ಆಕಾಶದಷ್ಟು ಎತ್ತರ
ಸಾಗರದಷ್ಟು ವಿಶಾಲ
ಭೂಮಿಯಷ್ಟು ಸಮೃದ್ಧ
ಪ್ರೀತಿಯ ನನ್ನಪ್ಪ
ಶಿಲೆಯಂತೆ ಕಠೋರ
ಶಿಲ್ಪ ಮಾಡಿದ ಶಿಲ್ಪಿಕಾರ
ಬದುಕು ಕಲಿಸಿದ ಗುರಿಕಾರ
ಶ್ರಮದ ಹೆಸರು ನನ್ನಪ್ಪ
ಮರಕ್ಕೆ ಆಸರೆ ಬೇರು
ಲೆಕ್ಕವಿಲ್ಲ ಸುರಿಸಿದ ಬೆವರು
ಅಮರ ಅಮರ ಆ ಹೆಸರು
ಬದುಕಿನ ಆಧಾರ ನನ್ನಪ್ಪ
ಪ್ರೀತಿ ತೋರದ ಭಾವ
ನಮಗಾಗಿ ದುಡಿಯುವ ಜೀವ
ಹೆಗಲಲ್ಲಿ ಹೊತ್ತರು ತೋರನು ನೋವ
ಹಸಿವಿಗೆ ಅವಕಾಶ ನೀಡದ ನನ್ನಪ್ಪ
ದುಡಿಮೆಯ ನಂಬಿದ ಕೃಷಿಕ
ಎಂದೆಂದಿಗೂ ಅವನೇ ನಮ್ಮ ನಾಯಕ
ಜೀವನ ಗುರಿ ಸೇರಿಸಿದ ಮಾರ್ಗದರ್ಶಕ
ಬೆನ್ನ ಹಿಂದೆ ನಿಂತ ಬೆಂಗಾವಲು ನನ್ನಪ್ಪ
ಹೇಳ ಹೊರಟರೆ ಪದಗಳು ಕಡಿಮೆ
ದೇವರಿಗೂ ಮೀರಿದ್ದು ಅವನ ಹಿರಿಮೆ
ಮಕ್ಕಳಿಗಾಗಿ ನಿತ್ಯ ಮಾಡುತ ದುಡಿಮೆ
ಬದುಕಿನ ಭರವಸೆ ನನ್ನಪ್ಪ
೧೦೫೦ಎಎಂ೧೬೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*
ಮಗಳೆಂದರೆ ಅಮ್ಮನ ಹಾಗೆ
ಅಪ್ಪನ ಪಾತ್ರಕ್ಕೆ ಜೀವ ಕೊಟ್ಟವಳು
ಮಗಳೆಂದರೆ ವರ್ಣಿಸಲಿ ಹೇಗೆ
ಬದುಕಿಗೆ ಭರವಸೆ ತುಂಬಿದವಳು
ತಾಯಿಯಂತೆ ಸಲಹುವಳು
ಗೆಳತಿಯಂತೆ ಸಂತೈಸುವಳು
ಮಗಳಿವಳು ಮಮತೆಯ ರೂಪ
ಮನೆ ಮನಗಳ ಬೆಳಗುವ ದೀಪ
ಅಂಗೈಯಲ್ಲಿ ಆಡಿದ ಮಗಳು
ಎದೆ ಮೇಲೆ ಕೂತ ಮಗಳು
ಭುಜದೆತ್ತರ ಬೆಳೆದು ನಿಂತಿಹಳು
ಬದುಕಿಗೆ ಜವಾಬ್ದಾರಿ ತಂದಳು
ಅಪ್ಪನಾಸೆಗೆ ಬೆಂಬಲವಾಗಿ ನಿಲ್ಲುವಳು
ಅಮ್ಮನ ಕನಸು ನನಸಾಗಿಸುವಳು
ಅನುಬಂಧದ ಆನಂದ ಮಗಳಿಂದ
ಹೆತ್ತವರ ಅಕ್ಕರೆಯ ಮುದ್ದು ಕಂದ
ಮಗಳು ಹುಟ್ಟಿದಾಗಲೇ
ಅಪ್ಪ ಅಮ್ಮ ಹುಟ್ಟಿದ್ದು
ಅವಳಿಗಷ್ಟೇ ಅಲ್ಲ ನಮಗೂ
ಜನ್ಮದಿನ ಸಂಭ್ರಮ ತಂದದ್ದು
ಬೆಳೆದು ಬಾಳು ಮಗಳೇ ಎತ್ತರಕ್ಕೆ
ನೆರಳಾಗು ದಣಿದು ಬಂದವರ ಪಾಲಿಗೆ
ಸಾಧನೆಯ ಸಾಧ್ಯವಾಗಿಸಿಕೊಂಡು ಬಾ
ನಿನ್ನ ಬದುಕಾಗಲಿ ನಿತ್ಯ ಹಬ್ಬ
೦೨೦೮ಪಿಎಂ೧೮೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*
ಕಣ್ಣ ಮುಂದಿದ್ದಾಗ ದೂರುವಿರೇಕೆ
ಹೋದಾಗ ಹೊಗಳುವಿರೇತಕೆ
ಇದ್ದಾಗ ತಿದ್ದುವ ಬದಲು
ಹೋದಾಗ ಮತ್ತೆ ಹುಟ್ಟಿ ಬಾ ಎನ್ನುವಿರೇಕೆ
ಹಾರತುರಾಯಿಗಳನೇನು ನಾ ಕೇಳಲಿಲ್ಲ
ನಿಮ್ಮ ಬೈಗುಳದ ಹೂಮಳೆ ಸುರಿಸಿದ್ದೀರಿ
ಬೆನ್ನು ತಟ್ಟುವ ಒಂದೇ ಒಂದು ಪ್ರಯತ್ನ ಮಾಡಲಿಲ್ಲ
ಸಣ್ಣ ತಪ್ಪನೆ ದೊಡ್ಡದು ಮಾಡಿ ಬಹಿಷ್ಕರಿಸಿದಿರಿ
ಯಾರ ಹಾದಿಗು ನಾ ಹೂ ಹಾಸಲಾಗಲಿಲ್ಲ
ಆದರೂ ನಾನು ಯಾರಿಗೂ ಮುಳ್ಳಾಗಿರಲಿಲ್ಲ
ಬೇಕಾದಾಗ ಬಳಸಿಕೊಂಡೆವರೇ ಎಲ್ಲಾ
ಬೇಡವಾದಾಗ ಈಗ ಎಲ್ಲ ದೂಷಿಸುವಿರಲ್ಲ
ಮರವಾಗಿ ನೆರಳೀಯಬೇಕೆಂದುಕೊಂಡಿದ್ದೆ
ಬೆಳೆಯುವುದ ಕಂಡು ಚಿವುಟಿದವರು ನೀವಲ್ಲವೇ
ಎಲೆ ಮರೆಯ ಕಾಯಾಗಿ ಮಾಗಬೇಕೆಂದುಕೊಂಡಿದ್ದೆ
ಕಲ್ಲು ಹೊಡೆದು ಕೆಳಗೆ ಬೀಳಿಸಿದವರು ನೀವಲ್ಲವೇ
ಕಣ್ಣೀರ ಕಥೆಗೆ ಕಿವಿಯಾಗಿ ಮರುಗಿದ್ದೆ
ನನ್ನ ಕಣ್ಣೀರಿಗೆ ನೀವೇ ಕಾರಣವಾದಿರೇಕೆ
ತಪ್ಪಲಿಯ ಭಾವದಲು ಹಬ್ಬಿ ಬೆಳೆವೆ
ಬೆಳೆಸಿದವರ ಅಡಿಯಲ್ಲಿ ಕುಡಿ ಚಾಚುವೆ
0303ಪಿಎಂ18062024
ಅಪ್ಪಾಜಿ ಅಮು ಮುಸ್ಟೂರು
ಬೆಳದಿಂಗಳ ಚೆಲ್ಲಿದ ರಾತ್ರಿಯಲಿ
ತಂಗಾಳಿಯು ತೀಡುವ ಹೊತ್ತಿನಲ್ಲಿ
ಮತ್ತೇರಿಸುವಂತೆ ಕಾಡಿತ್ತು ನಿನ್ನ ನೆನಪು
ಮಿನುಗುವ ಚುಕ್ಕಿಗಳ ಜೊತೆಯಲಿ
ತೇಲುವ ಮೋಡಗಳ ಮರೆಯಲಿ
ಕಣ್ಣ ಮುಚ್ಚಾಲೆ ಆಡುತ್ತಿತ್ತು ನಿನ್ನ ನೆನಪು
ಹುಣ್ಣಿಮೆ ಸುರಿವ ತಣ್ಣನೆ ಹೊತ್ತು
ನೈದಿಲೆ ಅರಳಿ ಘಮಘಮ ಘಮ್ಮತ್ತು
ಆವರಿಸಿ ಮೈ ಮರೆಸಿತು ನಿನ್ನ ನೆನಪು
ಆಷಾಢದ ಗಾಳಿಯ ಬಿರುಸು
ಬಯಸಿದರು ಬಾರದ ಮಳೆಯ ಮುನಿಸು
ಬರಡಾದ ಎದೆಗೆ ನಾಲ್ಕು ಹನಿ ನಿನ್ನ ನೆನಪು
ಒಂಟಿ ಪಯಣಕ್ಕೆ ಇಲ್ಲ ಆಸರೆ
ಸಂಪೂರ್ಣ ನಾನೀಗ ನಿನ್ನ ಕೈಸೆರೆ
ಋತುಗಳು ಜಾರುವಂದದಿ ನಿನ್ನ ನೆನಪು
ತಲ್ಲಣಿಸುವ ಮನಸ ಸಂತೈಸಿ
ಏಕಾಂತಕ್ಕೆ ಸಂಗಾತಿಯ ಜೊತೆ ಏರಿಸಿ
ತಂಪಿರುಳಿಗೆ ಮುದ ತಂತು ನಿನ್ನ ನೆನಪು
ಎಲ್ಲೆಲ್ಲೋ ಹುಡುಕುವ ಅಗತ್ಯವಿಲ್ಲ
ನನ್ನೊಳಗೆ ಅವಿತಿರುವೆ ನೀನೆ ಎಲ್ಲ
ನಡುರಾತ್ರಿ ಮೀರಿದರು ಇನ್ನು ಗಡುವಿದೆ
ಅಂತರಂಗದ ಭಾವ ವಿಹಾರಿಗೆ
ನವನವೋನ್ಮೇಶ ಶಾಲಿನಿ
ನಂಬಿಕೆಯ ನಂದಾದೀಪ ನಿನ್ನ ನೆನಪು
೧೦೧೭ಪಿಎಂ೨೦೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*
ಹುಣ್ಣಿಮೆ ಚಂದ್ರನ ಹೊಳಪು
ಹರೆಯದ ಹೆಣ್ಣಿನ ಒನಪು
ನೋಡಲು ಕಣ್ಣಿಗೆ ಹಬ್ಬ
ತಂಗಾಳಿಯ ಸ್ಪರ್ಶದ ಹಿತ
ತಣ್ಣನೆ ಹೊತ್ತಿನ ಸಂಗೀತ
ವರ್ಣಿಸಲು ಸಿಗುತ್ತಿಲ್ಲ ಶಬ್ದ
ಪ್ರೀತಿಸೋ ಹೃದಯಕೆ ಇನ್ನೇನು ಬೇಕು
ನಿತ್ಯವೂ ಇಂತಹ ಘಳಿಗೆಯೊಂದು ಸಾಕು
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಬದುಕಲು
ಎದೆಯ ಭಾವಕೆ ಹದವಾದ ಸನ್ನಿವೇಶ
ಒಲವ ಜೀವದ ಮಿದುವಾದ ಉಪದೇಶ
ಇಷ್ಟೇ ಸಾಕು ಬದುಕನ್ನು ಬದುಕಿಗಾಗಿ ಬದುಕಲು
ಚಂದ್ರನಿಗೆ ಚುಕ್ಕಿಗಳ ಸ್ನೇಹ ದೊರೆತಂತೆ
ನನಗಾಗಿ ಮೀಸಲಿದೆ ನಿನ್ನೊಡನಾಟವಂತೆ
ಸಾಗರ ನಾನು ತೀರ ನೀನು ಬೇಡ ಇನ್ನೇನು
ಹಕ್ಕಿಯಂತೆ ಹಾರುತಿದೆ ಮನಸ್ಸು
ಅಲ್ಲಿ ಕಳೆದೋಯ್ತು ವಯಸ್ಸು
ಕಳೆದುಕೊಂಡೆ ಅಲ್ಲಿ ನಾನು ನನ್ನನ್ನು
೧೦೪೧ಪಿಎಂ೨೨೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*
ಮಾತು ಕೂಡ ಮೌನವಾಯಿತು
ಪ್ರೀತಿ ಅಲ್ಲಿ ಜ್ಯೋತಿಯಾಯ್ತು
ಹೃದಯದಲ್ಲಿ ಕತ್ತಲೆ ಮಾಯವಾಯಿತು
ಮೌನ ಕೂಡ ಮೌನ ತಡೆಯಿತು
ಹೃದಯಗಳ ಮಾತಿಗೆ ಕಿವಿಯಾಯಿತು
ಪ್ರೀತಿಯ ಸಂದೇಶಕ್ಕೆ ವಶವಾಯಿತು
ತುಸು ಸಣ್ಣ ಕಲಹ ತಂದ ವಿರಹ
ಹೃದಯದೊಳಗೆ ಬೇರೆನಿಲ್ಲ ಪ್ರೀತಿ ವಿನಹ
ಬದುಕಿನ ಏರಿಳಿತಕ್ಕೆ ಅದುವೇ ಸಂಗೀತ
ಅಕ್ಕರೆಯ ಮಾತುಗಳು ಬಿರುಸಾದ ಕಾರಣ
ಅಲ್ಲಿ ಬಾಡುವುದಲ್ಲವೇ ಪ್ರೀತಿಯ ತೋರಣ
ಭೂಮಿ ಬಾನು ಒಂದಾಗಿಸಿದ ದಿಗಂತ
ಹೃದಯ ಹಿಂಡುವಷ್ಟು ನೋವಿರಲಿ
ನೋವಿನ ಉಪಶಮನಕ್ಕೆ ಮೌನವಿರಲಿ
ದಾಂಪತ್ಯದ ಈ ಅನುಸಂಧಾನದಲ್ಲಿ
ಏರಿಗೆ ನೀರಿಗೆ ಎಳೆಯದಂತೆ ಬಂಡಿಗೆ
ಒಲವ ಕೀಲು ಭದ್ರವಿರಲಿ ಕೊನೆಗೆ
ಒಮ್ಮನದಿ ಖುಷಿಯ ಹಾದಿ ಸವೆಸಲಿ
ನಾನೆಂಬ ಅಹಮಿನ ರಾಜ್ಯವನ್ನು
ನಾವೆಂಬ ಬಂಧ ಆಳಲಿ
ಈ ಪ್ರೀತಿಯ ದರ್ಬಾರಿನಲ್ಲಿ
ಮೌನ ಮಾತಾಗಿ ಮಾತು ಮೌನವಾಗಿ
ಕ್ಷಣ ಕ್ಷಣವೂ ಅನುಸರಣೆಯಲ್ಲಿ ಸಾಗಿ
ಬಾಳ ಸಂಪುಟ ಸಮೃದ್ಧಿಯಗೊಳ್ಳಲಿ
೧೧೦೯ಪಿಎಂ೨೨೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*
*ತನಗ*
ಪದಕ್ಕೆ ಹೊಳಪಿಲ್ಲ
ಲೇಖನಿ ಹಿಡಿದಿಲ್ಲ
ಪ್ರೀತಿ ಸ್ಪರ್ಶವಿರದೆ
ಕಾವ್ಯಕ್ಕೆ ಜೀವವಿಲ್ಲ
೧೧೧೪ಪಿಎಂ೨೨೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*