ಮಯೂರನ ಸ್ವಾಭಿಮಾನದ ನಾಡು
ನೃಪತುಂಗನ ನೆಚ್ಚಿನ ಬೀಡು
ಪಂಪನ ಪರಮಾಪ್ತತೆಯ ಗೂಡು
ಈ ನಮ್ಮ ಕನ್ನಡನಾಡು
ರಾಜ ಮಹಾರಾಜರು ಕಟ್ಟಿದ
ಅಭಿಮಾನದ ಕರುನಾಡು
ಕವಿಪುಂಗವರ ಲೇಖನಿಯಲಿ
ಮೆರೆದ ಕನ್ನಡದ ಸೊಗಡು
ಪುಲಿಕೇಶಿಯ ಸಾಹಸಕೆ
ಹೆಸರಾದ ಹೊನ್ನಾಡು
ಕೃಷ್ಣ ದೇವರಾಯರು ಕಟ್ಟಿದ
ಕಲೆಸಾಹಿತ್ಯ ಸಮೃದ್ಧಿಯ ಬೀಡು
ನಿತ್ಯಹರಿದ್ವರ್ಣದ ಪ್ರಕೃತಿಯ
ಸ್ವರ್ಗ ನಮ್ಮ ಈ ಮಲೆನಾಡು
ನದಿ ನೀರ್ಝರಿಗಳು ತುಂಬಿತುಳುಕುವ
ಪರಿಶುದ್ಧ ಪ್ರೀತಿ ಹಂಚುವ ಸಿರಿನಾಡು
ಕಣ್ತುಂಬುವ ಕರಾವಳಿಯ
ಮುತ್ತು ಮಾಣಿಕ್ಯದ ಚೆನ್ನಾಡು
ಯಕ್ಷಗಾನ ಬಯಲಾಟದಂತಹ
ಗಂಡು ಕಲೆ ನೃತ್ಯದ ಹೆಗ್ಗೂಡು
ದಾಸರು ಶರಣರು ಸಂತರು
ಜನಿಸಿದ ಸುಸಂಸ್ಕೃತರ ತಾಯ್ನಾಡು
ಹಳೆ ನವೋದಯ ನವ್ಯ ಕಾವ್ಯ
ಪರಂಪರೆಯ ಶ್ರೀಗಂಧದ ಬೀಡು
ಸಂಗೀತ ಸಾಹಿತ್ಯ ಸಂಸ್ಕೃತಿಗಳ
ಸಮ್ಮಿಲನದ ನಲುನಾಡು
ಮಾಹಿತಿ ತಂತ್ರಜ್ಞಾನದ
ವಿಜ್ಞಾನ ಸುಜ್ಞಾನದ ಸವಿನಾಡು
ಸಿರಿಪಗ್ನಡನಾಡಿಲಿ ಹುಟ್ಟಿದ ನಾವೇ ಧನ್ಯರು
ಕರುಣೆ ಮಮತೆ ಮಾನವೀಯತೆಯ ತವರು
0400ಎಎಂ01112021
ಅಪ್ಪಾಜಿ ಸುಧಾ ಮುಸ್ಟೂರು
ಈ ಆಪ್ತತೆಯ ನಗುವೇ
ಬಾಳ ಸಂಕಷ್ಟಕೆ ದಿವ್ಯೌಷಧಿ
ಈ ಒಲವಿನ ಪರಿಭಾಷೆಯೇ
ಬದುಕಿನ ಹಾದಿಯ ಪರಿಧಿ
ಈ ಉತ್ಸಾಹವೇ
ಪಯಣದ ದಣಿವ ನೀಗಿದೆ
ಈ ಪ್ರೀತಿಯ ಸಮಾಲೋಚನೆ
ಎಲ್ಲಾ ಚಿಂತೆಗೂ ಮುಕ್ತಿ ನೀಡಿದೆ
ಸಂಗಾತಿಯ ಈ ಸಂಪ್ರೀತಿಗೆ
ಜೀವಮಾನವೇ ಸುಂದರವೆನಿಸಿದೆ
0303ಎಎಂ04112021
*ಅಪ್ಪಾಜಿ ಸುಧಾ ಮುಸ್ಟೂರು*
ಅಹಂಕಾರದ ಅಂಧಕಾರದಲ್ಲಿ
ಮೆರೆವ ಮನದ ತಮವ ನೀಗಿ
ಬದುಕಿನ ಸಮೃದ್ಧಿಯ ಸಂತೃಪ್ತಿಗೆ
ನವದಿಶ ತೋರಲಿ ದೀಪಾವಳಿಯ ಬೆಳಕು
ಎಣ್ಣೆ ಬತ್ತಿ ಸೇರಿ ಹಣತೆಯೊಳಗೆ
ಬೆಸೆದ ಬಾಂಧವ್ಯದ ಜ್ಯೋತಿಯಾಗಿ
ಸಿರಿತನ ಬಡತನವ ಲೆಕ್ಕಿಸದೆ
ಸಮಚಿತ್ತದ ಬೆಳಕು ಹರಡುವಂತಿರಲಿ ಜೀವನ
ತನಗೆಷ್ಟು ಸಾಧ್ಯವೋ ಅಷ್ಟೂ
ಪ್ರದೇಶವನು ವ್ಯಾಪಿಸುವ ಹಾಗೆ
ಸ್ನೇಹದಲಿ ಪ್ರೀತಿಯಲಿ ಪರಸ್ಪರ
ಖುಷಿಯ ಪಸರಿಸೋಣ ಬಾಳಲಿ
ಸಂಗಾತಿಯ ಒಲವಿನ ಹಣತೆ
ಸದಾ ಬೆಳಗುತಿರಲಿ ಜ್ವಲಿಸದಂತೆ
ಸಂಪ್ರೀತಿಯ ಮಂದ ಬೆಳಕಿನಲ್ಲಿ
ಅರಿತು ಬಾಳಲಿ ನಂದಾದೀಪದಂತೆ
ದ್ವೇಷದ ಜ್ವಾಲೆ ನಂದಿಹೋಗಲಿ
ಶಾಂತಿಯ ಪ್ರಣತಿ ಉರಿಯಲಿ
ಯಾವ ಸಂಕೋಲೆಯೊಳಗೂ ಸಿಕ್ಕಿಕೊಳ್ಳದೆ
ಸದಾ ಬೆಳಗುತಿರಲಿ ಮಂದಸ್ಮತಿ ದೀಪದಂತೆ
ನನ್ನದೆಂಬ ಸ್ವಾರ್ಥವಳಿದು
ನಮ್ಮದೆಂಬ ಪ್ರಶಾಂತತೆ ಉಳಿಯಲಿ
ಇರುವುದೊಂದೇ ಜೀವನದೊಳಗೆ
ಸಾರ್ಥಕತೆಯೊಂದು ನಮ್ಮದಾಗಲಿ
No comments:
Post a Comment