Friday, October 18, 2024

ಕವನ

ಚಿತ್ತ ಮಳೆಯೇ 
__RECORD__
ಅದೇಕೆ 
ಚಿತ್ತ ಸ್ವಾಸ್ಥ್ಯ ಕಳೆದುಕೊಂಡಿರುವೆ 
ಊರುಕೇರಿ ನಾಡು ಹೊಲಗದ್ದೆ 
ಎಲ್ಲೆಲ್ಲೂ ನೀನೇ ತುಂಬಿ ಹೋಗಿರುವೆ 

ಬೇಕು ಮಳೆ ಭೂಮಿಗೆ 
ಆದರೆ ಕೊಚ್ಚಿಕೊಂಡು ಹೋಗುವುದೇತಕೆ 
ಜನಜಾನುವಾರು ರೈತರಿಗೆ 
ಬದುಕಿಗೆ ಸಂಕಷ್ಟ ತಂದಿರುವೇತಕೆ

ಎಲ್ಲೆಲ್ಲೂ ನೀರು ನೀರು ನೀರು 
ನಿನ್ನನ್ನು ತಡೆಯುವವರಿಲ್ಲ ಯಾರು 
ರಸ್ತೆಗಳೆಲ್ಲಾ ಹೊಳೆಯಾಗಿವೆ 
ಸಂಚಾರಕ್ಕೆ ಅಡಚಣೆ ಉಂಟಾಗಿದೆ 
ಏಕೆ ಹೀಗೆ ಉಗ್ರ ರೂಪ ತಾಳಿರುವೆ 

ಮನೆ ಮಠಗಳೆಲ್ಲ ನೀರಲ್ಲಿ ಮುಳುಗಿ 
ಬೆಳೆದ ಪಸಲೆಲ್ಲ ಕೊಚ್ಚಿ ಹೋಗಿ 
ಹಿಡಿ ಶಾಪ ಹಾಕುತ್ತಿದೆ ನಿನಗೆ 
ಕೊಂಚ ತಗ್ಗಿಸು ನಿನ್ನ ಆರ್ಭಟ 

ಈಗ ನೀ ಬಂದರಿಲ್ಲ ಪ್ರಯೋಜನ
ಎಲ್ಲೆಲ್ಲೂ ಕೇಳಿಸುತ್ತಿದೆ ರೋಧನ 
ಭೋರ್ಗರೆವ ಪ್ರವಾಹಕ್ಕೆ ಸಿಕ್ಕಿ ಜೀವನ 
ತತ್ತರಿಸಿ ಹೋಗಿದೆ ಕಡಿಮೆ ಮಾಡಿಕೋ ಕೋಪಾನ 
೦೨೦೪ಪಿಎಂ೧೬೧೦೨೦೨೪
ಅಪ್ಪಾಜಿ ಎ ಮುಸ್ಟೂರು 

ಶ್ರೀಮಂತ ಸಾಮ್ರಾಜ್ಯದ ಕಥೆ ಕೇಳಿಲ್ಲವೇ
ಹಾಳು ಹಂಪೆಯ ಗೋಳು ಕೇಳುವವರಿಲ್ಲವೇ 

ರೂಪವೇ ತಿಳಿಯದಷ್ಟು ಕುರೂಪವಾದ
ಕಾದು ಕಾದು ಕಲ್ಲಾದ ವ್ಯಥೆಯ 
ಮುತ್ತು ರತ್ನಗಳ ಅಲೆದು ಮಾರಿದ 
ಹೆಮ್ಮೆಯ ಸಾಮ್ರಾಜ್ಯ ಹಂಪೆಯದು 

ವಿಜಯನಗರ ಸಾಮ್ರಾಜ್ಯದ ಕುಲತಿಲಕ 
ತುಳುವ ವಂಶದ ವೀರ ನಾಯಕ 
ಮೂರು ರಾಯರ ಗಂಡ ಈ ಆಂಧ್ರಭೋಜ
ಕನ್ನಡ ರಾಜ್ಯರಮಾರಮಣ ಕೃಷ್ಣದೇವರಾಯ 

ಕಲೆ ಸಾಹಿತ್ಯ ಸಂಸ್ಕೃತಿಗಳ ಪೋಷಕ 
ಹಂಪೆವಿರುಪಾಕ್ಷನ ಆರಾಧಕ 
ತಿಮ್ಮರಸರ ಪಟ್ಟ ಶಿಷ್ಯ 
ಅಷ್ಟ ದಿಗ್ಗಜರ ಪಟ್ಟದರಸ 

ಅಮುಕ್ತ ಮಾಲ್ಯದ ಕೃತಿಯ ಕರ್ತೃ 
ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ
ಶಿಲೆಗಳು ಸಂಗೀತ ನುಡಿದ ತಾಣ 
ಪ್ರತಿಕಲ್ಲು ತೋರಿದೆ ಸಮೃದ್ಧಿ ದರ್ಪಣ 

ಕಾವೇರಿಯಿಂದ ಗೋದಾವರಿಯವರೆಗೆ 
ವಿಜಯನಗರ ಸಾಮ್ರಾಜ್ಯದ ವಿಸ್ತಾರ 
ಬಹುಮನಿ ಸುಲ್ತಾನರ ಹುಟ್ಟಡಗಿಸಿದ 
ಕನ್ನಡಾಂಬೆಯ ಹೆಮ್ಮೆಯ ಕುವರ 

೦೫೧೦ಪಿಎಂ೧೭೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ಬಯಲು ಸೀಮೆಯ 
ಒಡಲ ತುಂಬಿದರು 
ತುಂಗಭದ್ರೆಯರು
ಬರದ ನಾಡಿನ ಬರಿದಾದ ಕೆರೆಗಳ 
ಒಡಲು ತುಂಬಿ ಹರಿಸಿ
ಹಸಿರ ಚಿಲುಮೆ ಹೊಮ್ಮಿಸಿದರು 

ದಶಕಗಳ ಕನಸು ನನಸಾಗಿ 
ಬತ್ತಿದ ಕೆರೆಗಳ ಬಾಯಾರಿಕೆ ನೀಗಿಸಿ 
ತುಂಬಿ ತುಳುಕಿದರೂ ಖುಷಿಯಲಿ 
ಬರಿ ಬರಗಾಲಗಳನ್ನೇ ಕಂಡುಂಡ 
ಚರಿತ್ರೆಯ ಬದಲಾಯಿಸಿದರು 
ಮಲೆನಾಡಿನಿಂದ ಹರಿದು ಬಂದ ಸೋದರಿಯರು 

ಅಂತರ್ಜಲಕ್ಕೆ ಅಂತ ಸತ್ವ ತಂದು 
ಬಾಯಾರಿದ ಭೂಮಿಗೆ ಬಾಗಿನ ನೀಡಿ 
ಜನರಲಿ ಮಂದಹಾಸ ತಂದರು 
ಬೀಗುತಿದೆ ತುಂಬಿ ಕೆರೆ ಕಟ್ಟೆಗಳು 
ಬಲಗೊಂಡಿವೆ ರೈತನ ರಟ್ಟೆಗಳು 
ಹಸಿವ ನೀಡಲು ಕಸುವು ತುಂಬಿದೆ 

ಕಿತ್ತೊಗೆಯಲಿ ಇನ್ನು 
ಬರಪೀಡಿತ ಹಣೆಪಟ್ಟಿ 
ಸಮೃದ್ಧಗೊಳ್ಳಲಿ ಈ ಬಯಲು ಸೀಮೆ 
ನಾಯಕರ ದೂರ ದೃಷ್ಟಿ 
ಸಾಧು ಸಂತರ ಸಮಗ್ರ ದೃಷ್ಟಿ 
ಬರದ ನಾಡಲ್ಲುಕ್ಕಿದೆ ಬಂಗಾರದ ಚಿಲುಮೆ 

೧೨೫೯ಪಿಎಂ೧೮೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ಈ ಬಾಳ ನೆಲದಲ್ಲಿ 
ನೀ ತಂದೆ ಪ್ರೀತಿ ಸೋನೆ
ಎಲ್ಲೆಲ್ಲೂ ಖುಷಿ ಆರಾಧನೆ 
ಒಂಟಿಯಾನದ ಜೊತೆಯಾಗಿ 
ಒಲವ ನಂಟಲಿ ಒಂದಾಗಿ 
ಸಾಗುವ ಹಾದಿಯಲ್ಲೀಗ ವಿಜೃಂಭಣೆ 

ಸತತ ಸೋಲುಗಳಲ್ಲಿ ಸಿಕ್ಕಿಕೊಂಡು 
ಭರವಸೆಯನಿಲ್ಲ ಕಳೆದುಕೊಂಡು 
ಸತ್ವಹೀನ ಎಂದುಕೊಂಡ ಬಾಳಲಿ
ನೂರು ನೋವುಗಳ ಎಲ್ಲೆ ಮೀರಿ 
ಎಲ್ಲ ನಲಿವುಗಳ ಜೊತೆ ಸೇರಿ 
ನಲ್ಲೆ ನೀ ಭಾರಿಸಿದೆ ಜಯಭೇರಿ 

ಬತ್ತಿದ ನಾಳೆಗಳಿಗೆ ಜೀವ ತುಂಬಿ 
ಸೊರಗಿದ ಇಂದಿಗೆ ಚೈತನ್ಯ ತಂದು 
ಈಗ ಸಾಗಲು ಶಕ್ತಿಯಾದೆ 
ನೀ ತೋರಿದ ಈ ಕಾಳಜಿಗೆ 
ನಾ ಬೆಳೆದೆ ಆಕಾಶದೆತ್ತರಕ್ಕೆ 
ಅಳಿಯದ ಆತ್ಮವಿಶ್ವಾಸ ನೀನಾದೆ 

ಕಳೆಯಿತು ಇನ್ನು ಬೇಸಿಗೆ
ಮುಂದೆ ಇನ್ನೆಲ್ಲ ವರ್ಷದ ಒಸಗೆ
ಮಾಗಿಯ ಕನಸು ನನಸಾಯಿತು 
ಹಸಿರ ಸಂಭ್ರಮದಲ್ಲಿ ಮೀಯೋಣ
ಹೊಸ ಇತಿಹಾಸ ಸೃಷ್ಟಿಸೋಣ 
 ಸಂತೃಪ್ತ ದಿನ ಅನುಭವಿಸೋಣ

೦೧೩೦ಪಿಎಂ೧೮೧೦೨೦೨೪
*ಅಪ್ಪಾಜಿ ಎ ಮುಸ್ಟೂರು* 

__END_OF_PART__IMG_20241018_13391855_gallery.jpg__END_OF_PART__
ಬಾಳಸಂಧ್ಯೆಯಲಿ ಒಂದು 
ಬದುಕಿಗೆ ಆಧಾರದ ಗೂಡು 
ಓದುವ ಭರವಸೆಯೊಂದಿಗೆ 
ಸಾಗಿದೆ ಜೀವನ ಪಾಡು 

ಸಲಹೆಂದು ಬೇಡಬೇಕು ದೇವರ ಹತ್ರ 
ಆದರೆ ವ್ಯಾಪಾರದ ಸರಕು ದೇವರ ಚಿತ್ರ 
ಬದುಕಿದು ಅದೆಷ್ಟೊಂದು ವಿಚಿತ್ರ 
ದುಡಿದು ತಿನ್ನುವ ಸೂತ್ರ 

ಬಯಕೆಗಳ ದಿನಸಿಗಳ ಜೋಡಿಸಿ 
ಬಂದ ಬಂದವರಿಗದನು ವಿತರಿಸಿ 
ಸಿಕ್ಕ ಪುಡಿಗಾಸಲಿ ಬದುಕು ಕಟ್ಟಿಕೊಂಡು 
ವೃದ್ಧಾಪ್ಯದಲ್ಲೂ ಸ್ವಾಭಿಮಾನದ ಸಾಹಸಿ 

ಹಣ್ಣು ಕಾಯಿ ಧೂಪದ ಕಡ್ಡಿ 
ಮಾರುತಿಹ ಸಾಗಿಸಲು ಜೀವನ ಬಂಡಿ 
ದಿನದ ವಿದ್ಯಮಾನದ ಅರಿವು 
ದಿನಪತ್ರಿಕೆಯಂತಲ್ಲವೇ ನಾವು ನೀವು 

ಇಂದು ನಮ್ಮ ಕೈಯಲ್ಲಿ ಜ್ಞಾನದ ಪಾತ್ರ 
ನಾಳೆ ಏನೇನೋ ರೂಪ ಇನ್ನೊಬ್ಬರ ಹತ್ರ 
ನಿಲ್ಲದೆ ಓಡುತಿದೆ ಕಾಲಚಕ್ರ 
ಅಲ್ಲಿ ಗೆಲ್ಲಲು ತಿರುಗಬೇಕು ಜೀವನ ಚಕ್ರ 

ಮುಪ್ಪು ವಯಸ್ಸಿನ ಸೂಚಕ 
ಜೀವನದ ತಿರುಗುಗಳು ಬಲು ರೋಚಕ 
ದುಡಿಮೆಯಿಂದ ಬದಲಾಗುವುದು ಜಾತಕ 
ಸಾಯೋ ತನಕ ಸಂಗಾತಿಯಾಗಿರಲಿ ಕಾಯಕ 
೦೧೫೪ಪಿಎಂ೧೮೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ತಂಗಾಳಿ ಬೀಸುತ್ತಿದೆ 
ಮುಂಗುರುಳು ಹಾರುತಿದೆ 
ಈ ಮೌನದ ನಡಿಗೆ ಭಾರವಾಗಿದೆ
ಸಾಗರದ ತೀರದಲ್ಲಿ 
ಬಯಕೆಗಳು ತೀರದಲ್ಲಿ 
ಮರಳ ಮೇಲೆ ಬರೆ ಗೆದ ಹೆಸರು ಮಾಯವಾಗಿದೆ 

ಪ್ರೀತಿ ತುಂಬಿದ ಅಲೆಗಳು 
ಮತ್ತೆ ಮತ್ತೆ ನೆನಪಾಗಿ ಕಾಡಿರಲು 
ಅದೇಕೆ ನೀ ಮೌನದಿ ಕಳೆದು ಹೋದೆ 
ಭಾವವಿರದ ಹಾಡಿನಂತೆ 
ಬಾಡಿಹೋದ ಹೂವಿನಂತೆ 
ನಿನ್ನ ಮೌನ ನನ್ನ ಅದೇಕೋ ಕಾಡಿದೆ 

ಅಂದು ಕಳೆದ ದಿನಗಳೆಲ್ಲ 
ಇಂದು ನೆನಪಾಗಿ ಉಳಿದವಲ್ಲ 
ಆ ನೆನಪಲ್ಲಿ ನೀನು ಕೂಡ ಸೇರಿರುವೆ 
ಎಂದೋ ಬರೆದ ಹಾಡಿಗೆ 
ನೀನಿಂದು ಸಿಕ್ಕ ಈ ಗಳಿಗೆ 
ನನಗೆ ಕಾಕತಾಳಿಯವೇ 

ಶಾಂತ ಸಾಗರದಂತೆ ನಿನ್ನ ಮೌನ 
ಕೊಂಚ ಕೊಂಚ ಕಾಡಿದೆ ನನ್ನ 
ಹಂಚು ಮನದ ನೋವನ್ನೆಲ್ಲ 
ಪ್ರೀತಿಯ ಜೀವವು ನೀನು 
ಈ ಸಂಕೋಚವೇಕಿನ್ನು
ನನ್ನೊಳಗೆ ಸೇರಿಕೋ ಉಪ್ಪಿನಂತೆ 

1113ಪಿಎಂ18102024
*ಅಪ್ಪಾಜಿ ಎ ಮುಸ್ಟೂರು*

No comments:

Post a Comment