*ನೀನಿರದ ಬದುಕು*
ಸಂಜೆಯಿದು ಮಂಕಾಗುತಿದೆ
ನೀನಿರದ ಬದುಕು ಜಾರುತಿದೆ
ಬೇಸರದ ಬಿಸಿಯುಸಿರು ಕೆಂಪು
ಗೋಧೂಳಿಯ ಎರಚುತಿದೆ
ಒಲವಿರದ ಬಯಲಿದು
ಮರಳುಗಾಡಾಗಿ ಮರುಗಿರಲು
ನೊಂದೆದೆಯ ಜ್ವಾಲೆಯಿದು
ಮರೀಚಿಕೆಯ ಸೃಷ್ಟಿಸಿದೆ
ಹಂಬಲದ ಕಾರ್ಮುಗಿಲು
ಬರಿ ಬಂಜೆಯಾಗಿ ಕರಗಿಹೋಗಿ
ಸಂಜೆಯ ರಂಗೆಲ್ಲವೂ
ಭ್ರಮೆಯ ಕೂಸ ಕೈಗಿತ್ತಿದೆ
ಏಕಾಂತವಿದು ಸ್ವಂತಿಕೆಯಿಲ್ಲದ
ಅಂಜಿಕೆಯಲ್ಲಿ ಕಳೆದುಹೋಗಿರಲು
ಕಣ್ಣಿಗೆರಚಿದ ಕೆಂಧೂಳು ಖಾರದ
ಪುಡಿಯಾಗಿ ಕಣ್ಣದೃಷ್ಟಿಯ ಕಳೆದಿದೆ
ಮನದ ಭಾವವಿದು ಕುರುಚಲ
ಪೊದೆಯಾಗಿ ಚುಚ್ಚಿ ಘಾಸಿಗೊಳಿಸಿ
ಎದೆಯ ನೆಲವೆಲ್ಲ ಸುಡುಗಾಡ
ಅವಶೇಷಗಳ ಸಂಗ್ರಹಾಲಯವಾಗಿದೆ
ಬಾ ಒಲವಿನ ಜಡಿಮಳೆಯಾಗಿ
ಹೃದಯದೊಳಗೆ ಜೀವಜಲವನುಕ್ಕಿಸು
ಬದುಕಿದು ಮತ್ತೆ ಮಲೆನಾಡಿನ
ಸಮೃದ್ಧಿಯ ಮೈದಳೆದು ಮೆರೆಯಲಿ
0537ಪಿಎಂ23112018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment