Thursday, November 10, 2022

ಲೇಖನ

ಮನುಷ್ಯನ ಜೀವನ ಇಂದು ಸೂತ್ರ ಹರಿದ ಗಾಳಿಪಟದಂತಾಗಿದೆ. ಇವತ್ತು ಯಾರನ್ನು ಯಾರೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಕಾರಣ ಹುಡುಕುತ್ತಾ ಹೋದರೆ ಅಂತ್ಯವೇ ಇರದಷ್ಟು ಉದಾಹರಣೆಗಳು ನಮ್ಮ ಕಣ್ಣು ಮುಂದೆ ಬಂದು ಹೋಗುತ್ತಿವೆ. ನಾವು ನಮ್ಮವರಿಗಾಗಿ ಬದುಕುತ್ತೇವೆ ಎಂದಾದರೂ ಕೂಡ ನಾವ್ಯಾರು ಪರಿಪೂರ್ಣರಲ್ಲ. ಮನುಷ್ಯನಿಂದ ಮೇಲೆ ಆಸೆ ಆಮಿಷಗಳಿಗೆ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ. ಅವನು ಬಡವನಾದರೂ ಸರಿ ಶ್ರೀಮಂತನಾದರೂ ಸರಿ, ಅವನು ಗುರುವಾದರು ಸರಿ ಶಿಷ್ಯನಾದರೂ ಸರಿ, ಅವನು ರಾಜನಾದರೂ ಸರಿ ಮಂತ್ರಿಯಾದರು ಸರಿ ಸಾಮಾನ್ಯ ಪ್ರಜೆಯಾದರೂ ಸರಿ ದೇಹದ ಮನಸ್ಸಿನ ವಾಂಛೆಗಳನ್ನು ಗೆಲ್ಲುವಲ್ಲಿ ಸೋತು ಹೋಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೇ ಆದ ಒಂದು ನ್ಯೂನತೆ ಇದ್ದೇ ಇರುತ್ತದೆ. ಅದು ಪ್ರತ್ಯಕ್ಷವಾಗಿ ಕಾಣಬಹುದು ಅಥವಾ ಪರೋಕ್ಷವಾಗಿ ಇರಬಹುದು ಆದರೆ ಆ ನ್ಯೂನ್ಯತೆಗಳು ಮನುಷ್ಯನ ವ್ಯಕ್ತಿತ್ವವನ್ನು ಕೆಲವೊಮ್ಮೆ ಮೇರು ಹಂತಕ್ಕೆ ಕೊಂಡೊಯ್ಯಬಹುದು ಅಥವಾ ಅವನನ್ನು ಹೀನ ಕೃತ್ಯವನ್ನು ಎಸಗುವಂತೆ ಮಾಡಿ ವ್ಯಕ್ತಿತ್ವಕ್ಕೆ ಕಪ್ಪು ಮಸಿಯನ್ನು ಬಳಿದು ಬಿಡುತ್ತದೆ. ಹಾಗಾಗಿ ಸಮಾಜದಲ್ಲಿ ಯಾರನ್ನಾದರೂ ನಾವು ನಾಯಕರನ್ನಾಗಿ ಆರಿಸಿಕೊಳ್ಳುವಾಗ ಅವನ ಪೂರ್ವಾಪರಗಳನ್ನು  ಪರಿಶೀಲಿಸಿ ನೂರಕ್ಕೆ ನೂರರಷ್ಟು ಪಾರದರ್ಶಕತೆಯ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಗಳನ್ನು ಮಾತ್ರ ನಾವು ನಂಬಿಕೆಗೆ ಅರ್ಹರಾಗಿ ಸ್ವೀಕರಿಸಬಹುದು. ಅದನ್ನು ಬಿಟ್ಟು ಅವನು ಯಾವುದೋ ಉನ್ನತ ಸ್ಥಾನದಲ್ಲಿದ್ದಾನೆ, ದೊಡ್ಡ ದೊಡ್ಡ ವ್ಯಕ್ತಿಗಳ ಸಂಪರ್ಕ ಅವನಿಗಿದೆ, ಅವನಲ್ಲಿ ಸಾಕಷ್ಟು ಹಣ ಅಂತಸ್ತು ಇದೆ ಎಂದು ಅವನ ಹಿಂಬಾಲಕರಾಗುವುದು ಮುಂದೊಂದು ದಿನ ಅವನ ಬಣ್ಣ ಬಯಲಾದಾಗ ಸಮಾಜದ ಮುಂದೆ ಅಂಥವರೊಟ್ಟಿಗೆ ನಾವು ಕೂಡ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಆಗ ಸಮಾಜ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆಯನ್ನೇ ಕಳೆದುಕೊಂಡು ಬಿಡುತ್ತೇವೆ.

      ಇಂತಹ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವೆಂದರೆ ಹಿರಿಯ ತಲೆಮಾರಿನ ಜನ ಕಿರಿಯ ಪೀಳಿಗೆಗೆ ಸಂಸ್ಕಾರ ಹಿತವಾದ ಮೌಲ್ಯಗಳನ್ನ ಎಲೆವೆಯಿಂದಲೇ ತುಂಬುತ್ತಾ ಬರಬೇಕು. ಆಸೆ ಆಮೀಷಗಳನ್ನು ಗೆದ್ದ ಮನುಷ್ಯ ಯೋಗಿಯಾಗುತ್ತಾನೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ಬಲವಾಗಿ ಮನವರಿಕೆ ಮಾಡಿಕೊಡಬೇಕು. ಪ್ರತಿಯೊಂದು ಮಗು ವ್ಯಕ್ತಿತ್ವ ರೂಪಿಸಿಕೊಳ್ಳುವಾಗ ಸಮಾಜ ಒಪ್ಪಿತವಾದ ಕಟ್ಟುಪಾಡುಗಳಿಗೆ ಬದ್ಧನಾಗಿರುತ್ತೇನೆ ಎಂಬ ನಿರ್ಣಯವನ್ನು ಆಗಲೇ ಮಾಡಿಸಬೇಕು. ಮನುಷ್ಯನ ಬೆಳವಣಿಗೆಗೆ ಆಸೆ ಬೇಕು ನಿಜ ಆದರೆ ಅದು ದುರಾಸೆಗಾಗಿ ಬದಲಾಗುವ ಹಂತದಲ್ಲಿ ಹಿರಿಯರೆನಿಸಿಕೊಂಡವರು ಎಲ್ಲಿ ಕಡಿವಾಣ ಹಾಕಿ ವ್ಯಕ್ತಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕರಿಸಬೇಕು.

          ನೈತಿಕತೆಯ ವಿಷಯಕ್ಕೆ ಬಂದಾಗ ಇಲ್ಲಿ ಯಾರಿಗೂ ಸಹ ಅದು ದಕ್ಕುವುದಿಲ್ಲ ಎಂದೇ ಹೇಳಬೇಕು. ಏಕೆಂದರೆ ನೈತಿಕತೆಯನ್ನು ಬೆಳೆಸುವವರೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿರುವಾಗ ಅಂಥವರನ್ನೇ ಇವತ್ತಿನ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿರುವಾಗ ನಮ್ಮ ಮುಂದಿನ ಪೀಳಿಗೆಗೆ ನಾವು ಯಾವ ನೈತಿಕತೆಯನ್ನು ಬಿತ್ತಿ ಹೋಗುತ್ತಿದ್ದೇವೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ. ಇಂದು ವ್ಯಕ್ತಿಗೆ ಯಾವುದರಲ್ಲೂ ಭಯವಿಲ್ಲದಂತಾಗಿದೆ. ಅವನು ತನ್ನ ಸ್ಥಾನವನ್ನು ಅರಿತು ಅದರ ಘನತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ, ಸಮಾಜದೆದುರು ಆಸ್ಥಾನದ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಅದರ ಮೌಲ್ಯಗಳನ್ನೇ ಅದ‍‍ಪಥನಕ್ಕೆ ತುಳಿದು ಅದರ ಮೂಲಕ ತಾನು ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಲ್ಲುತ್ತಿದ್ದಾನೆ. ಅಂಥವನ ಹಿಂಬಾಲಕರಾಗಿ ಎಲ್ಲರ ಎದುರು ಅವನೊಬ್ಬ ಪ್ರತಿಷ್ಠಿತ ವ್ಯಕ್ತಿಯನ್ನಾಗಿ ಬಿಂಬಿಸುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಮಗು ಪ್ರಾಮಾಣಿಕತನಕ್ಕೆ ಬೆಲೆ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಅಪ್ರಾಮಾಣಿಕ ನಾಗುವುದಕ್ಕೆ ಮನಸ್ಸು ಮಾಡುವ ಮೂಲಕ ತಾವೆಲ್ಲವನ್ನು ಪಡೆದುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತಾನೆ. ಸಮಾಜವನ್ನು ತಿದ್ದುವ, ಸಂಸ್ಕಾರವನ್ನು ಕಲಿಸುವ, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಮೊದಲು ತಾನು ಪರಿಶುದ್ಧನಾಗಿದ್ದು ಹಾದಿ ತಪ್ಪುತ್ತಿರುವವರನ್ನು ಸರಿ ದಾರಿಗೆ ತರುವಲ್ಲಿ ತನ್ನ ಮೇರು ವ್ಯಕ್ತಿತ್ವದ ಅಸ್ತ್ರವನ್ನು ಹಿಡಿದು ದಂಡಿಸಬಹುದಾಗಿದೆ. ಆದರೆ ಅಂತಹ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಈಗ ಇಂದು ನಮ್ಮಲ್ಲಿ ಇಲ್ಲ. ಇದ್ದರೂ ಅಂತವರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ. ದೂಷಿಸುವ ಜಗದ ಎದುರು ದ್ವೇಷಕ್ಕೆ ಬಲಿಯಾಗಿ ದಣಿ ಇಲ್ಲದೆ ದಮನಕ್ಕೊಳಗಾಗಿ ತನ್ನ ಕಣ್ಣೆದುರು ನಡೆಯುತ್ತಿರುವ ಅನೈತಿಕ ಅನಾಚಾರ ಅತ್ಯಾಚಾರಗಳನ್ನು ಪ್ರತಿಭಟಿಸಲಾಗದೆ ನ್ಯಾಯ ದೊರಕಿಸಿಕೊಡಲಾಗದೆ ಅಸಹಾಯಕನಾಗಿ ಕೈಚಲ್ಲಿ ಕೂರಬೇಕಾಗುತ್ತದೆ.

         ಆದ್ದರಿಂದ ಧರ್ಮದ ಮುಖಂಡರಾಗಲಿ, ನಾಯಕನಾಗಲಿ, ಜ್ಞಾನಿಗಳಾಗಲಿ ತಾವು ತಪ್ಪೇಸಗದಂತೆ ತಮಗೆ ತಾವೇ ಬೇಲಿ ಹಾಕಿಕೊಂಡು ಅದರ ಸತ್ಫಲವನ್ನು ತನ್ನ ಸಮಾಜಕ್ಕೆ ನೀಡುವ ಮೂಲಕ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ. ಸನಾತನ ಗುರು ಶಿಷ್ಯ ಸಂಪ್ರದಾಯ ಹೊಂದಿದ ಭಾರತದಂತಹ ಮಹಾನ್ ದೇಶದಲ್ಲಿ ಆ ಎರಡು ಸ್ಥಾನಗಳಿಗೂ ಚ್ಯುತಿ ಬರದ ಹಾಗೆ ಮೂಲಕ ಜೀವನ ಸಾರ್ಥಕತೆಯ ಜಗತ್ತಿನ ಎದುರು ಸಾದರಪಡಿಸಬೇಕಾಗುತ್ತದೆ. ಅಲ್ಲದೆ ತಪ್ಪು ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಆರೋಪಿತನಾದ ಕ್ಷಣದಿಂದಲೇ ಅವನೆಲ್ಲ ಸ್ಥಾನಮಾನಗಳು ಅವನಿಂದ ಕಳಚಿಕೊಂಡು ಉಳಿಸಿಕೊಂಡಾಗ ಮಾತ್ರ ಈ ಸಮಾಜ ಅಂತಹ ಸ್ಥಾನಗಳನ್ನು ಅದನ್ನು ಕಾಪಾಡುವ ವ್ಯಕ್ತಿತ್ವಗಳನ್ನು ಅನುಸರಿಸುತ್ತದೆ ಮತ್ತು ಗೌರವಿಸುತ್ತದೆ. ಹಾಗಾದಾಗ ಮಾತ್ರ ನಾವು ನಮ್ಮ ಮುಂದಿನ ಪೀಠಿಕೆಗೆ ಪರಿಶುದ್ಧ ಸಮಾಜವನ್ನು ಬಳುವಳಿಯಾಗಿ ನೀಡಿ ಅವರ ಭವಿಷ್ಯಕ್ಕೆ ಬುನಾದಿ ಹಾಕಿದಂತಾಗುತ್ತದೆ ಅಲ್ಲವೇ


23:32:30ಪಿಎಂ೧೦೧೧೨೦೨೨
ಅಮುಭಾವಜೀವಿ ಮುಸ್ಟೂರು 

No comments:

Post a Comment