Saturday, September 19, 2020

ಕವನ

#ಅಮುಭಾವಬುತ್ತಿ ೭೬


*ಮುಂಗಾರಿನ ನಿರೀಕ್ಷೆ*

ಬರಿದೇ ಬಾನ ವಿಸ್ತಾರದಲ್ಲಿ
ಉರಿಬಿಸಿಲ ತಾಪದಲ್ಲಿ
ಕರಿ ಮೋಡಗಳ ಪ್ರಣಯದಲ್ಲಿ
ಮುಂಗಾರಿನ ಜನನಕ್ಕೆ ನಾಂದಿಯಾಯಿತು

ಎಲೆಯುದುರಿದ ಬೋಳುಮರಗಳಲ್ಲಿ
ಮಣ್ಣಲ್ಲಿ ಮಣ್ಣಾದ ಗರಿಕೆ ಒಡಲಲ್ಲಿ
ಬತ್ತಿ ಬಿರುಕಾದ ಕೆರೆಯಂಗಳದಲ್ಲಿ
ಮುಂಗಾರಿನ ಆಗಮನದ ಕನಸಿತ್ತು

ನೀರಿಲ್ಲದ ನದಿಗಳಲ್ಲಿ
ಸುಮವಿರದ ಲತೆಗಳಲ್ಲಿ
ಒಡಲ ಬಿಸಿಲಿಗೆ ಒಡ್ಡಿದ ಧರೆಯಲ್ಲಿ
ಮುಂಗಾರಿನ ನಿರೀಕ್ಷೆಯಿತ್ತು

ಬಾಯಾರಿದ ಖಗಮೃಗಗಳಲ್ಲಿ
ಬರದ ಬವಣೆಗೆ ಸಿಕ್ಕ ರೈತರಲ್ಲಿ
ಕಾಡ್ಗಿಚ್ಚಿನ ಭಯದಿ ಕಾನನದಲ್ಲಿ
ಮುಂಗಾರಿನ ಭರವಸೆ ಇತ್ತು

ಮೊಳೆವ ಪ್ರತಿಬೀಜದಲ್ಲೂ
ಸುಡುವ ಮಣ್ಣ ಕಣಕಣದಲ್ಲೂ
ಬತ್ತಿದೊಡಲ ಸುಪ್ರಭಾತದಲ್ಲೂ
ಮುಂಗಾರಿನ ಕನವರಿಕೆ ಇತ್ತು

ಮತ್ತೆ ಬಂತು ಮುಂಗಾರು
ನೋಡಲ್ಲಿ ವಸಂತದ ಸಂಭ್ರಮ ಜೋರು
ಹನಿ ನೀರಿನ ಅಂತಃಕರಣ
ಪ್ರತಿ ಜೀವದ ಬದುಕಿನ ಪ್ರೇರಣ

0535ಪಿಎಂ13032017
*ಅಮುಭಾವಜೀವಿ ಮುಸ್ಟೂರು*

No comments:

Post a Comment