*ಗಜಲ್*
ಅರಳುವ ಮುನ್ನವೇ ನರಳಿಸುವರಲ್ಲ ಸಾಕಿ
ಚಿಗುರುವ ಪೈರನೆ ಕತ್ತರಿಸುವರಲ್ಲ ಸಾಕಿ
ಅವಹೇಳನದ ಅಡಕತ್ತರಿಗೆ ಸಿಕ್ಕಿಸುವರು ಜನ
ಸ್ವಾಭಿಮಾನವನ್ನು ಸೋಗಲಾಡಿತನ ಎನ್ನುವರಲ್ಲ ಸಾಕಿ
ತಪ್ಪಿನ ಪರಾಮರ್ಶೆ ಮಾಡುವುದೇ ಇಲ್ಲ
ಗಾಳಿಗೆ ಹರಿದಾಡಿದ್ದನ್ನೇ ನಂಬುವರಲ್ಲ ಸಾಕಿ
ಬಳಸಿಕೊಂಡು ಬಿಸಾಡುವರು ಏಕೆ ಹೀಗೆ
ಉಳಿಪೆಟ್ಟು ತಿನ್ನದೇ ಶಿಲ್ಪವಾಗುವುದಿಲ್ಲ ಸಾಕಿ
ಆತ್ಮಸಾಕ್ಷಿ ಎಂಬುದಿಲ್ಲ ಅಮು ಈ ಜನಕೆ
ಅಮಾಯಕರನ್ನ ತೆಗಳಿ ಶಿಕ್ಷಿಸುವವರಲ್ಲ ಸಾಕಿ
0225 ಪಿಎಂ14012024
*ಅಮುಭಾವಜೀವಿ ಮುಸ್ಟೂರು*
ಎದೆಯ ಭಾಷೆಗೆ ಬಲವ ನೀಡಲು ಕವಿತೆ ರೂಪದಿ ಬಂದೆಯ
*ಗಜಲ್*
ಅಪಪ್ರಚಾರ ಮಾಡಿ ಓಡಿ ಹೋಗಿರುವೆಯಲ್ಲ
ಮೊದಲು ವಿಚಾರ ಮಾಡಿದೆ ಶಿಕ್ಷಿಸಿದೆಯಲ್ಲ
ಬೆಳೆಸುವವರಿಲ್ಲದೆ ಕೊರಗುತಿವೆ ಪ್ರತಿಭೆ
ಕಳಂಕ ಹೊರಿಸಿ ಕೈ ತೊಳೆದುಕೊಂಡೆಯಲ್ಲ
ನೀ ಕೂಡ ತಪ್ಪು ಮಾಡಿದ್ದುದನು ಮರೆತೆ
ಬೇರೆಯವರ ತಪ್ಪನ್ನು ಹೆಮ್ಮರವಾಗಿಸಿದೆಯಲ್ಲ
ಪ್ರೀತಿಯ ಹೆಸರಲ್ಲಿ ಬಲೆ ಬೀಸಿ ಹಾದಿ ತಪ್ಪಿಸಿದೆ
ಮುಗ್ಧ ಮನಸ್ಸಿಗೆ ಘೋರ ಹಿಂಸೆ ನೀಡಿದೆಯಲ್ಲ
ಇಂಥವರ ಸ್ನೇಹದಿಂದ ಅಮು ನೀ ಶೋಷಿತನಾದೆ
ಅವರ ಮಾನ ಹರಾಜಾಕಥೆಯದೆ ಸುಮ್ಮನೆಯಾದೆಯಲ್ಲ
0219 ಪಿಎಂ15012024
*ಅಮುಭಾವಜೀವಿ ಮುಸ್ಟೂರು*
ತಾರೆಗಳು ಬೀಳುತ್ತಿವೆ
ಚಂದ್ರಮನ ಕೂಗುತಿವೆ
ಬೆಳದಿಂಗಳ ತಾರೆಯ
ತಂಗಾಳಿ ತೀಡುತಿದೆ
ನೈದಿಲೆ ಬೇಡುತಿದೆ
ಬೆಳಗಾಗುವುದರೊಳಗೆ ಬಾರೆಯ
ಏಕಾಂತದ ಸಂಚಾರದಿ
ಇನ್ನು ಸಂಭ್ರಮವೇ ಇಲ್ಲ
ಶಶಿಯ ಆಗಮನವಾಗದೆ
ಕತ್ತಲಲ್ಲಿ ಹಾದಿತಪ್ಪಿ
ಹಂಬಲಿಸುತ್ತಿದೆ ಪ್ರಕೃತಿ
ಚಂದ್ರಮನ ಸಂಗಮಕಾಗಿ
ಮೆಲ್ಲುಸಿರಿನ ಬಡಿತವು
ಏದುಸಿರಿಟ್ಟು ಕಂಗಾಲಾಗಿದೆ
ಸಮಾಧಾನಿಸು ಬಾ
ಅಮಾವಾಸ್ಯೆ ಕಳೆದಾಯ್ತು
ಪೂರ್ಣಿಮೆಯ ಭರವಸೆ ಇತ್ತು
ಆತಂಕ ದೂರವಾಗಿಸು ಬಾ
ಏಕೆ ಇಷ್ಟೊಂದು ತಡಮಾಡುವೆ
ಬೇಕೆಂದರೆ ಅಹೋರಾತ್ರಿ ಹಾಡುವೆ
ನೀನಿರುವ ಇರುಳೇ ಸಾಕು ಜೀವಕೆ
ಬಿಕ್ಕುತಿದೆ ಉಕ್ಕದೆ ಸಾಗರ
ಬೇಸರದ ಮಡುವಾಗಿದೆ ಅಂಬರ
ಎಲ್ಲ ನೀಗಿಸಲು ಮೆಲ್ಲ ಬಾ ಸನಿಹಕೆ
೧೦೨೮ಪಿಎಂ೧೫೦೧೨೦೨೪
*ಅಮುಭಾವಜೀವಿ ಮುಸ್ಟೂರು*
ರಾಮ ನಾಮವೊಂದಿರೆ ಸಾಕು
ಜೀವನ ಪಾವನವೂ
ಹನುಮನ ಪಾದಕ್ಕೆರಗಿದರೆ ಸಾಕು
ರಾಮನ ಕೃಪೆಗೆ ಪಾತ್ರರು ನಾವು
ಪುರುಷೋತ್ತಮನ ಪ್ರಾಣ ಪ್ರತಿಷ್ಠಾಪನೆ
ಅಸಾಧ್ಯ ಬಣ್ಣಿಸಲು ಅಯೋಧ್ಯೆಯ ವರ್ಣನೆ
ಭರತ ಖಂಡದ ಭವ್ಯ ಆರಾಧನೆ
ಶ್ರೀರಾಮಚಂದ್ರನ ಉತ್ಸವಾಚರಣೆ
ವಾಲ್ಮೀಕಿ ರಚಿಸಿದ ರಾಮಾಯಣ
ಪುಣ್ಯ ತರುವುದು ಪಾರಾಯಣ
ಜಾನಕಿ ನಂದನ ಮರ್ಯಾದ ರಾಮ
ಆದರ್ಶಗಳ ಆದರ್ಶ ಈ ಪರಂದಾಮ
ಧನ್ಯವಾಯಿತು ಧರೆಯು ಎಂದು
ಈಡೇರಿತು ಶತಮಾನಗಳ ಕನಸಿಂದು
ಒಕ್ಕೊರಲಿನಿಂದ ಹೇಳಿ ಜೈ ಶ್ರೀ ರಾಮ್
ಭಾಗಿ ಅರ್ಪಿಸುವೆವು ನಮ್ಮ ಪ್ರಣಾಮ್
ರಾಮ ರಾಜ್ಯವಾಗಲಿ ಇನ್ನು ದೇಶ
ಎಲ್ಲೆಲ್ಲೂ ತುಂಬಲಿ ಸುಭಿಕ್ಷ
ಭಾರತ ಭೂಮಿಯ ಹೆಮ್ಮೆಯು ಇದು
ಎಂದೆಂದಿಗೂ ಶ್ರೀ ರಾಮನೇ ನಮ್ಮ ಬಂಧು
೦೫೦೦ಪಿಎಂ೨೨೦೧೨೦೨೪
*ಅಮುಭಾವಜೀವಿ ಮುಸ್ಟೂರು*
ಯಾರಿವಳು ಈ ಮೋಹಕ ಚೆಲುವಿನವಳು
ಭೂರಮೆಗೆ ಹೊಸ ಕಾಂತೀಯ ತಂದವಳು
ಹುಣ್ಣಿಮೆಯೇ ಹೆಣ್ಣಾಗಿ ರೂಪ ತಳೆದಳು
ಹೊಳೆವ ತಾರೆಗಳ ನಗುವಿನಾಕೆ ಇವಳು
ಕಂಡೊಡನೆ ಕಳೆದೋಯಿತು ಮನವು
ಸುಂದರಿ ಈಕೆ ಮುದ್ದಾಗಿ ಅರಳಿದ ಹೂವು
ಪ್ರೀತಿಯಲ್ಲಿ ಬೆಳದಿಂಗಳ ತಂಪಿವಳು
ಸ್ನೇಹದಲ್ಲಿ ಹಾಲು ಜೇನಂತವಳು
ಮಾತು ಕೇಳಿದರೆ ಮೈ ಮರೆವಾಸೆ
ಇವಳಿಗಾಗಿ ರವಿಕಿರಣ ಬರೆದನೋ ಹಸೆ
ನದಿಯಂತೆ ಬಳುಕುವ ವಯ್ಯಾರಿ
ಸಾಗರದಲೆಯಂತೆ ಉಕ್ಕುವ ಕಿಶೋರಿ
ಭರಪೂರ ತುಂಬಿದೆ ಹರೆಯದ ತಿಜೋರಿ
ನಿಸರ್ಗವೇ ನಾಚುವ ಟಪೋರಿ
ಎಳೆ ಮಲ್ಲಿಗೆ ಬಿಳುಪಿನ ತನುರೂಪಿ
ಬಗೆ ಬಗೆ ಬಣ್ಣದ ಹರೆಯ ಬಹುರೂಪಿ
ಇಬ್ಬನಿ ಹಾಸಿದೆ ಇವಳೆ ಹೆಜ್ಜೆ ಇಡುವೆಡೆ
ತಂಗಾಳಿ ಬೀಸಿದೆ ಮುಂಗುರುಳ ಜಡೆ
ನನಗಾಗಿ ಬಂದ ದೈವ ಕನ್ನಿಕೆ
ಈಡೇರಿತು ಹರೆಯದ ಬಯಕೆ
ಸಂತೃಪ್ತ ಸಹಜೀವನಕ್ಕೆ ಸಂಗಾತಿ
ಇವಳಾಗುವಳೇ ನನ್ನ ಬಾಳೊಡತಿ
0713ಪಿಎಂ23012024
ಅಮು ಭಾವಜೀವಿ ಮುಸ್ಟೂರು
ಎಲ್ಲಿ ಹೋದರೂ ಬರಿ
ತುಳಿಯುವವರೇ ಉಂಟು
ಕೈ ಹಿಡಿದು ಮೇಲೆತ್ತಿ
ಬೆರಳ ಹಿಡಿದು ಮುನ್ನಡೆಸುವವರ ಕಾಣೆ
ಹೆಜ್ಜೆ ಹೆಜ್ಜೆಗೂ ತೊಡರಾಗಿ
ಎಡವಿ ಬೀಡಿಸುವವರೇ ಉಂಟು
ಕುಡಿ ಚೀಟುವವರೇ ಜಾಸ್ತಿ
ನೀರೆರದು ಪೋಷಿಸುವವರ ಕಾಣೆ
ಗೆಲ್ಲಿಸುವ ಹಂಬಲ ಯಾರಲ್ಲೂ ಇಲ್ಲ
ಸೋಲಿಗಾಗಿ ಕಾಯುತ್ತಿರುವವರೆಲ್ಲ
ಸಹಿಸಿ ಬಾಳಿದರೆ ತುಳಿದು ಹಾಕುವ
ಬೆಳೆದವರು ಬೆಳೆಸುವವರನ್ನ ಕಾಣೆ
ಕೈ ಚಾಚದೆ ಬದುಕುವವರನ್ನ
ಕೈ ಬಿಟ್ಟು ಹೋಗುವರು ಜನ
ಕಂಗಾಲು ಪಡಿಸುವವರೇ ಹೆಚ್ಚು
ಬೆಂಬಲಕ್ಕೆ ನಿಲ್ಲುವವರ ಕಾಣೆ
ಮೇಲೆದ್ದರಷ್ಟೇ ನಮ್ಮವರೆನ್ನುವರು
ಬಿದ್ದವರ ಕಣ್ಣೆತ್ತಿಯೂ ನೋಡರು
ಗೆಲುವಷ್ಟೇ ಇಲ್ಲಿ ಮುಖ್ಯ
ಸೋಲನ್ನೇ ಗೆಲುವಾಗಿಸುವವರ ಕಾಣೆ
ಆಧಾರವಿಲ್ಲದೆ ಬೆಳೆಯದು ಬಳ್ಳಿ
ಆಸರೆ ಇಲ್ಲದೆ ಹೇಗೆ ಬದುಕಲಿ
ಆತ್ಮವಿಶ್ವಾಸ ಒಂದೇ ಆಸ್ತಿ
ಹೆಗಲಿಗೆ ಹೆಗಲಾಗುವವರ ಕಾಣೆ
0501ಎಎಂ29012024
*ಅಮು ಭಾವಜೀವಿ ಮುಸ್ಟೂರು*
ಓಡುವ ಚಂದಿರನೇತಕೆ ಭೀತಿ
ಉಕ್ಕುವ ಸಾಗರದಕ್ಕರೆಯ ಪ್ರೀತಿ
ಬೆಳದಿಂಗಳ ಚೆಲುವ ಏಕೆ
ಮೋಡದ ಮರೆಗೆ ಮೆಲ್ಲ ಸರಿಯುವೆ
ತಾರೆಗಳೊಡಗೂಡಿ ನೀ ಬರಲು
ಈ ಇರುಳು ಕೂಡ ಶೃಂಗಾರಮಯ
ಒಲವಿನ ತಂಗಾಳಿ ಬೀಸುತ್ತಿರಲು
ಹೊಸ ಭಾವಕ್ಕೆ ಮೂಡಿದೆ ವಿಸ್ಮಯ
ಬದುಕಿಗೆ ಭರವಸೆ ನೀನೆ ತಾನೆ
ಬೇಸರಕ್ಕೆ ಮುದ್ದು ನಿನ್ನಿಂದಾನೆ
ಆಸರೆಯಾಗು ಬಾ ಚೆಲುವೆ
ಹರೆಯಕೆ ಈ ಒಲವೇ ಒಡವೆ
ಕರೆಯದೆ ಹೋದರೂ ಮರೆಯದೆ ಬರುವೆ
ಬರುವಾಗಲೇ ಬೆಳದಿಂಗಳ ತರುವೆ
ಅಮೃತ ಕಾಲದಿ ನಮೃತೆಯಿಂದ ಕೋರುವೆ
ಒಲವಿನ ದೈವವೇ ಅರಸಿ ಆಶೀರ್ವದಿಸು
೧೦೩೨ಪಿಎಂ೨೯0೧೨೦೨೪
ಅಮು ಭಾವಜೀವಿ ಮುಸ್ಟೂರು
ಕಿತ್ತು ತಿನ್ನುವ ಬಡತನವಿದ್ದರೂ
ಕತ್ತು ಕೊಯ್ಯುವವರಿಂದ ದೂರವಿರು
ಶ್ರಮದಿ ನಿತ್ಯ ದುಡಿಯುತ್ತಿರು
ಆಡಿಕೊಳ್ಳುವವರ ಮಾತಿಗೆ ಕಿವಿಗೊಡದಿರು
ಯಾರೂ ನಿನ್ನ ನೆರವಿಗೆ ಬರುವುದಿಲ್ಲ
ಅಂಥವರ ಮೇಲೇಕೆ ಇಷ್ಟು ನಿರೀಕ್ಷೆ
ಯಾರು ನಿನ್ನ ನಂಬುವುದಿಲ್ಲ
ಅದಕ್ಕೆ ನಿನಗಿಷ್ಟೊಂದು ಕಷ್ಟಗಳ ಪರೀಕ್ಷೆ
ಎಲ್ಲರ ಯೋಗಕ್ಷೇಮ ನಿನ್ನ ಆದ್ಯತೆ
ಆದರೂ ಅಳೆಯುವರು ನಿನ್ನ ಯೋಗ್ಯತೆ
ಬೆಳೆಯುವವರ ಬೆಳೆಸುವವರಿಲ್ಲ
ಬೇಳೆ ಬೇಯಿಸಿಕೊಳ್ಳುವವರುಂಟು ಜಗದ ತುಂಬೆಲ್ಲ
ಪ್ರಾಮಾಣಿಕನಿಗೆ ಏಟು ಕೊಡುವರು
ನಂಬಿದವರನ್ನೇ ನೋಯಿಸುವರು
ಹೆಜ್ಜೆ ಹೆಜ್ಜೆಗೂ ಅವಮಾನಿಸುವವರಿಂದ
ದೂರ ಉಳಿದು ಬೆಳೆದು ನಿಲ್ಲು
ನಿನ್ನಲ್ಲಿ ಸಕ್ಕರೆ ಇದ್ದರೆ ಮಾತ್ರವೇ
ಸಿಕ್ಕಸಿಕ್ಕವರೆಲ್ಲ ಆಗುವರು ಬಂಧುಗಳು
ಅಕ್ಕರೆ ತೋರದವರ ಮುಂದೆ ಅತ್ತರೇನು ಫಲ?
ಬಿಡದಿರು ನೀ ಎದ್ದು ನಿಲ್ಲುವ ಛಲ
5 21 ಎ ಎಂ 30/01/2024
ಅಮು ಭಾವಜೀವಿ ಮುಸ್ಟೂರು