ದಾರಿ ದೂರ ಸವೆಯತಿಹುದು
ಒಲವ ಹಾದಿ ನೆರಳಲ್ಲಿ
ನನ್ನ ನಿನ್ನ ಬಂಧವಿದು
ಅನುಬಂಧವಾಯಿತು ಬಾಳಿನಲ್ಲಿ
ಎದೆಗೆ ಒರಗಿ ಕೂತರೆ
ಎಲ್ಲ ನೋವಿಗೆ ಆಸರೆ
ಪ್ರೀತಿಯ ಜೀವ ನೀನು ನನಗೆ
ಈ ಬಾಂಧವ್ಯ ಬೆಸೆದ ಬೆಸುಗೆ
ತೋಳುಗಳು ಬಳಸಿ ನಿಂತು
ಆಪ್ತವಾಗಿದೆ ಜೀವನ
ತೊಂದರೆಗಳೇನೇ ಬಂದರು
ಕಳಚಲಾರದು ಈ ಬಂಧನ
ಈ ಬದುಕಿಗೆ ಜೊತೆಯಾದೆ
ನನ್ನೊಲವಿನ ಕಥೆಯಾದೆ
ಅಂತರಂಗದ ಭಾವಗಳಿಗೆ
ಪ್ರತಿಬಿಂಬದ ರೂಪ ನೀನಾದೆ
ಹದವಾಗಿ ನೆನೆದ ಒಲವ ಭೂಮಿಗೆ
ಅನುರಾಗದ ಬೀಜ ಬಿತ್ತು ಬಾ
ಸುಖದ ಮಳೆಗರೆದು ಫಲಿಸಲಿ ಫಸಲು
ಒಲವ ಜೀವಗಳಿಲ್ಲಿ ಒಂದಾಗಿರಲು
ಎಲ್ಲೋ ಇದ್ದವರ ಸೇರಿಸಿದ ಬದುಕು
ಸಂತೃಪ್ತಿಯ ತಂದಿದೆ ಎಲ್ಲ ಕಾಲಕ್ಕೂ
ಸಂಗಾತಿ ನೀನಾಗಿ ಸಂಪ್ರೀತಿ ಹರಿಸಿದೆ
ಸಹಬಾಳ್ವೆಗೆ ಹೊಸ ಬಾಷ್ಯ ಬರೆದು
೦೫೪೬ಎಎಂ೨೮೦೪೨೦೨೪
*ಅಮು ಭಾವಜೀವಿ ಮುಸ್ಟೂರು*
ಮೂಡಣದ ಕೆಂಪಂತೆ
ತಂಗಾಳಿಯ ತಂಪಂತೆ
ಕೋಗಿಲೆಯ ದನಿ ಇಂಪಂತೆ
ಮನಕ್ಕೆ ಮುದ ನೀಡಿದೆ ನಿನ್ನ ನೆನಪು
ಮೊಗ್ಗು ಅರಳಿ ನಲಿವಾಗ
ತುಂಬಿ ಹಾಡಿಗೆ ತಲೆದೂಗಿ
ಆನಂದದ ಜೇನು ಇರುವಾಗ
ಹೃದಯ ಬಡಿತ ಹೆಚ್ಚಿಸಿತು ನಿನ್ನ ನೆನಪು
ಬಿರು ಬೇಸಿಗೆಯಲ್ಲಿ ನೆರಳಂತೆ
ಬಾಯಾರಿದ ಜೀವಕ್ಕೆ ಹನಿ ನೀರಂತೆ
ಸೋತ ಜೀವಕ್ಕೆ ಸ್ಪೂರ್ತಿ ತುಂಬುವಂತೆ
ಸದಾ ಜೀವ ಚೇತನ ನಿನ್ನ ನೆನಪು
ಹರಿಯುವ ನೀರ ಹೊಸತನ
ಗುಡುಗು ಮಿಂಚಿನ ಗೆಳೆತನ
ಮುಂಗಾರು ಮಳೆ ಸಿಂಚನ
ಎದೆಯ ತಣಿಸುವ ನಿನ್ನ ನೆನಪು
ಬಿಟ್ಟೆನೆಂದರೂ ಬಿಡದ ಸೋನೆಯಂತೆ
ದಟ್ಟಡವಿಯಲಿ ಸಾಗುವ ಹಾದಿಯಂತೆ
ಸದಾ ಬೆಳಗುತಿರುವ ನಂದಾದೀಪದಂತೆ
ಹೃದಯದ ಸಂವೇದನೆ ಈ ನಿನ್ನ ನೆನಪು
ಪ್ರೀತಿಯ ಹಂಬಲದಲ್ಲಿ ಬದುಕುವ
ಜೀವದ ಅನುಸಂಧಾನ ನಿನ್ನ ನೆನಪು
ವಶವಾದ ಎದೆಯ ಖುಷಿಯ
ಮಿದುವಾಗಿಸಿತು ಈ ನಿನ್ನ ನೆನಪು
೦೬೦೮ಎಎಂ೦೫೦೫೨೦೨೪
*ಅಮು ಭಾವಜೀವಿ ಮುಸ್ಟೂರು*
ದೂರುವವರು ದೂರುತಲೆ
ದೂರಬಿಟ್ಟರು ದಾರಿದ್ರ್ಯವಿದೆಯೆಂದು
ಹೃದಯದ ಭಾವಗಳ ಅವಮಾನಿಸಿ
ಎದೆಯ ನಂಬಿಕೆಗಳ ಚುಚ್ಚಿ ಕೊಂದರು
ಹೂವು ಅರಳಿದರೇನೇ ದುಂಬಿ ಬರುವುದು
ಸಕ್ಕರೆ ಚೆಲ್ಲಿದರೇನೇ ಇರುವೆ ಮುತ್ತುವುದು
ಬರಿ ಕೈಯಲ್ಲಿ ನೊಂದು ಬೆಂದವನೆದುರು
ಉಳ್ಳವರ ಅಟ್ಟಹಾಸ ಮಿತಿ ಮೀರುವುದು
ಎಡವಿ ಬಿದ್ದವನ ಎತ್ತದ ಜನ
ಚುಚ್ಚಿ ಚುಚ್ಚಿ ಮಾತನಾಡುವರು ದಿನ
ಮೆಚ್ಚುಗೆಯ ಮಾತಿಲ್ಲ ತುಚ್ಚಿಕರಿಸುವರು
ನೆಚ್ಚಿಕೊಂಡವರು ಹೆಜ್ಜೆ ದೂರ ಸರಿವರಾ ಕ್ಷಣ
ಬಡತನದ ಬೇಗೆಯಲ್ಲಿ ಬೆಂದು
ಚಿನ್ನವಾಗುವ ಹಂಬಲ ಸ್ವಾಭಿಮಾನದ್ದು
27 May 2024
ಆಡುವವರ ಮಾತುಗಳು ಅಡಕತ್ತರಿಯಲಿ ಸಿಕ್ಕಿದರೂ
ಎದ್ದು ಬಂದು ಗೆದ್ದು ತೋರುವ ಛಾತಿ ಬಡತನದ್ದು
ಆಡುವ ಒಂದೇ ಒಂದು ಮಾತು ತಪ್ಪಾಗುವುದು
ಬಡವನ ಗುಡಿಸಲ ಗೆದ್ದಲು ತಿನ್ನುವಂತೆ
ಆಡುವ ಮಾತುಗಳೆಲ್ಲ ಒಪ್ಪಿತವಾಗುವುದು
ಪ್ರಪಾತಕ್ಕೆ ಧುಮುಕುವ ಜಲಪಾತದಂತೆ
ಸೋತು ಬಿದ್ದಾಗ ಎತ್ತುವರು ಯಾರಿಲ್ಲ
ಹಣವೇ ಮಾನದಂಡ ಜನರಿಗೆಲ್ಲ
ದೂರವಿಟ್ಟರೇನಂತೆ ದಾರಿ ತಪ್ಪದೆ ನಡೆಯಬೇಕು
ನಕ್ಕವರೆದುರು ಗೆದ್ದು ನಿಂತು ತೋರಬೇಕು
10:36 ಪಿಎಂ 11052024
*ಅಮು ಭಾವಜೀವಿ ಮುಸ್ಟೂರು*
No comments:
Post a Comment