ಜೀವನ ಪಾವನ ಮಾಡು ಮಹಾದೇವ
ಮಹಾ ಶಿವರಾತ್ರಿಯ ಪೂಜೆ
ಮಹಾ ಸಂಕಲ್ಪದ ಸುಕ್ಷಣ
ಬಾಳಿನ ಏಳುಬೀಳುಗಳಲಿ
ಕೈಬಿಡದೆ ಮುನ್ನಡೆಸು ಓಂ ಶಿವ
ಕಾಯಕ ದೀಕ್ಷೆ ತೊಟ್ಟಿರುವೆ
ಕಾಪಾಡು ಶಂಕರ ಅನವರತ
ದುಡಿಯುವ ಕೈಗಳಿಗೆ ಬಲವಾಗಿ
ದಣಿವರಿಯದ ದುಡಿಮೆಗೆ ಅಣಿಗೊಳಿಸು
ಮುಕ್ಕಣ್ಣ ನಿನ್ನ ನಂಬಿ ನಡೆಯುತಿರುವೆ
ಮುಂದೆ ಹಿಂದೆ ರಕ್ಷಕನಾಗಿ ಸಲಹು
ಕೆಟ್ಟ ಶಕ್ತಿಗಳ ಉಪಟಳವ ತಡೆದು
ನಿನ್ನ ಭಕ್ತರ ಹಾದಿಯ ಕಾಯುತಿರು ದೇವ
ನೋವುಗಳ ನಿವಾರಿಸು ಲಯಕಾರನಾಗಿ
ನಗುವ ಬಾಳಲಿ ತುಂಬು ನಾಗಭೂಷಣ
ಭವಬಂಧನದಿ ಹರಸು ಭೋಲೇನಾಥ
ಲಿಂಗವ ಧರಿಸಿರುವೆ ದಯೆ ತೋರು ರುದ್ರ
ನೀನಲ್ಲದೆ ಸಲಹುವವರಾರಿಲ್ಲ ಬಾಳಲಿ
ಕೈಮುಗಿದು ಬೇಡಿಕೊಳ್ಳುತಿಹೆ ಮಹೇಶ
ಹರ ನೀ ಹರಸು ಸಾಕು ಬೇಡ ಬೇರೇನು
ಕಾಯಕದಿ ಕೈಲಾಸ ಕಾಣುವೆ ಕರೆದುಕೋ ಸರ್ವೇಶ
0948ಪಿಎಂ18022023
*ಅಮುಭಾವಜೀವಿ ಮುಸ್ಟೂರು*
ತಾಯಿ ನೀನಿಲ್ಲದೆ ತವರೆಲ್ಲಿದೆ
ಅಮ್ಮ ನೀನಿಲ್ಲದೆ ನಮ್ಮ ಕುರುಹೆಲ್ಲಿದೆ
ಒಡಲಲಿ ಜಾಗವ ನೀಡಿ
ಒಲವಿಂದ ಜೋಗುಳ ಹಾಡಿ
ಸಲಹಿದೆ ಮಾತೆ ನನ್ನನು
ಮಡಿಲಲಿ ಮುದ್ದಿಸಿ ಮಲಗಿಸಿ
ಹಾಲುಣಿಸಿದೆ ನೀ ಹಸಿವ ನೀಗಿಸಿ
ನಿನಗ್ಯಾರು ಸಾಟಿಯಿಲ್ಲ ಜಗದಿ
ಅಕ್ಕರೆ ತುಂಬಿದ ಅಪ್ಪುಗೆ ನಿನ್ನದು
ಮಮತೆಯು ಬೆಸೆದ ಬಂಧವಿದು
ನೀ ಕಣ್ಣಿಗೆ ಕಾಣುವ ದೇವರು
ನೋವೆಲ್ಲವ ನೀನೊಬ್ಬಳೇ ಸಹಿಸಿ
ನಮಗೆ ನಗುವ ಹೂವು ಹಾಸಿ
ದಣಿವಿಲ್ಲದೆ ದುಡಿದ ಜೀವವದು
ಜನುಮ ಪೂರ ಋಣಿಯು ನಾನು
ನಿನ್ನ ಜೀವ ಜೀವನದ ದೋಣಿಯು ನೀನು
ಉಸಿರು ಕೊಟ್ಟ ಹೆಸರದೊಂದೆ ಅಮ್ಮ
ಬಸಿರ ಬಸಿದೆ ರಕ್ತದಲ್ಲಿ
ಹೆಸರು ಕೊಟ್ಟೆ ಬದುಕಿನಲ್ಲಿ
ದೈವಕೂ ಮಿಗಿಲಾದ ಜೀವ ನೀನಮ್ಮ
೦೬೪೩ಪಿಎಂ೧೯೦೨೨೦೨೩
*ಅಮುಭಾವಜೀವಿ ಮುಸ್ಟೂರು*
ಏಕೆ ಇಂಥಾ ದೂಷಣೆ
ಏಕಿಷ್ಟೊಂದು ಶೋಷಣೆ
ತಪ್ಪಾದರೂ ಏನಿತ್ತು
ಏಕೊದಗಿತಿಂತ ಆಪತ್ತು
ಎಲ್ಲಾ ನನ್ನವರೆಂಬ ಭ್ರಮೆಯಲ್ಲಿ
ನಡೆದುಬಂದೆ ಇಷ್ಟು ದೂರ
ಎಲ್ಲಾ ಮರೆತು ಬೆಲ್ಲ ಸವರಿದ
ಮಾತಿಗೆ ಓಗೊಟ್ಟು ಬಿಟ್ಟು ಹೋದದ್ದು ಘೋರ
ಯಾರಿಂದ ಏನನ್ನೂ ಬಯಸಲಿಲ್ಲ
ಅವರ ಪ್ರೀತಿಯೊಂದು ಸಾಕಿತ್ತಲ್ಲ
ಕಷ್ಟಕ್ಕೆ ಹೆಗಲು ಕೊಟ್ಟು ನಡೆದೆ
ಈಗ ಅದೇ ಕಷ್ಟದಲಿ ಒಬ್ಬಂಟಿಯಾದೆ
ಅನುಮಾನವೇ ಆಳುತಿರುವಾಗ
ಅವಮಾನವು ಸಹಜ ಬದುಕಲಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ
ನೋಡದೇ ಹೋದರು ಬಾಳಲಿ
ತಿರುಗಿ ನೋಡದವರ ಹಿಂದೆ ಹೋಗಿ
ಬೆಂಬಲವಾಗಿದ್ದವರ ಮರೆಯುವರು ಜನ
ನದಿ ದಾಟಿದ ಮೇಲೆ ಅಂಬಿಗನೇಕೆ
ಇಷ್ಟೇ ಈ ಜಗದೊಳಗೆ ನಮ್ಮ ಜೀವನ
೧೦೫೦ಪಿಎಂ೧೯೦೨೨೦೨೩
*ಅಮುಭಾವಜೀವಿ ಮುಸ್ಟೂರು*
ನಿರೀಕ್ಷೆಗಳೆಲ್ಲ ಸುಳ್ಳಾದವು
ನಂಬಿಕೆಗಳು ಹುಸಿಯಾದವು
ಅರ್ಥವಾಗಿದ್ದು ಈಗೊಂದೇ
ಹೋರಾಟ ಮಾಡದೇ ಏನೂ ದಕ್ಕದೆಂದು
ದುಡಿಯುವ ಕೈಗಳು ನಮ್ಮವು
ಬೇಡಿ ತಿನ್ನಬಾರದು ಅಲ್ಲವೇ !
ಬೇಡಿಕೆ ಈಡೇರಿಸದ ಮೇಲೆ
ಬದುಕಲು ಹೋರಾಟ ಅನಿವಾರ್ಯವಲ್ಲವೇ ?
ಕೇಳುವ ಮುನ್ನವೇ ಕೊಡುವ
ಧಾರಾಳ ಗುಣವಿಲ್ಲದವರಿಗೆ
ಹೋರಾಟದ ಮೂಲಕ ಪಡೆಯಬೇಕು
ಪಾಠವಾಗಲಿ ಕೀಳಾಗಿ ಕಾಣುವವರಿಗೆ
ಒಂದೇ ನೆಲದ ಒಂದೇ ಕೆಲಸಕೆ
ಇಲ್ಲಿ ಭಿನ್ನ ಭಿನ್ನ ಕೂಲಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ
ಆದರೂ ಈ ತಾರತಮ್ಯ ಏಕಿಲ್ಲಿ
ಹಕ್ಕು ಕೇಳಿದರೆ ಹತ್ತಿಕ್ಕುವವರಾರೂ
ಉಳಿದಿಲ್ಲ ಈ ಜಗದಲಿ
ಗೊತ್ತಿದ್ದೂ ಜಾಣಕಿವುಡು ತೋರಿದವರ
ಕಿವಿ ಕಚ್ಚಿ ಎಚ್ಚರಿಸದೆ ವಿಧಿಯಿಲ್ಲ
ಕಾರ್ಮಿಕರ ಕಡೆಗಣಿಸುವುದು
ದುರಾಡಳಿತದ ಅತಿರೇಕ
ಕೈಕಟ್ಟಿ ಕುಳಿತರೆ ಇಲ್ಲೇನೂ ಸಿಗದು
ದನಿಯೆತ್ತಬೇಕು ಸೌಲಭ್ಯ ಸಿಗುವ ತನಕ
೧೨೫೨ಎಎಂ೨೦೦೨೨೦೨೩
*ಅಮುಭಾವಜೀವಿ ಮುಸ್ಟೂರು*
ಬೆಳ್ಳಂಬೆಳಗು ಆಹಾ ಎಂಥಾ ಸೊಬಗು
ಇರುಳ ಕಳೆದು ತಂದ ಹೊಂಬಣ್ಣದ ಮೆರುಗು
ಹಗಲೆಂಬ ಬಾಗಿಲು ತೆರೆದು
ಜಗವ ಏಳಿಸಿದ ದಿನಕರ ಬಂದು
ಇಬ್ಬನಿಯಲಿ ಮೊಗವ ತೊಳೆದು
ಹಕ್ಕಿಗಳ ಕಲರವದಿ ಸುಪ್ರಭಾತ ಹಾಡಿದೆ
ನೀಲ ಶುಭ್ರ ಬಾನಲಿ ಮೇಲೇರಿ
ಹೊನ್ನತೇರನೇರಿ ಬಂದ ನೇಸರ
ಕಳೆದನು ನೀರವ ರಾತ್ರಿಯ
ಆ ಮೌನತುಂಬಿದ ಬೇಸರ
ತಣ್ಣನೆಯ ಮುಂಜಾವಿನಲಿ
ಬೆಚ್ಚನೆಯ ಕಿರಣಗಳ ಕಳಿಸಿ
ಹಚ್ಚಹಸುರಿನ ಪ್ರಕೃತಿಯಲಿ
ಮನೆಮಾಡಿತು ನವಚೈತನ್ಯ ಸಂಭ್ರಮಿಸಿ
ಪ್ರತಿ ಚಟುವಟಿಕೆಗೂ ಚಾಲನೆಯನಿತ್ತು
ಪ್ರಗತಿ ಪಥದಲ್ಲಿ ಮಾರ್ಗದರ್ಶನವಿತ್ತು
ಪ್ರದರ್ಶಿಸಿದ ಜಗದಾಂತರ್ಯವ
ಪ್ರಫುಲ್ಲಿತ ಹೊಂಗಿರಣ ಪ್ರಸರಿಸಿ
ಧನ್ಯವಾಯ್ತು ಧರೆಯೀಗ
ಭಾಸ್ಕರನ ಕೃಪೆಯಿಂದ
ಬೆಳಗಿದು ಬಲು ಸೋಜಿಗ
ನಿಸರ್ಗದ ಈ ನಿತ್ಯ ಕೌತುಕ
೦೬೨೯ಎಎಂ೨೦೦೨೨೦೨೩
*ಅಮುಭಾವಜೀವಿ ಮುಸ್ಟೂರು*