*ಭ್ರಮೆಯಿಂದ ಆಚೆ ಬನ್ನಿ*
ಸಾಮಾಜಿಕ ಜಾಲತಾಣ ಮಾಧ್ಯಮದ ದುರ್ಬಳಕೆಯಿಂದ ಅದೆಷ್ಟೋ ಜೀವಗಳು ಅಪಾಯಕ್ಕೆ ಸಿಲುಕಿವೆ. ಅದೆಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಕೆಲವರಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಇರುವುದೇ ಒಂದು ವಾಸ್ತವದಲ್ಲಿ ತಾವೇರುವುದೇ ಒಂದು. ಅದರ ಆಕರ್ಷಣೆಗೆ ಬಲಿಯಾಗಿ ಅದೆಷ್ಟೋ ಅಮಾಯಕ ಯುವಕ ಯುವತಿಯರು ನಂಬಿ ಮೋಸ ಹೋಗಿದ್ದುಂಟು. ಅಂತಹ ನೂರಾರು ಘಟನೆಗಳು ಸನ್ನಿವೇಶಗಳು ಪ್ರತಿನಿತ್ಯ ನಡೆಯುತ್ತಿದ್ದರು ಅದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದೇವೆ. ಇದರಲ್ಲಿ ಉಪಯೋಗಕ್ಕಿಂತ ಅಪಾಯವೇ ಪ್ರಧಾನವಾಗಿರುತ್ತದೆ. ಆದರೆ ಅದು ತಮ್ಮ ಅರಿವಿಗೆ ಬಂದಾಗ ಮಾತ್ರ ಅದು ಕೆಡುಕು ಎಂದು ಗೊತ್ತಾಗುತ್ತದೆ. ಬೇರೆ ಸಮಯಗಳಲ್ಲಿ ಅದರ ಪ್ರಬಂಧ ಬಾಹುಗಳಲ್ಲಿ ಬಂಧಿಯಾಗಿ ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತು ತಾವು ಮಾಡುತ್ತಿರುವುದೇ ಸರಿ ಎಂಬಂತೆ ನಡೆದುಕೊಳ್ಳುತ್ತಾರೆ. ಕೊನೆಗೆ ತಾವು ಮೋಸ ಹೋದಾಗ ಅಥವಾ ಮೋಸ ಹೋಗುತ್ತಿದ್ದೇವೆ ಎಂದು ಗೊತ್ತಾದಾಗ ಕೆಲವರು ಅದರಿಂದ ಹೊರಬರಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಮತ್ತೆ ಕೆಲವರು ತಮ್ಮ ಹೊಸ ಬಾಂಧವ್ಯಗಳ ಹಸಿ ಬಿಸಿ ದಾಖಲೆಗಳನ್ನು ಇಟ್ಟುಕೊಂಡು ಹೆದರಿಸುವ ಹಣ ಮಾಡುವ ದಂಧೆಯಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಹೆದರಿಸುವ ಬರದಲ್ಲಿ ತಮ್ಮ ತಮ್ಮಗಳ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಎದುರಾಳಿ ಪ್ರಬಲವಾಗಿದ್ದರೆ ತಾವೇ ಬಲಿಯಾಗುತ್ತಾರೆ. ಎದುರಾಳಿ ದುರ್ಬಲವಾಗಿದ್ದರೆ ಬಲಿ ಹಾಕುತ್ತಾರೆ.
ಜೀವನ ಬಹಳ ವಿಶಾಲವಾಗಿದೆ ಅಷ್ಟೇ ಅಲ್ಲ ಅತ್ಯಂತ ಮಹತ್ವಪೂರ್ಣವಾದದ್ದು ಆಗಿದೆ. ಜೀವನದಲ್ಲಿ ನಮ್ಮನ್ನು ನಂಬಿಕೊಂಡು ಹತ್ತಾರು ಜನ ಬದುಕುತ್ತಿರುತ್ತಾರೆ. ಅವರೆಲ್ಲರ ಯೋಗಕ್ಷೇಮವನ್ನು ಮರೆತು ಯಾವುದೋ ಕಾಣದ ಮೋಸದ ಜಾಲದಲ್ಲಿ ಸಿಲುಕಿ ಒದ್ದಾಡುತ್ತಾ ಅದರಿಂದ ಹೊರಬರಲಾಗದೆ ಅದನ್ನು ಎದುರಿಸಲು ಆಗದೆ ಅನ್ಯ ದಾರಿಗಳನ್ನು ಹಿಡಿದು ಇಡೀ ಬದುಕನ್ನೇ ಸರ್ವನಾಶ ಮಾಡಿಕೊಂಡುಬಿಡುತ್ತಾರೆ. ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಇರುವವರೆಲ್ಲ ಒಳ್ಳೆಯವರು ಅಲ್ಲ ಕೆಟ್ಟವರು ಅಲ್ಲ. ಈ ಸತ್ಯವನ್ನು ಅರಿತುಕೊಂಡು ನಮ್ಮ ಪಾಡಿಗೆ ನಾವು ಅದನ್ನು ವಿವೇಚನೆಯಿಂದ ಬಳಸಿದಾಗ ಮಾತ್ರ ಅದರಿಂದ ಎದುರಾಗ ಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಆದರೆ ಈ ಮಾಯಾವಿಯ ಬಲೆಗೆ ಸಿಲುಕಿದ ಯಾರೂ ಕೂಡ ವಾಸ್ತವದ ಬಗ್ಗೆ ಎಚ್ಚರ ವಹಿಸದೆ ಕೇವಲ ಆ ಮಾಯಾಜಾಲದ ಮೂಡಿಗೆ ವಶವಾಗಿ ತಮ್ಮತನವನ್ನೇ ಕಳೆದುಕೊಂಡು ತಮ್ಮ ಸುಖವನ್ನು ನಾಶ ಮಾಡಿಕೊಂಡು ಇತರರ ಎದುರು ತಾನೇ ಸರ್ವ ಶ್ರೇಷ್ಠ ಎಂದು ತೋರಿಸಿಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿ ಹೊರಬರುವ ಉಪಾಯವಿಲ್ಲದೆ ನರಳಿ ನರಳಿ ಖಿನ್ನತೆ ಒಳಗಾಗಿ ಬದುಕಿನ ಸವಿಯನ್ನೇ ಕಳೆದುಕೊಂಡು ಬಿಡುತ್ತಾರೆ.
ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಭಾಗಿಯಾಗಿರುತ್ತಾರೆ. ಅವರವರ ಪ್ರವೃತ್ತಿಗಳಿಗನುಸಾರವಾಗಿ ಸಮಾನ ಮನಸ್ಕರ ಗುಂಪುಗಳನ್ನು ಮಾಡಿಕೊಂಡು ಅದರ ಮೂಲಕ ಪರಸ್ಪರ ಪರಿಚಿತರಾಗಿರುತ್ತಾರೆ. ಆದರೆ ಕೆಲವೊಂದು ಬಾರಿ ಅವರನ್ನು ನಿಜವಾಗಿಯೂ ಒಮ್ಮೆಯೂ ಭೇಟಿಯಾಗದಿದ್ದರೂ ಕೂಡ ಅತ್ಯಂತ ಆತ್ಮೀಯತೆಯಿಂದ ತನ್ನೆಲ್ಲ ಭಾವನೆಗಳನ್ನು ಹಂಚಿಕೊಂಡು ಕಲ್ಪನಾ ಲೋಕದಲ್ಲಿ ವಿವರಿಸುತ್ತಿರುತ್ತಾರೆ. ಅವರಿಗೂ ಸಂಸಾರಗಳಿರುತ್ತವೆ, ಇವರಿಗೂ ಸಂಸಾರಗಳಿರುತ್ತವೆ, ಆದರೂ ಈರ್ವರು ಹೊಸ ಜೋಡಿಗಳಾಗಿ ಹೊಸತನದ ಮೋಡಿಯೊಳೆಗೆ ಸಿಲುಕಿ ತಮ್ಮತನವನ್ನೇ ಕಳೆದುಕೊಂಡು ಮೋಸ ಹೋಗಿಬಿಡುತ್ತಾರೆ. ಪರಸ್ಪರ ಭೇಟಿಯಾಗಲು ಸಾಧ್ಯವಿಲ್ಲದ ಒಟ್ಟಿಗೆ ಬದುಕಲು ಅಸಾಧ್ಯವಾದ ಈ ಕಪೋಲ ಕಲ್ಪಿತ ಮಿಥ್ಯ ಜಗತ್ತಿನಲ್ಲಿ ಸತ್ಯದ ಅರಿವಿಲ್ಲದೆ ನಿತ್ಯ ವ್ಯರ್ಥ ಆಕರ್ಷಣೆಗೆ ತಮ್ಮನ್ನೇ ತಾವು ಅರ್ಪಿಸಿಕೊಂಡು ಕಳೆದು ಹೋಗಿಬಿಡುತ್ತಾರೆ. ಕೊನೆಗೊಂದು ದಿನ ಇದು ಒಬ್ಬರಿಗೊಬ್ಬರು ಮಾಡಿಕೊಂಡ ಮೋಸ ಎಂದು ಗೊತ್ತಾದ ಕೂಡಲೇ ಪ್ರಬಲರಾದವರು ತನ್ನವರ ಪ್ರಾಬಲ್ಯದಿಂದ ಹೆದರಿಸಿ ಬೆದರಿಸಿ ದೂರವಿಡುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಪೊಲೀಸು ಕೇಸು ಎಂದೆಲ್ಲ ಹೋಗಿ ಸಾಕ್ಷಿಗಳ ಆಧಾರದ ಮೇಲೆ ಸಂಕಷ್ಟಕ್ಕೆ ಸಿಲುಕಿ ನಿಜವಾಗಿಯೂ ತನ್ನನ್ನು ನಂಬಿದವರಿಗೆ ಅನ್ಯಾಯ ಮಾಡಿ ತಾವು ಸಹ ಸಮಾಜದಲ್ಲಿ ಛೀಮಾರಿಗೆ ಗುರಿಯಾಗಿ ಮುಖ ತೋರಿಸಲು ಆಗದೆ ಬದುಕಲು ಆಗದೆ ಅಪಾಯಗಳನ್ನು ತಂದೊಡ್ಡಿಕೊಂಡು ಜೀವನದ ಮಧ್ಯೆ ಎಲ್ಲ ತೊರೆದು ಹೊರಟು ಹೋಗಿಬಿಡುತ್ತಾರೆ.
ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಆ ಬಾಲ ವೃದ್ಧರಾಧಿಯಾಗಿಯೂ ವಾಸ್ತವವನ್ನು ಮರೆಮಾಚಿ ಕಲ್ಪನಾ ಲೋಕದಲ್ಲಿ ತಮಗೆ ಹೇಗೆ ಬೇಕೋ ಹಾಗೆ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಮಾರುಹೋದ ವ್ಯಕ್ತಿಗಳೊಡನೆ ಸಂಬಂಧಗಳನ್ನು ಬೆಳೆಸಿಕೊಂಡು ಅದುವೇ ಮಹತ್ ಸಾಧನೆ ಎಂಬಂತೆ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಬಿಂಬಿಸಿಕೊಂಡು ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಎಷ್ಟೇ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದರೂ ಒಂದಲ್ಲ ಒಂದು ದಿನ ಅದು ಬಟಾ ಬಯಲಾಗಿ ವ್ಯಕ್ತಿಗಳ ಮಧ್ಯೆ ಬಿರುಕು ಉಂಟಾಗಿ ಆ ಮಾಧ್ಯಮದಲ್ಲಿ ಗಲಾಟೆಗಳು ನಡೆಯುತ್ತವೆ. ಅದರ ಆಚೆಗೂ ಅವರಿರುವ ಕಡೆ ಹುಡುಕಿ ಬಂದು ಹೊಡೆದು ಬಡಿದು ಹೆದರಿಸುವ ಅದಕ್ಕೂ ಮೀರಿ ಜೀವಗಳನ್ನೆ ತೆಗೆಯುವ ಕ್ರೌರ್ಯ ಮೆರೆಯುತ್ತಾರೆ. ಇಲ್ಲಿ ತಪ್ಪು ಒಪ್ಪುಗಳಿಗಿಂತ ಯಾರು ಸಂತ್ರಸ್ತರು ಎಂಬುದನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವಾದಂತಹ ಒಂದು ವಿಷ ವರ್ತುಲದಲ್ಲಿ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಾರೆ. ಕೆಲವರು ತಮ್ಮ ಸಂಸಾರದ ವಿಫಲತೆಗಳನ್ನು ಈ ಹೊಸ ಸಂಬಂಧಗಳಲ್ಲಿ ಕಾಣಲು ಹಾತೊರೆಯುತ್ತಾರೆ. ಅದಕ್ಕಾಗಿ ತನ್ನದೆಲ್ಲವನ್ನು ಬಿಚ್ಚಿಡುವ ಕೊಟ್ಟು ಕೊಳ್ಳುವ ಬಯಸಿದ್ದನ್ನು ಪಡೆದುಕೊಳ್ಳಲು ಬಣ್ಣದ ಮಾತುಗಳನ್ನು ಆಡುವ ಮೂಲಕ ಪರಸ್ಪರರು ಕಳೆದು ಹೋಗಿಬಿಟ್ಟಿರುತ್ತಾರೆ. ತಮ್ಮ ತಮಗೆ ಬೇರೆ ಬೇರೆಯದ್ದೆ ಬದುಕಿದ್ದರೂ ಕೂಡ ಇಲ್ಲಿ ಪರಿಚಿತರಾದವರೇ ತಮ್ಮ ಇಡೀ ಬದುಕಿನ ಅವಿಭಾಜ್ಯ ಅಂಗವಾಗಿ ತಮ್ಮ ಸರ್ವಸ್ವವನ್ನು ಕೊಟ್ಟುಕೊಳ್ಳುವ ಒಬ್ಬರಿಗಾಗಿ ಇನ್ನೊಬ್ಬರು ಎಂಬಂತೆ ಬಿಂಬಿಸಿಕೊಂಡು ಆ ಭ್ರಮೆಯಲ್ಲಿ ತೇಲುತ್ತಿರುತ್ತಾರೆ. ಇವರ ಈ ಆಟಗಳು ಸಂಬಂಧಪಟ್ಟವರಿಗೆ ತಿಳಿದ ಕೂಡಲೇ ಅವರು ತಾಳ್ಮೆಯನ್ನು ಕಳೆದುಕೊಂಡು ಮಾನವೀಯತೆಯನ್ನು ಮರೆತು ಅಕ್ಷರಶಃ ಮೃಗಗಳಾಗಿ ದಾಳಿ ಮಾಡಿ ದೌರ್ಜನ್ಯ ಮಾಡುತ್ತಾರೆ. ಇಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಗೋಜಲಿಗೆ ಯಾರು ಹೋಗುವುದಿಲ್ಲ. ಬದಲಾಗಿ ತಾವು ಕಂಡದ್ದೇ ಸತ್ಯ ಎಂದು ನಂಬಿ ಅದನ್ನೇ ಸಾಧಿಸಲು ಸಾಬೀತುಪಡಿಸಲು ಬೇಕಾದ ಎಲ್ಲ ಆಯಾಮಗಳನ್ನು ಬಳಸಿಕೊಂಡು ಕ್ರೌರ್ಯ ಹಿಂಸೆಗಳ ಮೊರೆ ಹೋಗಿ ಕಾನೂನನ್ನು ಕೈಗೆ ತೆಗೆದುಕೊಂಡು ಕೊನೆಗೆ ಈರ್ವರನ್ನು ನಾಶ ಮಾಡಿ ತಾವು ಕಾನೂನಿನ ಚೌಕಟ್ಟಿನಲ್ಲಿ ಬಂದ್ಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ.
ಪ್ರಜ್ಞಾವಂತರದ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳನ್ನು ತುಂಬಾ ಜವಾಬ್ದಾರಿಯಿಂದ ತಮಗೆಷ್ಟು ಬೇಕೋ ಅಷ್ಟಕ್ಕೆ ತಮ್ಮ ಜ್ಞಾನದ ವೃದ್ಧಿಗೆ ತಮ್ಮ ಏಳಿಗೆಗೆ ಬಳಸಿಕೊಂಡು ಅದರಿಂದ ಬದುಕನ್ನು ಹಸನು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದಾಗ ಮಾತ್ರ ಸಾಮಾಜಿಕ ಜಾಲತಾಣ ಒಂದು ಅಗಾಧ ಅವಕಾಶಗಳನ್ನು ತೆರೆದಿಡುತ್ತದೆ. ಯಾವುದೋ ಮೂಲೆಯಲ್ಲಿರುವ ನಾವು ಜಗತ್ತಿನ ಎಲ್ಲಾ ಜನರ ಅಂಗೈಮೇಲೆ ನಮ್ಮ ಸಾಧನೆಯನ್ನು ಪ್ರಚುರಪಡಿಸಿ ಅದರಿಂದ ನಮ್ಮ ನಮ್ಮ ಉನ್ನತಿಯನ್ನು ಕಂಡುಕೊಳ್ಳಬಹುದು. ಅದನ್ನು ಬಿಟ್ಟು ಇತರರ ಬದುಕಿನಲ್ಲಿ ಹೋಗಿ ಅದನ್ನು ಹಾಳು ಮಾಡುವ ಅದರಿಂದ ಪೈಶಾಚಿಕ ಖುಷಿಯನ್ನು ಅನುಭವಿಸುವ ದುರುಳತನವನ್ನು ಯಾರು ಮಾಡಬಾರದು. ಆದರೆ ಇಂದಿನ ಸಾಮಾಜಿಕ ಜಾಲತಾಣ ಮಾಧ್ಯಮವು ಒಳ್ಳೆಯದಕ್ಕಿಂತಲೂ ಕೆಟ್ಟದ್ದರಿಂದಾಗಿಯೇ ಹೆಚ್ಚು ಹೆಚ್ಚು ಪ್ರಚಲಿತದಲ್ಲಿದೆ. ಸಂಬಂಧ ಪಡೆದ ವಿಚಾರಗಳಿಂದಲೇ ಅದೆಷ್ಟೋ ಜೀವಹಾನಿ ಮಾನಹಾನಿ ಅಷ್ಟೇ ಅಲ್ಲ ಆಸ್ತಿಪಾಸ್ತಿಗಳ ಹಾನಿ ಉಂಟಾಗಿ ಇಡೀ ಸಮಾಜವೇ ನಿಬ್ಬೆರಗಾಗುವಂತೆ ಮಾಡುತ್ತಿರುವುದು ಇಂದಿನ ದುರಂತವೇ ಸರಿ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದುದೆಲ್ಲ ಸತ್ಯವೂ ಅಲ್ಲ ನಿತ್ಯವೂ ಅಲ್ಲ. ಅದನ್ನು ಪರಾಮರ್ಶಿಸುವ ಅದರ ಸತ್ಯಾಸತ್ಯತೆಗಳನ್ನು ಅರ್ಥ ಮಾಡಿಕೊಂಡು ತಮಗೆ ಎಷ್ಟಕ್ಕೆ ಬೇಕೋ ಅಷ್ಟನ್ನು ಮಾತ್ರ ಬಳಕೆ ಮಾಡಿಕೊಂಡಾಗ ಎಲ್ಲರ ಬದುಕು ಹಸನಾಗುತ್ತದೆ. ಇಲ್ಲದೆ ಹೋದರೆ ಬೇರೊಬ್ಬರ ಬದುಕಿನಲ್ಲಿ ಇಣುಕಿ ನೋಡುವ ಅವರ ಸ್ವಚ್ಛಂದ ಬದುಕನ್ನು ಕದಡುವ ಬೇಕೋ ಬೇಡವೋ ಅವರಿಗೆ ತೊಂದರೆ ಕೊಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಅದೆಷ್ಟೋ ಸ್ವಾರ್ಥಿಗಳ ಮಾತುಗಳಿಗೆ ಕಿವಿ ಕೊಡಬಾರದು.
ಆಧುನಿಕ ಜಗತ್ತಿನ ಕ್ರಾಂತಿಯಾದ ಈ ಮಾಧ್ಯಮಗಳನ್ನು ಅತ್ಯಂತ ಎಚ್ಚರಿಕೆಯಿಂದ ಜವಾಬ್ದಾರಿಯಿಂದ ಅದರ ಸಂಪೂರ್ಣ ಆಗುಹೋಗುಗಳನ್ನು ಅರ್ಥ ಮಾಡಿಕೊಂಡು ಬದುಕು ರೂಪಿಸಿಕೊಳ್ಳುವ ವೇದಿಕೆಯನ್ನಾಗಿ ಮಾಡಿಕೊಳ್ಳುವ ಚಾಕ ಚಕ್ಯತೆ ಬಳಸುವ ಪ್ರತಿಯೊಬ್ಬರಲ್ಲೂ ಬರಬೇಕಾಗಿರುವುದು ಇಂದಿನ ಜರೂರಾಗಿದೆ. ಸೈಬರ್ ಅಪರಾಧಗಳು ಎಂಬ ಅಣೆಪಟ್ಟಿಗೆ ನಾವು ಕೊಡುಗೆ ನೀಡುವ ಬದಲು ಅಪರಾಧಗಳು ಮೊಳೆಕೆಯೊಡೆಯದಂತೆ ಬೆಳೆಯದಂತೆ ಬಳಕೆ ಮಾಡಿಕೊಂಡು ಇರುವ ಮೂರು ದಿನದ ಬದುಕನ್ನು ಸ್ವಚ್ಛಂದವಾಗಿ ಹರಿಯ ಬಿಡುವ ಬದಲು ಒಂದು ಬೇಲಿಯಲ್ಲಿ ಕಟ್ಟಿ ಹಾಕಿಕೊಂಡು ಗುರಿ ಮುಟ್ಟಿ ಸಾರ್ಥಕ ಜೀವನದ ಪಾಠವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಜವಾಬ್ದಾರಿ ನಮ್ಮೆಲ್ಲರದಾಗಿರುತ್ತದೆ. ಬದುಕಿನ ಪ್ರೀತಿ ನಮ್ಮೆಲ್ಲರನ್ನು ವಾಸ್ತವದಲ್ಲಿ ಬದುಕಿಸಿ ಬೆಳೆಸಿ ಉಳಿಸುವ ಕೆಲಸ ಮಾಡಬೇಕು. ಭ್ರಮೆಯಲ್ಲಿ ತೇಲಿಸಿ ಮುಳುಗಿಸುವ ಇಂತಹ ಮಾಧ್ಯಮಗಳಿಂದ ಆದಷ್ಟು ದೂರವಿದ್ದು ನಮ್ಮ ನಮ್ಮ ಬದುಕುಗಳನ್ನು ನಮ್ಮ ಹತ್ತಿರದವರ ನಮ್ಮ ಒಡನಾಡಿಗಳ ನಮಗೆ ಜೀವ ಕೊಟ್ಟವರ ನಮ್ಮ ಜೀವನದಲ್ಲಿ ನಮ್ಮನ್ನೇ ನಂಬಿಕೊಂಡು ಬಂದವರ ಸುಖ ಶಾಂತಿ, ನೆಮ್ಮದಿಗಾಗಿ ಅವರೇ ಹೇಳಿಗಾಗಿ ನಮ್ಮ ಬದುಕು ಅತ್ಯಂತ ಉಪಯುಕ್ತವಾಗಿ ಉಳಿಯುವಂತೆ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಆ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಿ ಯೋಚಿಸಿ ಪ್ರಜ್ಞಾ ಪೂರ್ವಕವಾಗಿ ಬಳಸುವ ಮೂಲಕ ಸಿಕ್ಕ ಮೂರು ದಿನದ ಬದುಕನ್ನು ಮುಕ್ಕಾಗಲು ಬಿಡದಂತೆ ಎತ್ತರಕ್ಕೆ ಕೊಂಡೊಯ್ಯುವ ಆಶಯದೊಂದಿಗೆ ನಾವೆಲ್ಲ ಬದುಕಿ ಬಾಳೋಣ.
1113ಪಿಎಂ11062024
*ಅಪ್ಪಾಜಿ ಅಮು ಮುಸ್ಟೂರು*
No comments:
Post a Comment