ ನೋಡಿ ದೂರವುಳಿಯಲಿ ಸಾವು.

*ಅಮು ಭಾವಜೀವಿ*

ಅಮು
[1129ಎಎಂ150515]

*ನನ್ನ ಕನ್ನಡ*

ಭಾವವೀಣೆ ನುಡಿದ
ಮಾತದು ಕನ್ನಡ
ಕಬ್ಬಿಗರೆದೆಯಲಿ ಕಾವ್ಯದ
ರೂಪದಿ ಮೆರೆದ ಭಾಷೆ ಕನ್ನಡ

ಜ್ಞಾನಪೀಠದ ಅಧಿಪತಿ
ಕರುಣೆ ಸಾರುವ ಸಂಸ್ಕೃತಿ
ಕರುನಾಡಿನ ಕರಿಮಣ್ಣಿನ
ಜೀವ ಭಾವ ಕನ್ನಡ

ಕುಳಿತು ಓದದೆ ಕಾವ್ಯ ಕಟ್ಟುವ
ಜನಮನದ ಜನಪದದಿ
ಬದುಕಿನ ಸಾರ ಕಟ್ಟಿ ಕೊಡುವ
ತ್ರಿಪದಿಗಳ ಒಡತಿ ಈ ಕನ್ನಡ

ಅನುಭಾವದ ವಚನಗಳಲಿ
ತತ್ವಪದ ಕೀರ್ತನೆಗಳಲಿ
ಮೆರೆದ ಕಂಪಿನ ಇಂಪಿನ
ಚಂದನದ ಹೊನ್ನುಡಿ ಕನ್ನಡ

ಆದಿಯಿಂದ ವರ್ತಮಾನದವರೆಗೆ
ಅಂತ್ಯವಿಲ್ಲದೆ ಸಾಗುತಿರುವ
ಜನದನಿಯ ನಲ್ನುಡಿಯು
ನಮ್ಮ ಹೆಮ್ಮೆಯ ಕನ್ನಡ

1243ಪಿಎಂ13052019

*ಅಮು ಭಾವಜೀವಿ*

*ಏಕೆ ಚಿಂತೆ...!*

ಈ ಬದುಕೊಂದು ಬವಣೆಗಳ ಸಂತೆ
ಅದಕೇಕೆ ಮಾಡುವೆ ಇಷ್ಟೊಂದು ಚಿಂತೆ

ಕತ್ತಲು ಮುತ್ತುವುದೆಂದು
ಹಗಲೆಂದೂ ಅಂಜದು
ಬೆಳಕಿರುವೆಡೆ ಹಿಂದೆ
ಎಂದೆಂದೂ ಕತ್ತಲಿರುವುದು

ಎರಡು ಇದ್ದರೇನೆ ಜೀವನ
ಬದುಕಿಗದುವೆ ಪ್ರೇರಣ

ಬಾಡುವುದೆಂದು ಗೊತ್ತಿದ್ದರೂ
ಹೂವು ಅರಳಿ ನಗುವುದು
ಮದುವೆಯಲ್ಲೂ ಮಸಣದಲ್ಲೂ
ಅದು ನಗುವನೆಂದೂ ಮರೆಯದು

ನೋವು ನಲಿವು ಎರಡೂ ಬೇಕು
ಸಹಿಸಿ ಎಲ್ಲ ಗೆಲ್ಲಬೇಕು

ಮಳೆಗಾಗಿ ಹಂಬಲಿಸುವ ಒಡಲು
ತಾಳುವುದು ಭೋರ್ಗರೆವ ಪ್ರವಾಹದಲೂ
ಹನಿದರೆ ತಣಿವುದು ಹರಿಯಲು ನರಳುವುದು
ಆದರೂ ಅಚಲವಾಗಿರುವುದು ಬೆಳೆ ಬೆಳೆಯಲು

ಬದುಕೆ ಹೀಗೆ ಸಹಿಸಿ ಬೇಗೆ
ಬೆಂಕಿಯಲ್ಲೂ ಅರಳುವ ಬಗೆ

ಸೋಲಬೇಕು ಸೋತಂತಿರದೆ
ಗೆಲ್ಲುವ ಭರವಸೆಯೇ ಜೀವನ
ನರಳಿದರೂ ಅರಳಬೇಕು
ಬದುಕೊಂದು ಏರುಪೇರಿನ ಗಾಯನ

-  *ಅಮುಭಾವಜೀವಿ*

ಈ ಉರಿ ಬಿಸಿಲಿನಲ್ಲಿ
ತಂಪು ನಿನ್ನ ಮಾತು
ಆ ಕೊರೆವ ಚಳಿಯಲ್ಲಿ
ಬೆಚ್ಚನೆಯ ನಿನ್ನ ಬಾಹುಬಂಧನ
ಸುರಿವ ಮಳೆಯಲ್ಲಿ
ಹಿಡಿದ ಕೊಡೆ ನಿನ್ನೊಲವು
ಎಲ್ಲಾ ಕಾಲಕ್ಕೂ ನೀನೇ
ನನ್ನ ಬದುಕಿನ ಭರವಸೆ

*ಅಮು ಭಾವಜೀವಿ*

*ದಿಬ್ಬಣ*

ಈ ಸಂಜೆ ನಿನ್ನ
ನೆನಪಾದ ಕೂಡಲೇ
ರಂಗೇರಿತು ಮೋಡ ದಿಬ್ಬಣ
ಹರೆಯದ ಹಾದಿಯಲಿ
ಸಾಗಿದೆ ಮನದೊಳಗಿನ
ಬಯಕೆಗಳ ದಿಬ್ಬಣ
ನೀನಿರದ ಬೇಸರಕೆ
ಇನ್ನೂ ಸಿಕ್ಕಿಲ್ಲ ನಿಲ್ದಾಣ

ಅಮು ಭಾವಜೀವಿ

*ಅಮುಭಾವ ೧*

ಈ ಬಿಸಿಲ ಬೇಗೆಯೊಳಗೆ
ನೀ ನೆರಳ ಬಯಸಬೇಡ *ಅಮು*
ಇದ್ದ ಮರಗಿಗಗಳನೆಲ್ಲ
ನಿಮ್ಮವರು ಕಡಿದು
ಭೂಮಿಯ ಬರಡು
ಮಾಡಿಹರು ಇನ್ನು
ಮಳೆ ಬರುವುದಿಲ್ಲ
ನೆರಳು ನೆರಳು ಸಿಕ್ಕುವುದಿಲ್ಲ

*ಅಮು*

*ಬುದ್ದನಾಗಿ ಬದಲಾದೆ*

ಜಗವೆಲ್ಲ ಮಲಗಿರುವಾಗ
ನೀನೊಬ್ಬನೇ ಎದ್ದು ಹೋದೆ
ಜಗದ ನೋವಿಗೆ ಉತ್ತರ ಹುಡುಕಲು
ಸಂಸಾರದ ಜವಾಬ್ದಾರಿ ಹೊರದೆಹೋದೆ

ಎಳೆಕಂದನ ತಬ್ಬಲಿಯಾಗಿಸಿ
ನಂಬಿ ಬಂದವಳ ಒಂಟಿಯಾಗಿಸಿ
ರಾಜಭೋಗವನೆಲ್ಲ ತೊರೆದು
ವೈರಾಗ್ಯ ನಿಧಿಯಾಗಿ ಹೋದೆ

ಸಿದ್ದಿಗಾಗಿ ನೀ ಸದ್ದು ಮಾಡದೆ
ಬುದ್ದಿ ಹೇಳಿದ ಮಾತು ಕೇಳಿ
ಜೀವನದ ಅ ಅರ್ಥ ಹುಡುಕಲು
ಸಿದ್ದಾರ್ಥ ನೀ ಬುದ್ದನಾಗಿ ಬದಲಾದೆ

ಅದೆಂತ ಮಂಪರು ಕವಿದಿತ್ತೋ
ಯಶೋಧರೆಗೂ ಹೇಳದೆ ನಡೆದೆ
ಯುವರಾಣಿಯ ಆಸೆಗೆ ತಣ್ಣೀರೆರಚಿ
ಆಸೆಯೇ ದುಃಖಕ್ಕೆ ಮೂಲವೆಂದು ಸಾರಿದೆ

ಮಗನಿಗೆ ಅಪ್ಪನಾಗಲಿಲ್ಲ
ಮಡದಿಗೆ ಗಂಡನೂ ಆಗಲಿಲ್ಲ
ರಾಜ್ಯಕ್ಕೆ ಮಹಾರಾಜನಾಗಲೂ ಇಲ್ಲ
ಲಾಲಸೆಗಳ ಗೆದ್ದು ಪೂಜ್ಯನಾಗಿ ಬಿಟ್ಟೆ

0146ಪಿಎಂ17052019
*ಅಮು ಭಾವಜೀವಿ*

*ಒಲವ ಸ್ಪರ್ಶ*

ಆಂತರ್ಯದ ಕ್ರೋಧಾಗ್ನಿಯು
ಶ್ರವನ ಗೊಳ್ಳಲು ಬೇಕು ಗೆಳತಿ
ನಿನ್ನೊಲವಿನ ತಣ್ಣನೆಯ ಸ್ಪರ್ಶ
ಎದೆಯ ಭಾವಕೆ ಮುದ ನೀಡುವ
ನಿನ್ನ ನಗುವಿನ ತನನ ಗಾನ
ಕೇಳಿ ಮನಸಿಗಾಯಿತು ಹರ್ಷ

ಬಾಂದಳದಿ ಮೂಡಿದ ಬಾಲರವಿ
ಬೇಸರದ ಕತ್ತಲೆಯ ದೂಡಿದನು
ಮುಂಜಾನೆಯ ಇಬ್ಬನಿಯ ಸೇರಲು
ಹೃದಯದೊಳಗಿನ ನೋವುಗಳ
ದೂರ ತಳ್ಳಿದೆ ನಿನ್ನ ಒಲವು
ಈ ಬದುಕ ಕಾಪಾಡಲು

ಪ್ರೇಮದ ಅಮಲೇರಿದ ಎದೆಗೆ
ಕನಸು ಕಲ್ಪನೆಗಳು ಆಲಾಪನೆ
ನೂರಾರು ಕವಿತೆಗಳ ಹೆಣೆಯಿತು
ವಿರಹದ ಉರಿ ತಾಪಕೆ
ಬೆಳದಿಂಗಳ ಲೇಪನ
ಮನವ ಮುದಗೊಳಿಸಿತು

ಒಡಲಾಗ್ನಿ ಈಗ ತಂಪಾಗಿ
ನಂದಾ ದೀಪದ ಜ್ಯೋತಿ ಬೆಳಕಾಗಿ
ಜೀವನಯಾನ ಸುಖಮಯವಾಗಿದೆ
ಚೈತ್ರ ಚಿಗುರಿನ ಸೋಂಪು
ದುಂಡು ಮಲ್ಲಿಗೆಯ ಕಂಪು
ಮೈ ಮನಸ್ಸುಗಳ ತಣಿಸಿದೆ

0618ಎಎಂ18052019
*ಅಮು ಭಾವಜೀವಿ*

*ನಮ್ಮ ಹೋರಾಟ*

ನೀ ನನ್ನೊಳಗೆ ನಾ ನಿನ್ನೊಳಗೆ
ಎನ್ನುವುದೆಲ್ಲಾ ಬರೀ ಮಾತು
ಪ್ರೀತಿಯಿಂದ ಬದುಕುವುದು
ಅದು ಇಬ್ಬರಿಗೂ ಗೊತ್ತು

ನನಗಾಗಿ ನೀನು ನಿನಗಾಗಿ ನಾನು
ಬದುಕುವುದು ಅನಿವಾರ್ಯವೇ ಇಲ್ಲಿ
ತುಂಬಾ ಹಚ್ಚಿಕೊಂಡಿರುವೆ ನಿನ್ನನ್ನು
ಊಹಿಸಿಕೊಳ್ಳಲಾರೆ ನೀಡಿರುವ ಬದುಕನ್ನು

ಎದೆಯ ಭಾವಗಳಿಗೆಲ್ಲ ಉಸಿರಾಗಿ
ಬಂದೆ ನೀ ಕಂಡ ಕನಸುಗಳ ಹೆಸರಾಗಿ
ಕಲ್ಪನೆಯ ಮೂಸೆಯಲ್ಲಿ ಅರಳಿದ ಹೂ
ನೀನು ವಾಸ್ತವದ ಬೆಳಕಾಗಿ ಪುಳಕವಿತ್ತೆ

ಜಾತಿಯಾಚೆಗೂ ನನ್ನನ್ನು ಜತನದಿ
ಜೋಪಾನ ಮಾಡಿಕೊಂಡು ಬಂದೆ
ಜೀವಮಾನದ ಕನಸು ನನಸಾಗಿ
ನಿನ್ನೆ ತಾಯ್ಮಡಿಲಲಿ ಮಲಗಿದೆ

ನಾನು ನೀನಿನ ಅಂತರವ ದೂಡಿ
ನಮ್ಮಿಬ್ಬರೊಲವ ಜೊತೆ ಮಾಡಿ
ಜಗದೆದುರು ಜಯಿಸ ಹೊರಟ
ನಮ್ಮಿಬ್ಬರದು ನಿತ್ಯ ಸತ್ಯದ ಹೋರಾಟ
*ಅಮುಭಾವಜೀವಿ*

*ಬೇಸರ*

ಏಕೆ ಈ ಬೇಸರ
ಬದುಕೇ ಬರೀ ನಶ್ವರ
ನಗುವಿಲ್ಲದಿರಲು
ಅಳು ಆಳುತಲಿರಲು
ಮನ ಸೋತು ಕೂತಿರಲು
ಆ ನೋವು ನರಳಿಸಿದೆ

*ಅಮುಭಾವಜೀವಿ*

*ಭಾವಯಾನ*

ಶುಭೋದಯದ ಸದಾಶಯಕೆ
ಭಾವಯಾನದ ಸಹಯಾನ
ಮನಕೆ ಮುದ ನೀಡಿವೆ
ಮುಂಜಾನೆ ಹನಿಗಳಂತಹ
ಕವಿಭಾವದ ಕವನಗಳ ತನನ
ಬದುಕಿನ ನಿರ್ಲಿಪ್ತತೆಯ ದೂಡಿ
ಇಂಚರದಂತೆ ಹಾಡಿ
ಹೊಸತನ ತಂತು
ಕಾಮನಬಿಲ್ಲಿನ ರಂಗನು ಎರಚಿ
ಹೊಸ ಭರವಸೆ ಮೂಡಿಸಿ
ತೇಲಿ ಬಂತು ಭಾವಯಾನ ಗಾನ

*ಅಮು ಭಾವಜೀವಿ*

(ಅಪ್ಪಾಜಿ ಎ ಮುಸ್ಟೂರು)

*ನೆನಪುಗಳ ಕ್ರೌರ್ಯ*

ಮನದ ಬಾನಲಿ ತೇಲುತಿದೆ
ಸುಂದರ ಚಂದಿರನ ಹೆಣ
ನಿನ್ನ ಈ ಮೌನ ತಂದ
ನೋವೇ ಅದಕೆಲ್ಲ ಕಾರಣ

ಕೋಟಿ ತಾರೆಗಳು ಕಂಬನಿ
ಮಿಡಿದು ಬೀಳ್ಕೊಡುತಿವೆ
ನೈದಿಲೆಯು ವಿರಹದ
ಬಾಣಲೆಗೆ ಬಿದ್ದು ಬೇಯುತಿದೆ

ಉಕ್ಕುವ ಅಲೆಗಳಲೂ
ಅದೇ ನೀರವ ಮೌನ
ಕಾರ್ಗತ್ತಲ ಹಾದಿಯಲ್ಲಿ
ದಾರಿಕಾಣದಾಗಿದೆ ಮನ

ಒಲವ ಬೆಳದಿಂಗಳ
ಮುದವಿಲ್ಲದೆ ದಣಿದಿದೆ ತನುವು
ಹುಣ್ಣಿಮೆಯ ಭ್ರಮೆಯಲ್ಲಿ
ಅಮವಾಸ್ಯೆಯ ಕರಾಳಕೆ ಬೆದರಿತು ಮನವು

ಕಾಲದ ಈಟಿಯು ಕ್ಷಣ ಕ್ಷಣಕ್ಕೂ
ತಿವಿಯುತಿದೆ ಜಾಗೃತವಾಗೆಂದು
ನಂಬಿದ ಬದುಕೇ ನರಳಿ ಕೂತಿದೆ
ಚಂದಿರನು ಮತ್ತೆ ಸಿಗನೆಂದು

ಅವನ ದಿನದ ಕಾರ್ಯಗಳಿಗಿಂತ
ನೆನಪುಗಳ ಕ್ರೌರ್ಯ ನಿತ್ಯ ಕೊಲ್ಲುತಿದೆ
ನನ್ನವನ ಬಿಟ್ಟು ಹೋದ ಈ ಖಾಲಿತನ
ಬದುಕಿನುದ್ದಕ್ಕೂ ಬೆಂಬಿಡದೆ ಕಾಡಿದೆ

*ಅಮು ಭಾವಜೀವಿ*
ಸಿರಾ

ಅಗೋಚರ ಅನುಬಂಧ*

ನನ್ನ ಹೆಗಲ ಮೇಲೆ ನಿನ್ನ ಕೈ
ನಿನ್ನ ಬೆನ್ನ ಹಿಂದೆ ನನ್ನ ಕೈ
ಎರಡೂ ಕೈ ನನ್ನದೇ ಅಲ್ಲವೇ
ಅದುವೆ ನನ್ನೊಳಗಿನ ನಾನು

ನೊಂದಾಗ ಕಣ್ಣೊರೆಸುತ
ಸೋತಾಗ ಬೆನ್ನು ತಟ್ಟುತ
ಮತ್ತೆ ಮತ್ತೆ ಭರವಸೆ ಕುಸಿದಾಗ
ಎತ್ತಿ ನಿಲ್ಲಿಸಿದ ಕೈ ಅದು ನಾನೇ

ಒಂಟಿತನದ ಪಯಣದಲ್ಲಿ
ಮುನ್ನುಗುವ ಛಲ ತುಂಬುವ
ಆತ್ಮವಿಶ್ವಾಸದ ಅಂತಃಕರಣ
ನೀಡಿದ್ದು ನನಗೆ ನಾನೇ

ಬೆನ್ನಿಗಿರಿಯುವವರು ಬೇಡ
ಬೆಂಬಲದ ನೆಪದಲ್ಲಿ ಕಾಲೆಳೆದು
ಮತ್ತೆ ಕೈ ನೀಡುವ ದುರಳರ
ಸಹವಾಸ ಬಯಸದ ನನ್ನೊಳಗಿನ ನಾನು

ಆ ಅಗೋಚರ ಅನುಬಂಧದ
ಅನುಸಂಧಾನವೇ ನನ್ನೊಳಗಿನ ನಾನು
ಜೊತೆ ಜೊತೆಗೆ ಹೆಜ್ಜೆಯನಿಡುವ
ನನ್ನೊಳಗಿನ ಸ್ನೇಹಿತ ನಾನೇ

1219ಪಿಎಂ19052019
*ಅಮು ಭಾವಜೀವಿ*
[

ಕ್ಷಮಿಸಿ ಬಿಡು*

ಕ್ಷಮಿಸಿ ಬಿಡು ನಿನ್ನ
ಮನವ ನೋಯಿಸಿದ ತಪ್ಪಿಗೆ
ನಾನು ಕೂಡ ನೊಂದಿರುವೆ
ಅದೇಕೆ ಅರ್ಥವಾಗದದು ನಿನಗೆ

ತಪ್ಪು ಹೆಜ್ಜೆ ಇಡಲಾರೆ
ತುಟಿ ಬಿಚ್ಚಿ ಹೇಳಲಾರೆ
ಈ ಜೀವ ಜೀವನವೆಲ್ಲಾ
ನೀನಲ್ಲದೆ ಬೇರೆ ಬೇಕಿಲ್ಲ

ಹೃದಯವಾಸಿಯು ನೀನು
ಬಯಸಿಯೇ ಪಡೆದೆ ನಿನ್ನನು
ಅಗಲಿ ಇರಲಾರೆ ಎಂದೆಂದಿಗೂ
ಅಭಿಮಾನವಿರಲಿ ಇನ್ನೆಂದಿಗೂ

ಅಪರಂಜಿಯು ಇನಿಯೇ ನೀನು
ಕಪ್ಪಿರುವ ಗುಲಗಂಜಿಯು ನಾನು ನಿನ್ನೊಲವಿಗಾಗಿ ನಾ ಕಾವಲು
ನನ್ನ ಬದುಕಿದು ನಿನಗೆ ಮೀಸಲು

ಮರೆತುಬಿಡು ನಡೆದುದನೆಲ್ಲ
ಮನ್ನಿಸಿಬಿಡು ಇನ್ನು ತಪ್ಪಾಗುವುದಿಲ್ಲ
ಉಸಿರಿರುವವರೆಗೂ ನೀನೆ ಆಸರೆ
ಭಾಗ್ಯವಂತ ನಾ ನಿನ್ನ ಮಡಿಲಲಿ ಉಸಿರು ನಿಂತರೆ

0422 ಪಿಎಂ 04122018
*ಅಮುಭಾವಜೀವಿ*

ಇವರು ನಮ್ಮ ನಾಯಕರು*
•••••••••••••••••••••••••••

ಇವರು ನಮ್ಮ ನಾಯಕರು
ಅಧಿಕಾರಕಾಗಿ ಅಲೆಯುತಿಹರು
ಆಯ್ಕೆಯಾದ ಕ್ಷೇತ್ರ ತೊರೆದು
ಐಶಾರಾಮಿ ಬಂಧನಕೆ ಒಳಗಾಹರು

ಕ್ಷೇತ್ರದ ಹಳ್ಳಿಗಳು ನರಳುತ್ತಿವೆ
ಸಮಸ್ಯೆಗಳು ತಾಂಡವವಾಡುತ್ತಿವೆ
ತನ್ನನ್ನೇ ರಕ್ಷಿಸಿಕೊಳ್ಳದವ
ಆರಿಸಿದ ಅಮಾಯಕರನೇನು ರಕ್ಷಿಸಿಯಾನು

ಕೊಟ್ಟ ಭರವಸೆಗಳನೆಲ್ಲ ಮರೆತು
ಇಟ್ಟ ನಂಬಿಕೆಯನು ಪಕ್ಕಕ್ಕಿಟ್ಟು
ಇತ್ತ ತಲೆ ಹಾಕದೆ ಅತ್ತ ತಲೆಕೆಡಿಸಿಕೊಂಡು
ಅಲೆಯುತಿಹ ಇವರು ನಮ್ಮ ನಾಯಕರು

ಸ್ವಾಭಿಮಾನವೇ ಇಲ್ಲದವರು
ಅಭಿಮಾನವೇ ಮಾರಿಕೊಂಡವರು
ಆತ್ಮಸಾಕ್ಷಿಗೆ ದ್ರೋಹ ಬಗೆದು
ಅವಿತುಕೊಳ್ಳುತಿರುವ ಇವರೆಮ್ಮ ನಾಯಕರು

ಅಧಿಕಾರವೊಂದೇ ಇವರ ಮಂತ್ರ
ಜನಸಾಮಾನ್ಯನಾಗಿಹ ಅತಂತ್ರ
ಬೀದಿಗೆ ಬಿತ್ತು ನನ್ನ ಹೆಮ್ಮೆಯ ಪ್ರಜಾತಂತ್ರ
ಅದಕೆಲ್ಲ ಕಾರಣ ಇವರ ಕುತಂತ್ರ

ಯೋಚಿಸಬೇಡ ಮತದಾರ
ಮತ್ತೆ ಬರುವುದು ನಿನಗೆ ಅಧಿಕಾರ
ಆಗ ತೋರಿಸು ನಿನ್ನ ಸಾಮರ್ಥ್ಯ
ನಾಡಿಗೆ ನೀಡು ಉತ್ತಮರ ಸಾರಥ್ಯ

*ಅಮು ಭಾವಜೀವಿ*
[

*ಹಂಬಲ*

ಚುಚ್ಚು ಮಾತುಗಳಿಂದ
ಮೆಚ್ಚುವ ಮಾತು ಕೇಳುವಾಸೆ
ಅಭಿಮಾನದ ಮಾತಿಗಿಂತ
ಅಂತರಂಗದ ಮಾತಿಗೆ ಬೆಲೆ ಕೊಡುವೆ
ನೊಂದು ಕೂರುವುದಕ್ಕಿಂತ
ನೋವ ಮರೆತು ಬಾಳುವೆ
ಎಲ್ಲಾ ಕಳೆದುಕೊಂಡಾಗ
ಸ್ನೇಹಕಾಗಿ ಹಂಬಲಿಸುವೆ

*ಅಮು ಭಾವಜೀವಿ*

*ಭಾವಯಾನ 2*

ಮೊದಲ ಮಳೆಗೆ
ಇಳೆ ತಣಿದಂತೆ
ಮುದ ನೀಡಿತು ಭಾವಯಾನ
ತನು ಮನಗಳ
ತಲ್ಲಣವ ಹೊರದೂಡಿ
ಸವಿಭಾವವ ತಂತು ವಸಂತಗಾನ
ಮುಂಜಾನೆಯ ಮಂಜಿನಂತೆ
ಕಾಮನಬಿಲ್ಲಿನ ರಂಗಿನಂತೆ
ಭಾವಪರವಶವಾಯ್ತು ಮನ
ಮಾನವನ ಕೃತಕತೆಗೆ
ಸವಾಲೊಡ್ಡಿ ಹೊಸತನದ
ಹಿತಾನುಭವ ನೀಡಿತು ಈ ಭಾವಯಾನ

*ಅಮು ಭಾವಜೀವಿ*
ಅಪ್ಪಾಜಿ ಎ ಮುಸ್ಟೂರು

*ನವಿಲ ಬಣ್ಣ*

ನನ್ನೆದೆಯ ಬನದಲ್ಲಿ
ನಲಿವ ನವಿಲು ನೀನು
ನಿನ್ನ ಚೆಲುವ ಕಂಗಳಲಿ
ಹೊಳೆವ ಬಣ್ಣ ನಾನು

0500ಪಿಎಂ15052017
*ಅಮುಭಾವಜೀವಿ*

*ಹೋಗದಿರು ದೂರ*

ಹೋಗದಿರು ಬಹುದೂರ
ಪ್ರೀತಿಸುವ ಹೃದಯಕದು ಭಾರ
ಇರಲು ಹತ್ತಿರ ಬದುಕು ಸುಂದರ

ಕರಗಬೇಕು ಮತ್ತೆ ಮತ್ತೆ
ಪ್ರೀತಿಯ ಬಿಸಿಯಪ್ಪುಗೆಗೆ
ಮಂಜು ಕರಗುವಂತೆ ಬಿಸಿಲಿಗೆ

ಪ್ರೇಮದ ಮಳೆಯಲ್ಲಿ ತೊಯ್ದು
ತೋಳ್ಬಂಧಿಯ ಅಣೆಕಟ್ಟೆ ತಡೆದು
ಬಾಳನೌಕೆಯ ದಡ ಸೇರಿಸು

ಕೂಡಿಕೊಳ್ಳಲಿ ಬಂಧನದ ಬೆಸುಗೆ
ಬಾಡಿಹೋಗದಿರಲಿ ಸುಮ ಬಿಸಿಲಿಗೆ
ಉಳಿಯಲಿ ಪ್ರೀತಿ ಜನ್ಮಾಂತರಕೆ

*ಅಮು ಭಾವಜೀವಿ*

*ಅದಾವ ಶಕ್ತಿ ಕಾಪಾಡಬೇಕೋ*

ಭ್ರಷ್ಟ ದುಷ್ಟರು ಎಲ್ಲಾ
ಕೈಗೆ ಸಿಗದೆ ಮೆರೆಯುತಿಹರು
ದಕ್ಷ ಅಧಿಕಾರಿಗಳೆಲ್ಲಾ
ಅನುಮಾನಾಸ್ಪವಾಗಿ ಸಾಯುತಿಹರು

ಸ್ವಾತಂತ್ರ್ಯದ ಸಮಾನತೆ ಎಂಬುದು
ಸಂವಿಧಾನದ ಆಶಯವಾದರೆ
ಅಧಿಕಾರದಮಲೇರಿದ ನಾಯಕರು
ಅಧಿಕಾರಿಗಳ ಹಿಂಸಿಸಿ ದೌರ್ಜನ್ಯವೆಸಗುತಿಹರು

ಭ್ರಷ್ಟಾಚಾರದ ಕಬಂಧ ಬಾಹು
ಎಲ್ಲವನ್ನೂ ಕಬಳಿಸುತ್ತಿದೆ
ಸಾಮಾಜಿಕ ನ್ಯಾಯಕ್ಕೆ ಹೋರಾಡುವ
ಅಧಿಕಾರಿಗಳ ಬಲಿಯಾಗುತಿದೆ

ಮಾಫಿಯಾಗಳೇ ಇಂದು ಆಳುತಿವೆ
ಅಮಾಯಕರ ಹೆಣ ಬೀಳುತಿವೆ
ಕಾನೂನು ಕಣ್ಮುಚ್ಚಿ ಕೂತಿದೆ
ಪ್ರಾಮಾಣಿಕತೆ ಬೇಸತ್ತು ಸೋತಿದೆ

ನಿಷ್ಟಾವಂತರಿಗೆ ರಕ್ಷಣೆಯೇ ಇಲ್ಲ 
ಕಳ್ಳ ಖದೀಮರಿಗೆ ಶಿಕ್ಷೆಯೇ ಆಗುತಿಲ್ಲ
ಅಧರ್ಮದ ಕರ್ಮ ಕಳೆವುದು ಯಾವಾಗ
ಧರ್ಮ ಸಂಸ್ಥಾಪನೆಗೊಳ್ಳುವುದೇ ಈಗ

ದಕ್ಷತೆ ಮೆರೆದವರು ರಕ್ಷಿಸಲು
ಅದಾವ ಶಕ್ತಿ ಕಾಪಾಡಬೇಕೋ
ಅದೇ ಭ್ರಷ್ಟರನು ಬಚ್ಚಿಟ್ಟಿದೆ
ಅಮಾಯಕರ ದಮನ ಮಾಡುತಿದೆ.

1242ಪಿಎಂ20052916
*ಅಮುಭಾವಜೀವಿ*

*ಹಾಯ್ಕು*

*ಬರ*

ಬರವು ಬಂದು
ನೀರಿಗಾಗಿ ಜನರು
ಬೇಡುತಿಹರು

ಕಾಡು ನಾಶಕ್ಕೆ
ಮಳೆ ಮುನಿದು ಕೂತಾಗ
ಬರ ಸಾಮಾನ್ಯ

ಕಾಡ್ಗಿಚ್ಚು ಹೊತ್ತಿ
ಸುಟ್ಟು ಹಾಕಿತು ಎಲ್ಲ
ನೀರವ ಮೌನ

ಬೆಂದ ಬದುಕು
ಬಸವಳಿದು ಬರ
ನೀಗೆಂದಿಹುದು

ಪರಿಸರವು
ಅವಸರವಾಗಿ ಈ
ನಾಶವಾಯಿತು

ನಿಸರ್ಗವೀಗ
ದಂಗು ಬಡಿಸಿದೆ ಈ
ದುಷ್ಟರ ಕಂಡು

ಮಳೆ ಬರಲಿ
ಬುವಿ ನೆನೆದು ತಂಪು
ಜಗ ತುಂಬಲಿ

0241ಪಿಎಂ20052019

*ಅಮು ಭಾವಜೀವಿ*

*ಭಾವಯಾನ ೩*

ಮೂಡಣದ ಬಯಲಲ್ಲಿ
ಮೂಡಿಬರುವ ರವಿಯಂತೆ
ಪಡುವಣದ ಅಂಚಿನಲಿ
ಮರೆಯಾಗೋ ಶಶಿಯಂತೆ
ಮುಂಜಾನೆಯ ಭಾವಯಾನ
ಮಂಜಿನ ಹನಿಗಳ ಸಾಲಲ್ಲಿ
ಹೊಳೆವ ಕಿರಣದೊಳಪಲ್ಲಿ
ಬೆಳಗಿನ ಅನಾವರಣ
ಕಣ್ಣುಜ್ಜಿ ಹೊರ ಬರುವ
ಬದುಕಿಗೆ ಹೊಸ ಚೇತನ
ತಂತು ಇಂಚರದ ಆರಾಧನ
ಕಾಮನಬಿಲ್ಲಿನ ರಂಗಿನಲಿ
ತೇಲಿ ಬಂತು ತರಂಗದಲಿ
ಸಂಗೀತದ ಈ ಆಲಾಪನ

*ಅಪ್ಪಾಜಿ ಎ ಮುಸ್ಟೂರು*