Saturday, May 20, 2023

ಕವಿತೆಗಳು

ಬರಿದೆ ಓಡುವಿರೇಕೆ ಮೋಡಗಳೇ
ಮಳೆ ಸುರಿಯುವ ಆಸೆ ನಿಮಗಿಲ್ಲವೇ
ಉರಿವ ಬಿಸಿಲ ತಾಪಕೆ ತತ್ತರಿಸಿದೆ ಜಗವು ನಾಲ್ಕನಿಯ ಚೆಲ್ಲಿ ತಂಪೆರೆಯಬಾರದೇ

ಚೈತ್ರದ ಚಿಗುರು ಬಾಡುವ ಮುನ್ನ
ನದಿ ಕೆರೆ ಕುಂಟೆಗಳು ಬತ್ತುವ ಮುನ್ನ
ಬಾಯಾರಿದ ಭೂತಾಯೊಡಲು ಬಿರಿಯುವ ಮುನ್ನ
ನೀವು ಮಳೆಯ ಹನಿಯಾಗಿ ಧರೆಗಿಳಿದರೆಷ್ಟು ಚೆನ್ನ

ಮಾಗಿ ಮಾಡಲು ರೈತ ಕಾದು ಕುಳಿತಿಹನು
ದಣಿದ ಪ್ರಕೃತಿ ತಣಿಯಲು ಕಾತರಿಸಿಹುದು
ಬಿರುಮಳೆಯ ಸುರಿಯದಿದ್ದರೂ ಬೇಡ
ತುಂತುರು ಹನಿಯಾಗಿ ಸಂಚರಿಸು ಬಾ ಧರೆಯಲಿ

ಕಾದ ಬಾಣಲಿಯಂತಾಗಿದೆ ಬುವಿಯೊಡಲು
ನಿನ್ನ ಕನಿಕರದ ಹನಿಗಳನಿತ್ತ ಕಳಿಸು
ಬರಿದಾದ ಮಣ್ಣಲ್ಲಿ ಮೊಳಕೆ ಚಿಗುರಲಿ
ಹಸಿರುಟ್ಟು ವಸುಂಧರೆಯು ಸಂಭವಿಸಲಿ

ಬರದ ಛಾಯೆಯು ಬೇಡವೇ ಬೇಡ
ಸುರಿವ ಹನಿಗಳು ದೂರ ಮಾಡಲಿ ದುಗುಡ
ಪ್ರೀತಿಯು ಜಗವನಾಳುವುದೆಂದಾದ ಮೇಲೆ
ಮುಂಗಾರು ಮಳೆ ಮೋಡ ಬಂಜೆಯಾಗದಿರಲಿ

0321ಪಿಎಂ19052023
*ಅಮುಭಾವಜೀವಿ ಮುಸ್ಟೂರು*

ದೂರ ಹೋದ ನಿನ್ನ
ದೂರುವೆನು ನಾನು
ಬಯಸದೇ ಬಂದು
ನೋವನಷ್ಟೆ ಕೊಟ್ಟೆ ನೀನು

ಸ್ನೇಹದ ಖೆಡ್ಡಾ ತೋಡಿ
ಸಲಿಗೆಯ ಆಮಿಷವೊಡ್ಡಿ
ಪ್ರೀತಿಯ ಆಳಕೆ ತಳ್ಳಿ
ಮೋ(ಹ)ಸದಿ ಬೆನ್ನು ತೋರಿ ಹೊರಟೆ 

ನೈತಿಕತೆ ಎಂಬುದೇ ನಿನಗಿಲ್ಲ
ಅನೈತಿಕತೆಯ ಬಂಧ ಬಯಸಿದೆ ನೀ
ಅರಿಯದ ಮುಗ್ಧ ಹೃದಯಕ್ಕೆ
ಅವಹೇಳನದ ಶಿಕ್ಷೆ ವಿಧಿಸಿದೆ ನೀ

ಏಕೆ ಬಂದೆ ಕಣ್ಣ ಮುಂದೆ
ನನ್ನೆದೆಯ ಭಾವಗಳ ನೀ ಕೊಂದೆ
ಪ್ರೀತಿಯೆಂಬುದು ನಿನಗೆ ಆಟವಾಯ್ತು
ನನ್ನ ಬಾಳ ಪುಟದಿ ಮರೆಯದ ಅಧ್ಯಾಯವಾಯ್ತು

ಆತ್ಮ ಸಾಕ್ಷಿ ಇಲ್ಲದ ನೀನೊಬ್ಬ ಅವಕಾಶವಾದಿ
ಅಂತರಂಗದ ಅಳಲು ತಂತು ನನ್ನಲಿ ಬೇಗುದಿ
ವಂಚಕಿಯು ನೀನು ಸಂಚಿಗೆ ಬಲಿಯಾದೆನು

ಉಸಿರಿರುವ ತನಕ ಮರೆಯಲಾರೆ ನಿನ್ನ ದ್ರೋಹ
ಕೊನೆಗೂ ಸಾಬೀತಾಯ್ತು ನೀನಿಂತಹವಳೆಂಬ ಸಂದೇಹ
ಮತ್ತಾರಿಗೂ ಈ ರೀತಿ ಮಾಡಿದಿರು
ನಿನ್ನ ನೆರಳಿಗಂಜಿಯಾದರು
ಸನ್ನಡತೆಯ ಪಾಲಿಸುತಿರು

೦೩೫೧ಪಿಎಂ೨೦೦೫೨೦೨೩
*ಅಮುಭಾವಜೀವಿ ಮುಸ್ಟೂರು*


ಬದುಕೆಂಬ ಬಸ್ನಲ್ಲಿನ ಪ್ರಯಾಣ
ಕಷ್ಟದ ತಿರುವುಗಳಿಂದ ಬಲು ಹೈರಾಣ
ಸೋತಾಗ ಅನುಭವಿಸುವ 
ಅವಮಾನ ಬಲು ಧಾರುಣ
ಗೆದ್ದೇ ಗೆಲ್ಲುವ ಛಲವೊಂದೇ ಅಲ್ಲಿ ಪ್ರೇರಣ
ಏನೇ ಆದರೂ ಏನೇ ಬಂದರೂ 
ಇಳಿದು ಹೋಗಲೇಬೇಕು ಬಂದಾಗ ನಮ್ಮ ನಿಲ್ದಾಣ

೧೧೦೧ಪಿಎಂ೨೦೦೫೨೦೨೩
*ಅಮುಭಾವಜೀವಿ ಮುಸ್ಟೂರು*
 

No comments:

Post a Comment