Friday, November 5, 2021

#ಅಮುಭಾವದೂಟ 31

ಹಾಯ್ಕು

ಈ ಸಂಜೆಯಲಿ
ಮೋಡದ ಚಿತ್ತಾರದಿ
ನೀ ಮೂಡಿರುವೆ

0720ಪಿಎಂ22052021
ಅಪ್ಪಾಜಿ ಎ ಮುಸ್ಟೂರು



ನಿನ್ನ ಮೋ(ಸ)ಹದ ಪಾಶಕೆ ಸಿಕ್ಕಿ
ಬದುಕಿನಲೊಂದು ಪಾಠ ಕಲಿತೆ
ಬೇಲಿಯ ಮೇಲಿನ ಹೂವೆಂದಿಗೂ
ಬಾಳಿಗೆ ಮುಳುವಾಗುವುದೆಂಬುದ
ನಿನ್ನೊಡನಾಟದಿಂದ ನಾನರಿತೆ
ನಿನ್ನ ಬದುಕೊಂದು ಬರೀ ನಾಟಕ
ನಾ ಸಿಕ್ಕಿಬಿದ್ದದ್ದು ದುರಂತ ರೂಪಕ
ಈಗ ನೀನಲ್ಲಿ ಮೆರೆಯುತಿರುವೆ
ನಿನ್ನ ನೆನೆದು ನಾನಿಲ್ಲಿ ಸೊರಗಿರುವೆ
ತೊರೆದುಹೋಗು ಮತ್ತೆಂದೂ ಬರದಿರು

1031ಪಿಎಂ21052021
ಅಪ್ಪಾಜಿ ಎ ಮುಸ್ಟೂರು

ಮೊದಲ ಮಳೆಗೆ ನೆನೆದ ಇಳೆಗೆ
ಹೊಸ ಕಂಪಿನ ತನನನ
ತರುಲತೆಗಳ ನವ ಚಿಗುರಲಿ
ಪುಟಿದೆದ್ದಿದೆ ನವ ಚೇತನ

ಮಣ್ಣೊಳಗೆ ಬೆಚ್ಚಗಿದ್ದ ಬೀಜಕೀಗ
ಮೊಳಕೆಯೊಡೆದು ಹೊರಬರುವ ಸಂಭ್ರಮ
ನಿಸರ್ಗದ ಮಡಿಲಲ್ಲಿ ಸ್ವರ್ಗ ತೆರೆದ
ಮುಂಗಾರು ಮಳೆಯ ಈ ಸೇವೆ ಅನುಪಮ

ಖಗ ಮೃಗಗಳ ಹಸಿವು ನೀಗಲು
ಭೂರಮೆಯದು ಸಜ್ಜಾಗಲು
ಮೊದಲ ಮಳೆಯ ಸಿಂಚನ
ಪ್ರಕೃತಿ ಮಾತೆಗೆ ಹಸಿರ ಬಾಗಿನ

ತಂಗಾಳಿಯ ನೆರವಿನಿಂದಲೇ
ಹೊಸ ಹೂವಿನ ಕಂಪು ಪಸರಿಸಿದೆ
ಹರಿವ ನೀರಿನ ಲವಲವಿಕೆಯ
ಯುದ್ಧ ಗೆದ್ದ ಸಂಭ್ರಮ ತಂದಿದೆ

ಇರುಳು ಕಳೆದು ಬೆಳಗಾಗುವುದರೊಳಗೆ
ಜಗಕ್ಕೆಲ್ಲ ತಣ್ಣನೆಯ ಬಳುವಳಿ
ಹೊಂಗಿರಣ ಸೂಸುತ ರವಿ ಬಂದ  ನಗುತಾ
ಹಿಡಿದ ಜಡತ್ವಕ್ಕೆ ನೀಡುತ್ತ ಕಚಗುಳಿ

0641ಎಎಂ22052021
ಅಪ್ಪಾಜಿ ಎ ಮುಸ್ಟೂರು


ಧೃತಿಗೆಡದಿರು ಜೀವವೇ
ಈ ನೋವು ಶಾಶ್ವತವೇ
ಎದೆಗುಂದದೆ ಮುನ್ನಡೆ ನೀನು
ಎದುರೀಜಿ ದಡ ಸೇರಬೇಕಿದೆ ಇನ್ನೂ

ಬೆಳದಿಂಗಳ ಚೆಲ್ಲುವ ಚಂದಿರನಿಗೂ
ತಪ್ಪದು ಅಮಾವಾಸ್ಯೆಯ ಕತ್ತಲು
ಜಗ ಬೆಳಗುವ ಸೂರ್ಯನಿಗೂ
ತಡೆಯಲು ಸಾಧ್ಯವೇ ಗ್ರಹಣ ಮುತ್ತಲು
ಎಲ್ಲವೂ ಇಲ್ಲಿ ನಿರೀಕ್ಷಿತ
ಗೆಲ್ಲಲು ನೀನಾಗು ಪರೀಕ್ಷಿತ

ಎಷ್ಟೇ ಸುಂದರ ಹೂವಾಗಿದ್ದರು
ಬಾಡಿ ಉದುರೆಲೆಬೇಕು ಕಾಯಿ ಹಣ್ಣಾಗಲು
ಎಷ್ಟೇ ಕಷ್ಟಗಳು ಬಂದೆರಗಿದ್ದರು
ಎದ್ದು ನಿಲ್ಲಲೇಬೇಕು ಸಾಧಿಸಲು
ನೋವುಗಳ ನೀ ನುಂಗಿದಾಗಲೇ
ನಲಿವಿಗೆ ಎಂದಿಗೂ ಹತ್ತಿರವಾಗುವೆ

ಸೋಲಿಗೆ ಶರಣಾಗುವ ಬದಲು
ಗೆಲ್ಲುವ ಹೊಸ ದಾರಿಯ ಹುಡುಕಿಕೋ
ಯಾರಿಗೆ ಇಲ್ಲಿ ಯಾರು ಇಲ್ಲ
ನಿನ್ನ ಹಾದಿಯಲ್ಲಿ ನೀ ನಡೆಯಲೇಬೇಕು
ಬದುಕು ನಿನ್ನದೇ ಕೈಯಲ್ಲಿದೆ
ಬೇಕಾದಂತೆ ಬದುಕಲು ನಿನಗೆ ಹಕ್ಕಿದೆ

0335ಪಿಎಂ22052021
ಅಪ್ಪಾಜಿ ಎ ಮುಸ್ಟೂರು

ಮತ್ತೆ ಮತ್ತೆ ನೆನಪಾಗುವ
ನಿನ್ನ ನೆನಪುಗಳ ಭಾರ ಹೊರಲಾರೆ
ಸತ್ತು ಬೇಕಾದರೂ ಹೋಗುವೆನು
ನಾನಿಲ್ಲಿ ನಿನ್ನ ಮರೆತು ಬಾಳಲಾರೆ
ಅಮ್ಮನಾಗಿ ಕೈತುತ್ತನಿತ್ತಿದ್ದೆ
ಸ್ನೇಹಿತೆಯಾಗಿ ಸಾಂತ್ವನ ಹೇಳಿದೆ
ಸಂಗಾತಿಯಾಗಿ ಸಂಕಷ್ಟಗಳ ದೂರ ತಳ್ಳಿದೆ
ಇಡೀ ಬದುಕನ್ನೇ ಒಲವಿನಿಂದ ಆಳಿದೆ
ಎದ್ದು ನಿಲ್ಲುವ ಆತ್ಮವಿಶ್ವಾಸವೇ ನೀನು
ಸೋಲನ್ನು ಗೆಲುವಾಗಿ ಬದಲಾಯಿಸಿದೆ ನೀನು
ಗೆದ್ದ ಬದುಕಿನಲ್ಲಿ ನೀನಿರುವೆ ಸಾಕು ಬೇಡ ಬೇರೇನು

0354ಪಿಎಂ22052021


ಅದೆಷ್ಟು ಹಸಿವು ನಿನಗೆ
ಇಷ್ಟು ಬಲಿ ಸಾಕಾಗದೆ
ಬದುಕಿನಾಧರಗಳನೇ ಕುಸಿದು
ಬದುಕುವ ಭರವಸೆಯ ಕಸಿದು
ಅನಾಥವಾಯ್ತು ನಂಬಿದವರ ಜೀವನ
ಇದಕೆಲ್ಲ ಕಾರಣ ನೀನೇ ಕ್ರೂರಿ ಕರೋನ

0808ಎಎಂ24052021
ಅಪ್ಪಾಜಿ ಎ ಮುಸ್ಟೂರು

#ಅಮುಭಾವದೂಟ 34

ಇರು ಎಚ್ಚರ
ಬಲು ದುಸ್ತರ
ನಂಬುವಂತಿಲ್ಲ ಯಾರನೂ
ಮರುಳು ಮಾತಿನಲಿ
ಮೋ(ಹ)ಸದ ಬಲೆಯೆಣೆದು
ಬಳಲಿಸುವರು ನಿನ್ನನು
ಸ್ನೇಹದ  ಆಟದಲಿ
ಪ್ರೀತಿಯ ನೋಟ ಬೀರಿ
ನಡುನೀರಲಿ ಕೈಬಿಡುವರು

1111ಎಎಂ24052021
ಅಪ್ಪಾಜಿ

No comments:

Post a Comment