ಬದುಕಿನ ಪಯಣದಲ್ಲಿ ನಾ ನಡೆದು ಬಂದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದಾಗ ಈ ಸಾಮಾಜಿಕ ಜಾಲತಾಣಗಳ ಮಾಧ್ಯಮದಲ್ಲಿ ನನ್ನ ಬರಹ ಜನರನ್ನು ತಲುಪುವ ವೇದಿಕೆಯಾಗಿ ಬಳಸಿಕೊಂಡು ಸುಮಾರು ಹತ್ತು ವರ್ಷಗಳ ಸುದೀರ್ಘ ಸಮಯದಲ್ಲಿ ನನ್ನ ಸಾವಿರಾರು ಕವಿತೆಗಳು ಪ್ರಕಣಯಟಗೊಂಡು ಸಹೃದಯಿ ಓದುಗರು ಮೆಚ್ಚಿ ಬೆನ್ನು ತಟ್ಟುವ ಮೂಲಕ ನನ್ನನ್ನು ಬೆಳೆಸಿದ್ದಾರೆ.ಆ ಎಲ್ಲ ಹಿರಿಯ ಕಿರಿಯ ಸಮಾನಮನಸ್ಕ ಸ್ನೇಹಿತರಿಗೆ ನನ್ನ ಅನಂತ ಧನ್ಯವಾದಗಳು.
ಸಾಮಾಜಿಕ ಜಾಲತಾಣದ ಮಾಧ್ಯಮದಲ್ಲಿ ಹೆಚ್ಚು ಬಳಕೆಯಲ್ಲಿರುವ ಫೇಸ್ ಬುಕ್ ಎಂಬ ವೇದಿಕೆಯಲ್ಲಿ ಸಾಕಷ್ಟು ಅಂಶಗಳನ್ನು ಓದಿ ,ಗಮನಿಸಿ ,ಅರ್ಥಮಾಡಿಕೊಂಡು ಹೊಸ ವಿಚಾರಗಳನ್ನು ಕಲಿತುಕೊಂಡು ಬೆಳೆದಿರುವೆ. ಹಾಗೆಯೇ ಎಲೆಮರೆಯ ಕಾಯಿಯಂತೆ ಇದ್ದ ನನ್ನ ಸಾಹಿತ್ಯ ರಚನೆ ಜಗದೆದುರು ತೆರೆದಿಟ್ಟಿತ್ತು. ಇದರಿಂದ ಬೇರೆ ಬೇರೆ ಕಡೆಗಳಲ್ಲಿ ನನ್ನ ಹೆಸರು ಮತ್ತು ಸಾಹಿತ್ಯ ರಚನೆ ಜನಮನ್ನಣೆಯನ್ನು ಪಡೆಯಿತು.
ಅದೆಷ್ಟೋ ಒಳ್ಳೆಯ ಅಂಶಗಳೊಂದಿಗೆ ಈ ಫೇಸ್ಬುಕ್ ಮತ್ತು ವಾಟ್ಸಪ್ ನನ್ನ ನಿತ್ಯ ಒಡನಾಡಿಯಾಗಿ ಜೊತಯಾದವು. ಇಲ್ಲಿ ಅದೆಷ್ಟೋ ಬಾರಿ ನನ್ನ ಬರಹಗಳನ್ನು ಬೇರೆಯವರು ಬಳಸಿಕೊಂಡದ್ದೂ ಇದೆ. ಹಾಗೆಯೇ ನಾನು ಒಬ್ಬ ಕವಯಿತ್ರಯ ಕವಿತೆಯೊಂದನ್ನು ನನ್ನ ಅಜಾಗರೂಕತೆಯಿಂದ ಬಳಸಿ ಕೊಂಡು ಕೃತಿಚೌರ್ಯದ ಮಹಾ ಆಪಾದನೆಗೆ ಗುರಿಯಾದೆ. ಇದು ತಪ್ಪು ಅಂತ ಗೊತ್ತಿದ್ಜೂ ಕೂಡ ನನ್ನಿಂದಾದ ಆ ತಪ್ಪಿಗೆ ಮೂಲ ಬರಹಗಾರ್ತಿಯಲ್ಲಿ ಸಾರ್ವಜನಿಕವಾಗಿಯೇ ಕ್ಷಮೆ ಯಾಚಿಸಿ ಪ್ರಾಯಶ್ಚಿತ್ತ ಮಾಡಿಕೊಂಡೆನಾದರೂ , ಈ ಘಟನೆಯಿಂದ ನನ್ನ ಮನಸ್ಸಿಗೆ ವ್ಯಕ್ತಿತ್ವಕ್ಕೆ ಭಾರಿ ಹೊಡೆತ ಕೊಟ್ಟು ನನ್ನನ್ನು ದಿಗ್ಭ್ರಾಂತನನ್ನಾಗಿ ಮಾಡಿತು.ಇಲ್ಲಿಂದ ನನ್ನ ಬರಹಗಳನ್ನು ಜನ ಅನುಮಾನಿಸುವಂತೆ ಮಾಡಿತು. ನನ್ನ ಅದೆಷ್ಟೋ ಆತ್ಮೀಯರೆನಿಸಿಕೊಂಡ ಸ್ನೇಹಿತರು ನನ್ನಿಂದ ಅಂತರವನ್ನು ಕಾಯ್ದುಕೊಂಡರು. ಇದು ನನ್ನೊಳಗಿನ ಬರಹಗಾರನ ಆತ್ಮವಿಶ್ವಾಸವನ್ನು ಕುಂದಿಸಿತು.
ಈ ಘಟನೆಯ ನಂತರ ನನ್ನ ಬರಹಗಳನ್ನು ಓದಿ ಇಷ್ಟಪಡುವ ಅದೆಷ್ಟೋ ಸಹೃದಯ ಓದುಗರು ನನ್ನ ಆತ್ಮ ವಿಶ್ವಾಸ ಹೆಚ್ಚಿಸಿ ಬರೆಯುವಂತೆ ಪ್ರೇರೇಪಿಸುತ್ತಾ ಇಂದಿನವರೆಗೆ ನನ್ನ ಜೊತೆ ಜೊತೆಯಲ್ಲಿ ಸಾಗಿ ಬಂದಿದ್ದಾರೆ ಅವರಿಗೆಲ್ಲ ನಾನು ಚಿರಋಣಿ. ಇಷ್ಟೇ ಅಲ್ಲದೆ ಒಬ್ಬ ಹೆಂಗಸು ನನ್ನ ವೈಯಕ್ತಿಕ ಜೀವನದಲ್ಲಿ ಪ್ರವೇಶ ಮಾಡಿ ಪ್ರೀತಿಯ ಆಮಿಷ ಒಡ್ಡುವ ಮೂಲಕ ನನ್ನ ಹಾದಿ ತಪ್ಪಿಸಿದರು.ಅವಳಿಗೆ ಸಾಕಷ್ಟು ಬಾರಿ ಇದು ತಪ್ಪು ಈ ಸಂಬಂಧ ಪಾವಿತ್ರ್ಯತೆಯನ್ನು ಕಳೆದುಕೊಂಡು ಅನೈತಿಕತೆಯ ರೂಪ ಪಡೆಯುತ್ತದೆ ಎಂದು ಹೇಳಿದರು ಕೇಳದೆ ಸಹವಾಸದಿಂದ ಸನ್ಯಾಸಿಯನ್ನು ಕೆಡಿಸಿದಳು.ನಂತರ ಅದರ ಎಲ್ಲ ಕೆಡುಕುಗಳಿಗೆ ನನ್ನನ್ನೇ ನೇರ ಹೊಣೆ ಮಾಡಿ ಬ್ಲಾಕ್ ಮಾಡಿಕೊಂಡು ಹೋಗಿಯೇ ಬಿಟ್ಟಳು. ಕೃತಿಚೌರ್ಯದ ಜೊತೆಗೆ ಈ ಘಟನಯೂ ಕೂಡ ನನ್ನ ಜಂಘಾಬಲವನ್ನೇ ನಾಶಮಾಡಿಬಿಟ್ಟಿತು. ಬೆಣ್ಣೆ ತಿಂದ ಕೋತಿ ಆಡಿನ ಬಾಯಿಗೆ ಒರೆಸಿ ಬಚಾವಾದಂತೆ ಆ ಅನೈತಿಕ ಸಂಬಂಧದ ಎಲ್ಲ ಆಗುಹೋಗುಗಳನ್ನು ನನ್ನ ತಲೆಗೆ ಕಟ್ಟಿ ಅದೃಷ್ಯವಾದಳು.ಈ ಸಂಬಂಧ ಅವರ ಆಪ್ತರು ಹಿತೈಷಿಗಳಿಂದ ಬೆದರಿಕೆ ಕರೆ ಮಾಡಿಸಿ ಇನ್ನಷ್ಟು ನನ್ನ ಕುಗ್ಗುವಂತೆ ಮಾಡಿದರು. ಈ ಎಲ್ಲ ಘಟನೆಗಳಿಂದ ನನ್ನ ವೈಯಕ್ತಿಕ ಕೌಟುಂಬಿಕ ಬದುಕು ಹಾದಿ ತಪ್ಪುವ ಸಾಧ್ಯತೆಗಳೇ ಹೆಚ್ಚು ಇರುವಾಗ ನಾನೇ ನನ್ನ ಕುಟುಂಬದ ಸದಸ್ಯರ ಅದರಲ್ಲೂ ನನ್ನ ಅರ್ಧಾಂಗಿಯಲ್ಲಿ ಕ್ಷಮೆ ಕೇಳುವ ಮೂಲಕ ಇನ್ನೆಂದೂ ಸಾಹಿತ್ಯ ವಲಯದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲವೆಂಬ ನಿರ್ಬಂಧವನ್ನು ಹೇರಿಕೊಂಡು ಅದರಂತೆ ಇಂದಿನವರೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ಹೊರಗುಳಿದೆ.
ಇದರ ಮಧ್ಯೆ ನಾನು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಸಿಕೊಂಡಂತೆ ಕೆಲವರ ಸಹವಾಸದಿಂದ ಆರ್ಥಿಕ ನಷ್ಟವನ್ನೂ ಅನುಭವಿಸಿ ಅಕ್ಷರಶಃ ಕಂಗಾಲಾಗುವ ಸ್ಥಿತಿಗೆ ತಲುಪಿದೆ . ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸುತ್ತಾ ಎಷ್ಟೇ ಕಷ್ಟ ಬಂದರೂ ಎದೆಗುಂದದೆ ನಾನೇ ತಂದುಕೊಂಡ ಈ ಪರಿಸ್ಥಿತಿಯಿಂದ ಹೊರಬರಲು ನಿತ್ಯ ಹೆಣಗಾಡುತ್ತಾ ದುಡಿಯುವ ಅನಿವಾರ್ಯತೆಯಲ್ಲಿ ಎಷ್ಟೇ ಶ್ರಮವಾದರೂ ದಣಿವರಿಯದಂತೆ ದುಡಿಯುತ್ತಿರುವೆ. ಇದರ ಜೊತೆಗೆ ನನ್ನ ಕುಟುಂಬದ ಹೆಂಡತಿ ಮಕ್ಕಳನ್ನು ನನ್ನಂತೆ ಕಷ್ಟಪಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ತಪ್ಪು ಮಾಡದಿದ್ದರೂ ನನ್ನಿಂದ ತಪ್ಪು ಮಾಡಿಸಿದವರ ಎದುರಲ್ಲಿ ಮತ್ತೆ ಫೀನಿಕ್ಸ್ ನಂತೆ ಎದ್ದು ಬರುವ ಛಲದೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ಹೋರಾಡುತ್ತಿದ್ದೇನೆ. ಇಷ್ಟೆಲ್ಲದರ ನಡುವೆ ಬರಹವನ್ನು ನಿಲ್ಲಿಸಬಾರದೆಂಬ ಓದುಗರ ಅಭಿಲಾಷೆಯಂತೆ ಬರೆಯುತ್ತಾ ಸಾಗಿಬಂದಿರುವೆ.
ಸಾಹಿತ್ಯ ರಚನೆ ವಲಯದಲ್ಲಿ ಸುದೀರ್ಘ ಸಮಯ ವ್ಯಯಿಸಿ ಬಂದಿದ್ದರೂ ನನಗೆ ಸಾಹಿತ್ಯವನ್ನು ಅದರ ನಿಯಮಾನುಸಾರ ಬರೆಯಲು ಬರುವುದಿಲ್ಲ. ನನ್ನದೇನಿದ್ದರೂ ನನ್ನೊಳಗಿನ ಭಾವನೆಗಳನ್ನು ನಾನು ಕಂಡು ಕೇಳಿ ಓದಿ ಅನುಭವಿಸಿದ ಆಧಾರದ ಮೇಲೆಯೇ ಬರೆದಿದ್ದೇನೆ ಹೊರತು ಕಾವ್ಯ ಮೀಮಾಂಸಯ ನಿಯಮಗಳು ಗುರು ಲಘುಗಳ ಗಂಧಗಾಳಿಯೂ ಗೊತ್ತಿಲ್ಲದೆ ಕೇವಲ ಪ್ರಾಸಪದಗಳನು ಕೂಡಿಸಿ ಪ್ರಚಾರದ ಗೀಳು ಹತ್ತಿಸಿಕೊಂಡು ಬರೆಯುತ್ತಾ ಬಂದೆ.ಅದಕ್ಕೆ ಏನೋ ನನಗೆ ಯಾವ ಪ್ರಶಸ್ತಿಗಳೂ ಬರಲಿಲ್ಲ. ಅದರಿಂದ ಯಾವುದೇ ಲಾಭವೂ ಸಿಗಲಿಲ್ಲ.ಬದಲಿಗೆ ನನ್ನ ಅಮೂಲ್ಯವಾದ ಸಮಯವನ್ನು ಕಳೆದುಕೊಂಡೆ ಅಷ್ಟೇ.
ಇಷ್ಟೆಲ್ಲಾ ಸಾಧಕ ಬಾಧಕಗಳ ಹಿನ್ನೆಲೆಯಲ್ಲಿ ನಾನು ಒಂದು ತೀರ್ಮಾನಕ್ಕೆ ಬಂದಿರುವೆ.ಸುಮಾರು ಹತ್ತು ವರ್ಷಗಳ ಸುದೀರ್ಘ ಒಡನಾಟದಿಂದ ಮುಕ್ತಿ ಪಡೆಯಲು ನಿರ್ಧರಿಸಿದ್ದೇನೆ. ನನಗೆ ಗೊತ್ತು ಸಾಮಾಜಿಕ ಜಾಲತಾಣಗಳು ಒಳ್ಳೆಯದನ್ನು ಎಷ್ಟು ಹೊಂದಿವೆಯೋ ಅಷ್ಟೇ ಕೆಡುಕನ್ನು ಒಳಗೊಂಡಿದೆ ಎಂದು. ನಾನು ಒಳಿತು ಕೆಡುಕುಗಳೆರಡನ್ನೂ ಅನುಭವಿಸಿದ್ದು ಇನ್ನು ಮುಂದೆ ಇದರ ಸಹವಾಸ ಸಾಕು ಮಾಡಿ ವಾಸ್ತವ ಜೀವನದ ಕಡೆ ಗಮನ ಹರಿಸಲು ನನ್ನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಡೀ ಆಕ್ಟೀವೇಟ್ ಮಾಡುತ್ತಿದ್ದೇನೆ. ಇಷ್ಟು ದಿನ ನನ್ನ ಜೊತೆಗಿದ್ದ ತಮಗೆಲ್ಲರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮತ್ತು ನನ್ನ ಕುಟುಂಬವರ ಮೇಲೆ ಇರಲಿ. ನೀವೇ ಬೆಳೆಸಿದ #ಅಮುಭಾವಜೀವಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳದಿದ್ದರೂ ಜೀವಂತವಾಗಿ ಶಾಲೆ,ಹೊಲ,ಸಂಸಾರಗಳನ್ನು ನಿಭಾಯಿಸಲು ಹೊರಡುತ್ತಿದ್ದೇನೆ ಹರಿಸಿ ಹಾರೈಸಿ ಸ್ನೇಹಿತರೇ.
ಶುಭ ವಿದಾಯ
೦೫೩೫ಪಿಎಂ೨೭೦೫೨೦೨೩
*ಅಮುಭಾವಜೀವಿ ಮುಸ್ಟೂರು*
*