ಗಡಿಯಲ್ಲಿ ಎಡೆಬಿಡದೆ
ತಾಯಿಯ ಮಡಿಲೆಂದು
ಕಾಯುವ ನಿನ್ನ ಕಾಯಕಕ್ಕೆ
ಇದೆ ಸದಾ ನನ್ನ ಬೆಂಬಲ
ಹೆತ್ತವರ ಬಡತನಕ್ಕಿಂತ
ನೆತ್ತರ ಬಯಸುವ
ಶತ್ರುವಿನ ಎದೆಬಗೆಯುವ
ನಿನ್ನ ಪರಾಕ್ರಮವಿರಲಿ ಅಚಲ
ಗಡಿಯತ್ತ ನಿನ್ನ ಕಳುಹಿ
ನಾಡಲ್ಲಿ ನಾ ಚಿರವಿರಹಿ
ಪ್ರತಿಕ್ಷಣವೂ ನಿನ್ನದೇ ನೆನಪಿನಲಿ
ಕಾಲ ದೂಡುವೆ ನೀ ಬರುವಾಸೆಯಲಿ
ತಾಯಿನಾಡಿಗಾಗಿ ಮುಡಿಪು ನಿನ್ನ ಸೇವೆ
ತಬ್ಬಲಿಯಾದರು ಚಿಂತೆಯಿಲ್ಲ ಹೆಮ್ಮೆ ಪಡುವೆ
ವೀರತನದ ನಿನ್ನ ಧೀರ ನಡಿಗೆಗೆ
ವಿಜಯ ತಿಲಕವನಿಟ್ಟು ನಿನ್ನ ಹಾರೈಸುವೆ
ಸಮವಸ್ತ್ರದ ವಜ್ರಕವಚದ ಧರಿಸಿ
ಪರಾಕ್ರಮದ ಆಯುಧಗಳ ಮುಂದಿರಿಸಿ
ಮುನ್ನುಗ್ಗುವ ಗುಂಡಿಗೆಯ ಧೈರ್ಯ ನಿನ್ನಲುಂಟು
ಈ ನಿನ್ನ ಸಾಹಸಕ್ಕೆ ಸಾಟಿ ಏನುಂಟು
ತವರಿನತ್ತ ಚಿಂತೆ ನಿನಗೆ ಬೇಡ
ಎಲ್ಲವನೂ ನಿಭಾಯಿಸುವೆ
ನಿನ್ನ ಸ್ಥಾನದಲ್ಲಿ ನಿಂತು
ಅಂಜದೇ ಹೋರಾಡು ಕೆಚ್ಚೆದೆಯ ಕಲಿ ನೀನು
೦೫೨೮ಎಎಂ೨೮೦೧೨೦೨೧
No comments:
Post a Comment