Saturday, March 30, 2024

ಕವನ

ಅಬ್ಬಬ್ಬಾ ಎಂಥಾ ಭೀಕರ ಬಿಸಿಲು
ಬೇಡವೇ ಬೇಡ ಎನಿಸಿದೆ ಹಗಲು
ಬೆಂಕಿಯನ್ನೇ ಉಗುಳುತಿಹನು ಸೂರ್ಯ
ನಿಷ್ಪ್ರಯೋಜಕವಾಗುತ್ತಿದೆ ಸೌಕರ್ಯ

ಭೂಮಿ ಮೇಲಿನದೆಲ್ಲ ಹಾಗೆಯೇ
ಒಣಗಿ ಹೋಗುತಿದೆ ಕ್ಷಣಮಾತ್ರದಲ್ಲಿ
ಬೇಸಿಗೆಯೆಂದು ಎಲೆಯುದುರಿಸಿ ಮರಗಳೆಲ್ಲಾ ಬರಡಾಗಿ ಹೋಗಿವೆ ಇಲ್ಲಿ

ಮಳೆ ಎಂಬ ಆಸರೆಯೊಂದು
ಇನ್ನು ಮರೀಚಿಕೆಯಾಗಿದೆ
ಬೀಸುವ ಗಾಳಿ ಕೂಡ ಬಿಸಿಯಾಗಿ
ಉರಿಯುವ ಬೆಂಕಿಯಲ್ಲಿ ಬಿದ್ದ ಅನುಭವ ತಂದಿದೆ

ತಣ್ಣನೆಯ ನೆರಳು ಬಯಸುತ್ತಿದೆ ಬದುಕು
ಈ ಉರಿ ತಾಪವಿನ್ನೇನು ತರುವುದೋ ಕೆಡುಕು
ಪರಿಸರದ ಮೇಲೆ ದೌರ್ಜನ್ಯ ಮಾಡಿದ ತಪ್ಪಿಗೆ
ಬೆಂಕಿಯುಂಡೆಯಂತಾಗೆರಗಿದೆ ಬೇಸಿಗೆ

ಅಲ್ಲಿ ಇಲ್ಲಿ ಇದ್ದ ನೀರೆಲ್ಲ ಆವಿಯಾಗಿದೆ
ಒಳಗಿದ್ದ ಅಂತರ್ಜಲ ಮೊದಲೇ ಖಾಲಿಯಾಗಿದೆ
ಈ ಧಗೆಯಿಂದ ತಪ್ಪಿಸಿಕೊಳ್ಳಲು ಪರದಾಡಿದೆ
ಜಗದ ಬದುಕೀಗ ನರಕವಾಗುತ್ತಿದೆ

ಇನ್ನಾದರೂ ಅರಿತುಕೊಳ್ಳಬೇಕಿದೆ ನಾವು
ಓಡುವ ನೀರನ್ನು ನಿಲ್ಲಿಸಿ ಸಂಗ್ರಹಿಸಬೇಕು ನಿತ್ಯವು
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಾಡು ಬೆಳೆಸಬೇಕು
ನಾಶವಾಗುತ್ತಿರುವ ಪರಿಸರವನ್ನು ರಕ್ಷಿಸಬೇಕು

0411 ಪಿಎಂ30032024
*ಅಮು ಭಾವಜೀವಿ ಮುಸ್ಟೂರು*

Thursday, March 28, 2024

ಕವಿತೆ

ಬತ್ತದಿರಲಿ ಭರವಸೆ
ಬದುಕಲಿ ಬೇಡ ಹತಾಶೆ

ನಡೆವ ಹಾದಿಯಲ್ಲಿ ಕಲ್ಲು ಮುಳ್ಳು
ಸಹಜವಾದರೂ ಸಾಗಬೇಕು
ಅಂಜಿ ಹಿಂದಡಿ ನೀ ಇಟ್ಟರೆ
ನೋಡುವವರು ಆಡಿ ನಗುತ್ತಾರೆ

ಉರಿ ಬಿಸಿಲು ಸುರಿಯುತ್ತಿದ್ದರು
ಒಣಗದೆ ಮರ ಮತ್ತೆ ಚಿಗುರುವಂತೆ
ಬತ್ತಿ ಹೋದ ನದಿತೊರೆಗಳೆಲ್ಲ
ಮಳೆ ಬರಲು ಮತ್ತೆ ಹೊಕ್ಕುವಂತೆ

ಎದ್ದು ನಡೆ ನೀ ಬಿದ್ದ ಜಾಗದಿಂದ ಮತ್ತೆ
ಗುರಿಯ ಗಮ್ಯ ಬದಲಾಗದಂತೆ
ದಣಿದರು ಮಣಿಯದ ಛಲವಿರಲಿ
ಸಾಧನೆಯ ಸಂತೃಪ್ತಿಗಾಗಿ ಸಾಗುತ್ತಿರಲಿ

ಬೆನ್ನ ಹಿಂದೆ ಆಡಿಕೊಳ್ಳುವರು ನೂರು ಜನ
ಮುಂದೆ ಬಂದು ಯಾರು ಸಹಾಯ ನೀಡರು
ಅನುಭವವೇ ನಮಗೆ ಮಾರ್ಗದರ್ಶಕ
ಆತ್ಮವಿಶ್ವಾಸವೇ ಅತ್ತ ತಳ್ಳುವ ಪ್ರೇರಕ

ಗೆಲ್ಲದೆ ಮರಳಬಾರದು ಬದುಕಿನಲ್ಲಿ
ಸೋಲುವ ಭೀತಿ ಇರಬಾರದು ಎದೆಯಲ್ಲಿ
ಗೆದ್ದೆ ಗೆಲ್ಲುವೆ ಒಂದು ದಿನ
ಎಂದೆಂದೂ ನಿನ್ನಲ್ಲಿರಲಿ ಒಳ್ಳೆತನ
೦೩೫೦ಪಿಎಂ೨೮೦೩೨೦೨೪
*ಅಮು ಭಾವಜೀವಿ ಮುಸ್ಟೂರು*

Sunday, March 10, 2024

ಕವಿತೆ

ಮತ್ತೆ ಬಂದೈತೆ ಭೀಕರ ಬರಗಾಲ
ಜಗಕೆ ಬಂದೊದಗೇತೆ ಕೇಡುಗಾಲ
ಪಾತಾಳ ಮುಟ್ಟೈತೆ ಅಂತರ್ಜಲ
ಸಂಕಷ್ಟಕೆ ಸಿಕ್ಕೈತೆ ಜೀವಜಾಲ

ಮಳೆಗಾಲದಲ್ಲೇನೆ ಮಳೆ ಕಾಣಲಿಲ್ಲ
ಬಿರು ಬೇಸಿಗೆಯಲ್ಲಿ ಧಗೆ ಆರದಲ್ಲ
ಹೀಗೆ ಆದರೆ ಬದಕಿಗುಳಿಗಾಲವಿಲ್ಲ
ಮಾನವನತಿಯಾಸೆಗೆ ಫಲ ಸಿಕ್ಕಿದೆಯಲ್ಲ

ಖಗಮೃಗಗಳೆಲ್ಲ ಕಂಗಾಲಾಗಿಹವು
ಗಿಡದಲ್ಲೇ ಬಾಡಿ ಹೋಗಿವೆ ಹೂವು
ಯಾವ ಕೋಪಕೋ ಇಂತಹ ಶಾಪವು
ಕೇಳುವರಾರು ಬಿರಿದೊಡಲ ನೋವು

ಅಭಿವೃದ್ಧಿಯ ಹೆಸರಿನಲ್ಲಿ
ಹತವಾದವು ಸಹಸ್ರಾರು ವೃಕ್ಷ
ಮಾನವನ ಹದ್ದುಮೀರಿದ
ಬುದ್ಧಿಗೆ ನೀಡದಿರುವುದೆ ಪ್ರಕೃತಿ ಶಿಕ್ಷೆ


ಇನ್ನಾದರೂ ಎಚ್ಚೆತ್ತುಕೊಳ್ಳೋಣ
ವೃಕ್ಷ ಸಂಪತ್ತನ್ನು ರಕ್ಷಿಸೋಣ
ಮಳೆಗಾಗಿ ಪ್ರಾರ್ಥಿಸುವುದ ಬಿಟ್ಟು
ಕಾಡು ಬೆಳೆಸೋಣ ಗಿಡ ನೆಟ್ಟು

೧೦೪೯ಪಿಎಂ೨೯೦೨೨೦೨೪
*ಅಮು ಭಾವಜೀವಿ ಮುಸ್ಟೂರು*

*ಗಝಲ್*

ಬದುಕಿನ ಹಾದಿಯನ್ನು ಅಡ ಇಡಲಾಗಿದೆ
ಬಸಿದ ಬೆವರನ್ನು ಇಲ್ಲಿ ಅಡ ಇಡಲಾಗಿದೆ 

ಬಿರು ಬೇಗೆಯಲ್ಲಿ ದಣಿವಿರದೆ ದುಡಿವ ಜೀವಗಳುಂಟು
ಬೆಳಗು ಬೈಗುವರೆಗೂ ದುಡಿದುದನೆಲ್ಲ ಶರಾಬಿಗೆ ಅಡ ಇಡಲಾಗಿದೆ

ಸತಿಸುತರೆಲ್ಲ ಹಸಿವೆಯಿಂದ ನರಳುತ್ತಿದ್ದಾರೆ
ದುಡಿದ ಬಿಡಿಗಾಸನು 'ಅವಳ' ಸೆರಗಿಗೆ ಅಡ ಇಡಲಾಗಿದೆ

ಸಾಲಗಾರನ ಮುಂದೆ ಸಂಕಟ ಹೇಳಿಕೊಂಡರೇನು ಪ್ರಯೋಜನ
ಬಡಪಾಯಿ ಬದುಕನ್ನು ಸಾಲದ ಶೂಲದ ಸಾವಿಗೆ ಅಡ ಇಡಲಾಗಿದೆ

ಎಷ್ಟೇ ಬುದ್ಧಿವಾದ ಹೇಳಿದರು ಕೆಲಸಕ್ಕೆ ಬಾರದು ಅಮು
ಕ್ಷಣದ ಆಮಿಷಗಳಿಗೆ ದುಡಿದ ಇಡೀ ಬದುಕನ್ನು ಅಡ ಇಡಲಾಗಿದೆ

4:55 ಪಿಎಂ02032024
*ಅಮು ಭಾವಜೀವಿ ಮುಸ್ಟೂರು*


ಬೇಯಬೇಕು ನೋಯಬೇಕು
ಸಾಯೋ ಮುನ್ನ ಗೇಯ ಬೇಕು ಬದುಕನು
ಸಾಲ ಪಡೆದು ಸೋಲಬೇಕು
ಸೋತಲ್ಲೇ ಗೆಲ್ಲಬೇಕು ಮೆಟ್ಟಿ ಅವಮಾನವನು

ಬಡತನವೆಂಬ ಕಠಿಣ ಪರೀಕ್ಷೆ
ಕುಸಿಗೊಳಿಸುವುದು ಎಲ್ಲ ನಿರೀಕ್ಷೆ
ತಂದದ್ದು ಏನಿಲ್ಲ ಇಲ್ಲಿ
ಬಿಟ್ಟು ಹೋಗಲೇಬೇಕು ಕೊನೆಗಲ್ಲಿ

ಹಣದ ಹಿಂದೆ ಎಲ್ಲ ಬಂಧ
ಗುಣಕ್ಕೆ ಹಾಕಿ ದಿಗ್ಬಂಧ
ಅಳೆದು ತೂಗಿ ತೊರೆದು ಹೋಗಿ
ಆಳಿಗೊಂದು ಕಲ್ಲೆಸೆವರು ಬಿದ್ದಿರಲು ಜೋಗಿ

ಬದುಕ ಕುಲುಮೆ ರಂಗಿಗೆ ಮರುಳಾಗಿ
ಬಿದ್ದು ಪತಂಗ ಹೊರಳಾಡುವಂತೆ
ದೂರ ಸರಿದವರೆಲ್ಲರ ಸಹಾಯಕ್ಕಾಗಿ
ವಿಲವಿಲ ಒದ್ದಾಡಿಸುವುದು ಬದುಕಿನ ಕಥೆ

ಬೆಂದ ಅನ್ನ ರುಚಿಸುವಂತೆ
ಬೆಂದ ಬದುಕು ಮರೆಯದಂತೆ
ಹೋರಾಟದ ಹಾದಿಯಲ್ಲಿ
ನೆಮ್ಮದಿಯಾ ಹುಡುಕುವ ಚಿಂತೆ

10:35 ಪಿಎಂ 02.03.2024
*ಅಮು ಭಾವಜೀವಿ ಮುಸ್ಟೂರು*


ಬಾಳಲು ಎಂದು ಬಂದ ನಾವು
ಮೊಗ್ಗು ಬಿರಿದು ಅರಳೋ ಹೂವು
ಕಷ್ಟದ ಮುಳ್ಳಿನ ಮೊನಚಿನ ನಡುವೆ
ಮೃದು ದಳ ಹರಿಯದಂತೆ ನಗುವ ಗೊಡವೆ

ನೋವಿನ ಉರಿ ತಾಪ ಮೇಲೆ
ಬಡತನದ ಬಿರುಗಾಳಿ ಲೀಲೆ
ಒಲವಿನ ಮಂಜಿನ ಹನಿಸ್ಪರ್ಶ
ತಂದಿತು ಬಾಳಲ್ಲಿ ಕ್ಷಣ ಹರ್ಷ

ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬೆಂದ ಬೇಂದ್ರೆ ನುಡಿದ ಮಾತು
ಬಳಸಿಕೊಳ್ಳಬೇಕು ಅದಕು ಇದಕು ಎದಕು

ಬಾಳ ಒಳ್ಳೆ ಸುಳಿಗಳು ನೂರಾರು
ಬಿಡಿಸಿಕೊಳ್ಳಲುಂಟು ತಕರಾರು
ಪ್ರೀತಿಯ ಪಯಣದಲ್ಲಿ ಹೆಣಗಾಡಿ
ದಂಪತಿ ನಾವಾಗಿ ಹೊರಡೋಣ ದಾಂಗುಡಿ

ಬಾ ಹತ್ತಿರಕ್ಕೆ ಆ ಎತ್ತರಕ್ಕೆ
ಏರಲು ಬೇಕು ದಾಂಪತ್ಯದಾಸರೇ
ಮುಪ್ಪನ್ನು ಅಪ್ಪಿ ಬಾಳ ತೆಪ್ಪದಲ್ಲಿ
ಬೀಳದಂತೆ ಒಪ್ಪದಿಂದ ಗುರಿದಡ ಸೇರೋಣ

10:46 ಪಿಎಂ 02032024
*ಅಮುಭಾವಜೀವಿ ಮುಸ್ಟೂರು*

ಬಂಧ ಬಿಗಿಯಾಗಲು ಅವಳೇ ಕಾರಣ
ಅನುಬಂಧ ಹಸನಾಗಲು ಅವಳೇ ಪ್ರೇರಣ

ಬದುಕಿನ ನೋವುಗಳಿಗೆ ಅವಳೇ ಸಾಂತ್ವಾನ
ಬರುವ ಕಷ್ಟಗಳ ಗೆಲ್ಲಲು ಅವಳೇ ಚೇತನ

ಜೀವನದ ಪರೀಕ್ಷೆಗಳಿಗೆ ಅವಳೇ ಉತ್ತರ ಪತ್ರಿಕೆ
ಸೋಲನ್ನು ಗೆಲುವಾಗಿಸುವುದೇ ಅವಳ ಒಡಂಬಡಿಕೆ

ಜಗದಿ ಪಸರಿಸಿದೆ ಅವಳ ಸ್ನೇಹ ಪರಿಮಳ
ಜಗವ ತೂಗಿದ್ದು ಅವಳೊಲವ ಜೋಗುಳ

ಮೊಳಕೆಯಿಂದ ಮರದ ನೆರಳವರೆಗೂ
ಪ್ರತಿ ಹಂತಕ್ಕೂ ಅವಳಿಂದಲೇ ಮೆರುಗು

ತುಳಿಯುವವರ ಮಧ್ಯೆ ಬೆಳೆದು
ಆಳ್ವಿಕೆ ನಡೆಸುವ ಛಲ ಅವಳದು

ಕರುಣೆಯ ಕಡಲಿಗೆ ತಾಯಿಯವಳು
ಮಮತೆಯ ಮಡಿಲಿಗೆ ಮೇರು ಅವಳು

ಸ್ನೇಹದ ಬಾಂಧವ್ಯಕ್ಕೆ ಬಂಧ ಬೆಸೆದವಳು
ಪ್ರೀತಿಯ ಅನುಬಂಧಕೆ ಸಿಂಧುವಾದವಳು

ತಾಯಿ ಸೋದರಿ ಗೆಳತಿ ಹೆಂಡತಿ ಮಗಳು
ಪ್ರತಿ ಹಂತದಲ್ಲೂ ಅವಳಿಗೆ ಸಾಟಿ ಅವಳೇ ಆಗಿಹಳು

ಪುರುಷ ಪೌರುಷಕ್ಕೆ ನಲುಗಿದರು
ಸಂಸಾರದ ಹರುಷಕ್ಕೆ ಅವಳೇ ಬೇರು

ಜಗ ಮೆಟ್ಟಿಲಾಗಿ ಏರಲಿ ಅವಳು ಶಿಖರ
ಹೃದಯ ತುಂಬಿ ಹರಸಲಿ ಮನುಜ ಸಂಸ್ಕಾರ

೦೮ಎಎಂ೦೭೦೩೨೦೨೪
ಅಮು ಭಾವಜೀವಿ ಮುಸ್ಟೂರು


ಬಿದ್ದು ಬರಲಿದೆ ಬದುಕು
ಬರಗಾಲ ತಂದಿದೆ ಬಿರುಕು
ಕಾದು ಹೆಂಚಿನಂತಹ ಒಡಲು 
ಆವಿಯಾಗುತಿದೆ ಹನಿ ಇಲ್ಲಿ ಬೀಳಲು

ಮುನಿದ ಸೂರ್ಯನ ಕೆಂಗಣ್ಣು
ಬೆಂಕಿಯಾಗಿದೆ ಸುಡುವ ಮಣ್ಣು
ಹೆಜ್ಜೆ ಇಡಲು ಬೊಬ್ಬೆ ಕೀಳುತ್ತಿದೆ
ಯಾವ ಪಾಪಕೆ ಈ ಗತಿ ಬಂದಿದೆ

ಆಗೆಲ್ಲ ಎಷ್ಟೊಂದು ಚೆಂದವಿತ್ತು
ಎಲ್ಲೆಲ್ಲೂ ಹಸಿರೇ ತುಂಬಿತ್ತು
ಜೀವಜಲ ಧಾರೆಯಾಗಿ ಹರಿಯುತ್ತಿತ್ತು
ಈಗೆಲ್ಲಾ ಬರಿದಾಗಿ ಬತ್ತಿ ಸತ್ತಿತು

ಮರ ಬೆಳೆಯುವ ಜಾಗದಲ್ಲಿ ಮನೆಗಳೆದ್ದು
ಕೆರೆಕುಂಟೆಗಳೆಲ್ಲ ನಗರಗಳಾಗಿ ಬೆಳೆದು
ರಸ್ತೆಗಾಗಿ ನಿತ್ಯ ಸತ್ತ ಮರಗಳೆಷ್ಟೋ
ನೀರಿಗಾಗಿ ಕೊರೆದ ಬಾವಿಗಳು ಲೆಕ್ಕವಿಲ್ಲದಷ್ಟು

ಬಸಿಯುವವರೇ ಎಲ್ಲ 
ಉಳಿಸುವವರು ಯಾರಿಲ್ಲ
ಬರಕಾಲದ ಭೀಕರತೆಗೆ ಕಾರಣ ಎಲ್ಲಾ
ಹೀಗೆ ಆದರೆ ಇನ್ನೂ ಉಳಿತಾಯವಿಲ್ಲ

ನಗರ ಕೇಂದ್ರೀತ ಬದುಕು ಬೇಡ
ಪ್ರಕೃತಿಯೊಂದಿಗೆ ಬದುಕು ಸಹಜ ನೋಡ
ಬೆವರು ಹರಿಸಿದರೆ ಉಸಿರು ಹಸನು
ರಟ್ಟೆ ದುಡಿದರೆ ಹೊಟ್ಟೆ ಬಳಲ್ಲದಿನ್ನು

ಒಡೆದ ಕಟ್ಟೆಗಳ ದುರಸ್ತಿ ಮಾಡಿ
ದುರಾಸೆ ಮನಗಳಿಗೆ ಅಣೆಕಟ್ಟು ಕಟ್ಟಿ
ಓಡುವ ನೀರನ್ನು ನಿಲ್ಲಿಸಿ ಇಂಗಿಸಿ
ಅಂತರ್ಜಲಕ್ಕೆ ಮರುಜನ್ಮ ನೀಡುವ ಬನ್ನಿ

ಮಣ್ಣಿನೊಂದಿಗೆ ಇರಲಿ ಚಿರಬಾಂಧವ್ಯ
ಮಣ್ಣ ಸೇರಿದರೆ ಬೆವರು ಬದಲಾಗುವುದು ಭವಿಷ್ಯ
ನಗರದಾಮಿಷಗಳಿಗೆ ಬಲಿಯಾಗಬೇಡಿ ಯುವಕರೆ
ಹಳ್ಳಿಯಲಿದ್ದು ಒಳ್ಳೆಯವರಾಗಿ ಬದುಕಲು ನೀಡಿ ಕರೆ

0221ಪಿಎಂ10032024
*ಅಮು ಭಾವಜೀವಿ ಮುಸ್ಟೂರು*