Sunday, June 17, 2018

ಕವನ

*ಎಣ್ಣೆ ಖಾಲಿಯಾದ ದೀಪ*

ಈ ಸಂಜೆ ಅದೇಕೋ ಕೆಂಪಾಗಿದೆ
ಅದೇನು ಬೇಸರವೋ ತಿಳಿಯದಾಗಿದೆ

ದಿನವೆಲ್ಲ ದುಡಿದು ದಣಿದು
ಮರಳುವಾಗ ಗೂಡಿಗೆ
ಇರುಳು ಆವರಿಸುವ
ಭಯವಿರುವುದೇನೋ ಅದಕೆ

ಹಗಲೆಲ್ಲ ಉರಿದ ಸೂರ್ಯನ
ಕೋಪ ಕೆಂಪಾಗಿ ಹರಡಿತೇನೋ
ಬಿರಿದ ಒಡಲಲ್ಲಿ ಎದ್ದ ಕೆಂಧೂಳು
ನಭಕೇರಿ ಹೀಗೆ ಕಂಡಿತೇನೋ

ಬುವಿಯ ಒಳಗೆ ಹಸಿರ ಕನಸಿದ್ದರೂ
ಕವಿವ ಕತ್ತಲೆಯ ಭೀತಿ ಮೂಡಿದೆ
ಚಿಗುರು ಮೂಡುವ ಮೊದಲೇ
ಹೆಸರು ಇರದೇ ಮರೆವು ಕಾಡಿದೆ

ನಿಸರ್ಗದ ನೀರವ ಮೌನ
ಮತ್ತೊಂದು ಹೊಸತಿಗಿರಬಹುದೇ ಧ್ಯಾನ
ಆದರೂ ಮುಸ್ಸಂಜೆಯ ಯಾನ
ಬೇಸರವು ಹಡೆದ ಕವನ

ಯಾರು ತಡೆವರೋ ಅದನು
ಏಕೆ ತಂದಿತೋ ಇದನು
ಬದುಕು ಈ ಸಂಜೆಯ ರೂಪ
ಚೇತನ ಎಣ್ಣೆ ಖಾಲಿಯಾದ ದೀಪ

0618ಪಿಎಂ13062018

*ಅಮು ಭಾವಜೀವಿ*

No comments:

Post a Comment