Wednesday, October 12, 2022

ಕವನ

.ಮರೆಯಲು ಸಾಧ್ಯವೇ 
ನೀ ಮಾಡಿದ ಮೋಸವ 
ತಪ್ಪು ಮಾಡದ ಬದುಕಲಿ
ನೀ ಹೊರಿಸಿದೆ ಆರೋಪವ

ಮೋಸಗಾತಿ ನೀನೆಂಬುದು ಗೊತ್ತು
ಆದರೆ ಅದನು ನಂಬದೀ ಜಗವು
ಗಂಡೆಂಬ ಕಾರಣಕೆ ಆರೋಪಿಯಾದೆ
ಹೆಣ್ಣ ಕಣ್ಣೀರಿಗೆ ಸತ್ತುಹೋಯ್ತು ಸತ್ಯವು

ಆತ್ಮ ಸಾಕ್ಷಿಯ ಕೇಳಿ ನೋಡು 
ಉತ್ತರವಲ್ಲಿ ಸಿಕ್ಕುವುದು 
ನೀ ಬದುಕುವುದಕಾಗಿ ಇಲ್ಲಿ 
ಇನ್ನೊಬ್ಬರ ವ್ಯಕ್ತಿತ್ವಕೆ ಮಸಿ ಬಳಿದೆ

ಉಸಿರಿರುವ ತನಕ ವಾಸಿಯಾಗದು 
ಇಡೀ ಬದುಕು ಘಾಸಿಗೊಂಡಿಹುದು
ನಂಬಿಕೆಯ ಕತ್ತು ಹಿಸುಕಿ ಕೊಂದೆ ನೀನು 
ನಿರಪರಾಧಿಗೆ ಶಿಕ್ಷೆ ಕೊಟ್ಟೆ ಸರಿಯೇನು

ನೊಂದ ಹೃದಯದ ಶಾಪವಿದು 
ನೀ ಅನುಭವಿಸಲೇಬೇಕು ನೋವು 
ಪ್ರೀತಿಯ ನಿನ್ನಾಟಕೆ ಸೋತ ನನಗೆ 
ದಕ್ಕಲೇಬೇಕು ಕೊನೆಗೆ ಗೆಲುವು

0947ಪಿಎಂ12102022
*ಅಮಭಾವಜೀವಿ ಮುಸ್ಟೂರು*




Sunday, October 9, 2022

ಕವಿತೆ

ಒಂದೊಂದೇ ಹನಿಗಾಗಿ ಕಾದುಕುಳಿತ
ಬಯಲ ಬವಣೆಯ ಬದುಕು ನನ್ನದು
ಮೋಡ ಕಟ್ಟಿದರು ಮಳೆ ಸುರಿಯಲಾರದು
ಬಾಯಾರಿದ ಒಡಲು ಬಿರುಕು ಬಿಟ್ಟಿಹುದು

ಅದೇಕೋ ಕಾಣೆ ಬಯಲೆಂದರೆ
ಮಳೆಗೇಕೋ ಅಷ್ಟಕ್ಕಷ್ಟೇ
ಬಂದದ್ದಕ್ಕಷ್ಟೇ ತೃಪ್ತಿಗೊಳ್ಳದೆ ವಿಧಿಯಿಲ್ಲ
ಬಿರುಕು ಮುಚ್ಚಲು ಅದು ಸಾಕಾಗೋಲ್ಲ

ಬತ್ತಿದ ಕೆರೆ ಕಟ್ಟೆಗಳ ಅಸ್ತಿತ್ವವೇ
ಇಲ್ಲದಂತೆ ಮಾಯವಾಗಿದೆ
ಅಂತರ್ಜಲವೆಂಬ ಜೀವಜಲ
ಸಿಕ್ಕುವುದು ಕೂಡ ದುರ್ಲಭವಾಗಿದೆ

ಮನುಜನ ಅಟ್ಟಹಾಸದ ಪರಮಾವಧಿಗೆ
ಶಿಕ್ಷೆ ಮಾತ್ರವೇ ಏಕೆ ನನಗೆ
ಎಲ್ಲ ಜೀವಗಳ ಸ್ವತ್ತು ನಾನೆಂಬುದ 
ಮರೆತ ಮಾನವ ಹಾಳಾಗೈದ ಆಸೆಗೆ

ಬಿಕ್ಕಳಿಕೆಗೂ ಸಾಕಾಗದು ಈ ತುಂತುರು
ಬಾಯಾರಿಕೆ ಕಟ್ಟುತ್ತಿದೆ ಉಸಿರು
ಬಸಿರು ಬಂಜೆಯಾಗುತ್ತ ಸಾಗಿದರೆ
ಬದುಕಿನಸ್ತಿತ್ವಕೆ  ಕುತ್ತು ತಂದಿದೆ

0253ಪಿಎಂ09102022
*ಅಮುಭಾವಜೀವಿ ಮುಸ್ಟೂರು*

Sunday, October 2, 2022

ಕವಿತೆ

ಬೆಳದಿಂಗಳ ರಾತ್ರಿಯಲ್ಲಿ
ನೀನಿರಲು ಜೊತೆಯಲ್ಲಿ
ಇರುಳೆಲ್ಲಾ ಹಗಲಾಯಿತು
ಜೀವನದ ಯಾನದಲ್ಲಿ
ಸಂಗಾತಿಯ ಜೊತೆ ಸಹ ಪಯಣದಲ್ಲಿ
ಬದುಕಿಗೆ ಈಗ ಸುಖ ತಂತು

ಎಡವದೆ ನಡೆಸಲು ನೀ ಬಂದೆ
ಪ್ರೀತಿಯ ಎರವಲು ನೀ ತಂದೆ
ಬಾಳಿಗೆ ಆಸರೆ ನೀನಾದೇ
ಕಷ್ಟಗಳ ಎದುರಿಸುವ ಛಲ ತಂದೆ
ದುಡಿಯಲು ಬೆನ್ನೆಲುಬಾಗಿ ನೀನಿಂದೆ
ನನ್ನದೇನಿದೆ ನಿನ್ನೀ ಶ್ರಮದ ಮುಂದೆ

ಆಡಿಕೊಳ್ಳುವವರ ಎದುರು
ಸಾಧಿಸಿ ತೋರು ಎಂದು
ನೀನಂದು ಸ್ಫೂರ್ತಿ ತುಂಬಿದೆ
ಸಾಧಕನಾಗಿ ಜಗದ ಮುಂದೆ
ನೀನಿರಲು ನನ್ನ ಬೆನ್ನ ಹಿಂದೆ
ಸೋತವನ ಗೆಲ್ಲಿಸಿದ್ದು ನಿನ್ನ ಪ್ರೀತಿ ಒಂದೇ

ನೋವುಗಳನ್ನೆಲ್ಲಾ ಹೂವಾಗಿಸಿ
ನಲಿವಿನಲ್ಲಿ ನನ್ನ ನೀನಿರಿಸಿ
ಸತಿಯಾದೆ ಸಪ್ತಪದಿ ತುಳಿದು
ಏನೇ ಬಂದರು ಕೈ ಬಿಡಲಾರೆ
ನೀನಿಲ್ಲದೆ ನಾ ಬದುಕಲಾರೆ
ಜಗ ಮೆಚ್ಚಲಿ ಸಾಧಕ ದಂಪತಿಯೆಂದು

0909ಪಿಎಂ02102022
*ಅಮುಭಾವಜೀವಿ ಮುಸ್ಟೂರು*