*ಗಜಲ್*
ಕೆಂಡದ ಸಹವಾಸ ಒಡಲನ್ನೇ ಸುಡುತ್ತಿದೆ ಸಾಕಿ
ಕೊಚ್ಚೆಯ ಸಹವಾಸ ಹೆಸರನ್ನು ಕೆಡಿಸುತ್ತಿದೆ ಸಾಕಿ
ಪ್ರಾಮಾಣಿಕತೆ ಎಂಬುದಕ್ಕೆ ಪರೀಕ್ಷೆಗಳು ಜಾಸ್ತಿ
ಅಕ್ರಮಾಣಿಕರ ಒಡನಾಟ ಜೀವ ಹಿಂಡುತ್ತಿದೆ ಸಾಕಿ
ಮದಿರೆಯೊಳಗೆ ಬಿದ್ದ ಇರುವೆಗೇನು ವ್ಯತ್ಯಾಸ ಕಾಣದು
ಮನಸಿಗಾದ ಗಾಯದಿಂದ ನೋವಾಗುತ್ತಿದೆ ಸಾಕಿ
ನೊಂದವರಿಗೆ ಆಸರೆಯಾಗಲೆಂದು ನೆರಳಿತ್ತೆ
ಬುಡಕೆ ಕೊಡಲಿ ಬೀಸಲು ಹಿಂಸೆಯಾಗುತ್ತಿದೆ ಸಾಕಿ
ಅಮು ಎಂದಿಗೂ ಅಂತವನಲ್ಲವೆಂದು ಗೊತ್ತಿದ್ದರೂ
ಅವಹೇಳನ ಮಾಡಿ ತುಳಿವಾಗ ಬೇಜಾರಾಗುತ್ತಿದೆ ಸಾಕಿ
೦೨೪೪ಪಿಎಂ೨೯೧೨೨೦೨೩
*ಅಮುಭಾವಜೀವಿ ಮುಸ್ಟೂರು*
*ಉದಯ ರವಿಯ ಕವಿ*
ಮಲೆನಾಡ ಮಡಿಲಿನ ಕಂಪು
ಕನ್ನಡದ ಪೆಂಪು ನಮ್ಮೀ ಕುವೆಂಪು
ಕರುನಾಡಿನ ಹೆಮ್ಮೆಯ ಕುವರ
ಕನ್ನಡ ಡಿಂಡಿಮ ಬಾರಿಸಿದ ಸರದಾರ
ಮಲೆಗಳಲ್ಲಿ ಮದುಮಗಳ ಸೃಷ್ಟಿಕರ್ತ
ಕಾನೂರು ಹೆಗ್ಗಡತಿಯ ನಿರ್ಮಾತೃ
ಕುಪ್ಪಳ್ಳಿಯ ಅಪ್ಪಟ ಪ್ರತಿಭೆ
ಕನ್ನಡಕ್ಕೆ ಜ್ಞಾನಪೀಠದ ಹೆಗ್ಗಳಿಕೆ ತಂದ ಪ್ರಭೆ
ಉದಯ ರವಿಯ ಬೆಳಕಿನ ಸವಿಯ
ಜಗಕ್ಕೆ ಪಸರಿಸಿದ ಕವಿ ಮಹಾಶಯ
ವಿಶ್ವಮಾನವ ಸಂದೇಶವ ನೀಡಿದ
ರಾಮಾಯಣ ದರ್ಶನದ ರೂವಾರಿ
ಕನ್ನಡಕ್ಕಾಗಿ ಕಲ್ಪವೃಕ್ಷವಾದವರು
ಕಬ್ಬಿಗರ ಪ್ರಿಯ ಕುವೆಂಪು ಇವರು
ಕನ್ನಡ ಸಾಹಿತ್ಯಕ್ಕೆ ಇವರೇ ಬೇರು
ಚಂದನದ ಕಂಪನು ಜಗಕೆ ಸಾರಿದವರು
ಎಲ್ಲಾದರೂ ಇರು ಎಂತಾದರು ಇರು
ಕನ್ನಡವಾಗಿರು ಎಂದವರು
ಸಹ್ಯಾದ್ರಿಯ ತಪ್ಪಲಿನ ಕವಿಶೈಲದಿ
ಕಾವ್ಯ ಸೃಷ್ಟಿಯ ದೀಕ್ಷೆ ತೊಟ್ಟವರು
ಕನ್ನಡಕೊಬ್ಬರೇ ಈ ಕುವೆಂಪು
ಇವರಿಂದಲೇ ಕನ್ನಡವಾಯ್ತು ಸೊಂಪು
ಭಾರತ ಜನನಿಗೆ ಕನ್ನಡ ತಾಯಿಯ
ಹೆಮ್ಮೆಯ ಉಡುಗೊರೆ ನಮ್ಮ ಕುವೆಂಪು
4:32 ಪಿಎಂ 29.12.2023
*ಅಮುಭಾವಜೀವಿ ಮುಸ್ಟೂರು*
ಅದೆಷ್ಟು ಕಷ್ಟಗಳನ್ನು ಕೊಟ್ಟು ಮೆಲ್ಲನೆ ಸರಿದು ಹೋದೆ ನೀನು
ನೀ ಕಲಿಸಿದ ಪಾಠಗಳಿಗೆ ಅನುಭವದ ಮೂಟೆಯಾದೆ ನಾನು
ಪ್ರಾರಂಭದಿಂದ ಕೊನೆಯವರೆಗೂ ಕಂಡ ಕನಸುಗಳು ಸುಳ್ಳಾದವು
ನೀ ಅಂದುಕೊಂಡಂತೆ ಎಲ್ಲವೂ ನಡೆದು ನಮ್ಮನೀಗ ಬಿಟ್ಟು ಹೋದೆ ನೀನು
ಸೋಲುಗಳ ಸರಮಾಲೆಯನ್ನೇ ಹೆಣೆದು ಮಟ್ಟ ಹಾಕಿದೆ
ಶತಾಯಗಥಾಯ ಗೆಲ್ಲುಲು ಹೊರಟವನ ಕಾಲು ಮುರಿದು ಕೂರಿಸಿದೆ ನೀನು
ತಿಂಗಾತಿಂಗಳಿಗೂ ನಮ್ಮ ಹಿಂದಿಕ್ಕಿ ಮುನ್ನುಗ್ಗಿ ಹೊರಟೆ
ನಿನ್ನ ಸರಿ ಸಮಾನವಾಗಿ ಓಡಿ ಬರಲಾಗದಷ್ಟು ನಮ್ಮ ದಣಿಸಿದೆ ನೀನು
ಇನ್ನು ಮುಗಿಯಿತು ಅಮು ಕಾಲದ ಪುಟ ಸೇರಿಯಾಯಿತು
ಮುಂಬರುವ ಸಮಯವಾದರೂ ನನ್ನಂಥಾಗಲು ಸಹಕರಿಸಬಾರದೆ ನೀನು
4 59 ಪಿಎಂ 31.12.2023
ಅಮುಭಾವಜೀವಿ ಮುಸ್ಟೂರು
ಇರುಳ ಬಾಂಧವಣದಲ್ಲಿ
ಚುಕ್ಕಿಚಂದ್ರಮರು ಜೊತೆಯಾದಂತೆ
ನೀಲ ನಭದಲಿ ಬಾನ ಪಥದಲ್ಲಿ
ಮೇಘಗಳು ರವಿಯ ಮರೆಮಾಡಿದಂತೆ
ಪ್ರೀತಿಯ ಹಾಡಿನಲಿ
ನೀ ನನ್ನ ಸ್ವರವಾಗಿ ಬೆರೆತೆ
ಮುಂಜಾನೆ ಮಂಜು ಕರಗುವಂತೆ
ನಾ ಸೋತು ಹೋದೆ ನಿನ್ನಂದಕ್ಕೆ
ಮಲ್ಲಿಗೆಯ ಕಂಪು ಸುತ್ತ ಹರಡುವಂತೆ
ನನ್ನ ನೀ ಆವರಿಸಿದೆ ಏಕೆ
ಇದು ಪ್ರೀತಿಯ ಸೆಳೆತವೋ
ಇಲ್ಲ ಹೃದಯದ ಅನುಬಂಧವೋ
ಹರಿವ ನೀರೊಳಗು ತೆರಳದ ಮೀನಂತೆ
ನಿನಗಾಗಿ ನಾ ಕಾದು ನಿಂತೆ
ಕಲ್ಲು ಕೂಡ ಸವೆದು ನಯವಾಯಿತು
ಎದೆಯ ಭಾವಗಳಿಗೂ ನೆಲೆಯಾಯಿತು
ಈ ನಿನ್ನ ಒಲವ ಆಲಿಂಗನ
ನೀಡಿತು ನನ್ನೊಳಗಿನ ಕವಿಗೆ ಆಮಂತ್ರಣ
ರೆಕ್ಕೆ ಕಟ್ಟಿಕೊಂಡು ಹಾರುತಿದೆ ಮನಸ್ಸು
ನೀ ನನಗೆ ಸಿಕ್ಕ ಆ ಖುಷಿಯಲಿ
ಹೃದಯದ ಬಡಿತ ಇಮ್ಮಡಿಯಾಯ್ತು
ನಿನ್ನೊಲವಿನ ವಶದಲಿ
ಪ್ರೀತಿಯ ಸೆಳೆತಕ್ಕೆ ಸಿಕ್ಕಾಯ್ತು
ಬಾಳಲಿ ನೆಮ್ಮದಿ ಉಕ್ಕಾಯ್ತು
6.10am06012024
*ಅಮುಭಾವಜೀವಿ ಮುಸ್ಟೂರು*
ಒಲಿದ ಎದೆಗೆ ನೋವು ಕೊಟ್ಟು ಹೋದೆ ಏತಕೆ
ಸೋತ ಮನಕ್ಕೆ ಮಾತು ಕೊಟ್ಟು ಬಿಟ್ಟು ಹೋದೆ ಏತಕೆ
ಕೋತಿ ತಿಂದು ಮೇಕೆ ಮೂತಿಗೊರಸಿದಂತಾಯಿತು
ತಪ್ಪು ಮಾಡದವನ ಮೇಲೆ ಆರೋಪ ಹೊರಿಸಿಹೋದೆ ಏತಕೆ
ಬಯಸದೆ ಬಂದು ನೀನು ನೋಯಿಸುವುದು ಸರಿಯೇನು
ಬದುಕಿನಲ್ಲಿ ಮರೆಯದಂತ ಪಾಠ ಕಲಿಸಿ ಹೋದೆ ಏತಕೆ
ಎಷ್ಟು ದಿನಗಳಿಂದ ಹೊಂಚು ಹಾಕಿ ಕಾದು ಕುಳಿತಿದ್ದೆ ಹೀಗೆ
ಮುಗ್ಧ ಹೃದಯದ ನಗುವ ಕಸಿದುಕೊಂಡು ಹೋದೆ ಏತಕೆ
ಅಮು ಹೆಸರಿಗೆ ಚ್ಯುತಿ ತಂದು ನೀನು ಗಳಿಸಿದ್ದೇನು
ಆತ್ಮಸಾಕ್ಷಿಯ ಎದುರು ವಂಚನೆಯ ಹಂಚಿ ಹೋದೆ ಏತಕೆ
3:49 ಪಿಎಂ 6.01.2024
*ಅಮುಭಾವಜೀವಿ ಮುಸ್ಟೂರು*
ಗೋವುಗಳ ಕಾದು ಬಂದೆಯ ಮಾಧವ
ಬೆಣ್ಣೆ ಬಟ್ಟಲ ಹಿಡಿದು ಬಂದೆಯ ಕೇಶವ
ಕೊಳಲನೂದುತ ಗೋವುಗಳ ಕರೆವ ಗೋಪಾಲ
ಕೆಟ್ಟವರ ನಾಶಕ್ಕೆ ಹುಟ್ಟಿ ಬಂದ ಭೂಪಾಲ
ರಾಧೆಯ ಮನವ ಕದ್ದ ಚೋರ
ರಂಗಿನೋಕಳಿಯ ಆಡುವ ಬಾರ
ಕಂಸನ ಕೊಂದು ಬಲಿಯ ತುಳಿದೆ
ಕ್ರೂರ ಅಹಮಿನಿಂದ ಜಗವ ಸಲಹಿದೆ
ಸೋತ ಅರ್ಜುನನ ಸಂತೈಸಿದೆ
ಜಗಕೆ ಗೀತೆಯ ಸಾರ ಅರುಹಿದೆ
ಕಳ್ಳನೆಂಬ ಪಟ್ಟ ಹೊತ್ತ ದೈವ ನೀನು
ಪುಟ್ಟ ಬಾಯಲ್ಲಿ ಜಗವ ತೋರಿದವನು
ದೇವಕಿಯ ಗರ್ಭ ಸಂಜಾತ ಶ್ರೀ ಕೃಷ್ಣನ
ಬಲು ಪ್ರೀತಿಯಿಂದ ಸಲಹಿದ ಯಶೋಧನಂದನ
ಮೊಸರು ಬೆಣ್ಣೆಯ ಹುಚ್ಚು ಅಭಿಮಾನಿ
ಮಾಯೆಯಿಂದ ಬಂದು ಇವನಿಂದ ಹತಳಾದಳು ಪೂತನಿ
ಯದುಕುಲ ನಂದನ ಈ ಮುರುಳಿ ನಂದನ
ರಾಧೆಗಾಗಿ ನುಡಿಸಿದ ಮಧುರ ಕೊಳಲನ್ನ
ಆ ಬಾಲ ವೃದ್ಧರ ಪ್ರಿಯ ಸಖ
ಬಾಲ್ಯ ಲೀಲೆಗಳಿಗೆ ಹೆಸರಾದ ಬಾಲಕ
4:30 ಪಿಎಮ್ 6.01.2024
*ಅಮುಭಾವಜೀವಿ ಮುಸ್ಟೂರು*
No comments:
Post a Comment