ಕನ್ನಡ ಕವನಗಳು 01
ಅಸ್ತಿತ್ವವಿಲ್ಲ ಕನ್ನಡಕ್ಕೆ
ಅಸ್ತಿತ್ವವಿಲ್ಲ ಕನ್ನಡಕ್ಕೆ
ಬೆಳೆಸುವಾಸೆ ಇಲ್ಲ ಜನಕೆ
ಅನ್ಯಭಾಷೆಗಳ ಬಯಸೋ ನಮಗೆ
ಮಾತೃಭಾಷೆ ಬಗ್ಗೆ ಕಾಳಜಿ ಇಲ್ಲ
ಆಳುವವನಿಂದ ಆಳಿನವರೆಗೂ
ನಿತ್ಯ ಅನ್ಯಭಾಷಾ ಆರಾಧನೆ
ಬರದು ಅಮ್ಮನ ಹಾಲಿನಿಂದ
ಒಲಿದುಬಂದ ಭಾಷೆಯ ಸರಿ ಉಚ್ಚಾರಣೆ
ಜನ ಬಳಸದೆಯೇ
ಯಾವ ಭಾಷೆಯೂ ಬೆಳೆಯದು
ಭಾಷೆಯಿಲ್ಲದೆಯೇ
ಯಾವ ಸಂಸ್ಕೃತಿಯು ಉಳಿಯದು
ಸಿಪ್ಪೆ ತೆಗೆದ ಕಬ್ಬು ಕಾದು ಹಾರಿದ ಹಾಲು
ಸವಿಯಾದ ಕದಳಿ ಫಲ ನಮ್ಮ
ಅಂಗೈ ಒಳಗಿರಲು ನಮಗೆ
ಕಬ್ಬಿಣದ ಕಡಲೆಯ ಕಡಿಯುವ ಆಸೆ
ಸ್ವಚ್ಛ ಮಳೆನೀರು
ಶುಭ್ರ ತಿಳಿನೀರು
ಮನೆಯಂಗಳದಿ ಹರಿಯುತ್ತಿದ್ದರೂ
ಸಾಗರದ ಉಪ್ಪು ನೀರೇ ಬೇಕು ನಮಗೆ
ಕನ್ನಡಿಗರಲ್ಲದೆ ಕನ್ನಡವನ್ನು
ಕೊಂದವರು ಅನ್ಯರಂತೂ ಅಲ್ಲವೇ ಅಲ್ಲ
ಇನ್ನಾದರೂ ಜಾಗೃತವಾಗದಿದ್ದರೆ
ನಮ್ಮತನಕ್ಕೆ ಉಳಿಗಾಲವಿಲ್ಲ
31102003
ಅಪ್ಪಾಜಿ ಮುಸ್ಟೂರು
ಕವನ 2
ಕರುಣೆಯ ನನ್ನಿಯ
ಡಮರುಗ ಬಾರಿಸುತ್ತಿದೆ
ನನ್ನತನದ ಹೆಸರು ಕನ್ನಡ
ನನ್ನ ತನುವ ಉಸಿರು ಕೂಡ ಕನ್ನಡ
ಜನ್ಮ ಕೊಟ್ಟವಳು ಕನ್ನಡತಿ
ಮಾತು ಕಲಿಸಿದವಳು ಕನ್ನಡದ ಒಡತಿ
ಕಣ್ಣಿಗೆ ಕಾಣುವುದು ಕನ್ನಡ ಸಂಸ್ಕೃತಿ
ಕನ್ನಡವಿತ್ತಿತು ಬಾಳಿಗೆ ಸ್ಪೂರ್ತಿ
ಕನ್ನಡ ಭುವನೇಶ್ವರಿ
ಈ ಬುವಿಯ ಐಸಿರಿ
ಕರುಣೆಯೊಂದೆ ಅವಳ
ಬೊಗಸೆಯಲ್ಲಿರುವ ಹಣತೆ
ಜಲ ನೆಲ ಮುಗಿಲಿನೊಳು
ಮಾರ್ದನಿಸಿದೆ ಕನ್ನಡವು
ಕಬ್ಬಿಗನೆದೆಯ ಕಾವ್ಯ
ನಿತ್ಯವೂ ಚಿರ ನವ್ಯ
ಕೋಟಿ ಜನರ ಜೀವನಾಡಿ ಕನ್ನಡ
ಜ್ಯೋತಿ ತಾ ಹರಡಿದೆ ಅದರ ಸೊಗಡ
ಮಳೆಗಳಲ್ಲಿ ಮಧುಮಗಳು ಈ ಕನ್ನಡತಿ
ಸದ್ಗತಿಗೆ ಕನ್ನಡವೇ ಜೊತೆಗಾತಿ
01112003
ಅಪ್ಪಾಜಿ ಮುಸ್ಟೂರು
#ಅಮುಭಾವದೂಟ 156
#ದಿನಕ್ಕೊಂದು ಕನ್ನಡ ಕವಿತೆ
ಕರುನಾಡು ಸ್ವರ್ಗದ ಬೀಡು
ಈ ಸೀಮೆಯಲ್ಲಿ ನನ್ನ ಪಾಡು
ಮನವ ತಣಿಸಿದ ಈ ಹಾಡು
ಕನ್ನಡವೇ ನನ್ನುಸಿರು
ಕನ್ನಡವೇ ನನಗೆ ಹೆಸರು
ಕರುನಾಡೆ ಜನ್ಮಗಳ ನೆಲೆಯು
ಕರುಣೆಯೇ ಈ ಜೀವದ ಸೆಲೆಯು
ಕನ್ನಡದ ಈ ಕಂದ
ಕರುನಾಡ ಮಕರಂದ
ಬದುಕಿದು ಕನ್ನಡದೇಳಿಗೆಗೆ
ಕನಸುಗಳಿವು ಕನ್ನಡದ ಭವಿಷ್ಯಕ್ಕೆ
ಹಾಡುವ ಹಕ್ಕಿಯಾಗಿ ನಾ
ಸಹ್ಯಾದ್ರಿಯ ತಪ್ಪಲಲಿ ನೆಲೆಸುವೆ
ಅಮೃತದ ಶಿಲೆಯಾಗಿ ನಾ
ಬೇಲೂರಿನ ಕಲೆಯಲ್ಲಿ ಬೇರೂರುವೆ
ಜೋಗದ ಸಿರಿಯಲ್ಲಿ ಮಿಂದು
ಕನ್ನಡ ಕುಸುರಿಯ ಅರಳಿಸುವೆ
ಭುವನೇಶ್ವರಿಯ ನೆರಳಲ್ಲಿ
ಬದುಕಿನ ಬೆಳಕನ್ನು ಚೆಲ್ಲುವೆ
ಜೀವನದ ಪ್ರತಿ ನಿಮಿಷ
ಕನ್ನಡಕ್ಕೆ ಮುಡಿಪು
ಜೀವದ ಪ್ರತಿ ಉಸಿರು
ಹರಡುವುದು ಕನ್ನಡದ ಕಂಪು
ಕಾವೇರಿ ಮಡಿಲಲ್ಲಿ ಮಗುವಾಗಿ
ಕನ್ನಡದೇಳಿಗೆಗೆ ಮುನ್ನುಡಿಯಾಗಿ
ಕಬ್ಬಿಗರೆದೆಯ ಭಾವದಿ ಬೆರೆತು
ಬಾಳುವೆ ಕನ್ನಡಕ್ಕಾಗಿ ಮೂರು ಹೊತ್ತು
0946ಎಎಂ07122001
*ಅಪ್ಪಾಜಿ ಸುಧಾ ಮುಸ್ಟೂರು*
No comments:
Post a Comment