Friday, September 3, 2021

ಕವನ

ಈ ಬಾಳ ಪುಟದಲಿ
ಜಾಗವಿತ್ತು ಗರ್ಭದಲಿ
ಜಗಕ್ಕೆ ತಂದಳು ತಾಯಿ ಜನ್ಮ ನೀಡಿ
ಮರುಜನ್ಮ ಪಡೆದವಳು ಹೆರಿಗೆಯಲ್ಲಿ
ನೋವ ಸಹಿಸಿದಳು ಆ ಕ್ಷಣದಲ್ಲಿ
ಆನಂದಿಸಿದಳು ಮಗುವ ಮೊಗನೋಡಿ

ಏಳುಬೀಳಿನ ಬದುಕಿನಲ್ಲಿ
ಕಷ್ಟಗಳನ್ನೆಲ್ಲ ನುಂಗುತಲಿ
ಸುಖದ ಕೈತುತ್ತ ನೆಟ್ಟವಳು ತಾಯಿ
ಏನೇ ಬಂದರೂ ಎದೆಗುಂದದೆ
ಎದೆಗಪ್ಪಿದ ಕಂದನ ಕೈಬಿಡದೆ
ಎಲ್ಲ ಎದುರಿಸಿ ಗೆದ್ದವಳು ತಾಯಿ

ಎದೆ ಕಳಶದ ಅಮೃತ ಕುಡಿಸಿ
ಎಡೆಬಿಡದೆ ಮಗುವ ಮುದ್ದಿಸಿ
ಹಸಿವಾಗದಂತೆ ಬೆಳೆಸಿದಳು ಅಮ್ಮ
ಮಕ್ಕಳೆಲ್ಲರನ್ನೂ ಒಂದಾಗಿ ಕಾಣುವ
ಹಡೆದರೂ ಹಣೆಬರಹ ಬರೆಯಲಾಗದ ಜೀವ
ತೊಟ್ಟಿಲನ್ನು ತೂಗುತ್ತಾ ಬೆಳೆಸಿದಳು ಅಮ್ಮ

ಅನುಕ್ಷಣವೂ ಅನುದಿನವೂ ನಿನ್ನೊಲವೆ ಶ್ರೀರಕ್ಷೆ
ಈ ದೇಹ ಈ ಜೀವ ಜೀವನ  ನೀನಿತ್ತ ಭಿಕ್ಷೆ
ಹೇಗೆ ತೀರಿಸಲಿ ತಾಯೆ ನಿನ್ನ ಋಣವ
ಬದುಕಿರುವೆ ನಿನ್ನ ರಕ್ತದ ಕುರುಹಾಗಿ
ಬಾಳುತ್ತಿರುವೆ ನಿನ್ನುಸಿರ ಹೆಸರಾಗಿ
ಮರೆಯೆನು ಜನುಮದಲಿ ನಿನ್ನೀ ಒಲವ

೦೪೧೪ಪಿಎಂ೦೯೦೫೨೦೨೧
ಅಪ್ಪಾಜಿ ಎ ಮುಷ್ಟೂರು 

No comments:

Post a Comment