Friday, November 5, 2021

ಬವಣೆಗಳನ್ನು ಬಯಸದೆ ಅನುಭವಿಸಿದೆ
ಬಯಸಿದುದನು ಬಳಿ ಬಾರದಂತೆ ತಡೆದೆ
ಎದೆಗುಂದದೆ ಬದುಕುವ ನನ್ನ ಹಂಬಲಕ್ಕೆ
ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ

ಎದೆಯ ನೋವುಗಳಿಗೆಲ್ಲಾ
ಸಾಂತ್ವನದ ಒಂದು ಮಾತಿಲ್ಲ
ಇಂಗದ ಬದುಕುವ ದಾಹಕ್ಕೆ
ಯಾವುದೇ ಬೆಂಬಲ ಸಿಗಲಿಲ್ಲ

ಅವಮಾನದ ಮೊನಚು ಚುಚ್ಚಿ ಎದೆಗೆ
ಅವಸಾನದ ಭಯ ತಂತು ಕೊನೆಗೆ
ಸೋಲಬಾರದೆಂದು ಮುನ್ನಡೆಯುವಾಗ
ಸಹಿಸದ ಕೈಯನ್ನು ತಳ್ಳಿತ್ತು ಬಾವಿಯೊಳಗೆ

ಬೇಸರಿಸುವ ಬದಲು ಆಸರೆ ಹುಡುಕುತಿರುವೆ
ಕೆಸರಿನೊಳಗೆ ನಾ ಅರಳುವ ಕಮಲವಾಗುವೆ
ಬೆನ್ನು ತಟ್ಟುವವರು ಇಲ್ಲದಿದ್ದರೂ  ಪರವಾಗಿಲ್ಲ
ಬೆಂದು ಬೆಳಕಾಗಿ ನಿತ್ಯ ಕತ್ತಲನು ನಾ  ನೀಗುವೆ

ಎಷ್ಟೇ ಕಷ್ಟ ಎದುರಾಗಲಿ
ಯಾವ ನಿಷ್ಟುರವೆ ದಹಿಸಲಿ
ಕಷ್ಟಪಟ್ಟು ಮೇಲೆ ಇರುವೆ
ಆಗಲಾದರೂ ಸುಖ ಸಿಗಲಿ

೦೫೩೩ಎಎಂ೦೯೦೯೨೦೨೧
ಅಪ್ಪಾಜಿ ಎ ಮುಸ್ಟೂರು ಸುಧಾ


ಹೀಗೆ ನಿನ್ನ ಮಡಿಲಲ್ಲಿ ಮಲಗಿ
ಹಾಗೆ ಸತ್ತು ಹೋಗುವ ಬಯಕೆ
ಹೀಗೆ ನಿನ್ನ ನಗುವ ನೋಡುತ್ತಾ
ಹಾಗೆ ನನ್ನೆಲ್ಲಾ ನೋವು ಮರೆಯೋ ಬಯಕೆ
ಒಡಲ ಒಡನಾಡಿ ನೀನು
ಬಾಳಪಯಣದ ಸಾರಥಿಯಿನ್ನೂ
ಜೀವ ಜೀವನಗಳೆರಡೂ
ನಮ್ಮಿಬ್ಬರಂತೆ ಅನ್ಯೋನ್ಯವಾಗಿರಲಿ

೦೬೨೨ಎಎಂ೦೯೦೯೨೨೧
*ಅಪ್ಪಾಜಿ ಎ ಮುಸ್ಟೂರು ಸುಧಾ*

No comments:

Post a Comment