*14 ವರ್ಷ ಹಳೆಯ ಕವಿತೆ*
*ಕೂಲಿಗ ನಾ ಸಾಲಿಗ*
ಸಾಲಿಗನು ನಾನು
ಕೂಲಿಗನು ನಾನು
ಈ ಜಗದ ಬಾಳೊಳಗೆ
ಇರುವ ಮೂರು ದಿನದೊಳಗೆ
ಹೆತ್ತು ಹೊತ್ತ ತಾಯಿ ಋಣದ ಸಾಲ
ಸಾಕಿ ಬೆಳೆಸಿದ ತಂದೆ ಋಣದ ಸಾಲ
ವಿದ್ಯೆ ಕೊಟ್ಟ ಗುರುವಿನ ಸಾಲದ
ಹೊರೆ ಹೊತ್ತ ಬಾಲನು ನಾನು
ಹೊತ್ತ ಭೂಮಿಯ ಸಾಲ
ಕುಡಿಯುವ ಗಾಳಿ ನೀರಿನ ಸಾಲ
ತಿನ್ನೋ ಅನ್ನ ಹೋಗೋ ಮಣ್ಣ
ಋಣಗಳ ಸಾಲ ತೀರಿಸ ಬಂದವ ನಾನು
ಅನ್ನಕ್ಕಾಗಿ ವೃತ್ತಿ ಹಿಡಿದು
ನಂಬಿದವರಿಗೆ ಆಸರೆಯಾಗಿ
ಬಾಳ ಬಂಡಿಯನೆಳೆವ
ಕೂಲಿಗನು ನಾನು
ಪ್ರೇಮ ಕಾಮಗಳಿಂದ ಒಂದಾಗಿ
ಕುಲಕೊಬ್ಬ ವಾರಸುದಾರನನಿತ್ತು
ಭವಿಷ್ಯದ ಬೆಳಕಿಗಾಗಿ
ಹಗಲಿರುಳು ದುಡಿಯುವ ಕೂಲಿಗನು ನಾನು
544ಪಿಎಂ01092005
ಅಮು ಭಾವಜೀವಿ
*ಜೀವ ಚೇತನ*
ಮಾಗಿ ಚಳಿಯ ಮಬ್ಬಿನಲ್ಲಿ
ಬೆಳ್ಳಿ ಮೂಡೋ ಹೊತ್ತಿನಲ್ಲಿ
ಉಷೆಯ ರಥವನೇರಿ ಬಂದ
ಜಗವ ನಿದ್ರೆ ಮಂಪರಿನಿಂದೆಬ್ಬಿಸಿ
ಏಳಿ ಎದ್ದೇಳಿರೆಂದು ಎಚ್ಚರಿಸಿ
ಹೊಂಗಿರಣ ಚಾಚಿ ಬಂದ
ಮೊಗ್ಗುಗಳ ಮೈ ಸವರಿ
ದಳಗಳ ಮೆಲ್ಲ ಬಿಡಿಸಿ
ಸೌಂದರ್ಯದ ಕದ ತೆರೆದ
ತಬ್ಬಿ ಹಿಡಿದ ಎಲೆಗಳಿಗೆ
ಎಳೆ ಬಿಸಿಲ ಬಿಸಿ ಮುಟ್ಟಿಸಿ
ಬೆಳಗಾಯಿತೇಳಿರೆಂದ
ಶಾಂತ ಕಡಲಿನೆದೆಯಲಿ
ಧುಮುಕಿ ಹೊಂಬಣ್ಣ ಬೆರೆಸಿ
ಅಲೆಗಳಿಂದ ಸಂದೇಶ ಕಳುಹಿಸಿದ
ಉಲ್ಲಾಸದಿ ತೆರೆಗಳೆಲ್ಲ ಸಂಭ್ರಮದಿ
ದಡವ ಮುಟ್ಟಿ ಹಿಂದೆ ಓಡಲು
ಬಿಸಿಲ ಝಳ ಏರಿಸಿ ನಡೆದ
ದಿನದ ಕಾಯಕ ಪ್ರಾರಂಭಿಸಿ
ಜಗದ ಕಾರ್ಯವ ನೆನಪಿಸಿ
ಎಲ್ಲಕ್ಕೂ ಜೀವ ಚೇತನ ತಂದ
ಪ್ರಕೃತಿಯ ಈ ವಿಸ್ಮಯ
ಪ್ರತಿ ಕ್ಷಣವೂ ತೆರೆದಿಡುತ
ದಿನದೊಡೆಯ ತಾ ಮೆರೆದ
0702ಎಎಂ12012019
*ಅಮು ಭಾವಜೀವಿ*
*ಭಾರತದ ಸೂರ್ಯ ಸ್ವಾಮಿ ವಿವೇಕಾನಂದರ ಜನ್ಮದಿನದ ಹಾರ್ದಿಕ ಶುಭಾಶಯಗಳು ಶುಭೋದಯದೊಂದಿಗೆ*
*ಯಾರು ಕಲಿಸಿದವರು*
ಓ ಬೆಳ್ಳಿ ಮೋಡಗಳೇ
ನಿಮ್ಮನ್ನು ಅಲ್ಲಿ ತಳ್ಳುವವರ್ಯಾರು
ಓಡುವ ಪ್ರತಿ ಕ್ಷಣ ಒಂದೊಂದು
ಚಿತ್ತಾರ ಬಿಡಿಸುವವ ಅವನಾರು
ನೀಲಿ ಬಾನಿನ ಒಡೆಯ
ಆ ಸೂರ್ಯನಿಗೆ ಅಡ್ಡ ನಿಲ್ಲುವಿರಿ
ಬಿಸಿಲಲ್ಲಿ ಬೆಂದು ಬಳಲಿದವರಿಗೆ
ಕ್ಷಣ ತಂಪು ನೆರಳನ್ನು ನೀಡುವಿರಿ
ತಾರೆಗಳ ಬಳಗದ ಗೆಳೆಯ ಬೆಳದಿಂಗಳೀವ ಶಶಿಯ
ಮೊಗದ ಮೇಲೆ ಪರದೆಯಾಗಿ ಜಾರಿ
ನೀವು ಆ ಇರುಳೊಳಗೂ ಹೊಳೆಯುವಿರಿ
ಸಂಜೆಯ ರಂಗಿಗೆ ನಿಮ್ಮ ಬಣ್ಣ ಬಯಲಾಗಿ
ಶೃಂಗಾರ ರಸ ನಿಮಿಷ ಗೋಧೂಳಿಗಾಗಿ
ಭಾವನೆಗಳ ಚಿತ್ತಾರವಾಗಿ
ಮರೆಯಾಗುವಿರಿ ನೀವು ಅಲ್ಲಿ ಕರಗಿ
ಯಾರು ನಿಮಗಿದನ್ನೆಲ್ಲ ಕಲಿಸಿದ ಗುರು
ಹೇಳಬಾರದು ಒಮ್ಮೆ ಅವನ ಹೆಸರು
ಮೌನ ತೊರೆದು ಮಾತಾಡಿ
ರೆಕ್ಕೆ ಇರದೇ ಹಾರುವ ಓ ಬಾನಾಡಿ
*ಅಮು ಭಾವಜೀವಿ*
1 10 2004.04:35 ಪಿಎಂ
No comments:
Post a Comment