*ಪ್ರೀತಿಯೆಂದರೆ...............?*
ಪ್ರೀತಿ ಎಂಬುದು ಒಂದು ಭಾವನೆ. ಪ್ರತಿ ಜೀವದ ಚೈತನ್ಯ ಸ್ವರೂಪ ಈ ಪ್ರೀತಿ. ಈ ಜಗತ್ತು ನಿಂತಿರುವುದು, ಈ ಜಗತ್ತು ಬಯಸುವುದು , ಈ ಜಗತ್ತು ಆರಾಧಿಸುವುದು, ಈ ಜಗತ್ತಿನ ಅಡಿಪಾಯ ಆಗಿರುವುದು ಪ್ರೀತಿ ಮಾತ್ರವೇ. ಪ್ರತಿಯೊಂದು ಜೀವಿಯು ಪ್ರೀತಿಯ ಮಡಿಲಲ್ಲಿ ಆಡಿ ಬೆಳೆದು ಬದುಕಿನ ಗುರಿಯನ್ನು ಮುಟ್ಟಿರುತ್ತದೆ. ಸೂರ್ಯ ಹುಟ್ಟಿದಾಗ ಆ ಕಿರಣಗಳ ಸೋಕಿ ಮೊಗ್ಗು ಹೂವಾಗಿ ಅರಳುತ್ತದೆ. ಅರಳಿದ ಹೂವಿನಲ್ಲಿ ದುಂಬಿ ಬಂದು ಮಕರಂದವನ್ನು ಹೀರುತ್ತವೆ. ಆ ಸವಿಯಾದ ಜೇನನ್ನು ಮನುಷ್ಯ ಅಪಹರಿಸಿ ಸುಖಿಸುತ್ತಾನೆ. ಪ್ರೀತಿ ಜಗವನ್ನು ಆಳುತ್ತದೆ. ತಾರತಮ್ಯರಹಿತ ಬದುಕನ್ನು ಪಡೆಯಲು ಪರಸ್ಪರರು ಪ್ರೀತಿಸಿದರೆ ಸಾಕು.
ಪ್ರೀತಿ ಯಾವಾಗಲೂ ಏನನ್ನೂ ಕೇಳುವುದಿಲ್ಲ ಬದಲಾಗಿ ಇನ್ನು ತಾನೆ ಕೊಡುತ್ತದೆ ಎನ್ನುವ ಅನಾಮಿಕನ ಮಾತಿನಂತೆ ಪ್ರೀತಿಗಾಗಿ ನಾವಲ್ಲಾ ನಮಗಾಗಿ ಪ್ರೀತಿ ಮಾತ್ರ ಇದೆ. ಈ ಜಗತ್ತು ಪ್ರೀತಿಯನ್ನು ಮರೆತ ಕ್ಷಣ ರಣರಂಗವಾಗಿ ರಕ್ತದ ಕೋಡಿ ಹರಿಸುತ್ತದೆ. ಪ್ರೀತಿಗೆ ಯಾವ ಅಳತೆಗಳು ಇಲ್ಲ. ಅದು ಅನಂತ, ಇತರರಿಗೆ ಅದನ್ನು ಕೊಟ್ಟಷ್ಟು ನಮ್ಮಲ್ಲಿ ಅಧಿಕಗೊಳ್ಳುವ ಸಂಪತ್ತು ಪ್ರೀತಿ. ಆ ಪ್ರೀತಿ ಹೃದಯದಲ್ಲಿ ಸಂತೃಪ್ತಿ , ಸಮಾಧಾನ , ಸಹಬಾಳ್ವೆ, ಸಂಬಂಧ ಅನುಬಂಧ, ನೋವು ನಲಿವುಗಳನ್ನು ಮೆಟ್ಟಿ ನಿಲ್ಲುವ ಬದುಕಿನ ಅನುಸಂಧಾನವೇ ಪ್ರೀತಿ.
ಪ್ರೀತಿಯೆಂದರೆ ಕೆಲವರು ಅಸಹ್ಯ ಪಟ್ಟುಕೊಳ್ಳುತ್ತಾರೆ. ಅದರಿಂದ ಮಾರು ದೂರ ನಿಲ್ಲುತ್ತಾರೆ , ಬೆಚ್ಚಿಬೀಳುತ್ತಾರೆ. ಅಷ್ಟರಮಟ್ಟಿಗೆ ಪ್ರೀತಿಯೆನ್ನುವುದು ಅರ್ಥಹೀನವಾಗಿದೆ . ನೋಡುವ ಕಣ್ಣಿಗೆ ಹಗುರವಾಗಿದೆ. ಹೀಗಿದ್ದರೂ ಪ್ರೀತಿ ಪ್ರೀತಿಯಾಗಿಯೇ ಉಳಿದಿದೆ. ಪ್ರೀತಿ ಎಂದರೆ ಕೇವಲ ದೇಹದ ಆಕರ್ಷಣೆಯಲ್ಲ. ನಿಜವಾದ ಪ್ರೀತಿ ಮನಸ್ಸಿಗೆ ಸಂಬಂಧಿಸಿರುತ್ತದೆ. ಹೃದಯ ಮತ್ತು ಮನಸ್ಸುಗಳ ಮಧುರ ಮಾತು ಮತ್ತು ಮೌನವಷ್ಟೇ. ಏಕೆಂದರೆ ಪ್ರೀತಿ ಮನಸ್ಸು ಮತ್ತು ಹೃದಯಕ್ಕೆ ಸಂಬಂಧಿಸಿದ್ದಾಗಿರುತ್ತದೆ.
ಪರಿಶುದ್ಧ ಪ್ರೀತಿ ಯಾವತ್ತೂ ಯಾರನ್ನೂ ನೋಯಿಸುವುದಿಲ್ಲ. ಚಿಕ್ಕ ನೋವನ್ನು ಕೊಡುವುದು ಸಹ ಪ್ರೀತಿಯಾಗಿರುವುದಿಲ್ಲ. ನಿಜವಾದ ಪ್ರೀತಿ ಯಾವಾಗಲೂ ತ್ಯಾಗವನ್ನು ಬೇಡುವುದಿಲ್ಲ. ಪ್ರೀತಿ ಎನ್ನುವುದು ಪ್ರದರ್ಶನದ ವಸ್ತುವಲ್ಲವೇ ಅಲ್ಲ. ಕೈ ಕೈ ಹಿಡಿದು ನಡೆದಾ ಕ್ಷಣ , ಅಪ್ಪಿ ಖುಷಿಯಿಂದ ಕುಣಿದ ಕ್ಷಣ ಅದನ್ನು ಪ್ರೀತಿ ಎನ್ನಲಾಗದು. ಪ್ರೀತಿಯ ಹೃದಯಕ್ಕೆ ಸಂಬಂಧಿಸಿದ್ದು ಮನಸ್ಸಿಗೆ ಆತುಕೊಂಡು ಇರುವಂತದ್ದು. ಪರಿಶುದ್ಧ ಪ್ರೀತಿ ಯಾವತ್ತೂ ನಿಷ್ಟೆ ಮತ್ತು ನಂಬಿಕೆಯನ್ನು ಮಾತ್ರ ಬಯಸುತ್ತದೆ. ಪ್ರೀತಿ ಎನ್ನುವುದು ಸೆಕ್ಸ್ ಅಲ್ಲ. ಬದಲಾಗಿ ಅದು ಬದುಕಿನ ಕೊನೆಯವರೆಗೂ ಆನಂತರವೂ ಉಳಿಯುವ ಆತ್ಮೀಯ ಅನುಸಂಧಾನ. ಪರಿಶುದ್ಧ ಪ್ರೀತಿ ಖುಷಿ ಕೊಡುತ್ತದೆ ಅಭಿಮಾನದಿಂದ ನೋಡುವಂತೆ ಮಾಡುತ್ತದೆ. ಹೊಸ ಬಾಂಧವ್ಯಕ್ಕೆ ಮುನ್ನುಡಿಯಾಗುತ್ತದೆ.
*ಪ್ರೀತಿಯೆನ್ನುವುದು ಹೃದಯದ ಆಳದಲ್ಲೆಲ್ಲೋ ಸುಮ್ಮನೆ ಹುಟ್ಟಿ ಮೈ ಮನಸ್ಸನ್ನೆಲ್ಲ ಆವರಿಸಿಕೊಂಡು ಬಿಡುವ ಒಂದು ದಟ್ಟವಾದ ಭಾವನೆ* ಪ್ರೀತಿ ಯಾವತ್ತೂ ಫೋರ್ಸ್ ನಿಂದ ಹುಟ್ಟುವುದಿಲ್ಲ. ಅದೆಂತಹ ದೊಡ್ಡ ಕಾರಣವೇ ಇರಲಿ, ಅದೆಷ್ಟು ಮೇಲಿನಿಂದ ಬೇಕಾದರೂ ಬಂದು ಬೀಳಲಿ ಹೃದಯದಲ್ಲಿ ಹುಟ್ಟಿದ ಪ್ರೀತಿ ಚೂರಾಗುವುದಿಲ್ಲ ಬೇರಾಗುವುದಿಲ್ಲ.
*ಪ್ರೀತಿಯೆಂದರೆ ಪ್ರೀತಿಯೇ ಹೊರತು ಬೇರೆ ಅರ್ಥವಿಲ್ಲ* ಈ ಪ್ರೀತಿ ನಮ್ಮ ಬದುಕಿನ ಸುಖ ನೆಮ್ಮದಿ ಸಾರ್ಥಕತೆ ಸಂಭ್ರಮ ಹೀಗೆ ಪಾಸಿಟಿವ್ ಎನ್ನುವುದೆಲ್ಲ ಏನಿದೆಯೋ ಅದೆಲ್ಲಕ್ಕೂ ಪ್ರೀತಿಯೇ ಕಾರಣ. ಇದು ನಮ್ಮ ಮನಸ್ಥಿತಿಯ ಪ್ರತಿಬಿಂಬವೇ ಹೊರತು ಬೇರೇನೂ ಅಲ್ಲ. ಸಂಯಮವನ್ನು ಕಾಪಾಡಿಕೊಂಡಿದ್ದೇ ಹೌದಾದರೆ ಅದು ಯಾವತ್ತೂ ಯಾರ ಬದುಕನ್ನು ಹಾಳು ಮಾಡುವುದಿಲ್ಲ. ಹುಚ್ಚು ಬಯಕೆಗಳಿಗೆ ಪ್ರೀತಿಯ ಮುಖವಾಡ ತೊಡಿಸಿ ಅದನ್ನು ಪ್ರೀತಿ ಎಂದು ತೋರಿಸುವ ಕೆಟ್ಟ ಮನಸ್ಸುಗಳಿಂದ ಪ್ರೀತಿಗೆ ಒಂದಿಷ್ಟು ಕೆಟ್ಟ ಹೆಸರು ಅಂಟಿಕೊಂಡಿದೆಯೇ ಹೊರತು ಪ್ರೀತಿ ಯಾವತ್ತಿಗೂ ಪ್ರೀತಿಯಾಗಿ ಉಳಿದಿರುತ್ತದೆ ನಮ್ಮ ಬದುಕನ್ನು ಬೆಳೆಸಿ ಬೆಳಗುತ್ತದೆ. ಪ್ರೀತಿಯೆನ್ನುವುದು ಯಾವತ್ತಿದ್ದರೂ ಖುಷಿಕೊಡುತ್ತದೆ. ನಮ್ಮ ನಂಬಿಕೆ ಎಷ್ಟು ಗಟ್ಟಿಯಾಗಿರುತ್ತದೆಯೋ ನಮ್ಮ ಪ್ರೀತಿಯು ಸಹ ಅಷ್ಟೇ ಗಟ್ಟಿಯಾಗಿರುತ್ತದೆ.
ಬದುಕು ಬದುಕಾಗಿಯೇ ಇರಬೇಕೆಂದರೆ ಬದುಕಿನಲ್ಲಿ ಪ್ರೀತಿ ತುಂಬಿರಬೇಕು. ಆದ್ದರಿಂದ ಬದಕಿನಲ್ಲಿ ಏನು ಇಲ್ಲದೇ ಇದ್ದರೂ ಪ್ರೀತಿ ಇರಬೇಕು. ನಾವು ಸೋತಾಗ ಗೆಲ್ಲಿಸುವುದು, ಅತ್ತಾಗ ಕಣ್ಣೀರು ಒರೆಸಿ ಸಮಾಧಾನ ಮಾಡುವುದು , ಸೊರಗಿದೆ ಬದುಕಿಗೆ ಉಲ್ಲಾಸ ತುಂಬುವುದು, ಕೊನೆ ಎಂದುಕೊಂಡ ಬದುಕಿಗೆ ಹೊಸ ದಿಕ್ಕು ತೋರಿಸುವುದು, ಈ ಬದುಕಿನಲ್ಲಿ ಪ್ರೀತಿ ಏನೆಲ್ಲಾ ಆಗಿಬಿಡುತ್ತದೆ. ಆದರೆ ಈ ಪ್ರೀತಿ ಎಂಬುದು ಕೇವಲ ಗಂಡು-ಹೆಣ್ಣಿನ ಆಕರ್ಷಣೆ ಯಲ್ಲ . ಅದು ಈ ಜೀವಜಗತ್ತಿನ ಪ್ರತಿಯೊಂದು ಹಂತದಲ್ಲೂ ಪರಸ್ಪರ ಕೊಡು-ಕೊಳ್ಳುವಿಕೆಯ ಮುಖಾಂತರ ಬದುಕಿನ ರೀತಿನೀತಿಗಳನ್ನು ಅರಿತು ನಡೆಯುವ ಪರಿಪಾಠವಾಗಿದೆ. ಪ್ರೀತಿ ಕೇವಲ ಮನುಷ್ಯರಿಗೆ ಸಂಬಂಧಿಸಿದ್ದಲ್ಲ. ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಅಂತಃಕರಣವೇ ಪ್ರೀತಿಯಾಗಿದೆ. ನಾವು ಎಲ್ಲರನ್ನೂ ಪ್ರೀತಿಸೋಣ ಎಲ್ಲವನ್ನೂ ಪ್ರೀತಿಸೋಣ. ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕೋಣ.
ಅಮು ಭಾವಜೀವಿ
ಅಧಾರ :- *ಓ ಮನಸೇ* ಮತ್ತು *ನಿಮ್ಮೆಲ್ಲರ ಮಾನಸ*
No comments:
Post a Comment