ಹೊತ್ತು ಉರುಳುತ್ತಿದೆ
ಮತ್ತೆ ಮರಳುತ್ತದೆ
ಎತ್ತ ನೀ ತೆರಳುವೆ ಮನುಜ
ನಿನ್ನಿಂದಲೇ ಜಗವಲ್ಲ
ಜಗಕ್ಕೆ ನೀ ಮುಖ್ಯವಲ್ಲ
ಅರಿತು ನಡೆದರೆ ಸಾಕು ಈ ನಿಜ
ಹಣದ ಹಿಂದೆ ಓಡುವೆ
ಗುಣ ಮೂಟೆ ಕಟ್ಟಿರುವೆ
ಹೆಣವಾಗುವ ನಿನಗೇಕೀ ಧಾವಂತ
ಉಸಿರಿಲ್ಲದೆ ನೀನಿಲ್ಲ
ಹೆಸರಿಗೆ ಹಂಬಲಿಸುವೆಯಲ್ಲ
ನೆಮ್ಮದಿಯು ಆಗಿದೆಯೇ ನಿನ್ನ ಸ್ವಂತ ?
ನಿನ್ನ ಏಳಿಗೆಗಾಗಿಯೇ
ಇತರರ ತುಳಿವೆ ನ್ಯಾಯವೇ
ನೀನು ಬೆಳೆದು ಇತರರ ಬೆಳೆಸಬೇಕಲ್ಲವೇ
ದಾರಿಯಿಂಟು ನೂರು
ನಡೆ ಇಲ್ಲ ತಕರಾರು
ಬದುಕಿನ ಗುರಿ ದಬ್ಬಾಳಿಕೆಯಾಗಬಾರದಲ್ಲವೇ
ಬಂದು ಹೋಗುವ ನಮಗೆ
ಏಕೆ ಹೇಳು ಈ ಬೇಗೆ
ಯಾರಿಗೂ ಅನಿವಾರ್ಯವಲ್ಲ
ಇರುವರೆಗೆ ಬಂಧ ಬಿಗಿಯಾಗಿಸಿ
ಸಕಲ ಜೀವಗಳ ಪ್ರೀತಿಸಿ
ಸಾರ್ಥಕತೆ ಸಾಧಿಸಿದರೆ ಸಾಕಲ್ಲ
3 58 ಎಎಂ 14.01.2024
*ಅಮುಭಾವಜೀವಿ ಮುಸ್ಟೂರು*
No comments:
Post a Comment