Tuesday, September 22, 2020

ಲೇಖನ

*ಹಿರಿಯರ ಬಗ್ಗೆ ಇರಲಿ ಗೌರವ ಮತ್ತು ಕಾಳಜಿ*

ಹಿರಿಯ ಜೀವಗಳಿಗೆ ಪ್ರೀತಿತುಂಬಿದ ಮಾತುಗಳು ಹಾಗೂ ಮಕ್ಕಳ ಸಾಂಗತ್ಯ ಹೆಚ್ಚು ಅಗತ್ಯವಿರುತ್ತದೆ . ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಹೆತ್ತವರನ್ನು ಬಿಟ್ಟು ದೂರದಲ್ಲಿ ಮಕ್ಕಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಯಸ್ಸಾದ ಮೇಲೆ ಹಿರಿಯರು ಮಕ್ಕಉ ಜತೆಗಿರಬೇಕು ಎಂದು ಬಯಸುತ್ತಾರೆ. ಅವರ ಆಸೆಗಳನ್ನು ಮಕ್ಕಳು ಈಡೇರಿಸಬೇಕು.ಹಿರಿಯರನ್ನು ಗೌರವಾದರಗಳಿಂದ ನೋಡುತ್ತಿದ್ದ ಪರಂಪರೆ ನಶಿಸಿ ಹೋಗುತ್ತಿದೆ. ಅವಿದ್ಯಾವಂತರಾಗಿದ್ದರೂ ಜೀವನದ ಅನುಭವ ಪಡೆದ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಿದ್ದರು. ಆದರೆ, ಪ್ರಸ್ತುತ ಆಸ್ತಿ ವ್ಯಾಮೋಹದಿಂದ ಮಕ್ಕಳು ಹೆತ್ತವರನ್ನು ಬೀದಿಗೆ ತಳ್ಳುತ್ತಿರುವ ನಿದರ್ಶನಗಳು ಹೆಚ್ಚಾಗುತ್ತಿವೆ 
       ಹಿರಿಯರ ಪ್ರೀತಿ, ತ್ಯಾಗ, ಸೇವೆಗಳನ್ನು ಮಕ್ಕಳು ನೆನಪಿನಲ್ಲಿಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ಯುವ ಪೀಳಿಗೆ ಹಿರಿಯ ನಾಗರಿಕರನ್ನು ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು

ಹಿರಿಯ ನಾಗರಿಕರಿಗೆ ಮನಸ್ಸಿಗೆ ನೋವುಂಟು ಮಾಡದೇ ಅವರನ್ನು ಗೌರವದಿಂದ ನೋಡಿಕೊಳ್ಳಬೇಕು 

ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದರೆ, ತಂದೆ-ತಾಯಿಯನ್ನು ಕೊಂಡುಕೊಳ್ಳಲಾಗದು. ಅದನ್ನು ಅರಿತು ಮಕ್ಕಳು ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯ ನಾಗರಿಕರು ಸಂತೋಷದಿಂದ ಬಾಳಬೇಕು 
 
ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಬಗ್ಗೆ ಚಿಂತಿಸುವ ಸಮಾಜದಲ್ಲಿ ಪೋಷಕರು ನೈತಿಕ ಮೌಲ್ಯ ಕಡೆಗಣಿಸುತ್ತಿದ್ದಾರೆ. ಅದರಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆಯೋ ವಿನಃ ಸಂಬಂಧಗಳ ಬಗ್ಗೆ ಅರಿವು ಕ್ಷೀಣಿಸುತ್ತಿದೆ 

ಸಮಾಜದಲ್ಲಿ ನೂರಕ್ಕೆ ಶೇ.5ರಷ್ಟು ಹಿರಿಯ ನಾಗರಿಕರು ಇಂದು ತಮ್ಮ ಮಕ್ಕಳೊಂದಿಗಿದ್ದಾರೆ. ಆದರೆ ಶೇ. 95ರಷ್ಟು ಜನರು ಹಲವು ಸಮಸ್ಯೆಗಳಿಂದ ವೃದ್ಧಾಶ್ರಮ ಸೇರಿಕೊಳ್ಳುವಂತಾಗಿದೆ. ಹಿಂದಿನ ಕಾಲದಲ್ಲಿ ಹಿರಿಯ ನಾಗರಿಕ ವೇದಿಕೆಗಳೇ ಇರಲಿಲ್ಲ. ಆದರೆ ಇಂದು ಅನಿವಾರ್ಯವಾಗುತ್ತಿವೆ. ಇದೆಲ್ಲವೂ ಬದಲಾಗಬೇಕಾದರೆ ಶಿಕ್ಷಣದಲ್ಲಿ ಸಂಸ್ಕಾರ ಬರಬೇಕಿದೆ

ನಮ್ಮ ಬಾಲ್ಯದಲ್ಲಿ ನಮಗೆ ಸಿಗುವ ಸಂಸ್ಕಾರವೇ ಭವಿಷ್ಯದಲ್ಲಿ ನಮ್ಮ ಖುಷಿ, ದುಃಖವನ್ನು ಆಳುವುದು. ನಾವು ಇನ್ನೊಬ್ಬರ ನಡುವೆ ಎಷ್ಟು ಪ್ರಭಾವಿಗಳಾಗಿರುತ್ತೇವೆ ಎನ್ನುವುದಕ್ಕಿಂತಲೂ ನಮ್ಮನ್ನು ನಾವು ಗೆಲ್ಲಲು ಈ ಸಂಸ್ಕಾರ ಅತ್ಯಗತ್ಯ. 

ಕೆಲವು ವಿಷಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸಿ ಹೇಳಬೇಕು. ಅವಾಗ ಅವರು ದೊಡ್ಡವರಾದಂತೆ ಅದನ್ನೇ ಮುಂದುವರೆಸಿಕೊಂಡು ಹೋಗಿ, ಮುಂದೊಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಆರಂಭದಲ್ಲಿ ಈ ಸಣ್ಣ ಪುಟ್ಟ ಮಾಹಿತಿಗಳನ್ನು ಅವರಿಗೆ ತಿಳಿಸಿ ಹೇಳಿ. ಮುಂದೆ ಅದೇ ವಿಷಯಗಳು ಜೀವನದ ಮೌಲ್ಯವನ್ನು ಮಕ್ಕಳಿಗೆ ತಿಳಿಸಿಕೊಡುತ್ತವೆ.. ಸರಿ ತಪ್ಪು ಯಾವುದು ಎಂದು ಸರಿಯಾಗಿ ಮಕ್ಕಳಿಗೆ ತಿಳಿ ಹೇಳಿ. ಅವುಗಳ ಅಂತರದ ಬಗ್ಗೆ ಅರಿವು ಮೂಡಿಸಿ. ಇದರಿಂದ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ. 

- ಹಿರಿಯರ ಜೊತೆ ಹೇಗೆ ಮಾತನಾಡುವುದು ಅನ್ನೋದನ್ನು ಕಲಿಸಿರಿ. ಹಿರಿಯರಿಗೆ ಗೌರವ ಕೊಡುವ ರೀತಿಯನ್ನು ಕಲಿಸಿಕೊಡಿ. 

- ಈಗಿನ ಮಕ್ಕಳಲ್ಲಿ ಧೈರ್ಯ ಕಡಿಮೆ. ಅವರಿಗೆ ಧೈರ್ಯದಿಂದ ಜೀವನವನ್ನು ಹೇಗೆ ಎದುರಿಸುವುದು ಅನ್ನೋದನ್ನು ತಿಳಿಸಿ. 

- ಹಂಚಿಕೊಂಡು ಬಾಳುವ  ಅಭ್ಯಾಸ ಕಲಿಸಿಕೊಡಿ. ಇದರಿಂದ ಮಕ್ಕಳಿಗೆ ಇತರರ ಭಾವನೆ ಮತ್ತು ಅಗತ್ಯತೆ ಬಗ್ಗೆ ತಿಳಿಯುತ್ತದೆ. ಯಾವುದೇ ವಸ್ತು ತನಗೆ ಸೇರಿದ್ದಲ್ಲ, ಬೇರೆಯವರ ಜೊತೆ ಹಂಚಿ ತಿನ್ನುವುದನ್ನು ತಿಳಿಸಿ. 

- ಯಾರಿಗಾದರೂ ಸಹಾಯ ಬೇಕಾದರೆ ಕೂಡಲೇ ಮಾಡುವಂತೆ ತಿಳಿಸಿ. ಜೊತೆಗೆ ಅವರಿಗೆ ಕಾಣುವಂತೆ ನೀವೇ ಇತರರಿಗೆ ಸಹಾಯ ಮಾಡಿ, ಯಾಕೆಂದರೆ ಮಕ್ಕಳು ನೋಡುತ್ತಾ ಬೇಗನೆ ಕಲಿತು ಬಿಡುತ್ತಾರೆ. 

ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

- ಸಮಯ ಪರಿಪಾಲನೆ ಮಹತ್ವ ತಿಳಿಸಿಕೊಡಿ.  ಯಾಕೆಂದರೆ ಜೀವನದಲ್ಲಿ ಮುಂದೆ ಬರಲು ಸಮಯದ ಪರಿಪಾಲನೆ ತುಂಬಾನೇ ಮುಖ್ಯ. 

- ಇದು ಮಕ್ಕಳಿಗೆ ಕಲಿಸಲೇಬೇಕಾದ ಮುಖ್ಯ ವಿಷಯ ಎಂದರೆ ಥಾಂಕ್ಯೂ ಮತ್ತು ಸಾರಿ ಹೇಳೋದು. ಯಾರಾದರೂ ಯಾವುದೇ ವಿಧದ ಸಹಾಯ ಮಾಡಿದರೆ ಥಾಂಕ್ಯೂ ಹೇಳಲು ಹಾಗೂ ಯಾರಿಗಾದರೂ ತಮ್ಮಿಂದ ಬೇಜಾರಾದರೆ ಕ್ಷಮೆ ಕೇಳಲೇಬೇಕು ಎಂಬುದನ್ನು ಹೇಳಿಕೊಡಿ. 

- ಪ್ರತಿದಿನ ಪ್ರಾರ್ಥಿಸುವ ಅಭ್ಯಾಸ ಮಾಡಿಸಿದರೆ, ನಿಮಗೂ, ಮಕ್ಕಳಿಗೂ ಉತ್ತಮ. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. 

- ಪ್ರಾಮಾಣಿಕವಾಗಿರುವುದನ್ನೂ ಮಕ್ಕಳಿಗೆ ಗೊತ್ತಿರಲಿ.  ಯಾವತ್ತೂ ಸುಳ್ಳು ಹೇಳಲೇಬಾರದು ಅನ್ನೋದನ್ನು ತಿಳಿಸಿ. ಸುಳ್ಳು ಹೇಳೋದು ಎಷ್ಟು ತಪ್ಪು ಅನ್ನೋದನ್ನೂ ಮನವರಿಕೆ ಮಾಡಿಕೊಡಿ. 

ಈ ವಿಷಯಗಳನ್ನು ನೀವು ಮಕ್ಕಳಿಗೆ ಸರಿಯಾಗಿ ಮನವರಿಕೆ ಮಾಡಿದರೆ ಮಕ್ಕಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದು ಖಂಡಿತಾ.

ಹಿರಿಯರಿಗೆ ದಕ್ಕದ ಗೌರವ-ಮಾನ್ಯತೆ



      ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳಲ್ಲಿ ಹಿರಿಯರಿಗೆ ಗೌರವ, ಮಾನ್ಯತೆ ದೊರೆಯುತ್ತಿಲ್ಲ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಕಳವಳ ವ್ಯಕ್ತಪಡಿಸಿದರು.

      ನಗರದ ಬಾಲನ್ಯಾಯ ಮಂಡಳಿಯಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆದರ್ಶ ಸಮಾಜ ಕಾರ್ಯ ಸಂಸ್ಥೆ ಹಾಗೂ ಗಾಯತ್ರಿ ಗ್ರಾಮೀಣ ವಿದ್ಯಾಸಂಸ್ಥೆ ಇವುಗಳ ಸಂಯುಕ್ತಾಶ್ರದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ಕಾನೂನು ಅರಿವು ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.

        ಪ್ರಸ್ತುತ ಬಹುತೇಕ ಮನೆಗಳಲ್ಲಿ ಹಿರಿಯರ ಬಗ್ಗೆ ತಾತ್ಸಾರ ಮನೋಭಾವ ಹೆಚ್ಚುತ್ತಿದೆ. ಹೀಗೆ ಮಾಡುವುದರಿಂದ ಹಿರಿಯರು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಹಿರಿಯರು ನಮ್ಮ ಸಮಾಜದ ಮೂಲ ಬೇರು ಆಗಿದ್ದಾರೆ. ಆ ಬೇರಿಗೆ ಉತ್ತಮ ಪೋಷಕಾಂಶ ನೀಡಿ ಸಲಹಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

        ಹಿರಿಯರಿಗೂ ಕೂಡ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳಿವೆ. ಹಿರಿಯರ ನಡತೆ ಕುಟುಂಬಕ್ಕೆ ಊರು ಗೋಲಂತಿರಬೇಕು. ಅವರ ಅನುಭವಪೂರಿತ ನಡೆ-ನುಡಿ ಕುಟುಂಬಕ್ಕೆ ದಾರಿದೀಪದಂತಿರಬೇಕು. ಹಾಗೂ ಅವರು ತಮ್ಮ ಸಮಸ್ಯೆಗಳ ಕುರಿತು ಸಮಾನ ಮನಸ್ಕರೊಂದಿಗೆ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಇರಲು ಭಜನೆ, ಸತ್ಸಂಗ ಅಥವಾ ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು

] ಹಿರಿಯರ ಪಾದಗಳನ್ನು ಸ್ಪರ್ಶಿಸುವ ಶಿಷ್ಟಾಚಾರವನ್ನು ಅಥವಾ ಸ೦ಪ್ರದಾಯವನ್ನು ಎಲ್ಲಾ ಭಾರತೀಯ ಮಕ್ಕಳಿಗೂ ಸಹ ಸ೦ಸ್ಕಾರದ ಒ೦ದು ಭಾಗವಾಗಿ ಮೊದಲು ಕಲಿಸಿ ಕೊಡಲಾಗುತ್ತದೆ. ಆದರೆ, ಅದೇಕೆ ನಮ್ಮೆಲ್ಲರಿಗೂ ಹಿರಿಯರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವ ಒ೦ದು ಪರಿಪಾಠವನ್ನು ಭೋದಿಸಲಾಗುತ್ತದೆ ಅಥವಾ ಹೇಳಿಕೊಡಲಾಗುತ್ತದೆ ಎ೦ಬುದರ ಕುರಿತು ನೀವೆ೦ದಾದರೂ ಚಕಿತಗೊ೦ಡಿದ್ದೀರಾ? ನಮ್ಮಲ್ಲಿ ಹೆಚ್ಚಿನ ಹಿರಿಯರಲ್ಲಿ ಈ ಕುರಿತು ವಿಚಾರಿಸಿದರೆ, "ಅದು ಹಿರಿಯರಿಗೆ ಕಿರಿಯರು ತೋರಿಸುವ ಗೌರವ ಹಾಗೂ ಅದಕ್ಕೆ ಪ್ರತಿಫಲವಾಗಿ ಆ ಹಿರಿಯರಿ೦ದ ಆಶೀರ್ವಾದವನ್ನು ಪಡೆಯಲು" ಎ೦ಬ ಕಾರಣವನ್ನು ನೀಡುತ್ತಾರೆ. ಆದಾಗ್ಯೂ, ಭಾರತಾದ್ಯ೦ತ ಪಾಲನೆಯಾಗುವ ಈ ಸ೦ಪ್ರದಾಯದ ಹಿ೦ದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಈ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಇಲ್ಲಿ ಕೆಳಗೆ ನೀಡಲಾಗಿರುವ ಸ್ಲೈಡ್ ಅನ್ನು ಹಾಗೆಯೇ ಒಮ್ಮೆ ತಿರುವಿ ಹಾಕಿರಿ. ಹಿರಿಯರಿಗೆ ಗೌರವ ನೀಡುವುದು ಹಿ೦ದೂ ಧರ್ಮದ ನ೦ಬಿಕೆಯೊ೦ದರ ಪ್ರಕಾರ, ಹಿರಿಯರ ಪಾದಗಳು ಎಲ್ಲಾ ದೇವ ದೇವತೆಗಳ ಆವಾಸಸ್ಥಾನವಾಗಿರುತ್ತದೆ. ಹೀಗಾಗಿ, ಅವರ ಚರಣಗಳನ್ನು ಸ್ಪರ್ಶಿಸುವ ಮೂಲಕ ನಾವು ಆ ಹಿರಿಯರಿಗೆ ಗೌರವವನ್ನು ವ್ಯಕ್ತಪಡಿಸಿದ೦ತಾಗುತ್ತದೆ. ಅವರು ನಮಗೆ ಮಾಡುವ ಆಶೀರ್ವಾದವು ಸ್ವತ: ಆ ದೇವರೇ ನಮಗೆ ಮಾಡುವ ಆಶೀರ್ವಾದ ಎ೦ದು ಪರಿಗಣಿಸಲಾಗುತ್ತದೆ. ಯಶಸ್ಸನ್ನು ಸಾಧಿಸಲು ಹಿರಿಯರ ಮತ್ತು ವಯಸ್ಸಾದವರ ಪಾದಗಳನ್ನು ಸ್ಪರ್ಶಿಸುವುದರ ಮೂಲಕ, ಯಾರು ಗೌರವವನ್ನು ಸೂಚಿಸುತ್ತಾರೆಯೋ, ಅ೦ತಹವರಲ್ಲಿ ಆಯಸ್ಸು, ಬುದ್ಧಿಮತ್ತೆ, ಜ್ಞಾನ, ಮತ್ತು ಶಕ್ತಿಯ ವೃದ್ಧಿಯಾಗುತ್ತವೆ. ಆದ್ದರಿ೦ದಲೇ, ವ್ಯಕ್ತಿಯೋರ್ವನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಅವನು ಅಥವಾ ಅವಳು ಹಿರಿಯರ ಪಾದಗಳನ್ನು ಸ್ಪರ್ಶಿಸುವ ಪರಿಪಾಠವನ್ನಿಟ್ಟುಕೊ೦ಡಿರಬೇಕು. ಗೌರವವನ್ನು ತೋರಿಸುವ ಬೇರೆ ಬೇರೆ ವಿಧಾನಗಳಾವುವೆ೦ದರೆ ಪ್ರತುತ್ಥಾನ - ಹಿರಿಯರನ್ನು ಸ್ವಾಗತಿಸುವುದಕ್ಕಾಗಿ ಎದ್ದು ನಿಲ್ಲುವುದು. ನಮಸ್ಕಾರ - ಕರಗಳೆರಡನ್ನೂ ಜೋಡಿಸಿ ಅವರಿಗೆ ನಮಸ್ತೆ ಎ೦ದು ವ೦ದಿಸುವುದು. ಉಪಸ೦ಗ್ರಹಣ - ಹಿರಿಯರ ಅಥವಾ ಗುರುಗಳ ಪಾದಗಳನ್ನು ಸ್ಪರ್ಶಿಸುವುದು. ಸಾಷ್ಟಾ೦ಗ - ಉದ್ದ೦ಡವಾಗಿ ಹೊಟ್ಟೆಯ ಮೇಲೆ ಮಲಗಿಕೊ೦ಡು ಎರಡೂ ಪಾದಗಳು, ಹೊಟ್ಟೆ, ಎರಡು ಮೊಣಕಾಲುಗಳು, ಎದೆ, ಹಣೆ, ಮತ್ತು ಎರಡೂ ತೋಳುಗಳಿ೦ದ ಹಿರಿಯರ ಮು೦ದೆ ದೀರ್ಘದ೦ಡವಾಗಿ ಸಾಷ್ಟಾ೦ಗ ನಮಸ್ಕಾರವನ್ನು ಮಾಡುವುದು. ಪ್ರತ್ಯಾಭಿವಾದನ - ಅವರು ನೀಡುವ ಆಶೀರ್ವಾದಕ್ಕೆ ಪ್ರತಿನಮಸ್ಕಾರವನ್ನು ಮಾಡುವುದು. ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ಭಾರತೀಯ ಸ೦ಸ್ಕೃತಿಯಲ್ಲಿ ವ್ಯಕ್ತಿಯೋರ್ವನು ತನ್ನ ಹಿರಿಯರ ಪಾದಸ್ಪರ್ಶಗೈಯ್ಯುವುದನ್ನು ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ನಿರೀಕ್ಷಿಸಲಾಗುತ್ತದೆ. ಇವುಗಳ ಪೈಕಿ ಕೆಲವೊ೦ದು ಸ೦ದರ್ಭಗಳು ಯಾವುವೆ೦ದರೆ, ಪ್ರಯಾಣಕ್ಕೆ ಹೊರಟಾಗ ಅಥವಾ ಪರಸ್ಥಳದಿ೦ದ ಮರಳಿ ಬ೦ದು ಹಿರಿಯರನ್ನು ಭೇಟಿ ಮಾಡಿದಾಗ, ಮದುವೆಯ ಸ೦ದರ್ಭದಲ್ಲಿ, ಧಾರ್ಮಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಹಾಗೂ ಹಬ್ಬಗಳ ಸ೦ದರ್ಭಗಳಲ್ಲಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಸಾಮಾನ್ಯ. ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ಒ೦ದು ಕಾಲದಲ್ಲಿ, ಕಿರಿಯರು ಪ್ರಾತ:ಕಾಲದಲ್ಲಿ ಎದ್ದೊಡನೆಯೇ ತಮ್ಮ ಹೆತ್ತವರ ಪಾದಗಳನ್ನು ಸ್ಪರ್ಶಿಸುವುದು ಹಾಗೂ ರಾತ್ರಿಯ ವೇಳೆ ಹಾಸಿಗೆಗೆ ತೆರಳುವ ಮುನ್ನ ಮತ್ತೊಮ್ಮೆ ತನ್ನ ಹೆತ್ತವರ ಪಾದಗಳನ್ನು ಸ್ಪರ್ಶಿಸುವುದು ಒ೦ದು ಸ೦ಪ್ರದಾಯದ೦ತೆ ಆಚರಿಸಲ್ಪಡುತ್ತಿತ್ತು. ಈ ನಿಯಮವನ್ನು ಪಾಲಿಸುವವರು ಇನ್ನೂ ಅನೇಕ ಜನರು ಇರಬಹುದಾದರೂ ಕೂಡ, ವಸ್ತುಸ್ಥಿತಿ ಏನೆ೦ದರೆ, ಈ ಪದ್ಧತಿಯು ಸಮಯದೊ೦ದಿಗೆ ಕಾಲಕ್ರಮೇಣವಾಗಿ ನಶಿಸಿಹೋಗುತ್ತಿದೆ. 

ಹಿರಿಯ ಜೀವಗಳು ಅತಿ ಅಮೂಲ್ಯವಾದವು. ಅವರನ್ನು ಅತ್ಯಂತ ಗೌರವ ಪ್ರೀತಿಯಿಂದ ನೋಡಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.


ಅಪ್ಪಾಜಿ ಎ ಮುಸ್ಟೂರು 
ಅಮುಭಾವಜೀವಿ 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಹಿರೇಮಲ್ಲನಹೊಳೆ 
ಜಗಳೂರು ತಾಲೂಕು 
ದಾವಣಗೆರೆ ಜಿಲ್ಲೆ 
577528

ಮೊಬೈಲ್ 8496819281

Sunday, September 20, 2020

ಕವನ

*ಪ್ರವಾಹ ಫಜೀತಿ*

ಈ ಬದುಕನ್ನೇ ಕೊಚ್ಚಿ
ಹೊರಟಿದೆ ಪ್ರವಾಹ
ನೆಲೆಯಿಲ್ಲದೆ ನರಳುತ್ತಿದೆ
ಸಂತೃಪ್ತ ಬದುಕಿನ ವಿನಾಶ

ಮನೆ ಮಠಗಳ ತೊರೆದು
ಕಾಳುಕಡಿಯನೆಲ್ಲ ಬಿಟ್ಟು
ಬಡಜೀವವ ಬದುಕಿಸಿಕೊಳ್ಳಲು
ಯುದ್ಧಕ್ಕೂ ಮಿಗಿಲಾದ ಹೋರಾಟವಿದು

ಹೊಲ ಗದ್ದೆಗಳೆಲ್ಲ ಮುಳುಗಿ
ದನಕರುಗಳು ಕೊಚ್ಚಿಹೋಗಿ
ನರಕದ ದರ್ಶನವಾಯಿತು
ಮಹಾ ಮಳೆಯು ತಂದ ಪ್ರವಾಹದಿಂದ

ಮಕ್ಕಳುಮರಿ ಕಟ್ಟಿಕೊಂಡು
ಗಂಜಿ ಕೇಂದ್ರದಲ್ಲಿ ಉಳಿದುಕೊಂಡು
ಅವರೆಸೆಯುವ ಭಿಕ್ಷೆಗಾಗಿ
ಕೈಚಾಚಿ ಕೂರುವಂತಾಗಿದೆ ದೈನೇಸಿ ಬದುಕು

ಉಳ್ಳವರ ಅಟ್ಟಹಾಸ
ಕಳ್ಳಕಾಕರ ನಿತ್ಯ ಕೆಲಸ
ವಿಷಜಂತುಗಳ ವರ್ತುಲದಾಚೆ
ಬದುಕು ಕಟ್ಟಿಕೊಳ್ಳಬೇಕಿದೆ

4.50 ಪಿಎಂ 18 09 2020

*ಅಮುಭಾವಜೀವಿ ಮುಸ್ಟೂರು*

Saturday, September 19, 2020

ಕವನ

#ಅಮುಭಾವಬುತ್ತಿ ೭೬


*ಮುಂಗಾರಿನ ನಿರೀಕ್ಷೆ*

ಬರಿದೇ ಬಾನ ವಿಸ್ತಾರದಲ್ಲಿ
ಉರಿಬಿಸಿಲ ತಾಪದಲ್ಲಿ
ಕರಿ ಮೋಡಗಳ ಪ್ರಣಯದಲ್ಲಿ
ಮುಂಗಾರಿನ ಜನನಕ್ಕೆ ನಾಂದಿಯಾಯಿತು

ಎಲೆಯುದುರಿದ ಬೋಳುಮರಗಳಲ್ಲಿ
ಮಣ್ಣಲ್ಲಿ ಮಣ್ಣಾದ ಗರಿಕೆ ಒಡಲಲ್ಲಿ
ಬತ್ತಿ ಬಿರುಕಾದ ಕೆರೆಯಂಗಳದಲ್ಲಿ
ಮುಂಗಾರಿನ ಆಗಮನದ ಕನಸಿತ್ತು

ನೀರಿಲ್ಲದ ನದಿಗಳಲ್ಲಿ
ಸುಮವಿರದ ಲತೆಗಳಲ್ಲಿ
ಒಡಲ ಬಿಸಿಲಿಗೆ ಒಡ್ಡಿದ ಧರೆಯಲ್ಲಿ
ಮುಂಗಾರಿನ ನಿರೀಕ್ಷೆಯಿತ್ತು

ಬಾಯಾರಿದ ಖಗಮೃಗಗಳಲ್ಲಿ
ಬರದ ಬವಣೆಗೆ ಸಿಕ್ಕ ರೈತರಲ್ಲಿ
ಕಾಡ್ಗಿಚ್ಚಿನ ಭಯದಿ ಕಾನನದಲ್ಲಿ
ಮುಂಗಾರಿನ ಭರವಸೆ ಇತ್ತು

ಮೊಳೆವ ಪ್ರತಿಬೀಜದಲ್ಲೂ
ಸುಡುವ ಮಣ್ಣ ಕಣಕಣದಲ್ಲೂ
ಬತ್ತಿದೊಡಲ ಸುಪ್ರಭಾತದಲ್ಲೂ
ಮುಂಗಾರಿನ ಕನವರಿಕೆ ಇತ್ತು

ಮತ್ತೆ ಬಂತು ಮುಂಗಾರು
ನೋಡಲ್ಲಿ ವಸಂತದ ಸಂಭ್ರಮ ಜೋರು
ಹನಿ ನೀರಿನ ಅಂತಃಕರಣ
ಪ್ರತಿ ಜೀವದ ಬದುಕಿನ ಪ್ರೇರಣ

0535ಪಿಎಂ13032017
*ಅಮುಭಾವಜೀವಿ ಮುಸ್ಟೂರು*

Wednesday, September 16, 2020

#ಅಮುಭಾವಬುತ್ತಿ  62

ನಿನ್ನ ಪ್ರೀತಿಸಲೂ ನನಗೆ ಭಯವಾಗಿದೆ, ಕಾರಣ ಸಮಾಜದಲಿ ಇನ್ನೂ ಜಾತಿಯ ದಟ್ಟ ಛಾಯೆ ಇದೆ

ಅಮು ಭಾವಜೀವಿ