Monday, October 14, 2024

ಕವನ

ಪ್ರೀತಿಯ ಬಾಂಧವ್ಯ 
ಈ ನಮ್ಮ ಸಾಂಗತ್ಯ 
ಯೌವನದ ರಮ್ಯತೆಯು
ನಿಸರ್ಗದ ಮಡಿಲಲ್ಲಿ 
ಕುಳಿತ ಈ ಜಾಗವಿದು 
ಸ್ವರ್ಗ ಸಮಾನ 

ಅಂತರಂಗ ತೆರೆದು 
ನಮ್ಮನು ಇಲ್ಲಿ ಕರೆತಂದು 
ಬಂಧಿಸಿದ ಅನುಬಂಧ ಪ್ರೀತಿ 
ಸಾಮಪ್ಯವೇ ಹಿತವಾಗಿದೆ
ಪಿಸುಮಾತು ಜೇನಾಗಿದೆ
ಹೃದಯಗಳು ಒಂದಾದವಿಲ್ಲಿ

ಗಿರಿಕಣಿವೆಗಳು ಹಸಿರಾಗಿ 
ಬಾನು ಭೂಮಿಗಳು ಒಂದಾಗಿ 
ಹರಸಿದೆ ನಮ್ಮನು 
ತರುಲತೆಗಳ ಸಂಬಂಧದಂತೆ
ನಾವಿಬ್ಬರೂ ಮಿಂದು ಒಂದಾಗಲು
ಪ್ರಕೃತಿಯು ಆಹ್ವಾನಿಸಿದೆ ನಮ್ಮನು 

0116ಪಿಎಂ02102024
*ಅಪ್ಪಾಜಿ ಎ ಮುಸ್ಟೂರು*

ಬಾನಲ್ಲಿ ಹಾರುವ ಹಕ್ಕಿಗಳಂತೆ 
ನಾನು ನೀನು ಬಾಳಲಿ 
ಪ್ರೀತಿಯ ಕಾಳನು ಹೆಕ್ಕಿ ತಂದು 
ಒಟ್ಟಾಗಿ ಸವಿಯೋಣ ಗೂಡಲಿ 

ಅಕ್ಕರೆ ತುಂಬಿದ ನಿನ್ನ ದನಿಯ
ಪ್ರೀತಿಯ ಮಾತೆ ಸವಿ ಜೇನು 
ಎಂದೆಂದಿಗೂ ನಿನ್ನ ಜೊತೆ ಇದ್ದರೆ ಸಾಕು 
ಬಾಳಲಿ ಬೇಡನು ಮತ್ತೇನು 

ಸಕ್ಕರೆ ಮಾತಿನ ಸವಿಬೆಲ್ಲದ ನಲ್ಲ 
ನೀನಲ್ಲದೆ ಜಗದಿ ಬೇರೆ ಬೇಕಿಲ್ಲ 
ನಿನ್ನಾಲಿಂಗನವೇ ಬೆಚ್ಚನೆಗೂಡು 
ಸದಾ ಹೊಮ್ಮಿದೆ ಅಲ್ಲಿ ಪ್ರೀತಿಯ ಹಾಡು 

ನನ್ನಯ ಕನಸಿಗೆ ನಿನ್ನದೇ ಆಸರೆ 
ನೀನೇ ಸ್ಪೂರ್ತಿ ದಿನವೆಲ್ಲ 
ನೀ ಕೊಟ್ಟ ಪ್ರೀತಿಯ ಕಾಣಿಕೆಗೆ 
ಬೆಲೆ ಕಟ್ಟಲು ಎಂದಿಗೂ ಆಗಲ್ಲ 

ನಾನು ನೀನು ಹೀಗೆ ಕೂಡಿ 
ಬಾಳುವ ಮನೆಯೇ ಗಂಧದ ಗುಡಿ 
ಪ್ರೀತಿಯ ಅಲ್ಲಿ ಶ್ರೀಗಂಧ 
ನಂಬಿಕೆಯಲ್ಲಿ ಬೆಸೆದಿದೆ ನಮ್ಮನುಬಂಧ 

೧೨೫೭ಪಿಎಂ೦೫೧೦೨೦೨೪
ಅಮು ಭಾವಜೀವಿ ಮುಸ್ಟೂರು 

ಎಲ್ಲಿಗೆ ಬಂದು ಮುಟ್ಟಿದೆ 
ಪ್ರಜಾಪ್ರಭುತ್ವದ ಈ ವ್ಯವಸ್ಥೆ 
ಕಾಳಜಿ ಇಲ್ಲದ ಆಳುವವರಿಂದ 
ಅತಿಯಾಗಿದೆ ಈ ದುರವಸ್ಥೆ 

ದೊರೆಯೇ ಭ್ರಷ್ಟನಾಗಿ ಕುಂತರೆ 
ದೂರು ನೀಡುವುದು ಯಾರಿಗೆ 
ಲಂಚದ ಘಮಲು ಅಮಲೇರಿರುವಾಗ
ಸೌಲಭ್ಯವಿನ್ನೆಲ್ಲಿ ಸಾಮಾನ್ಯರಿಗೆ 

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ 
ಎಂಬುದೆಲ್ಲ ಶಾಲಾ ಪಟ್ಟಕ್ಕೆ ಸೀಮಿತ 
ವಾಸ್ತವದಲ್ಲಿ ಪ್ರಜೆಗಳೆಲ್ಲರನ್ನು 
**************************
ಎಂಥೆಂಥವರು ಇರುವರು 
ಈ ಜಗದಲಿ ಅರಿತವರಾರು
ಸ್ನೇಹದ ಮರೆಯಲಿ ಪ್ರೀತಿಯ
ಬಯಸಿ ಬಳಸಿ ಎಸೆಯುವರು

ಗೆದ್ದೆತ್ತಿನ ಬಾಲವ ಹಿಡಿದು 
ಎದ್ದೆದ್ದು ಕುಣಿಯುವರು
ಪ್ರತ್ಯಕ್ಷವಾಗಿ ಕಂಡರೂ 
ಪ್ರಮಾಣಿಸಿ ನೋಡದ ಕುರುಡರು 

ತನ್ನವರಿಗಾಗಿ ಇತರರ 
ಬಲಿ ಕೊಡುವವರ
ಬೆಂಬಲವಾಗಿ ನಿಂತು 
ಚೇಲಾಗಳಂತಾಡುವರು

ಕಾಮಾಲೆ ಕಣ್ಣಿನಿಂದ ನೋಡಿ 
ಕೊಚ್ಚೆಯಲ್ಲಿದ್ದವರ ಜೊತೆ ಸೇರಿ 
ಪ್ರಾಮಾಣಿಕರ ದೂರುವ ಲಜ್ಜೆಗೇಡಿ 
ಜನರುಂಟು ಈ ಜಗದಾಗೆ

ಎಚ್ಚರದಿಂದಿರಬೇಕು ದುಷ್ಟರಕೂಟ
ಅಮಾಯಕರ ತಿಂದು ಮುಕ್ಕಿ 
ತಾವೇ ಗೆದ್ದವರೆಂದು ಬೀಗುವರ
ದೂರವಿಟ್ಟು ದಾರಿ ಸವೆಸು 
೧೦೧೦ಪಿಎಂ೦೭೧೦೨೦೨೪
ಅಪ್ಪಾಜಿ ಎ ಮುಸ್ಟೂರು 

*ಗೋಡೆ ಕಟ್ಟದಿರಲಿ*

ಬಂಡೆಗಳ ಒಡೆದು 
ಹಾದಿ ಮಾಡುವ ನೆಪದಲ್ಲಿ 
ಅದೇ ಕಲ್ಲಿಂದ ಗೋಡೆ ಕಟ್ಟದಿರಲಿ 

ಸ್ನೇಹದ ಕಡಲಲ್ಲಿ 
ಪ್ರೀತಿಯ ಸುಳಿಯಲ್ಲಿ ಸಿಲುಕಿ 
ದ್ವೇಷದ ಸಾವು ತರದಿರಲಿ 

ಉಳ್ಳವರ ಓಲೈಸುತ
ಇಲ್ಲದವರ ಹಂಗಿಸುವ ಬದಲು 
ಹೊಂದಿಸುವ ಪ್ರಯತ್ನ ಸಾಗಲಿ 

ಪ್ರತ್ಯಕ್ಷವಾಗಿ ಕಂಡರೂ 
ಪ್ರಮಾಣಿಸಿ ನೋಡದೆ
ಪ್ರಾಮಾಣಿಕರ ಅವಮಾನಿಸದಿರಲಿ

ತಪ್ಪುಗಳ ಎತ್ತಿ ಕಟ್ಟಿ 
ಸತ್ಯವನು ತುಳಿಯದೆ
ಬದ್ಧತೆಯ ತೋರಲಿ 

೦೯೨೪ಪಿಎಂ೦೮೧೦೨೦೨೪
ಅಮು ಭಾವಜೀವಿ ಮುಸ್ಟೂರು 


*ಉಳಿದ ಶೇಷ*
ಬದುಕು ಕಲಿಸಿದ ಪಾಠ 
ನೋವು ನಲಿವಿನ ಆಟ
ಸೋಲು ಗೆಲುವಿನ ಸಂಪುಟ 
ಸ್ನೇಹ ಪ್ರೀತಿಗಳೇ ಬಾಳ ಮುಖಪುಟ 

ಎಲ್ಲಿಂದಲೋ ಬಂದವರು ಇಲ್ಲಿ 
ಜೊತೆಯಾಗಿ ಸೇರುವರು 
ಇಲ್ಲೇ ಇದ್ದವರು ಇಲ್ಲಸಲ್ಲದ ಕಾರಣಕೆ
ಬಿಟ್ಟು ಎದ್ದು ಹೋಗುವರು 

ಅವಮಾನಿಸಿ ದೂರ ಉಳಿದು 
ಅಪಪ್ರಚಾರ ಮಾಡಿ ಮಸಿ ಬಳಿವರು
ಸ್ವಾಭಿಮಾನದಿ ಬದುಕಲು 
ಬೆನ್ತಟ್ಟಿ ಮರೆಯಲಿ ಉಳಿವರು 

ಯಾರು ಶತ್ರುಗಳಲ್ಲ ಇಲ್ಲಿ 
ಯಾರು ಮಿತ್ರರೂ ಅಲ್ಲ 
ಅವರವರ ಪಾತ್ರ ಬಂದಂತೆ ನಟಿಸಿ
ಸೂತ್ರ ಹರಿದುಕೊಂಡು ಹೋದರು 

ಬದುಕೆಂದರೆ ಹೀಗೆ ಕೂಡಿ ಕಳೆದು 
ಗುಣಿಸಿ ಭಾಗಿಸಿ ಉಳಿದ ಶೇಷವು
ಬಂದಂತೆ ಬದುಕುತ್ತಾ ಸಾಗುವ 
ನಮಗೊಲಿವುದು ಈ ಸಂತೋಷವು

೧೦೧೭ಪಿಎಂ೦೯೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ತಪ್ಪೇ ಮಾಡದವರು ಯಾರುಂಟು 
ಮಾಡಿದ ತಪ್ಪನ್ನು ಒಪ್ಪಿಕೊಂಡವರು 
ನಿಜದಲ್ಲಿ ಪ್ರಾಮಾಣಿಕರು 
ತಿದ್ದಿ ನಡೆಯುವ ಬುದ್ಧಿವಂತರು 

ಗೊತ್ತಿದ್ದೋ ಗೊತ್ತಿಲ್ಲದೆಯೋ 
ತಪ್ಪು ಮಾಡಿ ಗೊತ್ತಾದ ಕ್ಷಣವೇ 
ಕ್ಷಮೆಯ ಕೋರಿ ಹೆಮ್ಮೆಪಡುವ 
ಪಾರದರ್ಶಕ ವ್ಯಕ್ತಿತ್ವ ಉಳ್ಳವರು 

ಎಲ್ಲವೂ ಸರಿ ಇದ್ದರೆ ಜಗ ನಡೆವುದು ಹೇಗೆ 
ತಪ್ಪಿದ್ದರೆ ತಾನೇ ಸರಿಗೆ ಬೆಲೆ 
ತಪ್ಪನ್ನೇ ಎತ್ತಿ ತೋರಿಸುವ ಬದಲು 
ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕು 

ತಪ್ಪುಗಳ ಪರಿಶ್ರಮದಿಂದಲೇ 
ಸರಿಯ ಗುರಿ ಕೈಗೆಟುಕುವುದು 
ತಪ್ಪು ಒಪ್ಪಿತವಾಗದೆ 
ಯಾವ ಸಮಸ್ಯೆಯೂ ಬಗೆಹರಿಯದು 

ತಪ್ಪು ತಪ್ಪು ಎಂದು ಬೊಬ್ಬೆ ಹೊಡೆಯುವವರು 
ಯಾರು ತಪ್ಪೇ ಮಾಡುವುದಿಲ್ಲವೇನು 
ಮಾಡಿದ ತಪ್ಪಿನ ಅರಿವಾದವರೇ 
ಗೆಲುವಿನ ರೂವಾರಿಯಾಗುವ ಸಾಧಕರು

ಬರಿ ತಪ್ಪನ್ನೇ ಹುಡುಕುತ್ತಾ ಹೋಗುವವರು 
ಎಲ್ಲಾ ತಪ್ಪುಗಳಿಗೆ ಮೂಲವಾದವರು 
ತಪ್ಪಿನಿಂದ ಪಾಠ ಕಲಿತವರು 
ಮುಂದಿನದನೆಲ್ಲ ಗೆದ್ದು ಬೀಗುವರು

೧೨೫೭ಪಿಎಂ೧೦೧೦೨೦೨೪
ಅಪ್ಪಾಜಿ ಎ ಮುಸ್ಟೂರು 

*ಹೆಣ್ಣುಳ್ಳ ಮನೆಯಾಗಲಿ*
ಹೆಣ್ಣೆಂದು ಸಣ್ಣದಾಗಿ 
ಮಾತನಾಡುವರು ಜಗದಲ್ಲಿ 
ಹೆಣ್ಣಿಲ್ಲದೆ ಜಗವಿಲ್ಲ ಎಂಬುದನ್ನೇ 
ಮರೆತರೇಕೆ ಜನರಿಲ್ಲಿ

ಬೆಳಗಿನ ರಾತ್ರಿವರೆಗೆ 
ದುಡಿಯುವವಳು ಹೆಣ್ಣು 
ಹಸಿವು ನಿದ್ರೆ ತ್ಯಾಗದ ಆಚೆ 
ಶ್ರಮವಿರದೆ ಬದುಕಳು ಹೆಣ್ಣು 

ತಾಯಿ ಸೋದರಿ ಮಡದಿಯಲ್ಲದೆ 
ಗೆಳತಿಯಾಗಿ ಮಗಳಾಗಿ 
ಬದುಕಿನ ಪ್ರತಿ ಹಂತದಲ್ಲೂ 
ಜೊತೆಯಾಗಿ ಸಲಹುವ ಶಕ್ತಿ ಅವಳು 

ತಾಯಿಯಾಗಿ ಪ್ರೀತಿಯನ್ನು 
ಮಡದಿಯಾಗಿ ಸರ್ವಸ್ವವನ್ನು 
ಮಗಳಾಗಿ ಕೀರ್ತಿಯನ್ನು 
ಕೊಡುವ ಹೆಣ್ಣು ದೈವ ಸ್ವರೂಪಿ 

ಅವಳ ಹೆಸರಿನ ದೇವರ ಪೂಜಿಸಿ 
ಅವಳನ್ನು ಚಿತ್ರವಿಚಿತ್ರವಾಗಿ ಶೋಷಿಸಿ 
ಕೀಳಾಗಿ ಕಾಣುವವರ ಮೆಚ್ಚುವುದುಂಟೆ 
ನಿಜದಿ ಆರಾಧಿಸಿದರೆ ಸುಭಿಕ್ಷ ಜಗವು 

ಹೆಣ್ಣು ಮಕ್ಕಳೆ ಬದುಕಿನ ಆಧಾರ 
ಹೆಣ್ಣು ಜೀವವೇ ಬಾಳಿನ ಸಂಸ್ಕಾರ 
ನಿಲ್ಲಲಿ ಅವಳ ಮೇಲಿನ ಅಧಿಕಾರ 
ಹೆಣ್ಣುಳ್ಳ ಮನೆಯಾಗಲಿ ದೇವ ಮಂದಿರ 

೦೩೦೧ಪಿಎಂ೧೧೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

No comments:

Post a Comment