Sunday, January 14, 2024

ಕವನ

*ಗಜಲ್*


ಕೆಂಡದ ಸಹವಾಸ ಒಡಲನ್ನೇ ಸುಡುತ್ತಿದೆ ಸಾಕಿ
ಕೊಚ್ಚೆಯ ಸಹವಾಸ ಹೆಸರನ್ನು ಕೆಡಿಸುತ್ತಿದೆ ಸಾಕಿ

ಪ್ರಾಮಾಣಿಕತೆ ಎಂಬುದಕ್ಕೆ ಪರೀಕ್ಷೆಗಳು ಜಾಸ್ತಿ
ಅಕ್ರಮಾಣಿಕರ ಒಡನಾಟ ಜೀವ ಹಿಂಡುತ್ತಿದೆ ಸಾಕಿ

ಮದಿರೆಯೊಳಗೆ ಬಿದ್ದ ಇರುವೆಗೇನು ವ್ಯತ್ಯಾಸ ಕಾಣದು
ಮನಸಿಗಾದ ಗಾಯದಿಂದ ನೋವಾಗುತ್ತಿದೆ ಸಾಕಿ

ನೊಂದವರಿಗೆ ಆಸರೆಯಾಗಲೆಂದು ನೆರಳಿತ್ತೆ
ಬುಡಕೆ ಕೊಡಲಿ ಬೀಸಲು ಹಿಂಸೆಯಾಗುತ್ತಿದೆ ಸಾಕಿ

ಅಮು ಎಂದಿಗೂ ಅಂತವನಲ್ಲವೆಂದು ಗೊತ್ತಿದ್ದರೂ
ಅವಹೇಳನ ಮಾಡಿ ತುಳಿವಾಗ ಬೇಜಾರಾಗುತ್ತಿದೆ ಸಾಕಿ

೦೨೪೪ಪಿಎಂ೨೯೧೨೨೦೨೩
*ಅಮುಭಾವಜೀವಿ ಮುಸ್ಟೂರು*

*ಉದಯ ರವಿಯ ಕವಿ*

ಮಲೆನಾಡ ಮಡಿಲಿನ ಕಂಪು
ಕನ್ನಡದ ಪೆಂಪು ನಮ್ಮೀ ಕುವೆಂಪು
ಕರುನಾಡಿನ ಹೆಮ್ಮೆಯ ಕುವರ
ಕನ್ನಡ ಡಿಂಡಿಮ ಬಾರಿಸಿದ ಸರದಾರ

ಮಲೆಗಳಲ್ಲಿ ಮದುಮಗಳ ಸೃಷ್ಟಿಕರ್ತ
ಕಾನೂರು ಹೆಗ್ಗಡತಿಯ ನಿರ್ಮಾತೃ
ಕುಪ್ಪಳ್ಳಿಯ ಅಪ್ಪಟ ಪ್ರತಿಭೆ
ಕನ್ನಡಕ್ಕೆ ಜ್ಞಾನಪೀಠದ ಹೆಗ್ಗಳಿಕೆ ತಂದ ಪ್ರಭೆ

ಉದಯ ರವಿಯ ಬೆಳಕಿನ ಸವಿಯ
ಜಗಕ್ಕೆ ಪಸರಿಸಿದ ಕವಿ ಮಹಾಶಯ
ವಿಶ್ವಮಾನವ ಸಂದೇಶವ ನೀಡಿದ
ರಾಮಾಯಣ ದರ್ಶನದ ರೂವಾರಿ

ಕನ್ನಡಕ್ಕಾಗಿ ಕಲ್ಪವೃಕ್ಷವಾದವರು
ಕಬ್ಬಿಗರ ಪ್ರಿಯ ಕುವೆಂಪು ಇವರು
ಕನ್ನಡ ಸಾಹಿತ್ಯಕ್ಕೆ ಇವರೇ ಬೇರು
ಚಂದನದ ಕಂಪನು ಜಗಕೆ ಸಾರಿದವರು

ಎಲ್ಲಾದರೂ ಇರು ಎಂತಾದರು ಇರು
ಕನ್ನಡವಾಗಿರು ಎಂದವರು
ಸಹ್ಯಾದ್ರಿಯ ತಪ್ಪಲಿನ ಕವಿಶೈಲದಿ
ಕಾವ್ಯ ಸೃಷ್ಟಿಯ ದೀಕ್ಷೆ ತೊಟ್ಟವರು

ಕನ್ನಡಕೊಬ್ಬರೇ ಈ ಕುವೆಂಪು
ಇವರಿಂದಲೇ ಕನ್ನಡವಾಯ್ತು ಸೊಂಪು
ಭಾರತ ಜನನಿಗೆ ಕನ್ನಡ ತಾಯಿಯ
ಹೆಮ್ಮೆಯ ಉಡುಗೊರೆ ನಮ್ಮ ಕುವೆಂಪು

4:32 ಪಿಎಂ 29.12.2023
*ಅಮುಭಾವಜೀವಿ ಮುಸ್ಟೂರು*


ಅದೆಷ್ಟು ಕಷ್ಟಗಳನ್ನು ಕೊಟ್ಟು ಮೆಲ್ಲನೆ ಸರಿದು ಹೋದೆ ನೀನು
ನೀ ಕಲಿಸಿದ ಪಾಠಗಳಿಗೆ ಅನುಭವದ ಮೂಟೆಯಾದೆ ನಾನು

ಪ್ರಾರಂಭದಿಂದ ಕೊನೆಯವರೆಗೂ ಕಂಡ ಕನಸುಗಳು ಸುಳ್ಳಾದವು
ನೀ ಅಂದುಕೊಂಡಂತೆ ಎಲ್ಲವೂ ನಡೆದು ನಮ್ಮನೀಗ ಬಿಟ್ಟು ಹೋದೆ ನೀನು

ಸೋಲುಗಳ ಸರಮಾಲೆಯನ್ನೇ ಹೆಣೆದು ಮಟ್ಟ ಹಾಕಿದೆ
ಶತಾಯಗಥಾಯ ಗೆಲ್ಲುಲು ಹೊರಟವನ ಕಾಲು ಮುರಿದು ಕೂರಿಸಿದೆ ನೀನು

ತಿಂಗಾತಿಂಗಳಿಗೂ ನಮ್ಮ ಹಿಂದಿಕ್ಕಿ ಮುನ್ನುಗ್ಗಿ ಹೊರಟೆ
ನಿನ್ನ ಸರಿ ಸಮಾನವಾಗಿ ಓಡಿ ಬರಲಾಗದಷ್ಟು ನಮ್ಮ ದಣಿಸಿದೆ ನೀನು

ಇನ್ನು ಮುಗಿಯಿತು ಅಮು ಕಾಲದ ಪುಟ ಸೇರಿಯಾಯಿತು
ಮುಂಬರುವ ಸಮಯವಾದರೂ ನನ್ನಂಥಾಗಲು ಸಹಕರಿಸಬಾರದೆ ನೀನು

4 59 ಪಿಎಂ 31.12.2023
ಅಮುಭಾವಜೀವಿ ಮುಸ್ಟೂರು 

ಇರುಳ ಬಾಂಧವಣದಲ್ಲಿ
ಚುಕ್ಕಿಚಂದ್ರಮರು ಜೊತೆಯಾದಂತೆ
ನೀಲ ನಭದಲಿ ಬಾನ ಪಥದಲ್ಲಿ
ಮೇಘಗಳು ರವಿಯ ಮರೆಮಾಡಿದಂತೆ
ಪ್ರೀತಿಯ ಹಾಡಿನಲಿ
ನೀ ನನ್ನ ಸ್ವರವಾಗಿ ಬೆರೆತೆ

ಮುಂಜಾನೆ ಮಂಜು ಕರಗುವಂತೆ
ನಾ ಸೋತು ಹೋದೆ ನಿನ್ನಂದಕ್ಕೆ
ಮಲ್ಲಿಗೆಯ ಕಂಪು ಸುತ್ತ ಹರಡುವಂತೆ
ನನ್ನ ನೀ ಆವರಿಸಿದೆ ಏಕೆ
ಇದು ಪ್ರೀತಿಯ ಸೆಳೆತವೋ
ಇಲ್ಲ ಹೃದಯದ ಅನುಬಂಧವೋ

ಹರಿವ ನೀರೊಳಗು ತೆರಳದ ಮೀನಂತೆ
ನಿನಗಾಗಿ ನಾ ಕಾದು ನಿಂತೆ
ಕಲ್ಲು ಕೂಡ ಸವೆದು ನಯವಾಯಿತು
ಎದೆಯ ಭಾವಗಳಿಗೂ ನೆಲೆಯಾಯಿತು
ಈ ನಿನ್ನ ಒಲವ ಆಲಿಂಗನ
ನೀಡಿತು ನನ್ನೊಳಗಿನ ಕವಿಗೆ ಆಮಂತ್ರಣ

ರೆಕ್ಕೆ ಕಟ್ಟಿಕೊಂಡು ಹಾರುತಿದೆ ಮನಸ್ಸು
ನೀ ನನಗೆ ಸಿಕ್ಕ ಆ ಖುಷಿಯಲಿ
ಹೃದಯದ ಬಡಿತ ಇಮ್ಮಡಿಯಾಯ್ತು
ನಿನ್ನೊಲವಿನ ವಶದಲಿ
ಪ್ರೀತಿಯ ಸೆಳೆತಕ್ಕೆ ಸಿಕ್ಕಾಯ್ತು
ಬಾಳಲಿ ನೆಮ್ಮದಿ ಉಕ್ಕಾಯ್ತು

6.10am06012024
*ಅಮುಭಾವಜೀವಿ ಮುಸ್ಟೂರು*


ಒಲಿದ ಎದೆಗೆ ನೋವು ಕೊಟ್ಟು ಹೋದೆ ಏತಕೆ
ಸೋತ ಮನಕ್ಕೆ ಮಾತು ಕೊಟ್ಟು ಬಿಟ್ಟು ಹೋದೆ ಏತಕೆ

ಕೋತಿ ತಿಂದು ಮೇಕೆ ಮೂತಿಗೊರಸಿದಂತಾಯಿತು
ತಪ್ಪು ಮಾಡದವನ ಮೇಲೆ ಆರೋಪ ಹೊರಿಸಿಹೋದೆ ಏತಕೆ 

ಬಯಸದೆ ಬಂದು ನೀನು ನೋಯಿಸುವುದು ಸರಿಯೇನು
ಬದುಕಿನಲ್ಲಿ ಮರೆಯದಂತ ಪಾಠ ಕಲಿಸಿ ಹೋದೆ ಏತಕೆ

ಎಷ್ಟು ದಿನಗಳಿಂದ ಹೊಂಚು ಹಾಕಿ ಕಾದು ಕುಳಿತಿದ್ದೆ ಹೀಗೆ
ಮುಗ್ಧ ಹೃದಯದ ನಗುವ ಕಸಿದುಕೊಂಡು ಹೋದೆ ಏತಕೆ

ಅಮು ಹೆಸರಿಗೆ ಚ್ಯುತಿ ತಂದು ನೀನು ಗಳಿಸಿದ್ದೇನು
ಆತ್ಮಸಾಕ್ಷಿಯ ಎದುರು ವಂಚನೆಯ ಹಂಚಿ ಹೋದೆ ಏತಕೆ

3:49 ಪಿಎಂ 6.01.2024
*ಅಮುಭಾವಜೀವಿ ಮುಸ್ಟೂರು*

ಗೋವುಗಳ ಕಾದು ಬಂದೆಯ ಮಾಧವ
ಬೆಣ್ಣೆ ಬಟ್ಟಲ ಹಿಡಿದು ಬಂದೆಯ ಕೇಶವ
ಕೊಳಲನೂದುತ ಗೋವುಗಳ ಕರೆವ ಗೋಪಾಲ
ಕೆಟ್ಟವರ ನಾಶಕ್ಕೆ ಹುಟ್ಟಿ ಬಂದ ಭೂಪಾಲ

ರಾಧೆಯ ಮನವ ಕದ್ದ ಚೋರ
ರಂಗಿನೋಕಳಿಯ ಆಡುವ ಬಾರ
ಕಂಸನ ಕೊಂದು ಬಲಿಯ ತುಳಿದೆ
ಕ್ರೂರ ಅಹಮಿನಿಂದ ಜಗವ ಸಲಹಿದೆ

ಸೋತ ಅರ್ಜುನನ ಸಂತೈಸಿದೆ
ಜಗಕೆ ಗೀತೆಯ ಸಾರ ಅರುಹಿದೆ
ಕಳ್ಳನೆಂಬ ಪಟ್ಟ ಹೊತ್ತ ದೈವ ನೀನು
ಪುಟ್ಟ ಬಾಯಲ್ಲಿ ಜಗವ ತೋರಿದವನು

ದೇವಕಿಯ ಗರ್ಭ ಸಂಜಾತ ಶ್ರೀ ಕೃಷ್ಣನ
ಬಲು ಪ್ರೀತಿಯಿಂದ ಸಲಹಿದ ಯಶೋಧನಂದನ
ಮೊಸರು ಬೆಣ್ಣೆಯ ಹುಚ್ಚು ಅಭಿಮಾನಿ
ಮಾಯೆಯಿಂದ ಬಂದು ಇವನಿಂದ ಹತಳಾದಳು ಪೂತನಿ

ಯದುಕುಲ ನಂದನ ಈ ಮುರುಳಿ ನಂದನ
ರಾಧೆಗಾಗಿ ನುಡಿಸಿದ ಮಧುರ ಕೊಳಲನ್ನ
ಆ ಬಾಲ ವೃದ್ಧರ ಪ್ರಿಯ ಸಖ
ಬಾಲ್ಯ ಲೀಲೆಗಳಿಗೆ ಹೆಸರಾದ ಬಾಲಕ

4:30 ಪಿಎಮ್ 6.01.2024
*ಅಮುಭಾವಜೀವಿ ಮುಸ್ಟೂರು*




ನೋಡುತೈತೆ ಬೆಳಗು
ನೋಡಿ ಎಂತ ಸೊಬಗು
ಹೊಳೆವ ಮಂಜಿನ ಹನಿ ಸಾಲು
ಅರಳುತೈತೆ ಮೊಗ್ಗು
ನೋಡಿ ಅದರ ಹಿಗ್ಗು
ದುಂಬಿ ಹಾಡುತೈತೆ ಮೈ ಮರೆತು ಹಾಡು

ಮೂಡಣದ ಪರದೆ ಮೇಲೆ
ಹೊಂಗಿರಣಗಳ ಚಿತ್ರ ಚಿತ್ತಾರ
ನಗುನಗುತ ಮೂಡಿ ಬಂದ ನೇಸರ
ಮುಂಜಾನೆಯ ಎಲೆ ಎಲೆಯ ಮೇಲೆ 
ಬೆಳಕಿನ ಕವಿತೆ ಗೀಚಿದ ಬಾಲ ಭಾಸ್ಕರ
ಇರುಳ ಕಳೆದು ಬೆಳಕ ತರುವ ಅವನ ಸಂಸ್ಕಾರ 

ಹಕ್ಕಿಗಳ ಹಾಡು ಕೇಳಿ ಬೆಳಗಾಯಿತು
ಜಗದ ನಾಟಕದ ಪಯಣ ಶುರುವಾಯಿತು
ಎಲ್ಲೆಲ್ಲೂ ಸಂಭ್ರಮದ ಚಟುವಟಿಕೆ ಮೊದಲಾಯಿತು
ನಿಸರ್ಗದ ಈ ನಿತ್ಯ ಬದಲಾವಣೆ
ಪ್ರತಿ ಕ್ಷಣವೂ ಹೊಸತೊಂದು ಆಕರ್ಷಣೆ
ಈ ಎಲ್ಲ ಕಾರ್ಯಕ್ಕೂ ದಿನಕರನದೇ ಪ್ರೇರಣೆ

ಎದ್ದೇಳಿ ಮನುಜರೇ ಅವನ ಸ್ವಾಗತಿಸೋಣ
ಎಳೆಯ ಕಿರಣಗಳಿಗೆ ಮೈಯೊಡ್ಡೋಣ
ನಿಸರ್ಗದ ಸ್ವರ್ಗಕ್ಕೆ ಅಡಿ ಇಡೋಣ
ದಿನದ ಬಾಳನು ಸಾರ್ಥಕಗೊಳಿಸೋಣ

0615am 08012024
*ಅಮುಭಾವಜೀವಿ ಮುಸ್ಟೂರು*

ಬಡವ ನಾನೇನು ಅಲ್ಲ ಗುಣದಲ್ಲಿ
ಗುಣದ ಶ್ರೀಮಂತಿಕೆ ಬೇಕಾಗಿಲ್ಲ
ಇಲ್ಲಿ ಮೆರವುದೆಲ್ಲ ಹಣದ ಆಡಂಬರ
ಕುರುಡು ಕಾಂಚಾಣ ಕುಣಿಯುವ ರೀತಿಗೆ
ಮನುಷ್ಯತ್ವ ಮಾನವೀಯತೆಗಳು ಸತ್ತು
ಹಣದ ಗಳಿಕೆಯಂತೆ ಧ್ಯೇಯ ವಾಕ್ಯ
ಉಳ್ಳವನ ಸಿರಿವಂತಿಕೆಯ ಅಟ್ಟಹಾಸದ ಮುಂದೆ
ಇಲ್ಲದವನ ಪಡಿ ಪಾಟಲು ದೇವರಿಗೆ ಪ್ರಿಯ
ತಟ್ಟೆಯಲ್ಲಿ ಅನ್ನವಿದೆ ತಿನ್ನಲಾಗದ ಸ್ಥಿತಿ
ತೊಟ್ಟಿಯ ಅನ್ನ ಸಿಕ್ಕರೆ ಸಾಕೆನ್ನುವ ಗತಿ
ಇಂಥ ತಾರತಮ್ಯಕ್ಕೆ ಸಾಕ್ಷಿ ಈ ಜಗತ್ತು
ಅದಕ್ಕೂ ಇಲ್ಲ ಇದನ್ನು ಬದಲಾಯಿಸುವ ತಾಕತ್ತು
ಹಣದ ಬಡವ ಬಡತನದಲ್ಲಿಯೇ ರೋಸಿ ಹೋದ
ಗುಣದ ಬಡವ ಮತ್ತಷ್ಟು ಮೆರೆಯುತ್ತಿರುವ
ಅವನು ಹೇಳಿದಂತೆ ಜಗವು ನಡೆಯುವುದು
ತುಳಿದು ತುಳಿದು ಮೇಲೇರುವುದು
ಅಧಿಕಾರ ಅಂತಸ್ತು ಮಾನ ಮರ್ಯಾದೆ
ಎಲ್ಲೆಲ್ಲೂ ಅವನದೇ ಹಸ್ತಕ್ಷೇಪ
ಬಡವ ತಾ ಮಡಗಿದಂತಿರುವನು ಪಾಪ
ಹಣ ಮುಖ್ಯವಾದೆಡೆ ಗುಣ ಗೌಣ
ಅನ್ನದ ಹಸಿವಿಗಿಂತ ಹಣದ ದಾಹ
ಬಲು ಅಪಾಯಕರ ಎಚ್ಚರ
ಹಣ ಆಡಿಸಿದಂತೆ ಆಡುವುದು ಜಗ
ಹೆತ್ತವರನ್ನು ಬೀದಿಗಟ್ಟುವನು ಮಗ
ಇದ್ದವರು ಇಲ್ಲದವರಿಗಂಚುವುದು ದಾನ
ಅಂತವರಿರುವರು ಜಗದಿ ಬೆರಳೆಣಿಕೆಯಷ್ಟು ಜನ
ಉಳ್ಳವರ ಶಿವಾಲಯದ ಆಡಂಬರ
ಇಲ್ಲದವರ ದೇಹ ದೇಗುಲ ಸಂಸ್ಕಾರ
ಹಣವೆಂದರೆ ಇಲ್ಲದ ಸಂಬಂಧಗಳು ಬೆಳೆವವು
ಹಣವಿಲ್ಲೆಂದರಿರುವ ಸಂಬಂಧಗಳು ದೂರವಾಗುವವು
ಹಣದ ಓಟ ಮುನ್ನೆಲೆಯಲ್ಲಿ
ಎಲ್ಲರೂ ಓಡುವರು ಅದರ ಹಿಂದಿನಲಿ
ಎಲ್ಲಿ ಮುಟ್ಟುವುದೋ ಏನು ಪಾಠ ಕಲಿಸುವುದೋ
ಅರಿಯದ ಮನ ಆತಂಕಗೊಂಡಿದೆ
ವಿಧಿಯಿಲ್ಲದೆ ಇಲ್ಲದೆ ಹಣದ ಬೆನ್ನತ್ತಿದೆ

೦೬೪೫ಎಎಂ೧೦೦೧೨೦೨೪
*ಅಮುಭಾವಜೀವಿ ಮುಸ್ಟೂರು*

########################
ಹಿಂದೂ ಧರ್ಮದ ಮೂಲ
ಬೇರಿನ ತೇರನೆಳೆದ
ಧೀರ ಸನ್ಯಾಸಿ ನರೇಂದ್ರ
ಪರಮಹಂಸರ ಪರಮಾಪ್ತ ಶಿಷ್ಯ
ಭಾರತಮಾತೆಯ ಹೆಮ್ಮೆಯ ಪುತ್ರ
ಸನಾತನ ಧರ್ಮದ ಸತ್ವ ನರೇಂದ್ರ

ಮನುಕುಲದ ಏಳಿಗೆಗಾಗಿ
ಧರ್ಮದ ಬಿಳಲು ಜೀಕಿದ
ಯುವಕರ ಸ್ಪೂರ್ತಿ ನರೇಂದ್ರ
ಆಧ್ಯಾತ್ಮದ ಅಂತಃಕರಣ
ಪ್ರತಿ ಎದೆಯ ಜೀವಚೇತನ
ವ್ಯಕ್ತಿತ್ವದ ಮೇರು ಕೃತಿ ನರೇಂದ್ರ

ವಸುದೈವ ಕುಟುಂಬದ ಕಲ್ಪನೆ
ಸರ್ವ ಜನರ ಹಿತ ಚಿಂತನೆ
ಮಾಡಿದ ಮಹಾಪುರುಷ ನರೇಂದ್ರ
ಧರ್ಮದ ನೆಲೆಯಲ್ಲಿ
ಪ್ರೀತಿಯ ಜೊತೆಯಲ್ಲಿ
ಶಾಂತಿಯ ಸಾರಿದ ನರೇಂದ್ರ

ಧನ್ಯವಾಯಿತು ಭರತ ಭೂಮಿ
ಇಲ್ಲಿ ಅವತರಿಸಿದರು ಸ್ವಾಮಿ
ವಿವೇಕದ ಆನಂದ ಈ ನರೇಂದ್ರ
ಹೆಮ್ಮೆಯಿಂದ ಬೀಗ ಬೇಕು ನಾವು
ಅಂತರಂಗದ ಆರಾಧ್ಯ ಅಧಿದೈವವು
ಅಪ್ಪಟ ದೇಶಪ್ರೇಮಿ ನರೇಂದ್ರ

0202ಪಿm12012024
*ಅಮುಭಾವಜೀವಿ ಮುಸ್ಟೂರು*


ಬಿಟ್ಟು ಹೋದೆಯಾ ಜೀವವೇ
ಕಾರಣ ಹೇಳದೆ ಏಕೆ ಹೋದೆ
ಒಲವಿನ ಹೃದಯವ ತೊರೆದು
ಜೊತೆಗಿರುವೆ ಏಳೇಳು ಜನ್ಮಕೆ
ಮಾತು ಕೊಟ್ಟದ್ದು ಮರೆತೆ ಏಕೆ
ಪ್ರೀತಿಯಲಿ ಈ ವಿರಹ ಬೇಕೆ


ಎದೆ ಮೇಲೆ ತಲೆ ಇಟ್ಟು
ಬೆರಳು ಬೆರಳುಗಳ ಬೆಸೆದು
ನೀಡಿದ ಮಾತು ಏನಾಯಿತು
ತೋಳ ತೆಕ್ಕೆಯಲ್ಲಿ ಬಂದಿಸಿ
ತಾಳ ತಪ್ಪಿದ ಹಾಡಾಗಿ
ಈ ಬಂಧವೇಕೆ ಬೇಡವಾಯಿತು

ಮತ್ತೊಮ್ಮೆ ಕಥೆ ಬರೆದು
ಪ್ರೀತಿಯಲ್ಲಿ ಆಗಲಿ ಹೊಸದು
ಜೊತೆಯಾಗು ಒಲವ ಜೀವವೇ
ಯಾರ ದೃಷ್ಟಿಯು ಬೀಳದಂತೆ
ಯಾರ ಶಾಪಕೂ ನಿಲುಕದಂತೆ
ಬಾಳಿ ತೋರಣ ಓ ಪ್ರೇಮವೇ

336 ಪಿಎಂ 13.01.2024
ಅಮುಭಾವಜೀವಿ ಮುಸ್ಟೂರು 


ಹೊತ್ತು ಉರುಳುತ್ತಿದೆ
ಮತ್ತೆ ಮರಳುತ್ತದೆ
ಎತ್ತ ತೆರಳುವೆಯೋ ಓ ಮನುಜ
ನಿನ್ನಿಂದಲೇ ಜಗವಲ್ಲ
ಜಗಕ್ಕೆ ನೀ ಮುಖ್ಯವಲ್ಲ
ಅರಿತು ನಡೆದರೆ ಸಾಕು ಈ ನಿಜ

ಹಣದ ಹಿಂದೆ ಓಡುವೆ
ಗುಣ ಮೂಟೆ ಕಟ್ಟಿರುವೆ
ಹೆಣವಾಗುವ ನಿನಗೇಕೀ ಧಾವಂತ
ಉಸಿರಿಲ್ಲದೆ ನೀನಿಲ್ಲ
ಹೆಸರಿಗೆ ಹಂಬಲಿಸುವೆಯಲ್ಲ
ನೆಮ್ಮದಿಯು ಆಗಿದೆಯೇ ನಿನ್ನ ಸ್ವಂತ ?

ನಿನ್ನ ಏಳಿಗೆಗಾಗಿಯೇ
ಇತರರ ತುಳಿವೆ ನ್ಯಾಯವೇ
ನೀನು ಬೆಳೆದು ಇತರರ ಬೆಳೆಸಬೇಕಲ್ಲವೇ
ದಾರಿಯಿಂಟು ನೂರು
ನಡೆ ಇಲ್ಲ ತಕರಾರು
ಬದುಕಿನ ಗುರಿ ದಬ್ಬಾಳಿಕೆಯಾಗಬಾರದಲ್ಲವೇ

ಬಂದು ಹೋಗುವ ನಮಗೆ
ಏಕೆ ಹೇಳು ಈ ಬೇಗೆ
ಯಾರಿಗೂ ಅನಿವಾರ್ಯವಲ್ಲ
ಇರುವರೆಗೆ ಬಂಧ ಬಿಗಿಯಾಗಿಸಿ
ಸಕಲ ಜೀವಗಳ ಪ್ರೀತಿಸಿ
ಸಾರ್ಥಕತೆ ಸಾಧಿಸಿದರೆ ಸಾಕಲ್ಲ

3 58 ಎಎಂ 14.01.2024
*ಅಮುಭಾವಜೀವಿ ಮುಸ್ಟೂರು*


ಹೇಳು ಜೀವವೇ 
ಏಕೆ ಈ ಗೊಂದಲ
ಸಿಗುವನೇ ಗೋಪಾಲ
ಗೋವುಗಳ ಜೊತೆಯಲ್ಲಿ
ಕೊಳಲಿನ ಗಾನದಲಿ
ಎಲ್ಲೋ ಕಳೆದು ಹೋಗಿಹನಲ್ಲ

ಅವನಿಗಾಗಿ ಕಾಯುತಿದೆ ಜೀವ
ಏಕೆ ಮರೆತನು ಮಾಧವ
ರಾಧೆಗಾಗಿ ಮಿಡಿಯದೇಕವನ ಭಾವ
ಹದವಾಗಿ ಕಾಸಿ ಹಾಲನು
ಹಿತವಾಗಿ ತೆಗೆದಿಹೆ ಬೆಣ್ಣೆಯನು
ಬೆರೆಸಿ ತಂದಿಹೆ ನನ್ನೊಲವನು

ಬನ್ನಿರೇ ಗೋಪಿಕೆಯರೇ ನೀವೆಲ್ಲ
ಹೋಗಿ ಕರೆತನ್ನಿರಿ ನನ್ನ ಮಾಧವನ
ಮರೆತನೇಕವನು ಈ ರಾಧೆಯನ್ನು
ಅವನಲ್ಲಿ ಮನವಿಸಿ
ನಿತ್ಯ ನಾ ಕನವರಿಸಿ
ನನ್ನ ತೊರೆದು ಕೂರುವ ಇರಾದೆಯೇನು
0213 ಪಿಎಂ14012024
ಅಮುಭಾವಜೀವಿ ಮುಸ್ಟೂರು 

    

No comments:

Post a Comment