Tuesday, September 22, 2020
ಲೇಖನ
Sunday, September 20, 2020
ಕವನ
*ಪ್ರವಾಹ ಫಜೀತಿ*
ಈ ಬದುಕನ್ನೇ ಕೊಚ್ಚಿ
ಹೊರಟಿದೆ ಪ್ರವಾಹ
ನೆಲೆಯಿಲ್ಲದೆ ನರಳುತ್ತಿದೆ
ಸಂತೃಪ್ತ ಬದುಕಿನ ವಿನಾಶ
ಮನೆ ಮಠಗಳ ತೊರೆದು
ಕಾಳುಕಡಿಯನೆಲ್ಲ ಬಿಟ್ಟು
ಬಡಜೀವವ ಬದುಕಿಸಿಕೊಳ್ಳಲು
ಯುದ್ಧಕ್ಕೂ ಮಿಗಿಲಾದ ಹೋರಾಟವಿದು
ಹೊಲ ಗದ್ದೆಗಳೆಲ್ಲ ಮುಳುಗಿ
ದನಕರುಗಳು ಕೊಚ್ಚಿಹೋಗಿ
ನರಕದ ದರ್ಶನವಾಯಿತು
ಮಹಾ ಮಳೆಯು ತಂದ ಪ್ರವಾಹದಿಂದ
ಮಕ್ಕಳುಮರಿ ಕಟ್ಟಿಕೊಂಡು
ಗಂಜಿ ಕೇಂದ್ರದಲ್ಲಿ ಉಳಿದುಕೊಂಡು
ಅವರೆಸೆಯುವ ಭಿಕ್ಷೆಗಾಗಿ
ಕೈಚಾಚಿ ಕೂರುವಂತಾಗಿದೆ ದೈನೇಸಿ ಬದುಕು
ಉಳ್ಳವರ ಅಟ್ಟಹಾಸ
ಕಳ್ಳಕಾಕರ ನಿತ್ಯ ಕೆಲಸ
ವಿಷಜಂತುಗಳ ವರ್ತುಲದಾಚೆ
ಬದುಕು ಕಟ್ಟಿಕೊಳ್ಳಬೇಕಿದೆ
4.50 ಪಿಎಂ 18 09 2020
*ಅಮುಭಾವಜೀವಿ ಮುಸ್ಟೂರು*
Saturday, September 19, 2020
ಕವನ
#ಅಮುಭಾವಬುತ್ತಿ ೭೬
*ಮುಂಗಾರಿನ ನಿರೀಕ್ಷೆ*
ಬರಿದೇ ಬಾನ ವಿಸ್ತಾರದಲ್ಲಿ
ಉರಿಬಿಸಿಲ ತಾಪದಲ್ಲಿ
ಕರಿ ಮೋಡಗಳ ಪ್ರಣಯದಲ್ಲಿ
ಮುಂಗಾರಿನ ಜನನಕ್ಕೆ ನಾಂದಿಯಾಯಿತು
ಎಲೆಯುದುರಿದ ಬೋಳುಮರಗಳಲ್ಲಿ
ಮಣ್ಣಲ್ಲಿ ಮಣ್ಣಾದ ಗರಿಕೆ ಒಡಲಲ್ಲಿ
ಬತ್ತಿ ಬಿರುಕಾದ ಕೆರೆಯಂಗಳದಲ್ಲಿ
ಮುಂಗಾರಿನ ಆಗಮನದ ಕನಸಿತ್ತು
ನೀರಿಲ್ಲದ ನದಿಗಳಲ್ಲಿ
ಸುಮವಿರದ ಲತೆಗಳಲ್ಲಿ
ಒಡಲ ಬಿಸಿಲಿಗೆ ಒಡ್ಡಿದ ಧರೆಯಲ್ಲಿ
ಮುಂಗಾರಿನ ನಿರೀಕ್ಷೆಯಿತ್ತು
ಬಾಯಾರಿದ ಖಗಮೃಗಗಳಲ್ಲಿ
ಬರದ ಬವಣೆಗೆ ಸಿಕ್ಕ ರೈತರಲ್ಲಿ
ಕಾಡ್ಗಿಚ್ಚಿನ ಭಯದಿ ಕಾನನದಲ್ಲಿ
ಮುಂಗಾರಿನ ಭರವಸೆ ಇತ್ತು
ಮೊಳೆವ ಪ್ರತಿಬೀಜದಲ್ಲೂ
ಸುಡುವ ಮಣ್ಣ ಕಣಕಣದಲ್ಲೂ
ಬತ್ತಿದೊಡಲ ಸುಪ್ರಭಾತದಲ್ಲೂ
ಮುಂಗಾರಿನ ಕನವರಿಕೆ ಇತ್ತು
ಮತ್ತೆ ಬಂತು ಮುಂಗಾರು
ನೋಡಲ್ಲಿ ವಸಂತದ ಸಂಭ್ರಮ ಜೋರು
ಹನಿ ನೀರಿನ ಅಂತಃಕರಣ
ಪ್ರತಿ ಜೀವದ ಬದುಕಿನ ಪ್ರೇರಣ
0535ಪಿಎಂ13032017
*ಅಮುಭಾವಜೀವಿ ಮುಸ್ಟೂರು*
Wednesday, September 16, 2020
Thursday, August 6, 2020
ಗಜಲ್
Tuesday, July 21, 2020
Tuesday, March 24, 2020
ಕವನ ಲೇಖನ
Saturday, March 21, 2020
ಯುಗಾದಿ ಹಬ್ಬದ ಮಹತ್ವ
ಯುಗಾದಿ ಹಬ್ಬದ ಮಹತ್ವ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಅದರದೇ ಆದ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಹಬ್ಬಗಳ ಆಚರಣೆಗೆ ಧಾರ್ಮಿಕ ವೈಚಾರಿಕ , ವೈಜ್ಞಾನಿಕ ನೈಸರ್ಗಿಕವಾದ ಮಹತ್ವವನ್ನು ನೀಡಲಾಗಿದೆ. ಆಯಾ ಕಾಲಮಾನಕ್ಕೆ ತಕ್ಕಂತೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಹಬ್ಬಗಳ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆಯಾಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾರೆ ಅದಕ್ಕೆಂದೇ ವಿಶೇಷವಾಗಿ ತಯಾರಿಸಿದ ಭಕ್ಷ್ಯ ಭೋಜನಗಳನ್ನು ಸೇವಿಸುವ ಮೂಲಕ ಅರ್ಥಪೂರ್ಣ ಆಚರಣೆಗಳನ್ನೂ ಆಚರಿಸಿಕೊಂಡು ಬರಲಾಗುತ್ತಿದೆ.
ನಮ್ಮ ಪುರಾಣ ಶಾಸ್ತ್ರಗಳ ಪ್ರಕಾರ ವರ್ಷದ ಮೊದಲ ಹಬ್ಬವೇ ಯುಗಾದಿ. ಅಂದರೆ ಯುಗದ + ಆದಿ = ಯುಗಾದಿ , ಯುಗ ಎಂದರೆ ವರ್ಷ ಆದಿ ಎಂದರೆ ಆರಂಭ. ಈ ಪದದ ಅರ್ಥ ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಇಡೀ ಪ್ರಕೃತಿಯೇ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿ ಹೊಸಚಿಗುರಿನೊಂದಿಗೆ ಕಂಗೊಳಿಸುತ್ತಾ ಚೈತ್ರ ಆಗಮನದ ವಸಂತನಿಗೆ ಸ್ವಾಗತ ಕೋರುತ್ತದೆ. ಇಡೀ ನಿಸರ್ಗದ ತುಂಬಾ ಹೊಸತನ ಮನೆಮಾಡಿರುತ್ತದೆ. ಕೆಂದಳಿರಿನ ಚಿಗುರಿನ ಜೊತೆಗೆ ಬಿರಿದ ಮೊಗ್ಗುಗಳು ಅರಳಿ ಹೊಸ ಕಂಪಿನ ನರುಗಂಪನ್ನು ಸೂಸಿ , ಹಕ್ಕಿಗಳ ಕಲರವದ ಜೊತೆಗೆ ಸಂಭ್ರಮಾಚರಣೆಯಲ್ಲಿ ಮುಳುಗಿರುತ್ತದೆ. ಮೊಗ್ಗು ಮಿಡಿಕಾಯಿ ಹಣ್ಣುಗಳಿಂದ ಮೈದುಂಬಿದ ಗಿಡ-ಮರಗಳಲ್ಲಿ ಚಿಕ್ಕಪುಟ್ಟ ಪ್ರಾಣಿ ಪಕ್ಷಿ ಕೀಟಗಳು ಆಹಾರಕ್ಕಾಗಿ ಆಶ್ರಯಿಸುತ್ತವೆ. ಬೇಸಿಗೆಯ ಬಿರುಬಿಸಿಲಿನಲ್ಲಿಯೂ ತಣ್ಣನೆಯ ನೆರಳು ನೀಡುವ ಮರಗಿಡಗಳು ಹೊಸವರ್ಷದ ಸಮೃದ್ಧಿಯ ಸಂಕೇತವಾಗಿ ಕಾಣಿಸುತ್ತವೆ. ಇಡೀ ಪ್ರಕೃತಿ ಹಸುರಿನಿಂದ ಸಮೃದ್ಧವಾಗಿರುತ್ತದೆ.
ಮಾನವರಾದ ನಾವುಗಳು ಈ ಹಬ್ಬವನ್ನು ವಿಶೇಷವಾಗಿ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಚಾಂದ್ರಮಾನದ ಲೆಕ್ಕಾಚಾರದಲ್ಲಿ ಅಮಾವಾಸ್ಯೆಯನ್ನು ಮೊದಲದಿನ ಎಂದು ನಂಬಿಕೊಂಡು ಬಂದಿರುವ ನಾವುಗಳು ಅಂದು ಪುರುಷರು ಮಕ್ಕಳಾದಿಯಾಗಿ ಮೈಯಿಗೆ ಹರಳೆಣ್ಣೆ, ಅರಿಶಿನ ಮಿಶ್ರಣ ಮಾಡಿ ಹಚ್ಚಿಕೊಂಡು ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಓಡಾಡಿ ನಂತರ ಸ್ನಾನ ಮಾಡಿ ಹೊಸಬಟ್ಟೆಗಳನ್ನು ತೊಟ್ಟು ಮನೆಯಲ್ಲಿ ಪೂಜೆ ಮಾಡಿದ್ದಲ್ಲದೆ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಪಡೆಯುವುದು ವಾಡಿಕೆ. ಅದರ ಜೊತೆಗೆ ಎಳೆಯ ಮಾವಿನ ಎಲೆಗಳನ್ನು ಬೇವಿನ ಎಸಳುಗಳನ್ನು ಸೇರಿಸಿ ಮನೆಯ ಬಾಗಿಲುಗಳಿಗೆ ತೋರಣ ಕಟ್ಟಿ ಅಲಂಕರಿಸುತ್ತಾರೆ. ಹೆಂಗಳೆಯರು ಮನೆಯ ಮುಂದೆ ಸಗಣಿಯಿಂದ ನೆಲ ಸಾರಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಹಬ್ಬದ ಕಳೆಯನ್ನು ತರುತ್ತಾರೆ. ಅಲ್ಲದೆ ಹೊಸದಾಗಿ ಬೆಳೆದ ನವಧಾನ್ಯಗಳನ್ನು ಬೇಯಿಸಿ ಉಣಬಡಿಸುತ್ತಾರೆ. ಪಾಯಸ ಹೋಳಿಗೆ ಮುಂತಾದ ಸಿಹಿತಿನಿಸುಗಳನ್ನು, ಹೊಸದಾಗಿ ತಯಾರಿಸಿದ ಹಪ್ಪಳ ಸಂಡಿಗೆ ಚಕ್ಕುಲಿ ಮುಂತಾದ ತಿಂಡಿಗಳನ್ನು ಮಾಡಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಸವಿಯನ್ನು ನೀಡುತ್ತಾರೆ.
ಯುಗಾದಿ ಹೊಸ ವರ್ಷವಾದ್ದರಿಂದ ಮನೆಯಲ್ಲಿ ಬಾಳಿಬದುಕಿ ಹೋದ ಹಿರಿಯರನ್ನು ನೆನಪಿಸಿಕೊಳ್ಳುವ ಸಲುವಾಗಿ ಹಿರಿಯರ ಪೂಜೆಯನ್ನು ಮಾಡುವ ಮೂಲಕ ಹೊಸ ಪೀಳಿಗೆಗೆ ಹಿರಿಯರನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಬದುಕಿನ ನೋವು-ನಲಿವುಗಳನ್ನು, ಕಷ್ಟ-ಸುಖಗಳನ್ನು, ಏಳುಬೀಳುಗಳನ್ನು ಸಮನಾಗಿ ಸ್ವೀಕರಿಸುವ ಸಂಕೇತವಾಗಿ ಬೇವು-ಬೆಲ್ಲವನ್ನು ಹಂಚುವ ಮೂಲಕ ಬಾಂಧವ್ಯ ಬೆಸೆಯುವ ಅರ್ಥಪೂರ್ಣ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಬೆಲ್ಲದ ಉಪಯೋಗವೂ ಕೂಡ ಪ್ರಕೃತಿಯಲ್ಲಿ ಉಂಟಾಗಿರುವ ಬಿಸಿಲಿನ ಪರಿಣಾಮವನ್ನು ಎದುರಿಸಲು ಸಹಕಾರಿಯಾಗುತ್ತದೆ. ಬೇವು ಕಷ್ಟಗಳ ಸಂಕೇತವಾದರೆ ಬೆಲ್ಲ ಸುಖದ ಸಂಕೇತವಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಏರಿದ ಬಿಸಿಲಿನ ತಾಪವನ್ನು ತಣಿಸಿಕೊಳ್ಳುವುದಕ್ಕಾಗಿ ಪರಸ್ಪರರಿಗೆ ಅದರಲ್ಲೂ ಬೀಗರಾದವರಿಗೆ ನೀರನ್ನೆರೆಚುವ ಮೂಲಕ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ. ಅದರ ಜೊತೆಗೆ ಬೇರೆ ಬೇರೆ ಜಾನಪದ ಕ್ರೀಡೆಗಳನ್ನು, ಪುರಾಣ ಪಠಣಗಳನ್ನು, ಇಡೀ ವರ್ಷ ನಡೆಯಬಹುದಾದ ಜಾತಕ ಫಲಗಳ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಯುಗಾದಿಯ ದಿನದಂದು ಆರಂಭಿಸುವ ಎಲ್ಲಾ ಕಾರ್ಯಗಳು ಸಫಲವಾಗುತ್ತವೆ ಎಂಬ ನಂಬಿಕೆಯಿಂದ ಹೊಸ ಯೋಜನೆಗಳು, ಹೊಸ ಚಿಂತನೆಗಳು, ಹೊಸ ಕಾರ್ಯಕ್ರಮಗಳನ್ನು ಕೈಗೊಂಡು ಸಂಭ್ರಮಿಸುತ್ತಾರೆ. ಇದೆಲ್ಲದರ ಜೊತೆಗೆ ಅತ್ಯಂತ ಮುಖ್ಯವಾಗಿ ಚಾಂದ್ರಮಾನ ಯುಗಾದಿ ಅದ್ದರಿಂದ ಚಂದ್ರನ ದರ್ಶನ ದೊಂದಿಗೆ ಯುಗಾದಿ ಹಬ್ಬಕ್ಕೆ ಮಂಗಳ ಹಾಡಲಾಗುತ್ತದೆ. ಅಮಾವಾಸ್ಯೆಯ ನಂತರ ಅತ್ಯಂತ ಸೂಕ್ಷ್ಮವಾಗಿ ಸಂಜೆಯ ವೇಳೆ ಗೋಚರವಾಗುವ ಚಂದ್ರನ ದರ್ಶನಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತವರಿಗೆ ಚಂದ್ರದರ್ಶನವಾಗುತ್ತಿದ್ದಂತೆ ಸಂಪ್ರದಾಯದಂತೆ ಪೂಜೆ ಮಾಡಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು ಮನೆಯಲ್ಲಿ ಇರುವ ಹಿರಿಯರ ಪದಗಳಿಗೆ ನಮಸ್ಕರಿಸಿ, ಬಂಧು ಬಾಂಧವರೊಂದಿಗೆ ಚಂದ್ರದರ್ಶನದ ಶುಭಾಶಯವನ್ನು ಕೋರುತ್ತಾ ಪರಸ್ಪರ ಸಂಭ್ರಮಿಸುತ್ತಾರೆ. ಅಲ್ಲದೆ ಜನರು ಯುಗಾದಿಯ ನಂತರ ತಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು 'ಮೊದಲು' ಮಾಡುವ ಸಲುವಾಗಿ ನೇಗಿಲನು ಹೂಡಿ ಭೂಮಿತಾಯಿಗೆ, ನೇಗಿಲು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಬೇಸಾಯದ ಚಟುವಟಿಕೆಗಳನ್ನು ಆರಂಭಿಸಿ ವರ್ಷವಿಡಿ ಮಳೆ-ಬೆಳೆ ಚೆನ್ನಾಗಿ ಆಗಿ ರೈತನ ಬದುಕು ಹಸನಾಗಲಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಾರೆ.
ಒಟ್ಟಾರೆಯಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಕೆಲಸಕಾರ್ಯಗಳಿಗೆ ಅದರದೇ ಆದ ಧಾರ್ಮಿಕ ಸಾಂಪ್ರದಾಯಿಕ ವೈಜ್ಞಾನಿಕ ವೈಚಾರಿಕ ಕಾರಣಗಳಿದ್ದು ಅದೆಲ್ಲದರ ಒಟ್ಟು ಮೊತ್ತ ಮಾನವನ ಬದುಕು ಪ್ರಕೃತಿಯ ಜೊತೆಜೊತೆಗೆ ಸಂಭ್ರಮದ ಸಮೃದ್ಧಿಯ ಸಂತಸದಾಯಕ ನೆಮ್ಮದಿಯ ಬದುಕನ್ನು ಪಡೆಯುವುದಾಗಿದೆ. ಆಚರಣೆಗಳ ನೆಪದಲ್ಲಿ ಬಂಧುಬಾಂಧವರ ಸಮಾಗಮ ನೋವುಗಳನ್ನೆಲ್ಲ ಮರೆತು ನಲಿವಿನಲ್ಲೂ ಜೊತೆಯಾಗುವ ಅನುಪಮ ಬಾಂಧವ್ಯ ಬೆಸೆಯುವ ಸಂದರ್ಭ ಹಬ್ಬಗಳ ಆಚರಣೆಗೆ ಮೂಲ ಪ್ರೇರಣೆ. ಅದರಲ್ಲೂ ಯುಗಾದಿ ಮಾನವರಿಗಷ್ಟೇ ಅಲ್ಲ ಇಡೀ ಪ್ರಕೃತಿಯೇ ಹೊಸತನದಿಂದ ಸಂಭ್ರಮಿಸುವ ಕಾಲ. ಹೊಸ ಸಂವತ್ಸರದ ಹೊಸ ಮಾಸದ ಹೊಸ ಋತುವಿನ ಆಗಮನದಿಂದ ಹಿಂದಿನ ವರ್ಷದ ಕಷ್ಟನಷ್ಟಗಳೇನೇ ಇರಲಿ ಪ್ರಸ್ತುತ ವರ್ಷದಲ್ಲಾದರೂ ಎಲ್ಲ ಕಷ್ಟನಷ್ಟಗಳು ಕಳೆದು ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸುತ್ತಾ ಮತ್ತೆ ಇಂದಿನ ಜೀವನಕ್ಕೆ ಮರಳುತ್ತೇವೆ. ಖುಷಿಯ ಕ್ಷಣಗಳನ್ನು ಮೆಲುಕುಹಾಕುತ್ತಾ ವರ್ಷವಿಡಿ ನಮ್ಮ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾ ಬದುಕಿನ ಪುಟಗಳಲ್ಲಿ ಅನುಭವದ ಸಾಲುಗಳನ್ನು ದಾಖಲಿಸುತ್ತಾ ಮುಂದಿನ ಪೀಳಿಗೆಗೆ ವೇದಿಕೆಯನ್ನು ಸಿದ್ಧಪಡಿಸಿ ನಮ್ಮ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ. ಎಲ್ಲರೂ ಬೇವು-ಬೆಲ್ಲವನ್ನು ಹಂಚಿ ತಿಂದು ಖುಷಿಯಿಂದ ಹೊಸವರ್ಷವನ್ನು ಆಚರಿಸೋಣ, ಸಂಭ್ರಮಿಸೋಣ.
ಎಲ್ಲರಿಗೂ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು
ದಿನಾಂಕ 21032020
ಅಮು ಭಾವಜೀವಿ
Saturday, February 8, 2020
ಕವಿತೆ
*ಇನ ತೆರೆದ ಬಾಗಿಲು*
ಬಾನಲ್ಲಿ ಮೂಡಿತೊಂದು
ಬೆಳಕಿನ ಆಶಾಕಿರಣ
ಜಗದ ಎಲ್ಲ ಕ್ರಿಯೆಗಳಿಗೆ
ಅದುವೇ ನಿತ್ಯ ಪ್ರೇರಣ
ಇರುಳ ಬೆರಳ ಹಿಡಿದು ನಡೆಸಿ
ವಿಶ್ರಾಂತಿಗೆ ವಿರಾಮ ಕೊಡಿಸಿ
ಮುಂಜಾನೆಯ ಮುದ ತಂದ
ಒಂಟಿಕಾಲ ಸೂರ್ಯಕಾಂತಿ
ಬಿರಿದರಳಿ ರವಿಗೆ ನಮಸಿ
ಸ್ವಾಗತಿಸಲು ಓಡಿ ಬಂದ
ಹರಿವ ನೀರ ಬಳುಕಿನಲ್ಲಿ
ನಲಿದ ತಾ ಹೊಳೆಯುತಲಿ
ಸಾಗರಕೆಲ್ಲ ಹೊಂಬಣ್ಣ ಚೆಲ್ಲಿದ
ಹಕ್ಕಿ ಗಾನ ಮಾಧುರ್ಯಕೆ
ಮನಸೋತು ಮೌನದಿಂದ
ಬೆಳಕಿನ ರಥವನೇರಿ ಬಂದ
ಮುತ್ತಿನ ಮಣಿ ಪೋಣಿಸಿ
ಪ್ರಕೃತಿ ತಾನು ಸಂಭ್ರಮಿಸಿ
ದಿನಕರನ ಸ್ವಾಗತಿಸಲು
ಬೆಳ್ಮುಗಿಲ ಮರೆಯಿಂದ
ಹೊಂಬೆಳಕಿನ ಚೆಲುವಿಂದ
ಇನ ತೆರೆದ ದಿನದ ಬಾಗಿಲು
0713ಎಎಂ08022018
*ಅಮುಭಾವಜೀವಿ*
ನೀ ಬಯಸಿದ ಹಾಗೆಲ್ಲ
ನಾ ಬದುಕಿಸಲಾಗಲಿಲ್ಲ
ಬಡವ ನಾನು
ಪ್ರೀತಿಯಲಿ ಕೈತುತ್ತನಿತ್ತು
ಭೂತಾಯ ಮೇಲ್ಮಲಗಿಸಿ
ಜೋಗುಳ ಹಾಡುವೆನು,
ನನ್ನ ತೋಳ ಬಂಧಿಯೇ
ಆಭರಣ
ಸವಿ ಮಾತೆ ಸಿಹಿಯೂರಣ
ಈ ಗುಡಿಸಲೇ ಅರಮನೆ
ಆದರೆ ಇಲ್ಲಿ ಒಲವಿನದೇ
ಆರಾಧನೆ.
ಗೆಳತಿ ಬಡವ ನಾನು
ಪ್ರೀತಿಯಲ್ಲಿ ಧನಿಕನು.
834am080215
ಕವಿತೆ
Friday, January 24, 2020
ಲೇಖನ
*ಲೇಖನ*
*ತ್ಯಾಗಮಯಿ ಹೆಣ್ಣು*
ಇಡೀ ಮಾನವ ಜಗತ್ತಿನ ಹುಟ್ಟಿನ ಮೂಲ ಹೆಣ್ಣು. ಅವಳು ಜನ್ಮ ಕೊಡುವುದರಿಂದ ಹಿಡಿದು ಬದುಕಿನ ಪ್ರತಿಕ್ಷಣವು ಅವಳ ತ್ಯಾಗದ ಫಲವಾಗಿದೆ. ನಾವು ಸುಖವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ನಮ್ಮ ಮನೆಯ ಹೆಣ್ಣು ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟಿದ್ದಾರೆ ಪರಿಣಾಮವಾಗಿರುತ್ತದೆ. ಅವಳು ತಾಯಿಯಾಗಿ ಸಹೋದರಿಯಾಗಿ ಮಡದಿಯಾಗಿ ಮಗಳಾಗಿ
ಶಕ್ತಿಯಾಗಿ ಸಹಾಯಕಳಾಗಿ ಪ್ರೋತ್ಸಾಹಕನಾಗಿ ಹೊಣೆಗಾರರಾಗಿದ್ದಾರೆ ಹೊರುವ ಸ್ತ್ರೀಯ ಪ್ರತಿ ಪಾತ್ರವು ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾಗಿರುತ್ತದೆ. ಈ ಪಾತ್ರಗಳ ನೆರಳಿನಿಂದ ವಂಚಿತರಾದವರ ಬದುಕು ಸುಂದರವಾಗಿರಲು ಸಾಧ್ಯವೇ ಇಲ್ಲ. ಅದಕ್ಕೆ ಹೇಳಿದ್ದು ಒಂದು ಎಸ್ಎಸ್ಸಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು . ಇದು ಎಷ್ಟೊಂದು ಅರ್ಥಪೂರ್ಣ ಮಾತು.
ಹೆಣ್ಣು ಪ್ರತಿ ಕುಟುಂಬದ ಆಧಾರ. ಪ್ರತಿ ಮನೆಯಲ್ಲೂ ಹೆಣ್ಣು ಎಲ್ಲರೂ ಏಳುವುದಕ್ಕಿಂತ ಮುಂಚೆ ಎದ್ದು ಎಲ್ಲರೂ ಮಲಗಿದ ಮೇಲೆ ಮಲಗುವ ಅವರ ಬದುಕು ತ್ಯಾಗದ ಪ್ರತೀಕ. ತನ್ನಿರಿ ಎಷ್ಟೇ ಒತ್ತಡಗಳಿದ್ದರೂ ಅಡುಗೆ ಮಾಡುವುದು ಮನೆಗೆಲಸ ಮಕ್ಕಳ ಅಭ್ಯಾಸ ಮನೆಯ ಖರ್ಚು ವೆಚ್ಚ ನಿರ್ವಹಣೆ ಎಲ್ಲದರಲ್ಲೂ ಮಹಿಳೆಗೆ ಅಗ್ರಸ್ಥಾನ. ಎಲ್ಲಾ ಕೆಲಸಗಳು ಅವಳಿಲ್ಲದೆ ಮಾಡಲು ಅಸಾಧ್ಯ. ಪುರುಷ ಕೇವಲ ಸಹಕಾರ ನೀಡಬಹುದು, ಅವಳಿಗೆ ಬೆಂಗಾವಲಾಗಿ ನಿಲ್ಲಬಹುದು. ಆದರೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಹೆಣ್ಣು ಒಬ್ಬಳಿಂದ ಮಾತ್ರವೇ ಸಾಧ್ಯ.
ಇಂಥ ಅನೇಕ ತ್ಯಾಗಮಯಿ ಹೆಣ್ಣು ಗಳಿಂದಾಗಿ ಮಾನವನ ಬದುಕು ಹಸನಾಗಿ ಸುಖ-ಶಾಂತಿ-ನೆಮ್ಮದಿಗಳು ಮನೆಮಾಡಿವೆ. ಹಾಗಾಗಿ ಅವಳನ್ನು ಅತ್ಯಂತ ಗೌರವಿತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಎಲ್ಲಿ ಹೆಣ್ಣು ಗೌರವಿಸಲ್ಪಡುವಳೋ ಅಲ್ಲಿ ದೇವರು ನೆಲೆಸಿದ್ದಾನೆ ಎಂಬುದು ನಮ್ಮ ಭಾರತೀಯ ಸಂಸ್ಕೃತಿಯ ನಂಬಿಕೆ. ಅದಕ್ಕಾಗಿಯೇ ಅವಳನ್ನು ಶಕ್ತಿ ಸ್ವರೂಪಿಣಿಯಾಗಿ, ವಿದ್ಯಾದಾಯಿನಿಯಾಗಿ , ಅನ್ನಪೂರ್ಣೆಯಾಗಿ, ಒಟ್ಟಾರೆ ದೇವತೆಯಾಗಿ ಪೂಜಿಸುವ ಗೌರವಿಸುವ ಪರಿಪಾಠ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ವರ್ತಮಾನದ ಮಹಿಳೆ ಪುರುಷನ ಸರಿಸಮಾನವಾಗಿ ಹೊರಗಡೆಯೂ, ತನ್ನ ಪುರಾತನ ಸಂಪ್ರದಾಯದಂತೆ ಮನೆಯೊಳಗೂ ದುಡಿಯುತ್ತಿರುವ ಅವಳ ತ್ಯಾಗ ಶ್ಲಾಘನೀಯವಾದದ್ದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಹೆಣ್ಣಿನ ಮಹತ್ವ ಕುಟುಂಬ ಸಮಾಜ ದೇಶ ಎಲ್ಲೆಲ್ಲೂ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.
ಹೆಣ್ಣಿನ ಮೇಲೆ ಎಷ್ಟೇ ಶೋಷಣೆಗಳು, ಅತ್ಯಾಚಾರಗಳು, ಅಮಾನವೀಯ ನಡವಳಿಕೆಗಳು, ಅಬಲೆ ಎಂಬ ಹಣೆಪಟ್ಟಿ ಕೊಟ್ಟಿದ್ದರು ಅವಳೆಂದೂ ತನ್ನ ಕಾರ್ಯಗಳಿಂದ ವಿಮುಖರಾಗದೆ ಅತ್ಯಂತ ಶ್ರದ್ಧೆಯಿಂದ, ಜವಾಬ್ದಾರಿಯುತವಾಗಿ ನಿರ್ವಹಿಸುವುದರಿಂದಲೇ ಸಮಾಜದ ಪ್ರತಿಯೊಬ್ಬರ ಬದುಕು ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾಗಿ ಹೆಣ್ಣನ್ನು ನಾವೆಲ್ಲ ಅವಳನ್ನು ಅತ್ಯಂತ ಗೌರವಿತವಾಗಿ, ಆದರಣೀಯವಾಗಿ, ನಡೆಸಿ ಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.
10:23 ಪಿಎಂ 23012020
*ಅಮುಭಾವಜೀವಿ ಮುಸ್ಟೂರು*
(ಅಪ್ಪಾಜಿ ಎ ಮುಸ್ಟೂರು)
ಶಿಕ್ಷಕರು
ಮುಸ್ಟೂರು ಅಂಚೆ
ಜಗಳೂರು ತಾಲೂಕು
ದಾವಣಗೆರೆ ಜಿಲ್ಲೆ
ಪಿನ್ ಕೋಡ್ 577528
ಮೊಬೈಲ್ 8496819281