ಬೆಳದಿಂಗಳು ಮೆರವಣಿಗೆ ಹೊರಟಂತೆ
ಇಬ್ಬನಿಯಲಿ ದಿಬ್ಬಣ ಬರುವಂತೆ
ತಂಗಾಳಿಯು ಛಾಮರ ಬೀಸಲು
ಮೊಗ್ಗು ಬಿರಿವಾಗಿನ ಸೊಬಗು ನೀನು
ನಿನ್ನ ನಗುವು ಜುಳು ಜುಳು ಹರಿವ ನೀರಂತೆ
ನಿನ್ನ ಮಾತೆಂದರೆ ಅರಗಿಣಿ ನುಡಿವಂತೆ
ಪ್ರೀತಿಯ ಆರಾಧ್ಯ ದೈವವು ನೀನು
ಈ ನಿನ್ನ ಚೆಲುವು ಮನಮೋಹಕ
ಈ ನಿನ್ನ ವೈಯ್ಯಾರ ಲತೆ ಬಳುಕುವಂತೆ,
ಈ ನಿನ್ನ ಶೃಂಗಾರ ಉತ್ಸವಮೂರ್ತಿಯಂತೆ
ಬಂಗಾರದಂತ ಈ ರೂಪರಾಸಿಗೆ ಮನಸೋತ
ಭ್ರಮರವಾಗಿ ನಿನ್ನನೇ ಸುತ್ತುತಲಿರುವೆ
ನೀನೊಂದು ಹಣ್ಣುಗಳ ರಾಶಿ
ಅದ ಸವಿಯಲು ಅಪ್ಪಣೆ ಬೇಕೆ
ಋತು ವಸಂತನ ಸೃಷ್ಟಿ ನೀನು
ನಿನ್ನೊಳು ಸಮಷ್ಟಿಯ ಕಂಡೆ ನಾನು
ಇರುಳೇನು ಹಗಲೇನು ನನಗೆ
ಭರವಸೆಯ ಮಹಾ ತೇರು ನೀನು
ಏನಾದರೇನು ಹೇಗಿದ್ದರೇನು
ನೀ ಸಿಗಲು ಸುಖ ಕಾಣುವೆ ನಾನು
೧೦೦೮ಪಿಎಂ೦೫೧೨೨೦೨೨/
*ಅಮುಭಾವಜೀವಿ ಮುಸ್ಟೂರು*
ಸಾವೆಂದರೆ ಸಾವು ಅಷ್ಟೇ
ಅದಕೇಕೆ ವಿಶೇಷ ಅರ್ಥ
ಸಹಜ ಮರಣ ಜನನದಷ್ಟೇ
ಅದಕ್ಕಿರದು ಯಾವ ಸ್ವಾರ್ಥ
ಹುಟ್ಟಿಗೆ ಸಂಭ್ರಮಿಸುವ ನಾವು
ದುಃಖಿಸುವುದೇಕೆ ಬರಲು ಸಾವು
ಹೂ ಅರಳಿ ಬಾಡಿ ಹೋಗುವುದು
ಕಾಯಿ ಹಣ್ಣಾಗಿ ಮಾಗಿ ಕೊಳೆಯುವುದು
ಸಾವಿರದ ಮನೆ ಸಾಸಿವೆ ಸಿಗದು
ಸಾವಾದ ಮನೆಯಲಿ ನಗು ಕಾಣದು
ಮುಕ್ತಿ ಹೊಂದಲು ಜೀವ ಪಯಣ
ಅಂತ್ಯ ತರುವ ಸಾವು ಅದಕೆ ಕಾರಣ
ಆದಿ ಇರುವಂತೆಯೇ ಅಂತ್ಯವೂ ಕೂಡ
ಆದರೆ ಸಾವೆಂದರೇಕಿಷ್ಟೊಂದು ದುಗುಡ
ಅವರವರ ನಿಲ್ದಾಣ ಬರಲು ಇಳಿಯಲೇಬೇಕು
ಹೋದವರ ನೆನೆನೆನೆದು ಅಳುತಲಿರಬೇಕು
ಸಾಧಕರಿಗೆ ನಿರ್ವಾಣ ದುರುಳರಿಗೆ ಕಡಿವಾಣ
ಹೆಸರಿದೆ ನೂರು ಉಳಿದವರಿಲ್ಲ ಯಾರೂ
ನಡೆನುಡಿಗಳೊಂದಾದ ಜೀವನ ಯಾನ
ಸಾರ್ಥಕತೆಗೆ ಸಾಕ್ಷಿಯಾದ ಸಾವಿನ ಸ್ಥಾನ
೦೬೦೧ಎಎಂ೦೬೧೨೨೦೨೨
*ಅಮುಭಾವಜೀವಿ ಮುಸ್ಟೂರು*